ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಿದ್ರಗೊಂಡ ದಳ ಒಂದುಗೂಡುವುದೇ?

Last Updated 15 ಫೆಬ್ರುವರಿ 2012, 5:35 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಪಾಲಿಕೆ ರಂಗ ಮಂದಿರದಲ್ಲಿ ಬುಧವಾರ ನಡೆಯಲಿರುವ ಜೆಡಿಎಸ್ ಜಿಲ್ಲಾ ಕಾರ್ಯಕರ್ತರ ಸಮಾವೇಶ `ಜನಪರ ಜನತಾ ಜಾಥಾ~ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿರುವ ಪಕ್ಷದ ಬಣಗಳನ್ನು ಒಂದುಗೂಡಿಸುವುದೇ?

ಒಂದು ಕಾಲದಲ್ಲಿ ಜನತಾ ಪರಿವಾರದ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಇಂದು ಜನತಾದಳ ಪ್ರಾಬಲ್ಯ ಸಾಕಷ್ಟು ಕುಸಿದಿದೆ. ದಾವಣಗೆರೆ ಜಿಲ್ಲೆಯಾಗಿ ರೂಪುಗೊಳ್ಳಲು, ಜನತಾ ಪರಿವಾರವೇ ಕಾರಣ. ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ನೂತನ ಜಿಲ್ಲೆ ಘೋಷಿಸಿ ಕರ್ನಾಟಕದ `ಮ್ಯಾಂಚೆಸ್ಟರ್~ ಗೆ ಘನತೆ ತಂದಿಕೊಟ್ಟರು.

ಪ್ರತ್ಯೇಕ ಜಿಲ್ಲೆಯಾದ ನಂತರ ಬದಲಾದ ಪರಿಸ್ಥಿತಿಯಲ್ಲಿ ಪಟೇಲರ ಪುತ್ರ ಮಹಿಮ ಪಟೇಲ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹರಪನಹಳ್ಳಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಪುತ್ರ ರವೀಂದ್ರ `ಕೈ~ ಹಿಡಿದಿದ್ದಾರೆ.  ಹರಿಹರದಲ್ಲೂ ಜೆಡಿಎಸ್ ತನ್ನ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.

ಜಿಲ್ಲಾ ಜೆಡಿಎಸ್ ಪ್ರಾಬಲ್ಯ ಕುಸಿದರೂ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿರುವವರೆಗೂ ಪಕ್ಷದಲ್ಲಿ ಯಾವುದೇ ಒಡಕು ಇರಲಿಲ್ಲ. 2009ರಲ್ಲಿ ನಡೆದ ಲೋಕಸಭಾ ಚುನಾವಣೆಯ ಘಟನೆಗಳು ಪಕ್ಷವನ್ನು ಒಡೆದ ಮನೆಯನ್ನಾಗಿಸಿತು.

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಜಿ.ಎಂ. ಸಿದ್ದೇಶ್ವರ, ಕಾಂಗ್ರೆಸ್‌ನಿಂದ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧಿಸಿದರೆ, ಜೆಡಿಎಸ್ ಕಲ್ಲೇರುದ್ರೇಶ್ ಅವರನ್ನು ಕಣಕ್ಕಿಳಿಸಿತ್ತು. ಈ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠರು ತೆಗೆದುಕೊಂಡ ತೀರ್ಮಾನ ಪಕ್ಷವನ್ನು ಎರಡು ಬಣಗಳಾಗಿ ಮಾಡಿತು.

ಕಾಂಗ್ರೆಸ್‌ಗೆ ಬೆಂಬಲ ನೀಡಿದ ಪಕ್ಷದ ಅಂದಿನ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಶಿವಶಂಕರ್ ಅವರನ್ನು ಕೆಳಗಿಳಿಸಿ, ಟಿ. ದಾಸಕರಿಯಪ್ಪ ಅವರನ್ನು ಅಧ್ಯಕ್ಷರನ್ನಾಗಿ, ಬಿ.ಎಂ. ಸತೀಶ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿತು. ಚುನಾವಣೆಗೆ ಸ್ಪರ್ಧಿಸಿದ್ದ  ಕಲ್ಲೇರುದ್ರೇಶ್ ಕಣದಿಂದಲೇ ನಾಪತ್ತೆ ಆದರು.

ಜೆಡಿಎಸ್‌ನ ಇಂಥ ಧೋರಣೆಯಿಂದಾಗಿ ಕಾಂಗ್ರೆಸ್ ಕೇವಲ 2 ಸಾವಿರ ಮತಗಳಲ್ಲಿ   ಸೋಲು  ಅನುಭವಿಸಿತು.
ಪಕ್ಷದಲ್ಲಿ ಅಂದು ಆರಂಭವಾದ ಒಡಕು ಇಂದಿಗೂ ಸರಿಯಾಗಿಲ್ಲ. ಈ ನಡುವೆ ಜಿಲ್ಲೆಗೆ ಆಗಮಿಸಿದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಎರಡೂ ಬಣಗಳು ಆಯೋಜಿಸಿದ್ದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಬಣ ರಾಜಕೀಯ ಜೀವಂತವಾಗಿರಲು ಕಾರಣರಾದರೆ ಹೊರತು, ಒಡೆದ ಪಕ್ಷವನ್ನು ಒಂದುಗೂಡಿಸುವ ಕೆಲಸ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ, ಬಸವನಗೌಡ ಪಟೀಲ್ ಯತ್ನಾಳ್ ಅವರ ಪ್ರಯತ್ನ ಫಲ ನೀಡಲಿಲ್ಲ. ಈಗ  ಮತ್ತೊಂದು  ಸಮಾವೇಶ  ನಡೆಯುತ್ತಿದೆ. 

 ಹಾಲಿ ಇರುವ ಜಿಲ್ಲಾ ಸಮಿತಿ ಸಮಾವೇಶದ  ಸಿದ್ಧತೆಯಲ್ಲಿ  ತೊಡಗಿದ್ದರೆ, ಇನ್ನೊಂದು ಬಣ ತಟಸ್ಥವಾಗಿದೆ. ಈ ಸಮಾವೇಶದಲ್ಲಾದರೂ ಒಡೆದ ಪಕ್ಷವನ್ನು ಒಂದುಗೂಡಿಸುವ ಕೆಲಸವನ್ನು ವರಿಷ್ಠರು  ಮಾಡುತ್ತಾರೆಯೇ  ಎಂದು ಎರಡೂ  ಬಣಗಳ  ಕಾರ್ಯಕರ್ತರು  ಆಶಾಭಾವನೆ  ಹೊಂದಿದ್ದಾರೆ.

ಜಿಲ್ಲೆಯಲ್ಲಿ  ಜೆಡಿಎಸ್ ದುರ್ಬಲವಾಗಿದ್ದರೂ, ಪ್ರಸಕ್ತ ಅಸ್ತಿತ್ವದಲ್ಲಿರುವ ಜಿಲ್ಲಾ ಸಮಿತಿ ಹೋರಾಟಗಳ ಮೂಲಕ ಜನಪರ ಕೆಲಸ ಮಾಡುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಮಾಸಾಶನ ದೊರಕಿಸಲು, ಬೆಂಬಲ ಬೆಲೆ ಅಡಿ ಖರೀದಿ ಕೇಂದ್ರ ಆರಂಭ ಸೇರಿದಂತೆ ಹಲವು ಹೋರಾಟಗಳಲ್ಲಿ ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸುತ್ತಾ ಬರಲಾಗಿದೆ.

`ಕಾಂಗ್ರೆಸ್ ಹಾಗೂ ರೈತ ಸಂಘಟನೆಗಳಿಗಿಂತ ಜೆಡಿಎಸ್ ಹೋರಾಟದಲ್ಲಿ ಮೂಂಚೂಣಿಯಲ್ಲಿದೆ. ಎರಡೂ ಬಣ ಒಟ್ಟುಗೂಡಿಸಿದರೆ ಪಕ್ಷದ ಜನಪರ ಹೋರಾಟಕ್ಕೆ ಇನ್ನಷ್ಟು ಬಲ ಬರಲಿದೆ~ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.  
 ನಗರಕ್ಕೆ ಇಂದು ದೇವೇಗೌಡ, ಕುಮಾರಸ್ವಾಮಿ

ನಗರದಲ್ಲಿ ಇಂದು ಹಮ್ಮಿಕೊಂಡಿರುವ ಜೆಡಿಎಸ್ ಜಿಲ್ಲಾ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್, ಜಮೀರ್ ಆಹಮದ್ ಮತ್ತಿತರರು ಭಾಗವಹಿಸಲಿದ್ದಾರೆ.

 ಫೆ. 15ರ ಬೆಳಿಗ್ಗೆ ಕಲ್ಲೇರುದ್ರೇಶ್  ಮನೆಯಲ್ಲಿ ಉಪಾಹಾರ ಸೇವಿಸುವರು.  10.30ಕ್ಕೆ ಗಾಂಧಿ ವೃತ್ತದಿಂದ ಮಹಾನಗರ ಪಾಲಿಕೆವರೆಗೆ  ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಸಮಾವೇಶದಲ್ಲಿ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಗುವುದು. ಮಧ್ಯಾಹ್ನ  ಪಕ್ಷದ ದಲಿತ  ಮುಖಂಡ ಎಚ್.ಸಿ. ಗುಡ್ಡಪ್ಪ ಅವರ ಮನೆಯಲ್ಲಿ ಭೋಜನ ಮಾಡುವರು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT