ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲವಾದಿ ಭವನಕ್ಕೆ 5 ಕೋಟಿ: ಮುಖ್ಯಮಂತ್ರಿ ಭರವಸೆ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಗರದ ಕೆಂಗೇರಿ ಬಳಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಛಲವಾದಿ ಭವನ ನಿರ್ಮಾಣಕ್ಕೆ ಐದು ಕೋಟಿ ರೂಪಾಯಿ ನೆರವು ನೀಡಲಾಗುವುದು~ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಛಲವಾದಿ ಮಹಾಸಭಾ ಸಂಸ್ಥೆಯು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಸಭಾದ ಎರಡನೇ ಸಮಾವೇಶದಲ್ಲಿ ಛಲವಾದಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

`ಶಿವಮೊಗ್ಗದಲ್ಲಿ ನಡೆದ ಪ್ರಥಮ ಸಮ್ಮೇಳನದಲ್ಲಿ ನೀಡಿದ ಭರವಸೆಯಂತೆ ಭವನ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ನೀಡಲಾಗಿದೆ. ಅದೇ ರೀತಿ ಭವನ ನಿರ್ಮಾಣಕ್ಕೆ ಈ ಹಿಂದೆ ಮೂರು ಕೋಟಿ ರೂಪಾಯಿ ನೀಡಲಾಗಿತ್ತು. ಭವನವು ಅತ್ಯಾಧುನಿಕ ಸೌಲಭ್ಯಗಳಿಂದ ಸುಂದರವಾಗಿರಬೇಕು ಎಂಬ ಕಾರಣಕ್ಕೆ ಹೆಚ್ಚುವರಿಯಾಗಿ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು~ ಎಂದು ಹೇಳಿದರು.

`ಛಲವಾದಿ ಸಮುದಾಯ ಭವನವನ್ನು ವರ್ಷದೊಳಗೆ ನಿರ್ಮಿಸಿ ಉದ್ಘಾಟಿಸಬೇಕು. ಭವನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಬೇಕು~ ಎಂದರು.

`ರಾಜ್ಯದಲ್ಲಿ ಸ್ಥಗಿತಗೊಂಡಿರುವ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು. ರಾಜ್ಯದ ಯಾವುದೇ ಗ್ರಾಮದಲ್ಲೂ ಪರಿಶಿಷ್ಟ ಜಾತಿಯ ಜನತೆ ಗುಡಿಸಲ್ಲಿ ವಾಸಿಸದಂತೆ ಉತ್ತಮ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಪರಿಶಿಷ್ಟ ಜಾತಿಗೆ ಸೇರಿದವರು ರಾಜ್ಯದಲ್ಲಿ ಒಂದು ಕೋಟಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಜನರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು~ ಎಂದರು.

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, `ಪರಿಶಿಷ್ಟ ಜಾತಿಯ ಜನರು ಶ್ರಮಿಕ ವರ್ಗದವರು. ಈ ಸಮುದಾಯದ ಜನತೆ ಯಾವುದೇ ಕಾರಣಕ್ಕೂ ಸ್ವಾಭಿಮಾನವನ್ನು ಬಿಟ್ಟುಕೊಡದೇ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಡಬೇಕು~ ಎಂದರು.

ಸಂಘಟಿತರಾಗಬೇಕು: `ಪರಿಶಿಷ್ಟ ಜಾತಿಯ ಜನರನ್ನು ಒಡೆದು ಆಳುವ ಶಕ್ತಿಗಳು ಸಾಕಷ್ಟಿವೆ. ಈ ಶಕ್ತಿಗಳ ಬಗ್ಗೆ ಜನಾಂಗದ ಜನತೆ ಎಚ್ಚರದಿಂದಿರಬೇಕು. ಒಳ ಪಂಗಡಗಳನ್ನು ಮರೆತು ಸಂಘಟಿತರಾಗಬೇಕು~ ಎಂದರು. `ಸಮುದಾಯದವರಿಗೆ ಯಾರ ಭಿಕ್ಷೆಯೂ ಬೇಡ. ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಹೋರಾಡಬೇಕು. ಆ ಮೂಲಕ ರಾಜಕೀಯ ಶಕ್ತಿ ಪಡೆಯಬೇಕು~ ಎಂದು ಕರೆ ನೀಡಿದರು.

50 ಕೋಟಿ ಅನುದಾನಕ್ಕೆ ಮನವಿ:  ಛಲವಾದಿ ಮಹಾಸಭಾ ಅಧ್ಯಕ್ಷ ಎಚ್.ಕೆ. ಬಸವರಾಜು ಮಾತನಾಡಿ, `ಛಲವಾದಿ ಸಮುದಾಯಕ್ಕೆ ಸೇರಿದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ವೈದ್ಯಕೀಯ ಕಾಲೇಜು ಸ್ಥಾಪನೆಗೆ 25 ಎಕರೆ ಭೂಮಿ ಹಾಗೂ 50 ಕೋಟಿ ರೂಪಾಯಿ ಅನುದಾನ ನೀಡಬೇಕು~ ಎಂದು ಮನವಿ ಮಾಡಿದರು.

ಸಚಿವರಾದ ಎ.ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಎಂ.ಪಿ. ಕುಮಾರಸ್ವಾಮಿ, ಮಾಜಿ ಶಾಸಕ ಕೆ.ಅನ್ನದಾನಿ, ಐಎಎಸ್ ಅಧಿಕಾರಿ ಕೆ.ಶಿವರಾಂ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT