ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೊಚ್ಚಲ ಚುನಾವಣೆಯಲ್ಲೇ ಬಿರುಸಿನ ಸ್ಪರ್ಧೆ

ಮಂಗಳೂರು ಲೋಕಸಭಾ ಕ್ಷೇತ್ರ
Last Updated 17 ಮಾರ್ಚ್ 2014, 10:33 IST
ಅಕ್ಷರ ಗಾತ್ರ

ಮಂಗಳೂರು: ಪ್ರಜಾಪ್ರಭುತ್ವ ರಾಷ್ಟ್ರಗಳ ಚುನಾವಣೆಗಳಲ್ಲೇ ಅತ್ಯಂತ ಮಹತ್ವದ ಮಹಾ ಚುನಾವಣೆ ಅದು. ಬ್ರಿಟೀಷರ ದಾಸ್ಯದಿಂದ ಮುಕ್ತಿಪಡೆದ ಭಾರತ ಸ್ವತಂತ್ರ ಗಣತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ಬಳಿಕ ನಡೆದ ಚೊಚ್ಚಲ ಜನಮತ ಸಂಗ್ರಹವದು. ಭವ್ಯ ಭಾರತದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಚುನಾವಣೆಯದು. 1952ರ ಮಾ. 27ರಂದು ನಡೆದ ಆ ಮಹಾ ಚುನಾವಣೆಯಲ್ಲಿ ಕರಾವಳಿಯ ಜನತೆಯೂ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.

‘ಆಗಿನ್ನೂ ದಕ್ಷಿಣ ಕನ್ನಡ ಜಿಲ್ಲೆ (ಸೌತ್‌ ಕೆನರಾ) ಕರ್ನಾಟಕ ರಾಜ್ಯಕ್ಕೆ ಸೇರಿರಲಿಲ್ಲ. ದಕ್ಷಿಣ ಕನ್ನಡ (ಉತ್ತರ) ಹಾಗೂ ದಕ್ಷಿಣ ಕನ್ನಡ (ದಕ್ಷಿಣ) ಎಂಬ ಎರಡು ಲೋಕಸಭಾ ಕ್ಷೇತ್ರಗಳು ಮದ್ರಾಸ್‌ ಪ್ರಾಂತ್ಯಕ್ಕೆ ಸೇರಿದ್ದವು. ದ.ಕ. ದಕ್ಷಿಣ ಕ್ಷೇತ್ರವು ಮಂಜೇಶ್ವರದ ವರೆಗೆ ವ್ಯಾಪ್ತಿಯನ್ನು ಹೊಂದಿತ್ತು. ಮೂಲ್ಕಿಯಿಂದ ಕುಂದಾಪುರದವರೆಗೆ ದ.ಕ. (ಉತ್ತರ) ಕ್ಷೇತ್ರ ವ್ಯಾಪಿಸಿತ್ತು. ಕಾಸರಗೋಡು ಜಿಲ್ಲೆ ಪ್ರತ್ಯೇಕ ಕ್ಷೇತ್ರವನ್ನು ಹೊಂದಿತ್ತು. ದಕ್ಷಿಣ ಕನ್ನಡ ಜಿಲ್ಲೆ ಕನ್ನಡ ಮಾತನಾಡುವ ಪ್ರದೇಶವಾಗಿದ್ದರೂ, ಇಲ್ಲಿನ ಸಂಸದರು ತಮಿಳು ಭಾಷಿಕ ರಾಜ್ಯವಾದ  ಮದರಾಸನ್ನು ಸಂಸತ್ತಿನಲ್ಲಿ ಪ್ರತಿನಿಧಿಸಬೇಕಾಗಿತ್ತು. 1956ರಲ್ಲಿ ಕರ್ನಾಟಕ ಏಕೀಕರಣದ ಬಳಿಕ ಕಾಸರಗೊಡು ಕೈತಪ್ಪಿದರೂ ದಕ್ಷಿಣ ಕನ್ನಡ ಕರ್ನಾಟಕಕ್ಕೆ ಸೇರಿತು’ ಎಂದು ಮೆಲುಕು ಹಾಕುತ್ತಾರೆ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಬಸ್ತಿ ವಾಮನ ಶೆಣೈ.

‘ಚೊಚ್ಚಲ ಚುನಾವಣೆ ನಡೆಯುವಾಗ ನಾನು ಇನ್ನೂ ಶಾಲೆಗೆ ಹೋಗುತ್ತಿದ್ದೆ. ಆದರೂ ಆಗಿನ ಚುನಾವಣೆಯ ಕಾವು ಕಣ್ಣಿಗೆ ಕಟ್ಟಿದಂತಿದೆ. ಆಗ ಕಾಂಗ್ರೆಸ್‌ ಪಕ್ಷವನ್ನು ಬರ್ಖಾಸ್ತುಗೊಳಿಸಬೇಕು ಎಂದು ಆಚಾರ್ಯ ಜೆ.ಬಿ.ಕೃಪಲಾನಿ ಅವರಂತಹ ಹಿರಿಯ ನಾಯಕರು ಕರೆಕೊಟ್ಟರು. ಅದರ ಪರಿಣಾಮವಾಗಿ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಅನೇಕರು ಕಾಂಗ್ರೆಸ್‌ ವಿರುದ್ಧವೇ ಬಂಡಾಯವೆದ್ದರು. ಅವರು ಕಿಸಾನ್‌ ಮಜ್ದೂರ್‌ ಪ್ರಜಾ ಪಾರ್ಟಿಯಿಂದ (ಕೆಎಂಪಿಪಿ) ಕಣಕ್ಕಿಳಿದಿದ್ದರು. ಇದರಿಂದ ಚುನಾವಣೆ ಮತ್ತಷ್ಟು ಕಾವೇರಿತ್ತು’ ಎಂದು ಸ್ಮರಿಸುತ್ತಾರೆ ಶೆಣೈ. 

ಚೊಚ್ಚಲ ಚುನಾವಣೆಯಲ್ಲಿ ದಕ್ಷಿಣ ಕನ್ನಡ (ಉತ್ತರ) ಕ್ಷೇತ್ರದಲ್ಲಿ ಒಟ್ಟು 344159 ಮತದಾರರಿದ್ದರು. ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಸಕ್ರಿಯವಾಗಿದ್ದ ಯು.ಶ್ರೀನಿವಾಸ ಮಲ್ಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) ಪಕ್ಷದಿಂದ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ ಆಗ ಜೋಡೆತ್ತಿನ ಚಿಹ್ನೆಯನ್ನು ಹೊಂದಿತ್ತು. ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆ.ಬಿ.ಜಿನರಾಜ ಹೆಗ್ಡೆ ಅವರು ಕಿಸಾನ್‌ ಮಜ್ದೂರ್‌ ಪ್ರಜಾ ಪಾರ್ಟಿಯಿಂದ (ಕೆಎಂಪಿಪಿ) ಕಣಕ್ಕಿಳಿದಿದ್ದರು. ಆಗ ಕರಾವಳಿಯಲ್ಲಿ ಸೋಷಲಿಸ್ಟ್‌ ಚಳವಳಿಯೂ ಮುಂಚೂಣಿಯಲ್ಲಿತ್ತು. ಬಿ.ಜೆ ಭಂಡಾರಿ ಅವರು ಸೋಷಲಿಸ್ಟ್‌ ಪಾರ್ಟಿಯಿಂದ ಕಣಕ್ಕಿಳಿದಿದ್ದರು.

ಈ ಚುನಾವಣೆಯಲ್ಲೇ ಕಾಂಗ್ರೆಸ್‌ ಹಾಗೂ ಕೆಎಂಪಿಪಿ ಪಕ್ಷಗಳ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಈ ಚುನಾವಣೆಯಲ್ಲಿ 220761 (ಶೇ 64.15) ಮತದಾನವಾಗಿತ್ತು. 98,122 ಮತಗಳನ್ನು ಪಡೆದ ಕಾಂಗ್ರೆಸ್‌ನ ಯು.ಶ್ರೀನಿವಾಸ ಮಲ್ಯ ಅವರು ಜಿನರಾಜ ಹೆಗ್ಡೆ (86,268) ಅವರನ್ನು 11854 ಮತಗಳ ಅಂತರದಿಂದ ಸೋಲಿಸಿದ್ದರು. ಬಿ.ಜೆ.ಭಂಡಾರಿ ಅವರು 36,371 ಮತಗಳನ್ನು ಪಡೆದಿದ್ದರು.

ದಕ್ಷಿಣ ಕನ್ನಡ (ದಕ್ಷಿಣ) ಲೋಕಸಭಾ ಕ್ಷೇತ್ರದಲ್ಲಿ ಆಗ 3,40,360 ಮತದಾರರಿದ್ದರು. ಸ್ವಾತಂತ್ರ್ಯ ಹೋರಾಟಗಾರ ಬೆನಗಲ್‌ ರಾಮರಾವ್‌ ಅವರ ಸಹೋದರ ಬೆನಗಲ್‌ ಶಿವರಾವ್‌ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಶಿವರಾವ್‌ ಅವರು ಅಮೆರಿಕದಲ್ಲಿ ‘ದಿ ಹಿಂದೂ’ ಪತ್ರಿಕೆಯ ವರದಿಗಾರರಾಗಿದ್ದವರು. ಅವರ ವಿರುದ್ಧ ಕೆ.ಆರ್‌.ಕಾರಂತರು ಕಿಸಾನ್‌ ಮಜ್ದೂರ್‌ ಪ್ರಜಾ ಪಾರ್ಟಿಯಿಂದ ಸ್ಪರ್ಧಿಸಿದ್ದರು. ಸೋಷಲಿಸ್ಟ್‌ ಚಳವಳಿಯಲ್ಲಿ ತೊಡಗಿದ್ದ ದೆಹಲಿಯ ಆರ್‌.ಎಸ್‌.ಶರ್ಮ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಆ ಮಹಾ ಚುನಾವಣೆಯಲ್ಲಿ ಒಟ್ಟು 2,06,101 ಮತಗಳು (ಶೇ 60.55)  ಚಲಾವಣೆಯಾಗಿದ್ದವು. 96,619 ಮತಗಳನ್ನು (ಶೇ 46.88) ಪಡೆದಿದ್ದ ಬಿ.ಶಿವರಾವ್‌ ಅವರು ಕೆ.ಆರ್‌.ಕಾರಂತರ ವಿರುದ್ಧ 8,841 ಮತಗಳ ಅಂತರದಿಂದ ಗೆದ್ದಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿದ್ದ ಆರ್‌.ಎಸ್‌.ಶರ್ಮ 21,704 (ಶೇ 10.53) ಮತಗಳನ್ನು ಪಡೆದಿದ್ದರು.

ಆಗ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಅಭಿವೃದ್ಧಿ ದೃಷ್ಟಿಯಲ್ಲಿ ರಾಜಕೀಯ ಇರಲಿಲ್ಲ. ಶ್ರೀನಿವಾಸ ಮಲ್ಯ ಅವರು ಸಂಸದರಾಗಿದ್ದು, ಅವರ ಮುತುವರ್ಜಿಯಿಂದ ನವಮಂಗಳೂರು ಬಂದರು, ಬಜಪೆಯಲ್ಲಿ ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಿದ್ದು ಎಲ್ಲವೂ ಈಗ ಇತಿಹಾಸ. ಅವರ ಪರಿಶ್ರಮದಿಂದಾಗಿಯೇ ಸುರತ್ಕಲ್‌ನಲ್ಲಿ ಕೆಆರ್‌ಇಸಿ (ಈಗಿನ ಎನ್‌ಐಟಿಕೆ) ಸ್ಥಾಪನೆಯಾಯಿತು. ಶ್ರೀನಿವಾಸ ಮಲ್ಯ ಅವರು ದೇಶದ ಚೊಚ್ಚಲ ಪ್ರಧಾನಿ ಜವಹರಲಾಲ್‌ ನೆಹರು ಅವರಿಗೆ ನಿಕಟವಾಗಿದ್ದರು. ಅವರ ವಿಚಾರಧಾರೆಗಳು, ಅಭಿವೃದ್ಧಿ ಚಿಂತನೆಗಳಿಂದ ನೆಹರು ಅವರೂ ಪ್ರಭಾವಿತರಾಗಿದ್ದರು. ಈ ನಂಟನ್ನು ಜಿಲ್ಲೆಯ ಅಭಿವೃದ್ಧಿಗಾಗಿ ಬಳಸುವಲ್ಲಿ ಮಲ್ಯರು ಸಫಲರಾಗಿದ್ದರು.

‘ಆಗ ಚುನಾವಣೆಗೆ ಸ್ಪರ್ಧಿಸುತ್ತಿದ್ದವರಿಗೆ ಮೌಲ್ಯಗಳಿದ್ದವು. ತತ್ವ ಸಿದ್ಧಾಂತಗಳಿದ್ದವು. ಹಣ ಇದ್ದವರು ಮಾತ್ರ ಚುನಾವಣೆಗೆ ಸ್ಪರ್ಧಿಸುವ ವಾತಾವರಣ ಆಗ ಇರಲಿಲ್ಲ. ಪಕ್ಷದ ಕಾರ್ಯಕರ್ತರೂ ಚುನಾವಣೆಯೊಂದು ಪವಿತ್ರ ಕರ್ತವ್ಯ ಎಂಬಂತೆ ಭಾವಿಸಿ ಕೆಲಸ ಮಾಡುತ್ತಿದ್ದರು. ಈಗಿನ ಹಾಗೆ ತಂತ್ರಜ್ಞಾನದ ನೆರವು ಇಲ್ಲದಿದ್ದರೂ ಜನರನ್ನು ತತ್ವ ಸಿದ್ಧಾಂತ ಆಧಾರದಲ್ಲೇ ಮತ ಕೇಳುತ್ತಿದ್ದವು. ಆಗಿನ ಚುನಾವಣೆಗೂ ಈಗಿನ ಚುನಾವಣೆಗಳಿಗೂ ಅಜಗಜಾಂತರ. ಆಗಿನ ಚುನಾವಣೆಯನ್ನು ಮೆಲುಕು ಹಾಕುವಾಗ ನೋವಾಗುತ್ತದೆ’ ಎನ್ನುತ್ತಾರೆ ವಾಮನ ಶೆಣೈ.
***
ಕ್ಷೇತ್ರ: ದಕ್ಷಿಣ ಕನ್ನಡ (ಉತ್ತರ); ಮತದಾರರು: 344159; ಚಲಾಯಿತ ಮತ: 220761 (ಶೇ 64.15)
1) ಯು.ಶ್ರೀನಿವಾಸ ಮಲ್ಯ (ಕಾಂಗ್ರೆಸ್‌) 98122 (ಶೇ 44.45)
2) ಕೆ.ಬಿ.ಜಿನರಾಜ ಹೆಗ್ಡೆ (ಕೆಎಂಪಿಪಿ) 86268 (ಶೇ 39.08)
3) ಬಿ.ಜೆ.ಭಂಡಾರಿ (ಎಸ್‌ಪಿ)   36371 (ಶೇ 16.48)
***
ಕ್ಷೇತ್ರ: ದಕ್ಷಿಣ ಕನ್ನಡ (ದಕ್ಷಿಣ); ಮತದಾರರು: 340360; ಚಲಾಯಿತ ಮತ: 206101 (ಶೇ 60.55)
1) ಬಿ.ಶಿವರಾವ್‌ (ಕಾಂಗ್ರೆಸ್‌)  96619 (ಶೇ 46.88)
2) ಕೆ.ಆರ್‌.ಕಾರಂತ್ (ಕೆಎಂಪಿಪಿ)  87778 (ಶೇ 42.59)
3) ಆರ್‌.ಎಸ್‌.ಶರ್ಮ (ಸ್ವತಂತ್ರ)  21704 (ಶೇ 10.53)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT