ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಬದ ಚೀಲದ ಜಮಾನ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ದಿನೇದಿನೇ ಫ್ಯಾಷನ್ ಪರಿಕಲ್ಪನೆ ಬದಲಾಗುತ್ತಲೇ ಇರುತ್ತದೆ. ಆ ನಿಟ್ಟಿನಲ್ಲಿ ಕೈಚೀಲಗಳೂ ಹೊರತಾಗಿಲ್ಲ. ಹಿಂದೆ ಚಿಕ್ಕ ಪುಟ್ಟ ಸಾಮಗ್ರಿಗಳನ್ನು ಕೊಂಡೊಯ್ಯಲು ಮಾತ್ರ ಹ್ಯಾಂಡ್‌ಬ್ಯಾಗ್ ಬಳಕೆಗೆ ಬರುತ್ತಿತ್ತು. ಆದರೆ ಈಗ ಅದಕ್ಕೆ ಫ್ಯಾಷನ್ ಸ್ಪರ್ಶ ಸಿಕ್ಕಿದೆ. ಅದರಲ್ಲೂ ಹೆಣ್ಣು ಮಕ್ಕಳ ವಿಷಯದಲ್ಲಿ ಹ್ಯಾಂಡ್ ಬ್ಯಾಗ್ ಕಡ್ಡಾಯ. ಕಾಲೇಜಿಗೆ, ಪಾರ್ಟಿಗೆ, ಪ್ರವಾಸಕ್ಕೆ ಹೀಗೆ ಪ್ರತಿಯೊಂದು ಅವಶ್ಯಕತೆಗೂ ತರಹೇವಾರಿ ಬ್ಯಾಗ್‌ಗಳ ಸಂಗ್ರಹವೇ ಇರುತ್ತದೆ.

ಬ್ಯಾಗ್‌ಗಳು ಶೋಕಿಯಾಗಿರಬೇಕು. ಜೊತೆಗೆ ಕಡಿಮೆ ಬೆಲೆಯದ್ದೂ ಆಗಿರಬೇಕು ಎಂದು ಬಯಸುತ್ತಾರೆ ಈಗಿನ ಯುವಜನರು. ಆದರೆ ಇದಕ್ಕೆ ತದ್ವಿರುದ್ಧವಾಗಿ ಬಹುತೇಕ ವಿನ್ಯಾಸಕರು ದುಬಾರಿ ಬೆಲೆಯ ಬ್ಯಾಗ್‌ಗಳನ್ನೇ ವಿನ್ಯಾಸಗೊಳಿಸಿರುತ್ತಾರೆ. `ಕೈ ಚೀಲಗಳು ಸುಂದರವಾಗಿರಬೇಕೆಂದರೆ ಅದ್ಭುತವಾಗಿ ವಿನ್ಯಾಸಗೊಳಿಸಲೇಬೇಕು. ಹಾಗಿರಬೇಕಾದರೆ, ದುಬಾರಿಯೂ ಆಗಿರುತ್ತದೆ, ವಿಭಿನ್ನವೂ ಆಗಿರುತ್ತದೆ. ಆಗ ಮಾತ್ರ ಮೆಚ್ಚುಗೆ ಸಾಧ್ಯ' ಎನ್ನುತ್ತಾರೆ ವಿನ್ಯಾಸಕಿ ಕೊಕೊ ಚಾನೆಲ್.

ಅವಶ್ಯಕತೆಯೊಂದಿಗೆ ಹುಟ್ಟಿಕೊಂಡ ಪರ್ಸ್, ಕೈಚೀಲ, ಕ್ಲಚ್, ವ್ಯಾನಿಟಿಗಳು ಈಗ ಶೋಕಿಯ ವಸ್ತುಗಳಾಗಿವೆ. ಈ ಬ್ಯಾಗ್ ಫ್ಯಾಷನ್ ನಿನ್ನೆ ಮೊನ್ನೆಯದಲ್ಲ. ಬಹಳ ಹಿಂದಿನಿಂದಲೂ ಇದ್ದು, ಅದರ ಪರಿಕಲ್ಪನೆ ಬದಲಾಗುತ್ತಿರುತ್ತದಷ್ಟೆ. ಈ ಕುರಿತು ಕೆಲವು ಕಾಲೇಜು ವಿದ್ಯಾರ್ಥಿಗಳು ಇಲ್ಲಿ ಮಾತನಾಡಿದ್ದಾರೆ.

`ನನಗೆ ಭುಜಕ್ಕೆ ಹಾಕಿಕೊಳ್ಳುವ ಬ್ಯಾಗ್‌ಗಳು ಇಷ್ಟ. ಅದು ಹಿಡಿಯಲೂ ಸುಲಭ, ನೋಡಲೂ ಸುಂದರ. ಕ್ಯಾಶುಯಲ್ ಮತ್ತು ಕ್ಲಾಸಿ ಲುಕ್ ಎರಡನ್ನೂ ನೀಡುತ್ತದೆ' ಎನ್ನುವುದು ಸೇಂಟ್ ಜೋಸೆಫ್ ಕಾಲೇಜಿನ ಬಿಬಿಎಂ ವಿದ್ಯಾರ್ಥಿನಿ ಪಿಯಾ ಪಾಲ್ ಅಭಿಪ್ರಾಯ. ಆದರೆ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಕ್ಷಿ ಅಗರ್‌ವಾಲ್‌ಗೆ ಬಣ್ಣಬಣ್ಣದ ಬ್ಯಾಗ್‌ಗಳೆಂದರೆ ಅಚ್ಚುಮೆಚ್ಚಂತೆ. `ಬಣ್ಣಬಣ್ಣದ ಬ್ಯಾಗ್‌ಗಳು ಕಣ್ಸೆಳೆಯುತ್ತವೆ. ಕೈಚೀಲ ಎದ್ದು ಕಾಣುವಂತಿರಬೇಕು ಮತ್ತು ನನಗೂ ಹೊಂದುವಂತಿರಬೇಕು. ಅಂಥವನ್ನೇ ಹೆಚ್ಚು ಆರಿಸಿಕೊಳ್ಳುತ್ತೇನೆ' ಎನ್ನುತ್ತಾರೆ ಅವರು.

ಬ್ಯಾಗ್‌ಗಳ ವಿಷಯದಲ್ಲಿ ಹುಡುಗರಿಗಿಂತ ಹುಡುಗಿಯರಿಗೆ ಮೋಹ ಹೆಚ್ಚಂತೆ. `ನನಗೆ ಬ್ರಾಂಡ್ ಯಾವುದು ಎಂಬುದು ಮುಖ್ಯವಲ್ಲ. ತುಂಬಾ ದೊಡ್ಡದ್ದೂ ಅಲ್ಲದ, ತುಂಬಾ ಚಿಕ್ಕದೂ ಅಲ್ಲದ, ಮಧ್ಯಮ ಗಾತ್ರದ ಬ್ಯಾಗ್ ತುಂಬಾ ಇಷ್ಟ. ಆದರೆ ಬಕಲ್ ಇಲ್ಲದೆ, ಜಿಪ್ ಇದ್ದರೆ ಓಕೆ' ಎನ್ನುತ್ತಾರೆ ಮೌಂಟ್ ಕಾರ್ಮೆಲ್ ಕಾಲೇಜಿನ ಬಿ.ಎ ವಿದ್ಯಾರ್ಥಿನಿ ವಿಶಾಖಾ ಕುಮಾರ್. ಆದರೆ ಕ್ರೈಸ್ಟ್ ಕಾಲೇಜಿನ ಚಾಹತ್ ಪಾಲ್ ತಮಗೆ ಬ್ರಾಂಡ್ ತುಂಬಾ ಮುಖ್ಯ ಎನ್ನುತ್ತಾರೆ.

ಅವಶ್ಯಕತೆಯೊಂದಿಗೆ ಚೆಂದದಲ್ಲೂ ರಾಜಿಯಾಗದಂತಹ ಬ್ಯಾಗ್‌ಗಳನ್ನೇ ಯುವಜನರು ಹೆಚ್ಚು ಆಯ್ಕೆ ಮಾಡಿಕೊಳ್ಳುವುದು ಇತ್ತೀಚಿನ ಟ್ರೆಂಡ್. `ಸ್ಟೈಲ್‌ನ ಜೊತೆಗೆ ಬ್ಯಾಗ್ ಉಪಯುಕ್ತ ಎಂದು ನಮಗೆ ಅನ್ನಿಸಬೇಕು' ಎನ್ನುತ್ತಾರೆ ಪ್ರಿಯಾಂಕಾ ಅರಸ್. ಅವರ ಪ್ರಕಾರ ಬ್ಯಾಗ್‌ಗಳೆಂದರೆ ಕೈಗಳಿಗೆ ಆರಾಮ ನೀಡುವ ಚೀಲ. ಮೇಕಪ್ ಸಾಮಗ್ರಿ, ಇನ್ನಿತರ ವಸ್ತುಗಳು ಹಿಡಿಸುವಂತೆ ಕಂಫರ್ಟಬಲ್ ಆಗಿರಬೇಕು ಎನ್ನುತ್ತಾರೆ ಅವರು.

ಪ್ರಯಾಣಕ್ಕೆ ಟೋಟ್ ಬ್ಯಾಗ್, ಸಂಜೆ ಪಾರ್ಟಿಗೆ ಚಿಕ್ಕ ಹ್ಯಾಂಡ್‌ಬ್ಯಾಗ್ ಅಥವಾ ಕ್ಲಾಸಿಕ್ ಕ್ಲಚ್ ಹೀಗೆ ಬ್ಯಾಗ್‌ಗಳಲ್ಲೂ ತರಹೇವಾರಿ ಆಯ್ಕೆಗಳಿವೆ. ಕಾಲಕ್ಕೆ ತಕ್ಕಂತೆ ಬ್ಯಾಗ್‌ನ ಬಣ್ಣಗಳಲ್ಲೂ ಬದಲಾವಣೆಗಳು ಆಗುತ್ತಿರುತ್ತದೆ. ಬೇಸಿಗೆಗೆ ಸೂಕ್ತವೆನ್ನಿಸುವ ಬಣ್ಣಗಳು ಕೆಲವಾದರೆ, ಮಳೆಗಾಲಕ್ಕೂ ವಿಭಿನ್ನ ರೀತಿಯ ಬಣ್ಣದ ಬ್ಯಾಗ್‌ಗಳು ಲಭ್ಯ. ಕೆಲವರಿಗೆ ಬಗೆಬಗೆ ಬಣ್ಣದ, ವಿನ್ಯಾಸದ ಬ್ಯಾಗ್‌ಗಳನ್ನು ಸಂಗ್ರಹಿಸುವ ಹವ್ಯಾಸವೂ ಇರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT