ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೊಕ್ಕವಾಯ್ತು ಚಿಕ್ಕತಿರುಪತಿ

Last Updated 14 ಅಕ್ಟೋಬರ್ 2012, 7:25 IST
ಅಕ್ಷರ ಗಾತ್ರ

ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯಿತಿಗಳಿಗೆ ಸ್ವಚ್ಛತೆ ನಿರ್ವಹಣೆ ದೊಡ್ಡ ಸಮಸ್ಯೆ ಮತ್ತು ಸವಾಲು. ಅದರ ನಿವಾರಣೆ ಕಡೆಗೆ ಗಮನ ಹರಿಸಿರುವ ಪಂಚಾಯಿತಿಗಳು ಕಡಿಮೆ. ಸುವರ್ಣ ಗ್ರಾಮೋದಯ ಯೋಜನೆ ಅಡಿ ದೊರಕುವ ಅನುದಾನವನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಬಳಸಿಕೊಳ್ಳುವಲ್ಲಿಯೂ ಬಹುತೇಕ ಗ್ರಾಮ ಪಂಚಾಯಿತಿಗಳು ಹಿಂದೆಯೇ ಉಳಿದಿವೆ. ಆದರೆ ಈ ಮಾತುಗಳಿಗೆ ಅಪವಾದ ಎಂಬಂತೆ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ಕಾಣುತ್ತದೆ. ಕಾರಣವಿಷ್ಟೆ. ಗ್ರಾಮದಲ್ಲಿ ಸ್ವಚ್ಛತೆ ಎಲ್ಲೆಲ್ಲೂ ಎದ್ದು ಕಾಣುವ ಸಂಗತಿ. ಇಲ್ಲಿ ನಿತ್ಯ ಕಸ ವಿಲೇವಾರಿ ನಡೆಯುತ್ತಿದೆ.

13 ಗ್ರಾಮಗಳಿರುವ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬೆಂಗಳೂರಿಗೆ ಸಮೀಪ ಹಾಗೂ ತಮಿಳುನಾಡಿಗೆ ಕೂಗಳತೆ ದೂರದಲ್ಲಿ ಚಿಕ್ಕತಿರುಪತಿ ಗ್ರಾಮವಿದೆ. ಅದರಲ್ಲೂ ಇತಿಹಾಸ ಪ್ರಸಿದ್ದ ವೆಂಕಟರಮಣಸ್ವಾಮಿ ದೇವಾಲಯವಿರುವುದರಿಂದ ದೇವರ ದರ್ಶನಕ್ಕಾಗಿ ನಿತ್ಯ ನೂರಾರು ಭಕ್ತರು ಬರುತ್ತಾರೆ. ಗ್ರಾಮದಲ್ಲಿ ಕಲ್ಯಾಣ ಮಂಟಪಗಳ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರತಿ ದಿನ ದೇವಾಲಯದಲ್ಲಿ ಸೇರಿದಂತೆ ಹತ್ತಾರು ಮದುವೆಗಳು ನಡೆಯುತ್ತಿರುತ್ತವೆ. ದೇವಾಲಯದ ಹೊರಗೆ ಊಟದ ವ್ಯವಸ್ಥೆ ಮಾಡುವ ಜನ ಊಟದ ನಂತರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಾರೆ. ಪೆಟ್ಟಿಗೆ ಅಂಗಡಿಗಳಲ್ಲಿ ಹೂವು, ಹಣ್ಣು ಕಾಫಿ, ತಿಂಡಿ ಸೇರಿದಂತೆ ದಿನಸಿ ಪದಾರ್ಥಗಳನ್ನು ಪಡೆಯುವ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಎಸೆಯುವುದರಿಂದ ಈ ಭಾಗದಲ್ಲಿ ಗಲೀಜು ಹೆಚ್ಚಾಗಿ ಪರಿಸರ ಮಾಲಿನ್ಯವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು.

ಈ ಪೈಕಿ ಲಕ್ಕೂರು ಹಾಗೂ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿಗಳಲ್ಲಿ ನಿತ್ಯ ಕಸ-ಕಡ್ಡಿ ನಿರುಪಯುಕ್ತ ವಸ್ತುಗಳನ್ನು ತೆರುವುಗೊಳಿಸಲಾಗುತ್ತಿದೆ. ದೇವಾಲಯಕ್ಕೆ ಬರುವ ಭಕ್ತರ ಹಾಗೂ ಗ್ರಾಮದ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪ್ರತಿ ಪಟ್ಟಿಗೆ ಅಂಗಡಿಗಳಿಗೆ ಪಂಚಾಯಿತಿಯಿಂದ ಉಚಿತವಾಗಿ 100ಕ್ಕೂ ಹೆಚ್ಚು ಪ್ಲಾಸ್ಟಿಕ್ ಡಬ್ಬಗಳನ್ನು ನೀಡಲಾಗಿದೆ. ಗ್ರಾಹಕರು ಕಾಫಿ ಲೋಟ ಪ್ಲಾಸ್ಟಿಕ್ ವಸ್ತುಗಳು, ಕಸ-ಕಡ್ಡಿಗಳನ್ನು ಡಬ್ಬಗಳಲ್ಲಿ ಹಾಕುವುದರಿಂದ ಸ್ವಲ್ಪ ಮಟ್ಟಿಗೆ ಸ್ವಚ್ಛತೆಯ ಸಮಸ್ಯೆ ನಿವಾರಣೆಯಾಗಿದೆ. ದೇವಾಲಯದಲ್ಲಿ ಉಚಿತ ಮದುವೆಗಳನ್ನು ನಡೆಸಿ ಉಚಿತ ಊಟ ಮಾಡಿದ ನಂತ ವ್ಯವಸ್ಥೆ ಮಾಡಿರುವ  ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ತ್ಯಾಜ್ಯಗಳನ್ನು ಹಾಕುವುದರಿಂದ ಗ್ರಾಮದ ಸಂತೆ ಬೀದಿಯೂ ಸ್ವಚ್ಛವಾಗಿದೆ.

ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿ ಮಾಡಲು ಸಿಬ್ಬಂದಿಯನ್ನು ನೇಮಿಸಿ ಕಸ ಸಾಗಿಸಲು ತಳ್ಳು ಗಾಡಿ ವ್ಯವಸ್ಥೆ ಮಾಡಿದ್ದು ಸಿಬ್ಬಂದಿ ಪ್ರತಿ ನಿತ್ಯ ಬೆಳಿಗ್ಗೆ ಅಂಗಡಿಯ ಮುಂದೆ ಇರುವ ಡಬ್ಬಗಳಲ್ಲಿ ಸಂಗ್ರಹವಾಗಿರುವ ಕಸವನ್ನು ಗಾಡಿಯಲ್ಲಿ ಹಾಕಿಕೊಂಡು ಗ್ರಾಮದ ಹೊರ ಭಾಗಗಳಿಗೆ ಸಾಗಿಸುತ್ತಾರೆ. ಅಲ್ಲದೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರತಿ ದಿನ ಕಸ ತೆಗೆಯುವುದರಿಂದ ಅಂದವೂ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿಗೆ ಒಳಪಡುವ ಹಳ್ಳಿಗಳಲ್ಲಿ ಪ್ರತಿ ವರ್ಷ 2-3 ಬಾರಿ ಚರಂಡಿಗಳನ್ನು ಪೂರ್ಣ ಸ್ವಚ್ಛಗೊಳಿಸುತ್ತಿರುವುದರಿಂದ ಹಳ್ಳಿಯ ಜನ ರೋಗ ರುಜಿನ ಮುಕ್ತ ವಾತಾವರಣದಲ್ಲಿ ಜೀವಿಸುವ ಅವಕಾಶ-ಸನ್ನಿವೇಶ ನಿರ್ಮಾಣವಾಗಿದೆ. ಈ ಮುಲಕ ಚಿಕ್ಕತಿರುಪತಿ ಮಾದರಿ ಗ್ರಾಮ ಪಂಚಾಯಿತಿಯಾಗಿಯೂ ರೂಪಗೊಳ್ಳುತ್ತಿದೆ.

ಮೊದಲು ಚಿಕ್ಕತಿರುಪತಿಗೆ ಬರಲು ಬಹಳ ಮುಜುಗರವಾಗುತ್ತಿತ್ತು. ಎಲ್ಲಿ ನೋಡಿದರೂ ಕಸವಿರುತ್ತಿತ್ತು. ಈ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಲ್ಲಿ ಮಕ್ಕಳೊಡನೆ ಓಡಾಡುವುದು ಕೂಡ ಕಷ್ಟವಾಗಿತ್ತು. ಆದರೆ ಈಗ ಸನ್ನಿವೇಶ ಬದಲಾಗಿರುವುದು ಸಮಾಧಾನ ತಂದಿದೆ. ಪಂಚಾಯಿತಿ ಇದೇ ರೀತಿಕಾರ್ಯನಿರ್ವಹಿಸಿದರೆ ಹೆಚ್ಚು ಪ್ರವಾಸಿಗರು ಬರಲು ಅನುಕೂಲವಾಗುತ್ತದೆ ಎಂಬುದು ಬೆಂಗಳೂರು ಮೂಲದ ಪ್ರವಾಸಿ ನಾಗರಾಜ್, ಸುಬ್ರಹ್ಮಣ್ಯ, ರಮಾ, ಮಮತಾ ಅವರ ಅಭಿಪ್ರಾಯ.

ಅಧಿಕಾರಿಗಳು ಜನ ಪ್ರತಿನಿಧಿಗಳ, ಸಹಕಾರದಿಂದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪ್ರತಿ ದಿನ ಕಸ ವಿಲೇವಾರಿ ಮಾಡುತ್ತಿದ್ದರೂ ಈ ಕಾರ್ಯ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಗ್ರಾಮ ಪಂಚಾಯಿತಿ ಮುಂದಿನ ಅಧ್ಯಕ್ಷರು ಇದನ್ನು ಮುಂದುವರೆಸಿದರೆ ಜನಸಾಮಾನ್ಯರು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಗ್ರಾಪಂ ಸದಸ್ಯ ವಿ.ನಾಗೇಶ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT