ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾಚಿತ್ರ ಅಕಾಡೆಮಿ ಸ್ಥಾಪನೆ: ಸುರೇಶ್ ಕುಮಾರ್

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಯುವ ಛಾಯಾಗ್ರಾಹಕರನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯದಲ್ಲಿ ಛಾಯಾಚಿತ್ರ ಅಕಾಡೆಮಿ ಸ್ಥಾಪಿಸಲು ಗಂಭೀರ ಚಿಂತನೆ ನಡೆಸಲಾಗುವುದು~ ಎಂದು ಸಚಿವ ಎಸ್.ಸುರೇಶ್‌ಕುಮಾರ್ ಇಲ್ಲಿ ತಿಳಿಸಿದರು.

ಪ್ರಕೃತಿ ಕ್ರಿಯೇಷನ್ಸ್ ಸಂಸ್ಥೆಯು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಮಾನ್ಯತೆಗಳಾದ ಮಾಸ್ಟರ್ಸ್‌ ಹಾಗೂ ಫೆಲೋಗಳಿಗಾಗಿ ರಾಜ್ಯದ ಛಾಯಾಗ್ರಾಹಕರು ಸಿದ್ದಪಡಿಸಿರುವ `ಛಾಯಾ ವಿಶಿಷ್ಟ~ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

`ರಾಜ್ಯದಲ್ಲಿ ಛಾಯಾಚಿತ್ರ ಅಕಾಡೆಮಿ ಸ್ಥಾಪನೆಯ ಅಗತ್ಯವಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಅಕಾಡೆಮಿ ಸ್ಥಾಪನೆಯಾಗಿವೆ. ನೆರೆಯ ರಾಜ್ಯಗಳಲ್ಲಿ ಛಾಯಾಗ್ರಾಹಕ ಅಕಾಡೆಮಿಗಳು ನಿರ್ವಹಿಸುವ ಕಾರ್ಯವೈಖರಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಬಳಿಕ ಅಕಾಡೆಮಿ ಸ್ಥಾಪನೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಹೇಳಿದರು.

`ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಛಾಯಾಚಿತ್ರ ಸ್ಪರ್ಧೆಯಲ್ಲಿ ರಾಜ್ಯದ ಯುವಕರು ಹೆಚ್ಚು ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ. ಸರ್ಕಾರ ಛಾಯಾಗ್ರಾಹಕರನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ರಾಜ್ಯವು ದೇಶದಲ್ಲಿಯೇ ಮಾಸ್ಟರ್ಸ್‌ ಹಾಗೂ ಫೆಲೋ ಪಡೆದಿರುವ ಹೆಚ್ಚು ಛಾಯಾಗ್ರಾಹಕರನ್ನು ಹೊಂದಿರುವುದು ಶ್ಲಾಘನೀಯ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯೋತ್ಸವ ಪ್ರಶಸ್ತಿ- ಶಿಫಾರಸಿಗೆ ಮಣಿ ಹಾಕುವುದಿಲ್ಲ: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವೇಳೆ ಛಾಯಾಗ್ರಾಹಕರನ್ನು ಪ್ರತ್ಯೇಕ ವಿಭಾಗ ಮಾಡಿ ಪ್ರಶಸ್ತಿ ನೀಡಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕವಾಗಿ ಛಾಯಾಗ್ರಾಹಕರಿಗೆ ಪ್ರಶಸ್ತಿ ನೀಡಲು ಸಾಧ್ಯವಿಲ್ಲ.

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು 50ಕ್ಕೆ ಸೀಮಿತಗೊಳಿಸಲು ಮುಖ್ಯಮಂತ್ರಿಗಳು ಒಲವು ತೋರಿದ್ದಾರೆ. ಪ್ರಶಸ್ತಿ ನೀಡುವಾಗ ಯಾವುದೇ ಶಿಫಾರಸುಗಳಿಗೆ ಮಣೆ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಾರಿ ಛಾಯಾಗ್ರಾಹಕರನ್ನು ನಿರ್ಲಕ್ಷಿಸದೆ ಆದ್ಯತೆ ಮೇರೆಗೆ ಪ್ರಶಸ್ತಿ ನೀಡಲು ಚಿಂತಿಸಲಾಗುವುದು ಎಂದು ಭರವಸೆ ನೀಡಿದರು.

ಚಿತ್ರ ನಿರ್ದೇಶಕ ಹಾಗೂ ರಂಗಕರ್ಮಿ ಎಂ.ಎಸ್. ಸತ್ಯು, `ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದು ಜನರಿಗೆ ವೀಕ್ಷಿಸುವ ಭಾಗ್ಯ ಕಲ್ಪಿಸುವುದು ಉತ್ತಮ ಕೆಲಸ. ಛಾಯಾಗ್ರಾಹಕರ ಈ ಕಾರ್ಯದ ಹಿಂದೆ ಸಾಕಷ್ಟು ಪರಿಶ್ರಮವಿದೆ. ಜನರು ಇಂತಹ ಪ್ರದರ್ಶನಗಳನ್ನು ವೀಕ್ಷಿಸಿದರೆ ಅವರ ಶ್ರಮಕ್ಕೆ ಬೆಲೆ ದೊರೆತಂತಾಗುತ್ತದೆ~ ಎಂದು ನುಡಿದರು.

`ಬಾಲ್ಯದಿಂದಲೂ ನಾನು ಛಾಯಾಗ್ರಾಹಕನಾಗುವ ಕನಸು ಹೊಂದಿದ್ದೆ. ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಬಾಲ್ಯದ ಕನಸು ಹಾಗೆಯೇ ಉಳಿದಿದೆ. ರಂಗಭೂಮಿ ಸೆಳೆತದಿಂದ ಕನಸನ್ನು ಕೈಬಿಡಬೇಕಾಯಿತು~ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಂಸ್ಥೆಯ ಸಂಚಾಲಕಿ ಸೌಮ್ಯ ಪಿ.ಕುಮಾರ್, ಹಿರಿಯ ವನ್ಯಜೀವಿ ಛಾಯಾಗ್ರಾಹಕ ಟಿ.ಎನ್. ಎ.ಪೆರುಮಾಳ್ ಇತರರು ಉಪಸ್ಥಿತರಿದ್ದರು. ಈ ಛಾಯಾಚಿತ್ರ ಪ್ರದರ್ಶನವು ಇದೇ 17ರವರೆಗೆ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT