ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಟಕಾ ಡ್ರೈವರ್!

ಬಸ್ ಕತೆ
Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನನಗೆ ಅಸ್ಪಷ್ಟ ನೆನಪು. ದಶಕಗಳ ಹಿಂದಿನ ಒಂದು ಸಂಜೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆ ಬಸ್ ಬೆಂಗಳೂರಿನಿಂದ ತುಮಕೂರು ಕಡೆಗೆ ಹೊರಟಿತ್ತು. ನೆಲಮಂಗಲದಲ್ಲಿ ಕೆಲ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಹೊರಟಿತು. ವೃದ್ಧ ಚಾಲಕ ರಸ್ತೆ ಮೇಲೆಯೇ ದೃಷ್ಟಿ ನೆಟ್ಟು ನಿಗದಿತ ವೇಗದಲ್ಲಿ ಜಾಗರೂಕತೆಯಿಂದ ಓಡಿಸುತ್ತಿದ್ದರು.

ನೆಲಮಂಗಲದಲ್ಲಿ ಹತ್ತಿದವರಲ್ಲಿ ಕೆಲವು ಯುವಕರು ಸಹಪಾಠಿಗಳೊಂದಿಗೆ ಕೇಕೆ ಹಾಕುತ್ತ, ಗದ್ದಲ ಎಬ್ಬಿಸುತ್ತಿದ್ದರು. ಅವರಲ್ಲೊಬ್ಬ ‘ಇದೇನೋ, ಡ್ರೈವರ್ ಜಟಕಾಗಾಡಿಯಂತೆ ಬಸ್ ಓಡಿಸುತ್ತಿದ್ದಾನೆ (ಆಗ ಬೆಂಗಳೂರಿನಲ್ಲಿ ಜಟಕಾಗಾಡಿಗಳೂ ಇದ್ದವು). ಇವನು ಜಟಕಾಗಾಡಿ ಡ್ರೈವರ್ರೋ, ಬಸ್ ಡ್ರೈವರ್ರೋ’ ಎಂದು ಚಾಲಕರಿಗೆ ಕೇಳಿಸುವಂತೆಯೇ ಕಿಚಾಯಿಸುತ್ತಿದ್ದ. ಆದರೆ ಚಾಲಕರು ಯುವಕರ ಪ್ರಚೋದಕ ಮಾತುಗಳಿಗೆ ಕೆರಳಿ ಬಸ್‌ನ ವೇಗವನ್ನು ಹೆಚ್ಚಿಸಲೂ ಇಲ್ಲ, ಕಡಿಮೆ ಮಾಡಲೂ ಇಲ್ಲ. ನಿರ್ವಾಹಕನೂ ಬಸ್‌ ಹಿಂಭಾಗದ ತನ್ನ ಸೀಟ್‌ನಲ್ಲಿ ಕುಳಿತಿದ್ದ. ಇಷ್ಟಾದರೂ ಹುಡುಗರ ಅಪಹಾಸ್ಯದ ಮಾತು, ಕಿರುಚಾಟ, ಅರಚಾಟ, ಕೇಕೆ, ಗದ್ದಲ ನಿಲ್ಲಲೇ ಇಲ್ಲ.

ಅವರ ಪುಂಡಾಟಿಕೆ ಕ್ಷಣಕ್ಷಣವೂ ಹೆಚ್ಚತೊಡಗಿದಾಗ ಚಾಲಕನೂ ಸಹನೆ ಕಳೆದುಕೊಂಡ. ಪರಿಣಾಮ, ಚಲಿಸುತ್ತಿದ್ದ ಬಸ್ ಇದ್ದಕ್ಕಿದ್ದಂತೆ ನಿಂತು ಬಿಟ್ಟಿತು! ತಕ್ಷಣ ನಿರ್ವಾಹಕ ಚಾಲಕನತ್ತ ಧಾವಿಸಿ ‘ಏನಾಯಿತು?’ ಎಂದು ಕೇಳಿದ. ಚಾಲಕ ಏನೋ ಸಂಜ್ಞೆ ಮಾಡಿದ್ದರಿಂದ, ಕಂಡಕ್ಟರ್ ಏನೂ ಮಾತಾಡದೆ ತನ್ನ ಪಾಡಿಗೆ ತಾನು ಹೋಗಿ ಕುಳಿತ.

ಸಮಯ ಕಳೆದರೂ ಬಸ್ ಹೊರಡುವ ಸೂಚನೆ ಕಾಣಸಿದ್ದಾಗ ಅದೇ ಹುಡುಗರು ಚಾಲಕನನ್ನು ಗದರತೊಡಗಿದರು. ಎಂಜಿನ್ ಆಫ್ ಮಾಡಿದ ಚಾಲಕ, ’ನನ್ನನ್ನು ಜಟಕಾ ಡ್ರೈವರ್ ಅಂದವರು ನನ್ನೆದುರು ಬರುವವರೆಗೂ ಗಾಡಿ ತೆಗೆಯೊಲ್ಲ’ ಅಂತ ಪಟ್ಟುಹಿಡಿದಾಗ ಒಬ್ಬ ಅವರ ಬಳಿ ಹೋಗಿ ತನ್ನ ತಪ್ಪು ಒಪ್ಪಿಕೊಂಡ.

ಚಾಲಕ ಅಷ್ಟೇ ಸಹನೆಯಿಂದ, ‘ನಿಮ್ಮೆಲ್ಲರನ್ನು ನಿಮ್ಮ ಸ್ಥಳಗಳಿಗೆ ತಲುಪಿಸುವ ಜವಾಬ್ದಾರಿ ನನ್ನದು. ಮಾತ್ರವಲ್ಲ ನಿಮ್ಮ ಪ್ರಾಣವೂ ನನ್ನ ಕೈಲಿದೆ. ನನಗೂ ಜವಾಬ್ದಾರಿ ಇದೆ. ಅಪಘಾತವಾದರೆ ನಿಮಗೂ ತೊಂದರೆ ನನಗೂ ತೊಂದರೆ. ನಮ್ಮೆಲ್ಲರನ್ನೂ ನಂಬಿಕೊಂಡ ಕುಟುಂಬಗಳಿಗೆ ವಿನಾ ಕಾರಣ ಸಂಕಷ್ಟ. ಅದಕ್ಕೇ ನಾನು ಇತಿಮಿತಿಯಲ್ಲೇ ಬಸ್ ಓಡಿಸುತ್ತೇನೆ. ನಿಂದನೆ ಮಾಡಿದರೆ ನನಗೂ ನೋವಾಗುತ್ತದೆ ಅಲ್ವೇ?’ ಎಂದು ನಯವಾಗಿಯೇ ತರಾಟೆಗೆ ತೆಗೆದುಕೊಂಡರು. ಹುಡುಗರು ಮತ್ತೆಂದೂ ಅಂತಹ ತಪ್ಪು ಮಾಡಿರಲಾರರು.
–-ಎಲ್. ಚಿನ್ನಪ್ಪ, ಕನಕನಗರ, ಆರ್.ಟಿ.ನಗರ

ನಿಮ್ಮ ‘ಬಸ್ ಕತೆ’ ಬರೆಯಿರಿ
ನಗರ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸದವರು ವಿರಳ. ಪ್ರಯಾಣದ ವೇಳೆ ಏನಾದರೊಂದು ಸಿಹಿ ಅನುಭವ ಬಸ್ ಚಾಲಕನಿಂದಲೋ, ನಿರ್ವಾಹಕನಿಂದಲೋ ಸಹಪ್ರಯಾಣಿಕರಿಂದಲೋ ಆಗಿರಬಹುದು. ಅಂಥ ಸವಿನೆನಪುಗಳನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಳ್ಳಿ. ಮಾನವೀಯ ಮೌಲ್ಯ ಇರುವ ಕತೆಗಳನ್ನಷ್ಟೇ ಬಸ್ ಕತೆ ಅಂಕಣದಲ್ಲಿ ಪ್ರಕಟಿಸಲಾಗುವುದು. ಮೊಬೈಲ್ ಕಳ್ಳತನ, ನಿರ್ವಾಹಕರ ಕೋಪದ ವರ್ತನೆ ಮೊದಲಾದ ಸಮಸ್ಯೆಗಳು ಬೇಡ. ನಿಮ್ಮ ಬರಹ 300 ಪದಗಳಿಗೆ ಮೀರದಂತಿರಲಿ. ನುಡಿ ಅಥವಾ ಬರಹ ತಂತ್ರಾಂಶ ರೂಪದಲ್ಲಿರಲಿ. ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಸ್ಪಷ್ಟವಾಗಿರಲಿ.

ಇ-ಮೇಲ್: metropv@prajavani.co.in.
ಅಂಚೆ ವಿಳಾಸ: ‘ಮೆಟ್ರೊ’, ಪ್ರಜಾವಾಣಿ, ನಂ.75, ಎಂ.ಜಿ.ರಸ್ತೆ, ಬೆಂಗಳೂರು–560 001.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT