ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಳಿ ಮಠ: ಮುಂದೇನು?

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜನವಾಡ (ಬೀದರ್): ತಾಲ್ಲೂಕಿನ ಚೌಳಿ ಮಠದ ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರ ನಿಗೂಢ ಸಾವು, ಮೂವರು ಸಾಧಕರ ಆತ್ಮಾಹುತಿ ಬಳಿಕ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ.

ಮಠದ ಆವರಣದಲ್ಲಿ ಈಗ ನೀರವ ಮೌನ ಆವರಿಸಿದ್ದು, ಆಗಮಿಸುವ ಭಕ್ತರು ಆತ್ಮಹತ್ಯೆ ಮಾಡಿಕೊಂಡ ಸಾಧಕರ ಸಮಾಧಿಗೆ ಪೂಜೆ ಸಲ್ಲಿಸುವುದು  ಸಾಮಾನ್ಯ ದೃಶ್ಯವಾಗಿತ್ತು. ಘಟನೆಯ ಬಗ್ಗೆ ವಿಚಾರಣೆ ಆರಂಭಿಸಿರುವ ಪೊಲೀಸರು ಸಾಧಕರಿಂದ ಪ್ರಾಥಮಿಕ ಮಾಹಿತಿಗಳನ್ನು ಪಡೆದಿದ್ದಾರೆ.

ಮಠದಲ್ಲಿ ಗರ್ಭಗುಡಿ, ದಾಸೋಹ ಭವನ, ದೇವರ ವಿಗ್ರಹಗಳು, ಸುಸಜ್ಜಿತ ಕಟ್ಟಡ ಸೇರಿ ಮಠಕ್ಕೆ ಬೇಕಾದ ಎಲ್ಲ ಸೌಕರ್ಯ ಒಳಗೊಂಡಿದೆ. ಕರ್ನಾಟಕದ ಜೊತೆಗೆ ನೆರೆಯ ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿಯೂ ಭಕ್ತರನ್ನು ಹೊಂದಿದೆ.

ಹಿರಿಯ ಸ್ವಾಮೀಜಿ ಅವರು ಬದುಕಿದ್ದಾಗಲೇ ಮಠದ ಉತ್ತರಾಧಿಕಾರಿ ಕುರಿತು ವಿವಾದ ಆರಂಭಗೊಂಡಿತು. ಮಾರುತಿ ಸ್ವಾಮೀಜಿ ಮೇಲೆ ನಡೆದ ಹಲ್ಲೆ, ಬಳಿಕ ನಡೆದ ಅವರ ನಾಪತ್ತೆ ಪ್ರಕರಣವೂ ಇದರ ಭಾಗವೇ ಎಂಬುದು ಕೆಲ ಭಕ್ತರ ಅನಿಸಿಕೆ.

ಗಣೇಶ್ವರ ಅವಧೂತರು ನಿಧನದ ನಂತರ ಸಭೆ ಸೇರಿದ್ದ ಭಕ್ತರು, ಸಾಧಕರ ನೇತೃತ್ವದಲ್ಲಿ ಮಠ ಮುನ್ನಡೆಸಿಕೊಂಡು ಹೋಗಲು ನಿರ್ಧರಿಸಿದ್ದರು. ಹಿರಿಯ ಸ್ವಾಮೀಜಿ ಅವರ ಕಾರ್ಯಕ್ರಮಮಗಳನ್ನೇ ಮುಂದುವರೆಸಿಕೊಂಡು ಹೋಗಲು ನಿರ್ಣಯಿಸಿದ್ದರು. ಆ ವೇಳೆ ಟ್ರಸ್ಟ್ ರಚನೆಗೆ ಬಗೆಗೂ ಚರ್ಚೆ ನಡೆದಿತ್ತು.

ಬಳಿಕ ಕೆಲ ಸಾಧಕರು ಹಾಗೂ ಭಕ್ತರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮಠವನ್ನು ಸರ್ಕಾರದ ಸುಪರ್ದಿಗೆ ಪಡೆದು ತಮ್ಮನ್ನು ಮುಕ್ತಗೊಳಿಸಲು ಕೋರಿದ್ದರು. ಆದರೆ, ಅವರ ಮನವೊಲಿಸಿದ ಜಿಲ್ಲಾಧಿಕಾರಿ, ಎಲ್ಲ ನೆರವು ನೀಡುವ ಭರವಸೆ ನೀಡಿದ್ದರು. ಆದರೆ ಈ ಬಗೆಗೆ ಯಾವುದೇ ತೀರ್ಮಾನ, ಪ್ರಗತಿ ಆಗಿರಲಿಲ್ಲ.

ಈ ಬೆಳವಣಿಗೆಗಳ ನಡುವೆಯೇ ಸೋಮವಾರದ ದುರಂತ ನಡೆದಿದೆ. ಮಠದ ಉತ್ತರಾಧಿಕಾರಿ ಯಾರು? ಮಠವನ್ನು ಅವರ ನೇತೃತ್ವದಲ್ಲಿಯೇ ಮುಂದುವರೆಸಿಕೊಂಡು ಹೋಗಲಾಗುತ್ತದೆಯೇ ಅಥವಾ ಸರ್ಕಾರದ ವಶಕ್ಕೆ ಪಡೆಯಲಾಗುತ್ತದೆಯೇ ಎಂಬ ಪ್ರಶ್ನೆಗಳು ಭಕ್ತರಿಂದ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT