ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗವೇ ರಂಗಾಯಣ!

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಂಗಾಯಣ ರಘು ನಟಿಸದ ಚಿತ್ರವೇ ಕನ್ನಡದಲ್ಲಿ ಬರುತ್ತಿಲ್ಲವೇನೋ ಎಂಬಂತೆ ಸಿನಿರಂಗವನ್ನು ಅವರು ಆವರಿಸಿದ್ದಾರೆ. ಚಿತ್ರರಂಗದಲ್ಲಿ ಅವರು ಗೆಲ್ಲುವ ಕುದುರೆ.

ಅವರನ್ನು ಮನದಲ್ಲಿಟ್ಟುಕೊಂಡೇ ಪಾತ್ರಗಳು ಸೃಷ್ಟಿಯಾಗುತ್ತಿವೆ. ಚಿತ್ರೀಕರಣ ಎಷ್ಟು ಬೇಕಾದರೂ ತಡವಾಗಲಿ, ರಂಗಾಯಣ ರಘು ಬರುವವರೆಗೂ ಕಾಯುತ್ತೇವೆ ಎನ್ನುವ ಮಟ್ಟಿಗೆ ಅವರಿಗೆ ಬೇಡಿಕೆ.

ಮಾತ್ರವಲ್ಲ ಸಂಭಾವನೆ ವಿಚಾರದಲ್ಲೂ ರಘು ಅನೇಕ ನಾಯಕನಟರನ್ನು ಮೀರಿಸಿದ್ದಾರೆ. ಮೆಚ್ಚುವವರಿದ್ದಂತೆ, ಅವರ ಪಾತ್ರಗಳಲ್ಲಿ ಏಕತಾನತೆ ಇದೆ ಎಂದು ಆರೋಪಿಸುವವರೂ ಇದ್ದಾರೆ.

ಈ ಆರೋಪಗಳಿಗೆ ಉತ್ತರ ನೀಡುತ್ತ, ತಮ್ಮ ಸಿನಿಮಾ ಬದುಕು, ಆಸೆ ಆಕಾಂಕ್ಷೆ, ರಂಗಾಯಣದ ನಂಟು ಹೀಗೆ ಹಲವು ವಿಚಾರಗಳನ್ನು ಮನಬಿಚ್ಚಿ ತೆರೆದಿಟ್ಟರು ಕೊಟ್ಟೂರು ಚಿಕ್ಕರಂಗಪ್ಪನವರ ಮಗ ರಘುನಾಥ್.

ತಮ್ಮ ಪಾತ್ರಗಳು ಪುನರಾವರ್ತನೆ ಆಗುತ್ತಿರುವುದರ ಬಗ್ಗೆ ಅವರಿಗೆ ಅರಿವಿದೆ. ಕಲಾವಿದ ಅಪ್ರಬುದ್ಧನಾಗಿದ್ದಾಗ ಏಕತಾನತೆ ಕಾಡುತ್ತದೆ. ಒಂದು ಪಾತ್ರ ಜನಪ್ರಿಯವಾದಾಗ ಅದೇ ಬಗೆಯ ಪಾತ್ರಗಳು ಸೃಷ್ಟಿಯಾಗುತ್ತದೆ.

ಹಳೆಯ ಪಾತ್ರವನ್ನು ಮರೆತು, ಅದನ್ನು ಮೀರುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಹೊಸತೇನನ್ನು ನೀಡಲು ಸಾಧ್ಯವೇ ಎಂಬುದನ್ನು ನೋಡುತ್ತೇನೆ ಎನ್ನುತ್ತಾರೆ.

ಅವರ ಪ್ರಕಾರ ಜನರೂ ಆ ರೀತಿ ಭಾವಿಸುವುದಿಲ್ಲ. ಅವರಿಗೆ ಕಂಪೆನಿ ನಾಟಕದ ಗುಣ ಇದೆ. ಮಹಾಭಾರತದ ನಾಟಕಗಳನ್ನು ಮತ್ತೆ ಮತ್ತೆ ನೋಡುವುದಿಲ್ಲವೇ? ಹಾಗೆ ಜನ ಸಿನಿಮಾದ ಒಂದೇ ಬಗೆಯ ಪಾತ್ರದಲ್ಲೂ ವೈವಿಧ್ಯ ಕಾಣುತ್ತಾರೆ, ಮನ್ನಿಸುತ್ತಾರೆ.

ರಂಗಾಯಣ ರಘು `ಚಿತ್ರಲೋಕದ ರಘು~ ಆಗಿ ಸುಮಾರು 11 ವರ್ಷಗಳಾಗಿದೆ. ಈ ಚಿಕ್ಕ ಅವಧಿಯಲ್ಲಿ ಅವರು ಬಣ್ಣಹಚ್ಚಿರುವ ಚಿತ್ರಗಳ ಸಂಖ್ಯೆ ಸುಮಾರು ಇನ್ನೂರು. ಈಗ ಅವಕಾಶ, ಹೆಸರು ಎಲ್ಲವೂ ಇದೆ. ಆದರೆ ಹಿಂದಿನ ಬದುಕು ಇಷ್ಟು ಸಲೀಸಾಗಿ ಇರಲಿಲ್ಲ ಎನ್ನುವುದು ಅವರ ಅನುಭವದ ಮಾತು. ಮಾತಿನ ಮಧ್ಯೆ ಅವರು ಹಳೆ ಹೆಜ್ಜೆಗಳತ್ತ ಒಮ್ಮೆ ಕಣ್ಣುಹಾಯಿಸಿದರು.

ರಂಗಾಯಣದ ಕನವರಿಕೆ
ಹುಟ್ಟೂರು ಪಾವಗಡದಲ್ಲಿ ಓದುತ್ತಿದ್ದಾಗ ರಘು ಬೆಳೆದದ್ದು ತೆಲುಗು ಚಿತ್ರಗಳನ್ನು ನೋಡಿ. ಕನ್ನಡ ಚಿತ್ರಗಳು ಅಲ್ಲಿ ಪ್ರದರ್ಶನವೇ ಆಗುತ್ತಿರಲಿಲ್ಲ. ಎನ್‌ಟಿಆರ್ ಅವರ ಚಿತ್ರಗಳು ಸ್ಫೂರ್ತಿಯಾಗಿದ್ದವು. ಮುಂದೆ ಬೆಂಗಳೂರಿಗೆ ನಾಲ್ಕನೇ ತರಗತಿ ಓದಲು ಬಂದಾಗ ರಾಜ್‌ಕುಮಾರ್ ಚಿತ್ರಗಳನ್ನು ನೋಡಿದ್ದು.
 
ಕಾಲೇಜು ದಿನಗಳಲ್ಲಿ ಅಂಬರೀಷ್ ಚಿತ್ರಗಳನ್ನು ನೋಡಿದಾಗ ಅವರಲ್ಲೂ ನಟನೆಯ ಕನಸು ಕಟ್ಟಿಕೊಳ್ಳತೊಡಗಿತು. ನಟಿಸಲು ರೂಪವೇ ಮುಖ್ಯವಲ್ಲ ಎಂಬುದು ಅರಿವಾಯಿತು. 1988ರಲ್ಲಿ ರಂಗಾಯಣದ ಒಳಹೊಕ್ಕರು. ಅಲ್ಲಿ ಬಿ.ವಿ.ಕಾರಂತರ ಗರಡಿಯಲ್ಲಿ ಕಲಿತದ್ದು ಶಿಸ್ತು, ಕೆಲಸ. ಬರುತ್ತಿದ್ದ ಸಂಬಳ ತಿಂಗಳಿಗೆ 800 ರೂಪಾಯಿ.

`ಕೆಲಸ ಸಾಕಲ್ಲಪ್ಪ, ದುಡ್ಡು ಏನಕ್ಕೆ ಬೇಕು~ ಎಂದು ಕಾರಂತರು ಕೇಳುತ್ತಿದ್ದರು. ಸರ್ಕಾರ ನಿಮ್ಮ ಮೇಲೆ ದುಡ್ಡು ವ್ಯಯ ಮಾಡಿದೆ. ಕೆಲಸ ಮಾಡಿ ಎನ್ನುತ್ತಿದ್ದರು. `ಸುಂದರವಾಗಿ ಇರುವುದು ಬೇರೆ, ಸುಂದರವಾಗಿ ಅಭಿನಯಿಸುವುದು ಬೇರೆ~- ಇದು ಅಲ್ಲಿ ಕಾರಂತರು ಹೇಳಿಕೊಟ್ಟ ಮೊದಲ ಪಾಠ.

ರಂಗಾಯಣವನ್ನು ಬೆಳೆಸುವುದರ ಬಗ್ಗೆ ಕಾರಂತರಲ್ಲಿ ದೊಡ್ಡ ಕನಸಿತ್ತು. ಅಭಿನಯಕ್ಕೆ ಅಕಾಡೆಮಿಕ್ ರೂಪ ನೀಡುವ ಅವರ ಬಯಕೆ ಕಮರಿ ಹೋಯಿತು. ಸರ್ಕಾರದಿಂದ ಸೂಕ್ತ ಸ್ಪಂದನ ಸಿಗಲಿಲ್ಲ. ಬೇರೆ ನಾಟಕ, ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ, ರಂಗಾಯಣ ಬಿಡಬೇಡಿ ಎಂದು ಹೇಳುವ ಮಟ್ಟಿಗೆ ಕಾರಂತರು ಬೇಸರಗೊಂಡಿದ್ದರು.

ಅಡಿಗೆ ಮಾಡಲು, ಬಟ್ಟೆ ಹೊಲಿಯಲು ಕೋರ್ಸ್‌ಗಳಿವೆ. ಆದರೆ ಸಹಸ್ರಮಾನದ ಚರಿತ್ರೆ ಇರುವ ಅಭಿನಯ ಕಲೆಯನ್ನು ಕಲಿಸಿಕೊಡಲು ಶೈಕ್ಷಣಿಕ ಮಾರ್ಗವೇ ಇಲ್ಲ ಎಂದು ರಘು ಬೇಸರದಿಂದ ಹೇಳುತ್ತಾರೆ.

ರಂಗಾಯಣಕ್ಕೆ ಬರುವ ರಾಜಕಾರಣಿಗಳು ತಮಗೆ ಹೂವಿನ ಹಾರ ಹಾಕಲಿಲ್ಲ ಎಂಬ ಕಾರಣಕ್ಕೇ ಸರ್ಕಾರದಿಂದ ಬರುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸುತ್ತಿದ್ದರು. ಕಾರಂತರ ಬಾಯಲ್ಲಿ ಸಿನಿಮಾ ಪದ ಕೇಳಿದಾಗಲೇ ಅವರಲ್ಲಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುವ ಆಸೆ ಚಿಗುರಿದ್ದು. ಅಲ್ಲಿಯವರೆಗೆ ಅತ್ತ ಮುಖಮಾಡುವ ಧೈರ್ಯವೂ ಇರಲಿಲ್ಲ.

ರಂಗಾಯಣದಿಂದ ಒಂದು ವರ್ಷ ರಜೆ ಪಡೆದು 1995ರಲ್ಲಿ ನಟಿಸಿದ ಮೊದಲ ಚಿತ್ರ `ಸುಗ್ಗಿ~. ಮೂವತ್ತನೇ ವಯಸ್ಸಿಗೆ ಅವರು ನಟಿಸಿದ ಮೊದಲ ಪಾತ್ರ ಅಪ್ಪನದು.

ಸಿನಿಮಾಕ್ಕಿಂತ ನಾಟಕವೇ ಸಾಕು ಎನ್ನುವ ಮಟ್ಟಿಗೆ ಚಿತ್ರೀಕರಣದಲ್ಲಿ ಅವರು ಹೈರಾಣಾಗಿದ್ದರು. ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಎಲ್ಲಾ ಕಡೆ ಹೇಳಿಕೊಂಡಿದ್ದರು. ಆದರದು ಬಿಡುಗಡೆಯಾಗಲೇ ಇಲ್ಲ. ಸುಳ್ಳುಹೇಳುತ್ತಿದ್ದಾನೆ ಎಂಬ ಮಾತು ಎಲ್ಲರ ಬಾಯಲ್ಲಿ. ಸಿನಿಮಾದಲ್ಲಿ ಹೆಸರು ಮಾಡಲೇಬೇಕು ಎಂದು ನಟಿಸುತ್ತಲೇ ಹೋದರು.

ಹದಿಮೂರು ಚಿತ್ರಗಳಲ್ಲಿ ನಟಿಸಿದ್ದರೂ ಫಲಿತಾಂಶ ಶೂನ್ಯ. 2001ರಲ್ಲಿ ರಂಗಾಯಣದಿಂದ ರಘು ಹೊರಬಂದರು. ಆಗಲೇ ಕಾರಂತರು ತಾವು ಬೆಳೆಸಿದ ಕಲಾವಿದರಿಗೆ ರಂಗಾಯಣ ಬಿಟ್ಟು ಬೇರೆ ಕಡೆ ಹೋಗಿ ಎಂದಿದ್ದರು. ಧಾರಾವಾಹಿಯಲ್ಲಿ ನಟಿಸುತ್ತಿರುವುದನ್ನು ಕೇಳಿ ಸಂತೋಷಪಟ್ಟ ಕಾರಂತರು, ಅಲ್ಲಿ ಸಿಗುತ್ತಿರುವುದು 500 ರೂ. ಸಂಬಳ ಎಂದ ಕೂಡಲೇ, `ಬೇಡ ವಾಪಸು ರಂಗಾಯಣಕ್ಕೆ ಹೋಗು~ ಎಂದರು. 

ನಾಟಕದ ಸಾಧ್ಯತೆಗಳನ್ನು ಹುಡುಕುವ ಕ್ರಿಯಾಶೀಲರಿಗೆ ರಂಗಾಯಣದ ಜವಾಬ್ದಾರಿ ನೀಡಬೇಕು. ನಾಟಕದ ಅಭಿರುಚಿಯೇ ಇಲ್ಲದ ರಾಜಕಾರಣಿ, ಅಧಿಕಾರಿಗಳು ಅದರ ಅಧಿಕಾರ ವಹಿಸಿಕೊಂಡರೆ ಕಲೆ ಹೇಗೆ ಬೆಳೆಯುತ್ತದೆ.
 

ಅವರಲ್ಲಿ ನಾಟಕ ಪ್ರದರ್ಶನ ಏರ್ಪಡಿಸುವ ಆಸಕ್ತಿ ಇರಬೇಕು. ಉತ್ಸವ ನಡೆಸುವುದರಲ್ಲಿ ಅಲ್ಲ ಎಂದು ರಂಗಾಯಣದ ಸ್ಥಿತಿ ಬಗ್ಗೆ ರಘು ಖೇದ ವ್ಯಕ್ತಪಡಿಸುತ್ತಾರೆ.

ಅಪ್ಪಿಕೊಂಡ ಸಿನಿಮಾರಂಗ
2002ರಲ್ಲಿ ಬಿಡುಗಡೆಯಾದ `ಧಮ್~ ಬದುಕಿನ ದೆಸೆಯನ್ನೇ ಬದಲಿಸಿತು. ಯಾರವನು? ತಮಿಳಿನವನಾ? ತೆಲುಗಿನವನಾ? ಎಂದು ಜನ ಕೇಳಲಾರಂಭಿಸಿದರು. ಅವಕಾಶಗಳು ಒಂದೊಂದಾಗಿ ಬರತೊಡಗಿದವು.
 
`ರಂಗ ಎಸ್‌ಎಸ್‌ಎಲ್‌ಸಿ~ ಚಿತ್ರದ ಪಾತ್ರ ವೃತ್ತಿ ಬದುಕಿನ ತಿರುವಿಗೆ ಮುನ್ನುಡಿ ಬರೆಯಿತು. ಬಹುಶಃ ಅಂತಹ ಪಾತ್ರ ಮತ್ತೆ ಸೃಷ್ಟಿಯಾಗಲಾರದು. ಆದರೂ ನನ್ನಿಂದ ಆ ರೀತಿ ಅಭಿನಯಿಸಲು ಸಾಧ್ಯವಾಗಲಾರದು ಎನ್ನುತ್ತಾರೆ ರಘು.

`ದುನಿಯಾ~ದ ಪಾತ್ರವನ್ನು ಈಗಲೂ ಜನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ನಾಟಕದಲ್ಲಿ ಇರುವಂತೆ ಸಿನಿಮಾದಲ್ಲೂ ಸೂತ್ರಧಾರ ಇರುವ ವಿಶಿಷ್ಟ ಪಾತ್ರವದು. ದುನಿಯಾ ನಂತರ ನಾಯಕನ ಪಾತ್ರಗಳೂ ಅವರ ಬಳಿ ಬಂದಿದ್ದವು!

ಒಂದೆರಡಲ್ಲ, ಸುಮಾರು ಇಪ್ಪತ್ತು. ಅದೆಲ್ಲವೂ `ದುನಿಯಾ~ ಪ್ರಭಾವದಿಂದ ಹುಟ್ಟಿದ ಚಿತ್ರಗಳು. ಹೀಗಾಗಿ ಬೇಡ ಬೇರೆ ಏನಾದರೂ ಮಾಡೋಣ ಎಂದು ಅವರನ್ನು ಸಾಗಹಾಕಿದರು.

`ತಪ್ಪುಗಳನ್ನು ಮಾಡುತ್ತೇನೆ. ಜನ ಕ್ಷಮಿಸುತ್ತಾರೆ. ಆದರೆ ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ. ಹೊಸ ತಪ್ಪು ಮಾಡುತ್ತೇನಷ್ಟೇ~- ಅವರು ಹೀಗೆ ಹೇಳುವುದು ತಮ್ಮ ಪಾತ್ರಗಳಲ್ಲಿ ಮಿತಿ ಮೀರಿದಂತೆ ಕಾಣುವ ಆಂಗಿಕ ಅಭಿನಯದ ಬಗ್ಗೆ. ಒಂದೇ ರೀತಿ ಎನಿಸುವ ಪಾತ್ರಗಳನ್ನು ನಯವಾಗಿ ತಿರಸ್ಕರಿಸಿ, ಬೇರೆ ಕಲಾವಿದರ ಹೆಸರು ಸೂಚಿಸಿ ಅವರಿಂದ ಮಾಡಿಸುವಂತೆ ರಘು ಹೇಳಿದ್ದಿದೆ. ತಾವಿರುವುದು ಗಾಜಿನಮನೆಯಲ್ಲಿ ಎಂದವರು ತಮ್ಮ ಬದುಕಿನ ಸೂಕ್ಷ್ಮತೆಯನ್ನು ಹೇಳುತ್ತಾರೆ.

ಹಿಂದಿಯಲ್ಲಿ ಕಲಾವಿದರು ವಿಭಿನ್ನ ಪಾತ್ರಗಳನ್ನು ಮಾಡುತ್ತಾರೆ, ನೀವೇಕೆ ಮಾಡುವುದಿಲ್ಲ ಎಂದು ಕೆಲವರು ಅವರನ್ನು ಕೇಳುತ್ತಾರೆ. ಅದಕ್ಕೆ ರಘು ನೀಡುವ ಪ್ರತಿಕ್ರಿಯೆ, `ನಾನು ಸಿದ್ಧ. ಪಾತ್ರ ಸೃಷ್ಟಿಯಾಗಬೇಕಲ್ಲವೇ?~. ಅಕಾಡೆಮಿಕ್ ಆಗಿ ಕಲಾವಿದ, ನಿರ್ದೇಶಕ ಎಲ್ಲರೂ ತರಬೇತಿ ಪಡೆದು ಬಂದರೆ ಅದು ಸಾಧ್ಯ. ಮಿಗಿಲಾಗಿ ಅಭಿರುಚಿಯುಳ್ಳ ನಿರ್ಮಾಪಕನೂ ಬೇಕು ಎನ್ನುತ್ತಾರೆ ಅವರು.

ತೆಲುಗು, ತಮಿಳು ಚಿತ್ರಗಳಿಂದ ಅವಕಾಶಗಳು ಬಂದಿದ್ದವು. ಕೆಲವು ಕಾರಣಗಳಿಂದ ನಟಿಸಲಾಗಲಿಲ್ಲ. ಸೂರಿ ಮತ್ತು ಯೋಗರಾಜ್ ಭಟ್ ಚಿತ್ರಗಳಲ್ಲಿ ನಟಿಸುವಾಗ ರಘು ತಮ್ಮ ಪಾತ್ರಗಳ ಬಗ್ಗೆ ಹೆಚ್ಚು ಮುಕ್ತವಾಗಿ ತೊಡಗಿಕೊಳ್ಳುತ್ತಾರೆ. ಹಾಗಿದ್ದಾಗಲೇ ಹೊಸತನ ಸಾಧ್ಯ.

ಎಲ್ಲಾ ನಿರ್ದೇಶಕರೂ ಈ ಸ್ವಾತಂತ್ರ್ಯ ನೀಡುವುದಿಲ್ಲ. `ಮೊದಲಾ ಸಲ~, `ಒಲವೇ ಮಂದಾರ~, `ಸೈನೈಡ್~ನಂತಹ ಚಿತ್ರಗಳು ಅವರ ಪ್ರಬುದ್ಧ ಅಭಿನಯವನ್ನು ಸದ್ಬಳಕೆ ಮಾಡಿಕೊಂಡಿದ್ದವು. `ಐತಲಕ್ಕಡಿ~, `ರಾಮ ರಾಮ ರಘುರಾಮ~ದಂತಹ ಅವರು ಪ್ರಧಾನ ಭೂಮಿಕೆಯಲ್ಲಿರುವ ಚಿತ್ರಗಳ ಸೋಲಿನ ಕಾರಣಗಳನ್ನು ಅವರು ಸರಳವಾಗಿ ಹೇಳುತ್ತಾರೆ- `ಆರಂಭದಲ್ಲಿ ಕೇಳುವ ಕಥೆ ಸಿನಿಮಾದಲ್ಲಿ ಇರುವುದೇ ಇಲ್ಲ!~.

ರಂಗಾಯಣ ಬಿಟ್ಟಿದ್ದರೂ ರಂಗದ ನಂಟನ್ನು ರಘು ಬಿಟ್ಟಿಲ್ಲ. ಅವರದ್ದೇ ಆದ `ಸಂಚಾರಿ~ ತಂಡವಿದೆ. ಪತ್ನಿ ಮಂಗಳಾ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಬಿಡುವಾದಾಗ ರಂಗದ ಮೇಲೂ ರಘು ಕಾಣಿಸಿಕೊಳ್ಳುತ್ತಾರೆ.

`ವ್ಯಾನಿಟಿ ಬ್ಯಾಗ್~, `ಊರ್ಮಿಳಾ~ ಮುಂತಾದವು ಅವರು ಇತ್ತೀಚೆಗೆ ಅಭಿನಯಿಸಿದ ನಾಟಕಗಳು. ದಿನವೂ ಕಾದಂಬರಿಯ ಪುಟಗಳನ್ನು ತಿರುವಿ ಹಾಕದೆ ಅವರು ಮಲಗುವುದಿಲ್ಲ.

ಅವರ ಪಾತ್ರಗಳನ್ನು ನೋಡಿ ಕೆಲವರು ಅವರಿಗೆ 60 ವರ್ಷ ದಾಟಿದೆ ಎಂದುಕೊಳ್ಳುತ್ತಾರೆ. ಇನ್ನೂ ಹುಡುಗನ ಹಾಗೆ ಕಾಣುತ್ತೀರಾ ಎಂಬ ಕಾಂಪ್ಲಿಮೆಂಟನ್ನು ಸಂತಸದಿಂದ ಸ್ವೀಕರಿಸುತ್ತಾರೆ 47ರ ಹರೆಯದ ರಘು.

ಅವರ ಪಾತ್ರಗಳನ್ನು ತಮ್ಮ ತಂದೆ, ಮಾವಂದರಿಗೆ ಹೋಲಿಸಿ ಮಾತನಾಡುತ್ತಾರಂತೆ. ಜನರ ಮನಸ್ಸಿನಲ್ಲಿ ಅಷ್ಟರಮಟ್ಟಿಗೆ ಬೇರೂರಿರುವ ಖುಷಿ ಅವರದ್ದು.

`ನಿರ್ದೇಶಕನಾಗುವ ಗುಣಲಕ್ಷಣ ನನ್ನಲ್ಲಿಲ್ಲ. ಕಲಾವಿದನಾಗಿಯೇ ಇರುತ್ತೇನೆ~ ಎನ್ನುವ ಅವರಿಗೆ ಸಿನಿಮಾರಂಗದ ಬದುಕು ತೃಪ್ತಿ ನೀಡಿದೆ. ಅದನ್ನವರು ವಿಶ್ಲೇಷಿಸುವುದು- `ಗುರುಗಳಾದ ಕಾರಂತರು ರಂಗಭೂಮಿ ನಡೆದು ಕ್ರಮಿಸುವುದು, ಸಿನಿಮಾ ಧುತ್ತನೆ ಮೇಲೇರುವುದು ಎನ್ನುತ್ತಿದ್ದರು.

ನಾನು ಸಿನಿಮಾದಲ್ಲಿ ಒಮ್ಮೆಲೆ ಮೇಲೇರಿದಂತೆ ಕಂಡರೂ, ಹಿಂದಿನ ಬದುಕನ್ನು ಅವಲೋಕಿಸಿದಾಗ ಅರಿವಾಗುವುದು ನಾನು ಮೇಲೇರಿಲ್ಲ, ಕ್ರಮಿಸಿದ್ದೇನೆ ಅನ್ನಿಸುತ್ತದೆ~.
ಆ ಕ್ರಮಿಸುವಿಕೆ ನಿರಂತರವಾಗಿರಲಿ ಎನ್ನುವುದು ರಘು ಅವರಿಗೆ ಸಲ್ಲುವ ಒಳ್ಳೆಯ ಶುಭಾಶಯ ಆಗಬಹುದೇನೊ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT