ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗಾಬಲಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ರೆಡಿ

ಬೋಪಯ್ಯ, ರಂಜನ್, ಜೀವಿಜಯ, ಲೋಕೇಶ್‌ಕುಮಾರ್, ಬಿ.ಟಿ. ಪ್ರದೀಪ್‌ಗೆ ಟಿಕೆಟ್
Last Updated 6 ಏಪ್ರಿಲ್ 2013, 6:29 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಪಕ್ಷದ ಮುಖಂಡರು ಈಗಾಗಲೇ ಪ್ರಕಟಿಸಿದಂತೆ ಪ್ರಸ್ತುತ ಇರುವ ಶಾಸಕರಿಗೆ ಈ ಬಾರಿಯೂ ಟಿಕೆಟ್ ನೀಡಿದ್ದಾರೆ. ಅದರನ್ವಯ ಮಡಿಕೇರಿ ಕ್ಷೇತ್ರಕ್ಕೆ ಹಾಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅಪ್ಪಚ್ಚು ರಂಜನ್ ಹಾಗೂ ವಿರಾಜಪೇಟೆ ಕ್ಷೇತ್ರಕ್ಕೆ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಶುಕ್ರವಾರ ಸಂಜೆ ಬಿಜೆಪಿ ಟಿಕೆಟ್ ಪ್ರಕಟ ಮಾಡುತ್ತಿದ್ದಂತೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಹರ್ಷ ಉಂಟಾಗಿದೆ. ಈ ಸುದ್ದಿಯನ್ನು  ಹಲವು ಜನ ಕಾರ್ಯಕರ್ತರು ತಮ್ಮ ಆಪ್ತರ ಬಳಗಕ್ಕೆ ದೂರವಾಣಿ ಕರೆ ಮೂಲಕ ತಿಳಿಸಿ, ಸಂಭ್ರಮ ಪಟ್ಟರು.

ಭಿನ್ನರಿಗೆ ಮಣೆಯಿಲ್ಲ: ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಸ್ವಲ್ಪ ಮಟ್ಟಿನ ಬಂಡಾಯ ಕಂಡುಬಂದಿತ್ತು. ವಿರಾಜಪೇಟೆ ಕ್ಷೇತ್ರದ ಟಿಕೆಟ್ ಅನ್ನು ಈ ಬಾರಿ ತಮಗೆ ನೀಡಬೇಕೆಂದು ಎಂ.ಎಂ. ರವೀಂದ್ರ ಅವರು ರಾಜ್ಯದ ಮುಖಂಡರನ್ನು ಒತ್ತಾಯಿಸಿದ್ದರು. 

ಇದರಂತೆ ಮಡಿಕೇರಿ ಕ್ಷೇತ್ರದ ಟಿಕೆಟ್ ಅನ್ನು ತಮಗೆ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಕೂಡ ಒತ್ತಾಯಿಸಿದ್ದರು. ಇದರಿಂದ ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಬಿಜೆಪಿಯಲ್ಲಿ ಸ್ವಲ್ಪ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು.

ರಾಜ್ಯದ ಹಿರಿಯ ವರಿಷ್ಠರು  ಭಿನ್ನರಿಗೆ ಯಾವುದೇ ಮಣೆ ಹಾಕದಿರಲು ತೀರ್ಮಾನಿಸಿ, ಹಾಲಿ ಇರುವ ಶಾಸಕರಿಗೆ ಟಿಕೆಟ್ ನೀಡಲು ನಿರ್ಧರಿಸಿದರು.
ಬಂಡಾಯ ಇಲ್ಲ: ಮಡಿಕೇರಿ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಶಾಂತೆಯಂಡ ರವಿ ಕುಶಾಲಪ್ಪ ಅವರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ, `ಪಕ್ಷದ ವರಿಷ್ಠರ ತೀರ್ಮಾನವನ್ನು ನಾವು ಒಪ್ಪುತ್ತೇವೆ. ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆಯೋ ಅವರನ್ನು ಗೆಲ್ಲಿಸಲು ಪ್ರಯತ್ನಿಸಲಾಗುವುದು. ಪಕ್ಷಕ್ಕಾಗಿ ದುಡಿಯುವುದು ನಮ್ಮ ಆದ್ಯತೆ' ಎಂದು ಹೇಳಿದರು.

ಬಂಡಾಯ ಅಥವಾ ಬೇರೆ ಪಕ್ಷಗಳತ್ತ ತೆರಳುವುದನ್ನು ಅವರು ಸಾರಾಸಗಟಾಗಿ ತಳ್ಳಿಹಾಕಿದರು.

ಕಾಂಗ್ರೆಸ್ ಪಟ್ಟಿ ಬಿಡುಗಡೆ
ವಿರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್ ಹಾಗೂ ಮಡಿಕೇರಿ ಕ್ಷೇತ್ರದಿಂದ ಲೋಕೇಶ್‌ಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆತಿದೆ.

ಜೀವಿಜಯ ಹೆಸರು ಪ್ರಕಟ
ಕಳೆದ ವರ್ಷವೇ ಮಡಿಕೇರಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಜೀವಿಜಯ ಅವರ ಹೆಸರನ್ನು ಜೆಡಿಎಸ್ ವರಿಷ್ಠರು ಬಹುತೇಕವಾಗಿ ನಿಶ್ಚಿಯಿಸಿದ್ದರು. ಅದರಂತೆ ಶುಕ್ರವಾರ ಮಧ್ಯಾಹ್ನ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಜೀವಿಜಯ ಅವರ ಹೆಸರನ್ನು ಪ್ರಕಟಿಸಿದರು.

ಕಳೆದ ಒಂದು ವರ್ಷದಿಂದಲೇ ಜೀವಿಜಯ ಅವರು ಮಡಿಕೇರಿ ಕ್ಷೇತ್ರದಲ್ಲಿ ಪಕ್ಷ ಕಟ್ಟುವ ಕೆಲಸವನ್ನು ಆರಂಭಿಸಿದ್ದರು. ಇದಕ್ಕೆ ಬೆಂಬಲವಾಗಿ ವಿ.ಪಿ. ಶಶಿಧರ್ ಅವರನ್ನು ಪಕ್ಷಕ್ಕೆ ಕರೆತಂದು, ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿಸಿದರು.

ಮಡಿಕೇರಿ ಕ್ಷೇತ್ರವನ್ನು ಈಗ ಪ್ರತಿನಿಧಿಸುತ್ತಿರುವ ಸಚಿವ ಅಪ್ಪಚ್ಚು ರಂಜನ್ ಹಾಗೂ ಬಿಜೆಪಿ ಆಡಳಿತದ ವಿರುದ್ಧ ಶಶಿಧರ್ ಹಲವು ಪ್ರತಿಭಟನೆಗಳನ್ನು ನಡೆಸುವ ಮೂಲಕ ಜಿಲ್ಲೆಯ ಜನರ ಗಮನವನ್ನು ಸೆಳೆದಿದ್ದರು. ವಿರಾಜಪೇಟೆ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಇದುವರೆಗೆ ಜೆಡಿಎಸ್ ಪ್ರಕಟಿಸಿಲ್ಲ. 3-4 ದಿನಗಳೊಳಗೆ ಪ್ರಕಟಿಸುವ ಸಾಧ್ಯತೆ ಇದೆ.

ತುಂಬಾ ಬೇಸರವಾಗಿದೆ: ರವೀಂದ್ರ
ಮಡಿಕೇರಿ: `ವಿರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಬಿಜೆಪಿ ಟಿಕೆಟ್ ಸಿಗದಿದ್ದರಿಂದ ತುಂಬಾ ಬೇಸರವಾಗಿದೆ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರೂ ನನ್ನನ್ನು ಪಕ್ಷದ ವರಿಷ್ಠರು ಗಣನೆಗೆ ತೆಗೆದುಕೊಳ್ಳಲಿಲ್ಲ ಎನ್ನುವುದು ಬೇಸರ ಮೂಡಿಸಿದೆ' ಎಂದು ಟಿಕೆಟ್ ಆಕಾಂಕ್ಷೆಯಾಗಿರುವ ಮಾಚಿಮಾಡ ಎಂ.ರವೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ 25 ವರ್ಷದಿಂದ ರಾಜಕೀಯದಲ್ಲಿರುವ ಶಾಸಕ ಕೆ.ಜಿ.ಬೋಪಯ್ಯ ಅವರು ಕಳೆದ ಬಾರಿ ಚುನಾವಣೆ ವೇಳೆ ತಮ್ಮದು ಕೊನೆಯ ಅವಕಾಶ ಎಂದು ಹೇಳಿಕೊಂಡಿದ್ದರು. ಆದರೆ, ಅವರು ತಮ್ಮ ಮಾತಿಗೆ ತಪ್ಪಿ ನಡೆದಿದ್ದಾರೆ. ಹೊಸಬರಿಗೆ, ಯುವಕರಿಗೆ ಅವಕಾಶ ನೀಡುತ್ತಿಲ್ಲ ಎಂದರು.

`ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ವಿರಾಜಪೇಟೆ ತಾಲ್ಲೂಕಿನವರನ್ನು ಕಡೆಗಣಿಸಿ ಮಡಿಕೇರಿಯವರಾದ ಕೆ.ಜಿ.ಬೋಪಯ್ಯ ಅವರಿಗೆ ಟಿಕೆಟ್ ನೀಡಿರುವುದು ಸರಿಯಾದ ಕ್ರಮವಲ್ಲ. ನನ್ನ ಹಿತೈಷಿಗಳು, ಸ್ನೇಹಿತರನ್ನು ಭೇಟಿ ಮಾಡಿ, ಮುಂದಿನ ನಡೆಯ ಬಗ್ಗೆ ತೀರ್ಮಾನಿಸುತ್ತೇನೆ' ಎಂದು ಅವರು ಹೇಳಿದರು.

`ಬೋಪಯ್ಯ ಅವರನ್ನು ಒಪ್ಪಿಸಲು ಪಕ್ಷದ ವರಿಷ್ಠರು ಹಲವು ರೀತಿ ಪ್ರಯತ್ನಿಸಿದ್ದರೂ ಫಲಪ್ರದವಾಗಲಿಲ್ಲ. ಸಂಸದ ಕ್ಷೇತ್ರಕ್ಕೆ ಟಿಕೆಟ್ ಅಥವಾ ರಾಜ್ಯಸಭಾ ಸ್ಥಾನ ನೀಡುವ ಕುರಿತು ವರಿಷ್ಠರು ಆಶ್ವಾಸನೆ ನೀಡಿದರೂ ಬೋಪಯ್ಯ ಒಪ್ಪಲಿಲ್ಲ. ಹೀಗಾಗಿ ನನಗೆ ಟಿಕೆಟ್ ಸಿಗಲಿಲ್ಲ' ಎಂದು ಅವರು ತಿಳಿಸಿದರು.

ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಬೇರೆ ಪಕ್ಷಗಳತ್ತ ಮುಖ ಮಾಡುವರೋ ಅಥವಾ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವರೋ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT