ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗ್ಗದ, ಬಗ್ಗದ ದಕ್ಷ ಅಧಿಕಾರಿ

Last Updated 30 ಜೂನ್ 2012, 19:30 IST
ಅಕ್ಷರ ಗಾತ್ರ

ಇದು ಸುಮಾರು ಇಪ್ಪತ್ತ ಮೂರು ವರ್ಷಗಳ ಹಿಂದಿನ ಮಾತು. 1988ರಲ್ಲಿ  ತೆರೆಕಂಡಿದ್ದ `ಒರು ಸಿಬಿಐ ಡಯರಿಕ್ಕುರಿಪ್ಪು~ ಎಂಬ ಸಿನಿಮಾ ಕೇರಳದಲ್ಲಿ ಹೊಸ ಸಂಚಲನವನ್ನೇ ಮೂಡಿಸಿತ್ತು. ಕೊಲೆ ಪ್ರಕರಣವೊಂದನ್ನು ಯಶಸ್ವಿಯಾಗಿ ಭೇದಿಸುವ ಸೇತುರಾಮಯ್ಯರ್ ಎಂಬ ದಕ್ಷ ಸಿಬಿಐ ಅಧಿಕಾರಿಯಾಗಿ ಮಮ್ಮುಟ್ಟಿ ಅಭಿನಯಿಸಿದ್ದ ಆ ಚಿತ್ರ ಬಾಕ್ಸ್ ಆಫೀಸ್ ಹಿಟ್ ಆಗಿ ಅದುವರೆಗಿನ ಎಲ್ಲಾ ದಾಖಲೆಗಳನ್ನೂ ಮುರಿದಿತ್ತು.

ಅಷ್ಟೇ ಅಲ್ಲ ಮಮ್ಮುಟ್ಟಿ, ಸಿಬಿಐ ಕೇರಳ ಮುಖ್ಯಸ್ಥರಾಗಿದ್ದ ರಾಧಾ ವಿನೋದ್ ರಾಜು ಅವರನ್ನೇ ಹೋಲುತ್ತಿದ್ದಾರೆ ಎಂದು ಅಂದೇ ಜನ ಮಾತಾಡತೊಡಗಿದ್ದರು. ಅದು ಸ್ವಲ್ಪ ಮಟ್ಟಿಗೆ ಹೌದು ಎಂದು  ನಿರ್ದೇಶಕ ಮಧು ಕೂಡ ಒಪ್ಪಿದ್ದರು. ಆದರೆ ಈ ಕುರಿತು ಪ್ರಚಾರ ಬಯಸದ ವಿನೋದ್ ರಾಜು ಮಾತ್ರ ಮೌನವಾಗಿದ್ದರು.

ಜನರ ಈ ಮಾತು ಅಲ್ಲಿಗೇ ಮುಗಿಯಲಿಲ್ಲ. ಬಳಿಕ ಇದೇ ಮಾದರಿಯಲ್ಲಿಯೇ ಜಾಗೃತ (1989), ಸೇತುರಾಮಯ್ಯರ್ ಸಿಬಿಐ (2004), ನೇರರಿಯಾನ್ ಸಿಬಿಐ (2005)ಹೆಸರಿನ ಸರಣಿ ಚಿತ್ರಗಳಲ್ಲಿ ಹಣೆಯಲ್ಲಿ ಅಡ್ಡವಾಗಿ ಕುಂಕುಮ ಹಚ್ಚಿಕೊಂಡು ಅದೇ ಸೇತುರಾಮಯ್ಯರ್ ಹೆಸರಿನಲ್ಲಿ ಮಮ್ಮುಟ್ಟಿ ಮಿಂಚಿದಾಗಲೂ ಜನರ ಸಂಶಯ ಮಾತ್ರ ದೂರವಾಗಿರಲಿಲ್ಲ. ಆಗಲೂ ವಿನೋದ್‌ರಾಜು ಮೌನಕ್ಕೇ ಶರಣಾಗಿದ್ದರು. 

ಇತ್ತೀಚೆಗೆ ರಕ್ತದ ಕ್ಯಾನ್ಸರ್‌ನಿಂದ 62 ನೇ ವಯಸ್ಸಿನಲ್ಲಿ ನಿಧನರಾದ ಎನ್‌ಐಎ (ನ್ಯಾಷನಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ) ಮೊಟ್ಟ ಮೊದಲ ನಿರ್ದೇಶಕ ರಾಧಾ ವಿನೋದ್ ರಾಜು ಅವರ ವ್ಯಕ್ತಿತ್ವ ಅರಿಯಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

ಅವರೊಬ್ಬ ಅಸಾಧಾರಣ ಪೊಲೀಸ್ ಅಧಿಕಾರಿ. ಎನ್‌ಐಎ ಎಂಬ ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿ ಔನ್ನತ್ಯಕ್ಕೇರಿದರೂ ಅಧಿಕಾರದ ಅಮಲು ಒಂದಿಷ್ಟೂ ಅವರನ್ನು ಬಾಧಿಸಲಿಲ್ಲ. ತಾನು ನೆಚ್ಚಿದ ಆದರ್ಶಗಳಿಗೆ ಬದ್ಧರಾಗಿ ಜನಸಾಮಾನ್ಯನಂತೆಯೇ ಬದುಕಿದರು. ಭಗವದ್ಗೀತೆಯನ್ನು ಸದಾ ತಮ್ಮ ಬಳಿ ಇರಿಸಿಕೊಳ್ಳುತ್ತಿದ್ದ ಅವರೊಬ್ಬ ಅಪ್ಪಟ ಧಾರ್ಮಿಕ ವ್ಯಕ್ತಿ. ಆದರೆ ಅಷ್ಟೇ ಅಪ್ಪಟ ಜಾತ್ಯತೀತವಾದಿ, ಅಷ್ಟೇ ನಿಷ್ಪಕ್ಷಪಾತಿ.
 
ಎಲ್ಲಕ್ಕಿಂತಲೂ ಮಿಗಿಲಾಗಿ ಜಾತಿ, ಮತ, ಪ್ರಾದೇಶಿಕ ಭಾವನೆ ಮೆಟ್ಟಿ ನಿಂತ ಮಾನವತಾವಾದಿ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಿರಿಯನ್ ಕ್ರಿಶ್ಚಿಯನ್ ಸಮುದಾಯದ ಅಚ್ಚಾಮ ಅವರನ್ನು ವಿವಾಹವಾದದ್ದು ಇದಕ್ಕೆ ಸ್ಪಷ್ಟ ಉದಾಹರಣೆ.

ಗೌಡ ಸಾರಸ್ವತ ಸಮುದಾಯದವರಾದ ರಾಧಾ ವಿನೋದ್ ರಾಜು,  ಪೋಸ್ಟ್‌ಮಾಸ್ಟರ್ ಆಗಿದ್ದ ದಿ. ಆರ್. ಎಸ್. ರಾಜು ಮತ್ತು ನರ್ಮದಾ ರಾಜು ಅವರ ಐದು ಮಕ್ಕಳಲ್ಲಿ ಹಿರಿಯ ಪುತ್ರರಾಗಿ ಕೊಚ್ಚಿಯಲ್ಲಿ 1949 ಜುಲೈ 27ರಂದು ಜನಿಸಿದರು. ಮಾತೃಭಾಷೆ ಕೊಂಕಣಿಯಾದರೂ, ಅಷ್ಟೇ  ಸುಲಲಿತವಾಗಿ ಮಲಯಾಳಂ, ಹಿಂದಿ, ಇಂಗ್ಲಿಷ್, ಉರ್ದು ಮತ್ತು ತಮಿಳಿನಲ್ಲಿ ಮಾತನಾಡುವಷ್ಟು ಪ್ರವೀಣರಾಗಿದ್ದರು.

ವಿಜ್ಞಾನ ಪದವಿಯ ಬಳಿಕ ಬ್ಯಾಂಕ್ ಆಫ್ ಇಂಡಿಯಾದಲ್ಲಿ  ಸೇವೆ ಸಲ್ಲಿಸುತ್ತಿದ್ದ ವೇಳೆ 1975ರಲ್ಲಿ ಐಪಿಎಸ್ ಪಡೆದು ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್ ಇಲಾಖೆಗೆ ಸೇರಿದರು. 

1983ರಲ್ಲಿ ಸಿಬಿಐ ಅಧಿಕಾರಿಯಾಗಿ ಕೊಚ್ಚಿಗೆ ಆಗಮಿಸಿದ ರಾಜು, 89ರ ವರೆಗೂ ಅಲ್ಲಿ ಸೇವೆ ಸಲ್ಲಿಸಿದ್ದ ವೇಳೆ ಕೇರಳ ಪೊಲೀಸ್ ಡೈರಿಯನ್ನೇ ಬದಲಿಸಿ ಬರೆದರು.

ಪೊಲೀಸರು ಆತ್ಮಹತ್ಯೆ ಎಂದು ಮುಚ್ಚಿಹಾಕಿದ್ದ 1980 ರ ಪೊಳಕ್ಕುಳಂ ಪ್ರಕರಣದಲ್ಲಿ  ಹೋಟೆಲ್ ಸ್ವಾಗತಕಾರ ಪೀತಾಂಬರನ್ (`ಸಿಬಿಐ ಡಯರಿ ಕುರಿಪ್ಪು~ ಸಿನಿಮಾ ಇದೇ ಕಥೆಯನ್ನು ಆಧರಿಸಿದ್ದು) ಹಾಗೂ ಪಾನೂರು ಎಸ್‌ಐ ಸೋಮನ್ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಕೊಲೆ ಎಂದು ಸಾಬೀತುಪಡಿಸುವ ಮೂಲಕ ವಿನೋದ್‌ರಾಜು ಮಲಯಾಳಿಗಳಿಗೆ ಚಿರಪರಿಚಿತರಾದರು.
 
ಆಶ್ಚರ್ಯ ಎಂದರೆ ಇವೆರಡು ಪ್ರಕರಣಗಳ ಬಳಿಕ ಕೇರಳ ಪೊಲೀಸರು ಯಾವುದೇ ಸಾವನ್ನು `ಆತ್ಮಹತ್ಯೆ~ ಎಂದು ಬರೆಯುವ ಮುನ್ನ ಹಲವು ಬಾರಿ ಆಲೋಚಿಸತೊಡಗಿದ್ದರಂತೆ. ಅಷ್ಟೇ ಅಲ್ಲ, ಬೀದಿ ಬದಿಯ ಸಣ್ಣಪುಟ್ಟ ಸಾವಿನ ಪ್ರಕರಣಗಳಿಗೂ ಸಿಬಿಐ ತನಿಖೆ ಬೇಕೆಂದು ಕೇರಳೀಯರು ಒತ್ತಾಯ ಹೇರಲು ರಾಜಾ ವಿನೋದ್ ರಾಜು ಅವರ ದಿಟ್ಟ ಕಾರ್ಯವೈಖರಿಯೇ ಕಾರಣವಾಗಿದೆ.

ಹೀಗೆ ಆರಂಭವಾದ ವಿನೋದ್ ರಾಜು ಅವರ ಜೈತ್ರಯಾತ್ರೆ ಕೊನೆಯಲ್ಲಿ ಎನ್‌ಐಎ ಮುಖ್ಯಸ್ಥನ ಹುದ್ದೆಯಲ್ಲಿ ಅವರನ್ನು ತಂದು ನಿಲ್ಲಿಸಿತ್ತು.

ತನಿಖೆಗೆ ತಮ್ಮದೇ ಹೊಸ ಶೈಲಿಗಳನ್ನು ಬಳಸುತ್ತಿದ್ದದ್ದು ರಾಜು ಅವರ ವೈಶಿಷ್ಟ್ಯವಾಗಿತ್ತು. ತನಿಖೆಯ ವೇಳೆ ಮೃತ ವ್ಯಕ್ತಿಯ ತೂಕದಷ್ಟೇ ಭಾರದ ಡಮ್ಮಿಯನ್ನು ಮೊತ್ತ ಮೊದಲ ಬಾರಿಗೆ ಬಳಸಿದ ಕೀರ್ತಿ ಈ ಐಪಿಎಸ್ ಅಧಿಕಾರಿಗೆ ಸಲ್ಲುತ್ತದೆ. 

ಕೇರಳದಿಂದ ನೇರವಾಗಿ ಭಯೋತ್ಪಾದಕರು ತಾಂಡವವಾಡುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಕಣಿವೆಗೆ ಹಿಂತಿರುಗಿದ ರಾಜು, ಅಲ್ಲಿ  ಪೊಲೀಸ್ ವರಿಷ್ಠಾಧಿಕಾರಿ, ಅನಂತ್‌ನಾಗ್ ಪೊಲೀಸ್ ಮಹಾ ನಿರೀಕ್ಷಕ, ಜಮ್ಮು ವಲಯದ ಪೊಲೀಸ್ ಮುಖ್ಯಸ್ಥ ಹಾಗೂ ಜಾಗೃತ ಆಯುಕ್ತರಾಗಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

ಈ ನಡುವೆಯೇ 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ)ಯಲ್ಲಿ  ಸಿಬಿಐ ಮಾಜಿ ನಿರ್ದೇಶಕ ಡಿ. ಆರ್. ಕಾರ್ತಿಕೇಯನ್ ಅವರ ಜೊತೆ ಸೇರಿ ನಡೆಸಿದ ತನಿಖೆಯಿಂದಾಗಿ ಅವರು ದೇಶದಾದ್ಯಂತ ಮನೆಮಾತಾದರು.

ಹತ್ಯೆಯ ಹಿಂದೆ ಎಲ್‌ಟಿಟಿಇ  ಕೈವಾಡವನ್ನು ಆರಂಭದಲ್ಲಿಯೇ ಶಂಕಿಸಿದ್ದ ಅವರು, ಕೊಲೆಗಾರರನ್ನು ಬೆನ್ನತ್ತಿ ಪತ್ತೆಹಚ್ಚುವ ವೇಳೆಗೆ ಎಲ್‌ಟಿಟಿಇ ಮತ್ತು ವೇಲುಪಿಳ್ಳೆ ಪ್ರಭಾಕರನ್ ಕುರಿತ ಸಂಪೂರ್ಣ ವಿಶ್ವಕೋಶವಾಗಿ ಮಾರ್ಪಟ್ಟಿದ್ದರು. ಈ ಎಲ್ಲಾ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಅವರು ಕಾರ್ತಿಕೇಯನ್ ಅವರ ಜೊತೆಗೂಡಿ  `ಟ್ರಂಫ್ ಆಫ್ ಜಸ್ಟೀಸ್, ದಿ ರಾಜೀವ್ ಗಾಂಧಿ ಅಸಾಸಿನೇಷನ್-ದಿ ಇನ್‌ವೆಸ್ಟಿಗೇಷನ್~ ಪುಸ್ತಕ ಬರೆದರು.

ಕಂದಹಾರ್ ವಿಮಾನ ಅಪಹರಣ ಪ್ರಕರಣದ ತನಿಖೆಯಲ್ಲಿಯೂ ಮುಖ್ಯ ಪಾತ್ರ ವಹಿಸಿದ್ದ ಅವರು 1998ರಲ್ಲಿ ಜಮ್ಮು ಕಾಶ್ಮೀರಕ್ಕೆ ಮತ್ತೆ ಹಿಂತಿರುಗಿದರೂ ಸಿಬಿಐ ಮಾತ್ರ ಅವರನ್ನು ಬಿಡಲಿಲ್ಲ. 2002ರಲ್ಲಿ ಅವರು ಸಿಬಿಐ ಜಂಟಿ ನಿರ್ದೇಶಕರಾದರು.

ಮೃದು ಮಾತಿನವರಾದರೂ ಸಂದರ್ಭಕ್ಕೆ ತಕ್ಕಂತೆ ಅವರು ಗಡುಸಾಗುತ್ತಿದ್ದರು. ಒಮ್ಮೆ  ಓರ್ವ ಅಧಿಕಾರಿ ತಮ್ಮ ಮನೆಯ ಸುತ್ತಲಿನ ಗೋಡೆಯನ್ನು  ಎತ್ತರಿಸಲು ಹಣ ಮಂಜೂರು ಮಾಡಬೇಕೆಂದು ಕೋರಿ ಶ್ರೀನಗರದಲ್ಲಿನ ಅವರ ಕಚೇರಿಗೆ ಬಂದಾಗ, ಸಮ್ಮತಿಸದ ವಿನೋದ್‌ರಾಜು, `ಭಯೋತ್ಪಾದನೆ ವಿರುದ್ಧ ಹೋರಾಡಲು ಜನರಿಗೆ ಕರೆ ನೀಡುತ್ತಿರುವ ಅಧಿಕಾರಿಗಳಾದ ನಾವು ಕೋಟೆಯ ನಡುವೆ ಜೀವಿಸುವಂತಾಗಬಾರದು~ ಎಂದು ಅಧಿಕಾರಿಯನ್ನು ಹಿಂದಕ್ಕೆ ಕಳುಹಿಸಿದ್ದರು. 

 ಮಾಧ್ಯಮಗಳಿಗೆ ಬೇಕಾದಷ್ಟೆ ಮಾಹಿತಿ ನೀಡುತ್ತಿದ್ದ ಅವರು ವಿವಾದಗಳಿಂದ  ದೂರ ಉಳಿದರು. ಪುಸ್ತಕಪ್ರೇಮಿಯಾಗಿದ್ದ ಅವರು, ಭಯೋತ್ಪಾದನೆ ಮತ್ತು ನುಸುಳುಕೋರರ ಬಗೆಗೆ ಆಳವಾದ ಮಾಹಿತಿಯನ್ನು ಕಲೆಹಾಕಿದ್ದರು. ಅಪರಾಧದ ಸಣ್ಣ ಎಳೆ ಸಿಕ್ಕಿದರೂ ಅದರ ಜಾಡು ಹಿಡಿದು ತನಿಖೆ ಮುನ್ನಡೆಸುತ್ತಿದ್ದ ಅವರ ಚಾಣಾಕ್ಷತನಕ್ಕೆ ಪೊಲೀಸ್ ಇಲಾಖೆ ಮಾತ್ರವಲ್ಲ ಇಡೀ ದೇಶವೇ ತಲೆಬಾಗಿತ್ತು. ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಆಗಾಗ ಅವರ ಸಲಹೆಯನ್ನು ಕೇಳುತ್ತಲೇ ಇದ್ದರೂ ಕೂಡ ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಮುಖಂಡರುಗಳು ಒಗ್ಗಟ್ಟನ್ನು ಪ್ರದರ್ಶಿಸುತ್ತಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದರು.

ದೇಶವನ್ನೇ ತಲ್ಲಣಗೊಳಿಸಿದ್ದ 26/11ರ ದಾಳಿಯ ಹಿನ್ನೆಲೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗಾಗಿ ಅಮೆರಿಕದ ಫೆಡೆರಲ್ ಇನ್‌ವೆಸ್ಟಿಗೇಷನ್ ಸಂಸ್ಥೆ ಮಾದರಿಯಲ್ಲಿ ರಾಷ್ಟ್ರಮಟ್ಟದಲ್ಲಿ ತನಿಖಾ ಸಂಸ್ಥೆಯೊಂದು ಅಗತ್ಯ ಎಂದು ಮನಗಂಡ ಸರ್ಕಾರ ನ್ಯಾಷನಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ (ಎನ್‌ಐಎ) ಆರಂಭಿಸಿದ್ದ ವೇಳೆ ಮುಖ್ಯಸ್ಥರನ್ನಾಗಿ ಯಾರನ್ನು ನೇಮಿಸುವುದು  ಎಂದು ಚಿಂತೆಗೊಳಗಾದಾಗ ಸರ್ಕಾರದ ನೆನಪಿಗೆ ಬಂದದ್ದು ರಾಧಾ ವಿನೋದ್ ರಾಜು ಅವರ ಹೆಸರು.

ಇದೇ ಅವಧಿಯಲ್ಲಿ ಲಷ್ಕರ್-ಇ- ತೊಯಿಬಾ ಭಯೋತ್ಪಾದಕ ಡೇವಿಡ್ ಹೆಡ್ಲಿಯ ವಿಚ್ಛೇದಿತ ಮೊರೊಕ್ಕೊ ಪತ್ನಿಯ ಮುಖಾಂತರ ಭಾರತದ್ಲ್ಲಲಿನ ಆತನ ಕಾರ್ಯಾಚರಣೆಗಳನ್ನು ಪತ್ತೆಹಚ್ಚಿದ ರಾಜು ಅವರ ಕಾರ್ಯವೈಖರಿಗೆ ಅಮೆರಿಕದ  ತನಿಖಾಧಿಕಾರಿಗಳೂ ಬೆರಗಾಗಿದ್ದರು.  

 ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ಸಿಬಿಐ ಗೆ ನೆರವು ನೀಡಲೆಂದು ಮೇ ತಿಂಗಳಲ್ಲಿ ರಾಜು ಅವರನ್ನು ಕೇಂದ್ರ ಜಾಗೃತ ದಳ ತನ್ನ ಸಲಹಾ ಸಮಿತಿಗೆ ಸೇರಿಸಿಕೊಂಡಿತ್ತು. ಆದರೆ ಅಷ್ಟರಲ್ಲಿ ವಿಧಿಯಾಟ ಬೇರೆಯೇ ಆಗಿತ್ತು.

1992ರಲ್ಲಿ ಪೊಲೀಸ್‌ಪದಕ, 1999ರಲ್ಲಿ ರಾಷ್ಟ್ರಪತಿ ಪದಕ, 2000ರಲ್ಲಿ ಪೊಲೀಸ್ ಮಹಾ ನಿರ್ದೇಶಕರ ಪ್ರಶಂಸಾ ಪತ್ರ ಹಾಗೂ 2003ರಲ್ಲಿ ಶೇರ್-ಇ-ಕಾಶ್ಮೀರ್ ಪದಕ ಪಡೆದ ಹೆಗ್ಗಳಿಕೆ ಅವರದ್ದು.

ಸಿಬಿಐ ಅಧಿಕಾರಿಯಾಗ್ದ್ದಿದಾಗ ಅವರು ಪತ್ರಕರ್ತರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವವಿಲ್ಲದ ಅಂದಿನ ದಿನಗಳಲ್ಲಿ ಆರೋಪಿಗಳನ್ನು ಸೆರೆಹಿಡಿಯಲು ಪತ್ರಿಕೆ ಬಹಳಷ್ಟು ನೆರವಾಗಿತ್ತು ಎಂದು ಅವರು ಒಮ್ಮೆ ಹೇಳಿಕೊಂಡಿದ್ದರು.
 
ಆರೋಪಿಗಳನ್ನು ಬಂಧಿಸಲು ಬೆಂಗಳೂರಿಗೆ ಹೊರಡುವ ಎರಡು ದಿನಗಳ ಮುನ್ನ ಪತ್ರಕರ್ತ ಸ್ನೇಹಿತರ ಮುಖಾಂತರ `ಆರೋಪಿಗಳನ್ನು ಸೆರೆ ಹಿಡಿಯಲು ಸಿಬಿಐ ತಂಡ  ಚೆನ್ನೈ ಮತ್ತು ಮುಂಬೈಗೆ ತೆರಳಲಿದೆ~ ಎಂದು ಸುಳ್ಳು ಸುದ್ದಿ ಪ್ರಕಟಿಸಿ ಆರೋಪಿಗಳನ್ನು ದಿಕ್ಕುತಪ್ಪಿಸಿ ಬೆಂಗಳೂರಿಗೆ ತಲುಪಿಸಿದ್ದರಂತೆ.
 
ಆದರೆ  ಸ್ವಲ್ಪ ದಿನಗಳಲ್ಲಿಯೇ ಸಿಬಿಐ  ಕುಟಿಲ ತಂತ್ರ ಅಪರಾಧಿಗಳಿಗೆ ಮನವರಿಕೆಯಾದಾಗ ಸಿಬಿಐ ಕೂಡ ತಂತ್ರ ಬದಲಿಸಿ `ಸಿಬಿಐ ತಂಡ ಚೆನ್ನೈಗೆ ತೆರಳಲಿದೆ~ ಎಂದು ನಿಜ ಸುದ್ದಿಯನ್ನು ನೀಡಲು ತೊಡಗಿತ್ತಂತೆ. ಆದರೆ ಇದನ್ನು ನಂಬದ ಅಪರಾಧಿಗಳು ಸಿಬಿಐ ತಂಡ ಬೆಂಗಳೂರಿಗೆ ತೆರಳಬಹುದು ಎಂದು ಊಹಿಸಿ ಚೆನ್ನೈಯಲ್ಲಿಯೇ ಉಳಿದು ತಮ್ಮ ಬಲೆಗೆ ಬೀಳುತ್ತಿದ್ದರು ಎಂದು ಅವರು ಸ್ಮರಿಸಿಕೊಂಡಿದ್ದರು.  

 ರಾಧಾ ವಿನೋದ್ ರಾಜು ಅಚ್ಚಾಮ ದಂಪತಿಗೆ ಇಬ್ಬರು ಮಕ್ಕಳು. ಅಡ್ವೊಕೇಟ್ ಸಿಂಧು (ಲಂಡನ್) ಹಾಗೂ ಪುಣೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿರುವ ರೇಣು. ಅಳಿಯಂದಿರು: ಅಡ್ವೊಕೇಟ್ ದಿಪಿನ್ ಸಬರ್‌ವಾಲ್ (ಲಂಡನ್) ಹಾಗೂ  ಶರತ್ ಪಿಳ್ಳೆ(ಸಾಫ್ಟ್‌ವೇರ್ ಎಂಜಿನಿಯರ್ ಪುಣೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT