ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ. 4ಕ್ಕೆ ಅಖಿಲ ಭಾರತ ಕಾರ್ಮಿಕರ ಸಮ್ಮೇಳನ

Last Updated 15 ಡಿಸೆಂಬರ್ 2012, 6:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಖಿಲ ಭಾರತ 20ನೇ ಕಾರ್ಮಿಕರ ಸಮ್ಮೇಳನ ಬೆಂಗಳೂರಿನಲ್ಲಿ ಜ. 4ರಿಂದ 6ರವರೆಗೆ ನಡೆಯಲಿದೆ.ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ಆಶ್ರಯದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ.

ಈ ಸಮ್ಮೇಳನದಲ್ಲಿ ದೇಶದ 20 ರಾಜ್ಯಗಳಿಂದ ವಿವಿಧ ವಲಯಗಳಿಗೆ ಸೇರಿದ ಕಾರ್ಮಿಕ ಸಂಘಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ. ಭಟ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇಶಾದ್ಯಂತ ಕಾರ್ಮಿಕರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿರುವ ಇಂದಿನ ಸಂದರ್ಭದಲ್ಲಿ ಈ ಅಖಿಲ ಭಾರತ ಸಮ್ಮೇಳನ ಜರುಗುತ್ತಿದೆ. ಜಾಗತೀಕರಣ ನೀತಿಗಳು ಜಾರಿಯಾದ ನಂತರ ದುಡಿಯುವ ಜನರ ಬದುಕು ಘೋರವಾಗಿದೆ. ಕಾಯಂ ಸ್ವರೂಪದ ಹುದ್ದೆಗಳನ್ನು ಕೈಬಿಡಲಾಗುತ್ತಿದೆ. ಎಲ್ಲೆಡೆ ಗುತ್ತಿಗೆ- ಹೊರಗುತ್ತಿಗೆಯ ಮೇಲೆ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಉದ್ಯೋಗ ಭದ್ರತೆ ಎನ್ನುವುದು ಭೂತಕಾಲಕ್ಕೆ ಸೇರಿದ ಮಾತಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಕೆಲಸದ ವೇಳೆ, ವೇತನ, ಭತ್ಯೆ, ಸೌಕರ್ಯಗಳಲ್ಲಿ ತಾರತಮ್ಯ ಕಣ್ಣು ಕುಕ್ಕುವಂತಿದೆ. ಕೈಗಾರಿಕೆಗಳನ್ನು ಮುಚ್ಚುವಿಕೆ, ಕೆಲಸದಿಂದ ಕಾರ್ಮಿಕರ ವಜಾ, ಇತ್ಯಾದಿಗಳು ಸರ್ವೇಸಾಮಾನ್ಯ ವಿದ್ಯಮಾನಗಳಾಗಿವೆ ಎಂದು ವಿವರಿಸಿದರು.

ಇನ್ನೂ ದೇಶದ ದುಡಿಯುವ ಜನತೆಯ ಶೇ 94ರಷ್ಟು ಇರುವ ಅಸಂಘಟಿತ ಕಾರ್ಮಿಕರ ಬದುಕು ಅತ್ಯಂತ ಶೋಚನೀಯವಾಗಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೌಕರರ ಸ್ಥಾನಮಾನವನ್ನು ನಿರಾಕರಿಸಲಾಗಿದ್ದು, ಗೌರವ ಧನ, ಪ್ರೋತ್ಸಾಹ ಧನ ಇತ್ಯಾದಿಗಳ ಹೆಸರಿನಲ್ಲಿ ಅನಾಗರಿಕವಾಗಿ ದುಡಿಸಿಕೊಳ್ಳಲಾಗುತ್ತಿದೆ. ಜೀವ ನಾವಶ್ಯಕ ಪದಾರ್ಥಗಳ ಬೆಲೆಗಳು ಗಗನಕ್ಕೇರಿರುವುದರಿಂದ ಈ ಕಾರ್ಮಿಕರ ಬದುಕು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ ಎಂದು ನುಡಿದರು.

ಬಂಡವಾಳಶಾಹಿ ವ್ಯವಸ್ಥೆಯ ನಿರ್ದಯ ಶೋಷಣೆಯು ಕಾರ್ಮಿಕರ ಬದುಕನ್ನು ಉಸಿರುಗಟ್ಟಿಸುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಎಲ್ಲ ವಿಭಾಗದ ಕಾರ್ಮಿಕರು ಒಂದುಗೂಡಿ ಆಂದೋಲನ ಹಮ್ಮಿಕೊಳ್ಳುವುದು ಕಾರ್ಮಿಕ ವರ್ಗದ ಮುಂದಿರುವ ಏಕೈಕ ಮಾರ್ಗವಾಗಿದೆ.

ಆದರೆ, ದುರಂತವೆಂದರೆ ಕಾರ್ಮಿಕರು ಇಂದು ಸಮಯಸಾಧಕತನ, ಆರ್ಥಿಕವಾದ ಮತ್ತು ಕಾನೂನುವಾದಗಳಲ್ಲಿ ಮುಳುಗಿದ್ದಾರೆ.  ಬಲಪಂಥೀಯ ಟ್ರೇಡ್ ಯೂನಿಯನ್‌ಗಳು ಮಾತ್ರವಲ್ಲದೆ ಎಡಪಂಥೀಯ ಟ್ರೇಡ್‌ಯೂನಿಯನ್‌ಗಳು ಸಹ ಕಾರ್ಮಿಕರಲ್ಲಿ ಈ ಪ್ರವೃತ್ತಿಯನ್ನು ಪೋಷಿಸುತ್ತಿವೆ. ಚಳವಳಿಯನ್ನು ಕಾಡುತ್ತಿರುವ ಮತ್ತೊಂದು ಗಂಡಾಂತರವೆಂದರೆ ದುಡಿಯುವ ಜನರ ಒಗ್ಗಟ್ಟನ್ನು ಮುರಿಯುತ್ತಿರುವ ಜಾತಿವಾದ, ಕೋಮುವಾದ, ಮುಂತಾದ ವಿಭಜಕ ಪ್ರವೃತ್ತಿಗಳು.

ಇವು ಕಾರ್ಮಿಕ ಹೋರಾಟವನ್ನು ಒಳಗಿನಿಂದಲೇ ದುರ್ಬಲಗೊಳಿಸುತ್ತಿವೆ. ಕಾರ್ಮಿಕರು ಈ ಎರಡೂ ಒಳ ಶತ್ರುಗಳ ವಿರುದ್ಧ ಉನ್ನತ ವೈಚಾರಿಕ - ಸಾಂಸ್ಕೃತಿಕ ಆಂದೋಲನ ಹರಿಬಿಡಬೇಕು. ಆ ದಿಸೆಯಲ್ಲಿ ಆಲ್ ಇಂಡಿಯಾ ಯುಟಿಯುಸಿಯು ಸಂಘಟನೆಯ ಸ್ಥಾಪಕರಾದ ಶಿವದಾಸ್ ಘೋಷ್ ಅವರ ಉದಾತ್ತ ಚಿಂತನೆಗಳ ಆಧಾರದ ಮೇಲೆ ದುಡಿಯುವ ಜನರ ಹೋರಾಟಗಳನ್ನು  ಬೆಳೆಸುತ್ತಿದೆ ಎಂದು ತಿಳಿಸಿದರು.

ಹೋರಾಟವನ್ನು ಬಲಪಡಿಸಿಕೊಂಡು ಇನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವ ದಿಸೆಯಲ್ಲಿ 20ನೇ ಅಖಿಲ ಭಾರತ ಸಮ್ಮೇಳನ ಆಯೋಜಿಸಲಾಗಿದೆ. ದೇಶದ 20ಕ್ಕೂ ಹೆಚ್ಚು ರಾಜ್ಯಗಳಿಂದ ಸಾವಿರಾರು ದುಡಿಯುವ ಜನರ ಪ್ರತಿನಿಧಿಗಳು ಹಾಗೂ ವಿವಿಧ ದೇಶಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜನವರಿ 4ರಂದು ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ   ಎಐಯುಟಿಯುಸಿ ಅಧ್ಯಕ್ಷ ಕೃಷ್ಣ ಚಕ್ರವರ್ತಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸಮಿತಿ ಸದಸ್ಯಎ. ದೇವದಾಸ್, ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಕರಿಬಸಪ್ಪ, ಮಲ್ಲಿಕಾರ್ಜುನ್, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಲತಾ, ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT