ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗುಲಿ,ಜೋಪಡಿಯಲ್ಲಿ ಅಂಗನವಾಡಿಗಳು!

ಅವೈಜ್ಞಾನಿಕ ಬಾಡಿಗೆ ಭತ್ಯೆ
Last Updated 24 ಸೆಪ್ಟೆಂಬರ್ 2013, 6:28 IST
ಅಕ್ಷರ ಗಾತ್ರ

ಶಿರಸಿ:  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಗರ ಪ್ರದೇಶದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ದೊರೆಯುವ ತಿಂಗಳ ಬಾಡಿಗೆ ಭತ್ಯೆ ಕೇವಲ ರೂ.500. ಗ್ರಾಮೀಣ ಪ್ರದೇಶದ ಅಂಗನವಾಡಿಗಳಿಗೆ ಲಭ್ಯವಾಗುವ ಬಾಡಿಗೆ ರೂ. 200. ಬದಲಾದ ಕಾಲಮಾನದಲ್ಲಿ ಭೂಮಿಯ ಬೆಲೆ ಗಗನಕ್ಕೇರಿರುವಾಗ ಅವೈಜ್ಞಾನಿಕ ಬಾಡಿಗೆ ದರದಲ್ಲಿ ಉತ್ತಮ ಕಟ್ಟಡದಲ್ಲಿ ಅಂಗನವಾಡಿ ನಡೆಸಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ವಂತ ಕಟ್ಟಡ ಇಲ್ಲದ ಅನೇಕ ಅಂಗನವಾಡಿಗಳು ಚಿಕ್ಕ ಜೋಪಡಿ, ಮನೆಯ ಜಗುಲಿ, ಅಂಗಡಿಗೆಂದು ನಿರ್ಮಿಸಿರುವ ಎಂಟು ಅಡಿ ವಿಸ್ತೀರ್ಣದ ಜಾಗಗಳಲ್ಲಿ ನಡೆಯುತ್ತಿವೆ.

ಸ್ವಂತ ಕಟ್ಟಡ ಇಲ್ಲದ ಅಂಗನವಾಡಿ ಗಳಿಗೆ ಬಾಡಿಗೆ ಭತ್ಯೆ ಹೆಚ್ಚಳ ಮಾಡುವ ಕುರಿತು ಆಗಸ್ಟ್‌ ತಿಂಗಳಿನಲ್ಲಿ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿದ್ದು, ಹೆಚ್ಚಳ ಮಾಡುವ ತೀರ್ಮಾನವಾಗಿದೆ. ಆದರೆ ಈ ನಿರ್ಣಯ ಇನ್ನೂಅನುಷ್ಠಾನ ಗೊಂಡಿಲ್ಲ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ ದಾಗ ಅವರು ತಮಗೆ ಇಂತಹ ಯಾವುದೇ ಸುತ್ತೋಲೆ ಸರ್ಕಾರದಿಂದ ಈವರೆಗೆ ಬಂದಿಲ್ಲ ಎಂದು ಸ್ಪಷ್ಟ ಪಡಿಸಿದರು.

ತಾಲ್ಲೂಕಿನಲ್ಲಿ ಒಟ್ಟು 351 ಅಂಗನವಾಡಿ ಗಳಿದ್ದು, ಕೇವಲ 164 ಅಂಗನವಾಡಿಗಳು ಸ್ವಂತ ಕಟ್ಟಡ ಹೊಂದಿವೆ. 19 ಅಂಗನವಾಡಿಗಳ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, 22 ಅಂಗನವಾಡಿ ಗಳಿಗೆ ಕಟ್ಟಡ ಮಂಜೂರು ಆಗಿದೆ. ಇನ್ನುಳಿದ 146 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ನಗರ ಪ್ರದೇಶದಲ್ಲಿರುವ 61 ಅಂಗನವಾಡಿಗಳಲ್ಲಿ ಎಂಟು ಮಾತ್ರ ಸ್ವಂತ ಕಟ್ಟಡದಲ್ಲಿವೆ. ಹನುಮಗಿರಿ, ಖಾಜಿಗಲ್ಲಿ, ಮುಸ್ಲಿಮ್‌ಗಲ್ಲಿ, ದೇವಿಕೆರೆ, ಚೌಕಿಮಠ, ಪಡ್ತಿಗಲ್ಲಿ, ಸಿಂಪಿಗಲ್ಲಿ ಇನ್ನಿತರ ಕಡೆಗಳಲ್ಲಿ ಮಕ್ಕಳ ಸಂಖ್ಯೆ ಸಹ ಜಾಸ್ತಿ ಇದ್ದು, ಅತ್ಯಂತ ಇಕ್ಕಟ್ಟಾದ ಸ್ಥಳದಲ್ಲಿ ಅಂಗನವಾಡಿ ನಡೆಯುತ್ತಿದೆ. ಆರೆಂಟು ಅಡಿ ಜಾಗದಲ್ಲಿ 25–30 ಪುಟಾಣಿಗಳು ಕುಳಿತುಕೊಳ್ಳಬೇಕು, ಅಲ್ಲೇ ಮಕ್ಕಳ ಆಹಾರ ಸಿದ್ಧಪಡಿಸಬೇಕು, ಗರ್ಭಿಣಿಯರು, ಕಿಶೋರಿಯರಿಗೆ ನೀಡುವ ಆಹಾರ ಸಾಮಗ್ರಿಗಳನ್ನು ಇಷ್ಟೇ ಜಾಗದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಇಕ್ಕಟ್ಟಾದ ಸ್ಥಳದಲ್ಲಿ ಎಲ್ಲವನ್ನೂ ನಿಭಾಯಿಸುವುದು ತೀವ್ರ ತೊಂದರೆಯಾಗುತ್ತಿದೆ.

‘ಬಾಡಿಗೆ ಭತ್ಯೆ ತೀರಾ ಕಡಿಮೆ ಇರುವುದರಿಂದ ಖಾಸಗಿ ವ್ಯಕ್ತಿಗಳು ಕಟ್ಟಡ ಬಾಡಿಗೆ ನೀಡಲು ಮುಂದಾಗು ವುದಿಲ್ಲ. ಕೆಲ ಕಡೆಗಳಲ್ಲಿ ಶಾಲೆಗಳಲ್ಲಿ ಕೊಠಡಿ ಲಭ್ಯವಿದ್ದರೂ ಶಾಲೆಯ ಪ್ರಮುಖರು ಅಂಗನವಾಡಿಗೆ ಈ ಕೊಠಡಿ ನೀಡಲು ಹಿಂದೇಟು ಹಾಕು ತ್ತಾರೆ. ಇದರಿಂದ ಅಂಗನವಾಡಿಗಳನ್ನು ಚಿಕ್ಕ ಜಾಗದಲ್ಲಿ ನಡೆಸಬೇಕಾಗಿದೆ. ಇದು ಪುಟ್ಟ ಮಕ್ಕಳಿಗೆ ಆಟ ಆಡಲು ಸಹ ತೊಡಕಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತೆಯೊಬ್ಬರು ಹೇಳಿದರು.

ಸಾಕಷ್ಟು ಮಕ್ಕಳಿರುವ ಇಲ್ಲಿನ ಗಣೇಶ ನಗರ– 3 ಅಂಗನವಾಡಿ ಅಂಗಡಿ ಮಳಿಗೆಯೊಂದರಲ್ಲಿ ನಡೆಯುತ್ತಿತ್ತು. ಗೋಸಾವಿನಗರದ ನಾಗೇಶ ಪಡ್ತಿ ಗಾಂವಕರ ಎಂಬುವರು ಈ ಅಂಗನ ವಾಡಿಗೆ ಸ್ಥಳ ದಾನ ಮಾಡಿದ್ದಾರೆ. ಇದು ಇತರರಿಗೂ ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT