ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗಮರಿಗೆ ಗುರುವಿನ ಸ್ಥಾನ: ಹಿರೇಮಠ

Last Updated 17 ಜುಲೈ 2013, 6:48 IST
ಅಕ್ಷರ ಗಾತ್ರ

ಬ್ಯಾಡಗಿ: `ವೀರಶೈವ ಧರ್ಮ ಜಂಗಮರಿಗೆ ಗುರುವಿನ ಸ್ಥಾನ ನೀಡಿದೆ. ಆದರೆ ಸರ್ಕಾರ ಜಂಗಮರನ್ನು ಬಹುಸಂಖ್ಯಾತ ವೀರಶೈವರ ಸಾಲಿನಲ್ಲಿ ಸೇರಿಸುವ ಮೂಲಕ ಮೇಲ್ವರ್ಗಕ್ಕೆ ಸೇರಿದವರೆಂದು ಪರಿಗಣಿಸಿರುವುದು ಸಮಾಜಕ್ಕೆ ನುಂಗಲಾರದ ತುತ್ತಾಗಿದೆ' ಎಂದು ಜೋತಿಷ್ಯರತ್ನ ಪ್ರಶಸ್ತಿ ಪುರಸ್ಕೃತ ಜಿ.ಸಿ.ಹಿರೇಮಠ ಹೇಳಿದರು. ಪಟ್ಟಣದಲ್ಲಿ ಪಂಚಾಚಾರ್ಯ ಯುವ ವೇದಿಕೆ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

`ಜೋಳಿಗೆ ಭಿಕ್ಷೆಯಿಂದಲೇ ಬದುಕು ಸಾಗಿಸುತ್ತಿರುವ ಜಂಗಮರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯದಡಿ ಸೌಲಭ್ಯ ಒದಗಿಸಬೇಕು' ಎಂದು ಸರ್ಕಾರಕ್ಕೆ ಆಗ್ರಹಿಸಿದರು.

`ಬೇಡ ಜಂಗಮರನ್ನು ಪರಿಶಿಷ್ಠ ಜಾತಿಗೆ ಸೇರಿಸಿರುವುದು ಸ್ವಾಗತಾರ್ಹವಾದರೂ ಅದನ್ನು ಬಿಜಾಪುರ ಜಿಲ್ಲೆ ಮಾತ್ರ ಸೀಮಿತಗೊಳಿಸಿದರುವುದು ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಎಸ್.ಎಸ್.ಹಿರೇಮಠ ಮಾತನಾಡಿ, `ಸರ್ಕಾರದ ಅನುದಾನವಿಲ್ಲದೆ ವೈದಿಕ ಪಾಠಶಾಲೆಗಳು ಬಡ ಜಂಗಮ ವಟುಗಳಿಗೆ ವೈದಿಕ ಉಪನಿಷತ್ತು ಹಾಗೂ ಜೋತಿಷ್ಯ ಕಲಿಸುವ ಮೂಲಕ ಪೌರೋಹಿತ್ಯವನ್ನು ಜೀವಂತವಾಗಿರಿಸಿದೆ. ರಾಜ್ಯದಲ್ಲಿ ಸುಮಾರು 65ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಬೇಡ ಜಂಗಮ ಸಮಾಜಕ್ಕೆ ಸಿಗುವ ಸೌಲಭ್ಯವನ್ನು ವಿಸ್ತರಿಸಬೇಕು' ಎಂದು ಆಗ್ರಹಿಸಿದರು.  

ಪಂಚಾಚಾರ್ಯ ಯುವ ವೇದಿಕೆ ಅಧ್ಯಕ್ಷ ಶರಣಬಸಯ್ಯ ಬೂದಿಹಾಳಮಠ ಮಾತನಾಡಿ, `ಸಮಾಜದಲ್ಲಿ ಪ್ರತಿಭಾವಂತರಿದ್ದು, ಆರ್ಥಿಕವಾಗಿ ಹಿಂದುಳಿದಿರುವುದರಿಂದ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಯುವ ವೇದಿಕೆ ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರತಿ ವರ್ಷ ಆರ್ಥಿಕ ಸಹಾಯ ಹಾಗೂ ಸಹಕಾರ ನೀಡಲು ಮುಂದಾಗಿದೆ' ಎಂದು ಹೇಳಿದರು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಜಯಶೀಲಾ ಹಿರೇಮಠ, ವಿಜಯಕುಮಾರ ಹಿರೇಮಠ, ಗುಣಾ ಕಂಬಾಳಿಮಠ, ಸರೋಜಾ ಮುಂದಿನಮನಿ, ಪೂಜಾ ಹಿರೇಮಠ, ತೇಜಸ್ವಿನಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಯುವ ವೇದಿಕೆ ಗೌರವಾಧ್ಯಕ್ಷ ಎಂ.ಎಂ.ಹಿರೇಮಠ, ಸಮಾಜದ ಮುಖಂಡರಾದ ಸಿ.ಆರ್. ಆಲದಗೇರಿ, ಕೆ. ಆರ್.ಹಿರೇಮಠ, ಶಿವಲೀಲಾ ಹಿರೇಮಠ, ಬಿ.ಜಿ.ಆರಾಧ್ಯಮಠ, ಮೃತ್ಯುಂಜಯ ಹಿರೇಮಠ, ವಿ.ಸಿ.ಸೊಪ್ಪಿನಮಠ, ರತ್ನವ್ವ ಬೂದಿಹಾಳಮಠ, ಗಿರೀಜಾ ಹಿರೇಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ರಾಜಶೇಖರ ಹಾಲೇವಾಡಿಮಠ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT