ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೊಚ್ಚಲ ಪಂದ್ಯದಲ್ಲೇ ಯಶಸ್ಸು

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ: `ವೇಗವಾಗಿ ಬೌಲಿಂಗ್ ಮಾಡುವುದು ಎಂದರೆ ನನಗೆ ಪಂಚಪ್ರಾಣ. ಶಾಲಾ ದಿನಗಳಿಂದಲೇ ನಾನು ಇದನ್ನು ಪಾಲಿಸಿಕೊಂಡು ಬಂದಿದ್ದೇನೆ. ಈ ಬಗ್ಗೆ ನಾನು ಯಾವತ್ತೂ ರಾಜಿ ಆಗಲಾರೆ~

-ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಮುನ್ನ ವೇಗಿ ವರುಣ್ ಆ್ಯರನ್ ಹೇಳಿದ ಮಾತಿದು. ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ಚೊಚ್ಚಲ ಪಂದ್ಯದಲ್ಲಿಯೇ ಮೂರು ವಿಕೆಟ್ ಪಡೆದು ಮಿಂಚಿದ ಆ್ಯರನ್ ಬೆಂಗಳೂರಿನ ಜೈನ್ ವಿವಿ ವಿದ್ಯಾರ್ಥಿ. ಅವರು ದ್ವಿತೀಯ ಬಿಎನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತಮ್ಮ ಹೆಚ್ಚಿನ ದಿನಗಳನ್ನು ಅವರು ಉದ್ಯಾನ ನಗರಿಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ವ್ಯಯಿಸಿದ್ದಾರೆ.

ಜಾರ್ಖಂಡ್ ಮೂಲದ ವರುಣ್ ಸದ್ಯ ಭಾರತ ಕ್ರಿಕೆಟ್‌ನ ಅತಿ ವೇಗದ ಬೌಲರ್. ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸಿದ್ದ ಅವರು 153.4 ಕಿ.ಮೀ. ವೇಗದಲ್ಲಿ ಬೌಲ್ ಮಾಡಿ ಗಮನ ಸೆಳೆದಿದ್ದರು. ಅದು ಭಾರತದ ಬೌಲರ್‌ಗಳ ಮಟ್ಟಿಗೆ ದಾಖಲೆ ಕೂಡ.

ಇಂಗ್ಲೆಂಡ್ ಪ್ರವಾಸದ ವೇಳೆ ವರುಣ್ ಭಾರತ ತಂಡದಲ್ಲಿದ್ದರು. ಆದರೆ ಆಡಲು ಅವರಿಗೆ ಅವಕಾಶ ಲಭಿಸಿರಲಿಲ್ಲ. ಸ್ವದೇಶದಲ್ಲಿ ನಡೆಯುತ್ತಿರುವ ಈ ಸರಣಿಯಲ್ಲಿ ಉಮೇಶ್ ಯಾದವ್ ಗಾಯಗೊಂಡ ಕಾರಣ ಆ್ಯರೋನ್‌ಗೆ ನಾಲ್ಕನೇ ಪಂದ್ಯದಲ್ಲಿ ಸ್ಥಾನ ಸಿಕ್ಕಿತು.

ಆ ಅವಕಾಶವನ್ನು 21ರ ಹರೆಯದ ವರುಣ್ (6.1-1-24-3) ಹಣ್ಣಾಗಿಸಿಕೊಂಡರು. ಪದಾರ್ಪಣೆಯಲ್ಲಿಯೇ ಗುಡುಗಿದ ಈ ವೇಗಿ ಮೂರು ವಿಕೆಟ್ ಕಬಳಿಸಿದರು. ಬಾರ್ಥ್‌ವಿಕ್, ಮೀಕರ್ ಹಾಗೂ ಬ್ರೆಸ್ನನ್ ವಿಕೆಟ್ ಪಡೆದು ಮಿಂಚಿದರು. ಮೂರೂ ಮಂದಿಯನ್ನು ಬೌಲ್ಡ್ ಮಾಡಿದ್ದು ವಿಶೇಷ.

ಎರಡನೇ ಸ್ಪೆಲ್‌ನಲ್ಲಿ ಅವರು ಕೇವಲ 10 ರನ್ ನೀಡಿ 3 ಕಬಳಿಸಿದರು. 3 ಓವರ್‌ಗಳ ತಮ್ಮ ಮೊದಲ ಸ್ಪೆಲ್‌ನಲ್ಲಿ 14 ರನ್ ನೀಡಿದ್ದರು. ಈ ಪಂದ್ಯದ್ಲ್ಲಲೂ 145.3 ಕಿ.ಮೀ. ವೇಗದಲ್ಲಿ ಬೌಲ್ ಮಾಡಿದರು.

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ಉದಯೋನ್ಮುಖ ಆಟಗಾರರ ಸರಣಿಯಲ್ಲಿ ಅವರು 10 ವಿಕೆಟ್ ಕಬಳಿಸಿದ್ದರು. ಆ್ಯರೋನ್ ಈ ಬಾರಿಯ ಐಪಿಎಲ್‌ನಲ್ಲಿ ದೆಹಲಿ ಡೇರ್‌ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಇದಕ್ಕೂ ಮೊದಲು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವರುಣ್ ಅಷ್ಟೇನು ಗಮನ ಸೆಳೆದ ಬೌಲರ್ ಅಲ್ಲ. ಏಕೆಂದರೆ 12 ಪಂದ್ಯಗಳಿಂದ 26 ವಿಕೆಟ್ ಪಡೆದಿದ್ದಾರೆ ಅಷ್ಟೆ.

ಆದರೆ ಅವರ ಸ್ಥಿರ ವೇಗ ಆಯ್ಕೆದಾರರ ಕಣ್ಣಿಗೆ ಬಿದ್ದಿದೆ. ಜೊತೆಗೆ ಭಾರತ ತಂಡದ ಬೌಲಿಂಗ್ ಕೋಚ್ ಎರಿಕ್ ಸಿಮನ್ಸ್ ದೆಹಲಿ ಡೇರ್‌ಡೆವಿಲ್ಸ್ ತಂಡದ ಸಹಾಯಕ ಕೋಚ್ ಕೂಡ. ಅದು ವರುಣ್ ನೆರವಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT