ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಸತ್ತ ಮೇಲಷ್ಟೆ ಸರ್ಕಾರಕ್ಕೆ ಕಣ್ಣು ಕಿವಿ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಇದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಕತ್ತಿಮಲ್ಲೇನಹಳ್ಳಿ ಗ್ರಾಮದ ಬಡ ಕುಟುಂಬದ ಕತೆ. ಈ ಗ್ರಾಮದಲ್ಲಿ ಸಣ್ಣಜವರೇಗೌಡ ಎಂಬಾತ ತನ್ನ ಮಾನಸಿಕ ಅಸ್ವಸ್ಥ ಮಗನ ಕುಟುಂಬದೊಂದಿಗೆ ವಾಸವಾಗಿದ್ದ. ಎರಡು ವರ್ಷಗಳ ಹಿಂದಿನ ಮಳೆಗಾಲದಲ್ಲಿ ಆತನ ಗುಡಿಸಲು ಮಳೆ ಗಾಳಿಯ ಆಘಾತಕ್ಕೆ ಸಿಲುಕಿ ಅರ್ಧಭಾಗ ಕುಸಿದು ಬಿತ್ತು. ಇಡೀ ಮನೆ ಕತ್ತಲೆಯ ಕೂಪಕ್ಕೆ ಸಿಲುಕಿತು. ಮನೆ ಕುಸಿಯುವವರೆಗೆ ಸ್ವಲ್ಪಮಟ್ಟಿಗೆ ಸರಿಯಾಗಿಯೇ ಇದ್ದ ಮಗ ನಂತರ ಮಾನಸಿಕ ಅಸ್ವಸ್ಥನಾಗಿಬಿಟ್ಟ. ಯಾವ ಮೂಲದಿಂದಲೂ ಪರಿಹಾರ ಸಿಗದೇ ಇರುವುದರಿಂದ ಹತಾಶನಾಗಿ ಬಿಟ್ಟ.

ಸಣ್ಣಜವರೇಗೌಡರಿಗೆ ಸುಮಾರು 70 ವರ್ಷ. ಅವರ ಜೊತೆ ಇರುವ ಮಗ ಮಾನಸಿಕ ಅಸ್ವಸ್ಥ. ಚೆನ್ನಾಗಿರುವ  ಇತರ ಮಕ್ಕಳು ಇವರನ್ನು ನೋಡಿಕೊಳ್ಳುತ್ತಿರಲಿಲ್ಲ. ಪತ್ನಿ ತಂಗ್ಯಮ್ಮ ಪಾರ್ಶ್ವವಾಯುವಿನಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಮಾನಸಿಕ ಅಸ್ವಸ್ಥ ಮಗನ ಪತ್ನಿ ಭಾಗ್ಯ ಕೂಲಿ ಮಾಡಿ ಇಡೀ ಕುಟುಂಬದ ಹೊಟ್ಟೆ ಹೊರೆಯಬೇಕು. ಇಂತಹ  ಸ್ಥಿತಿಯಲ್ಲಿಯೇ ಆ ವರ್ಷದ ಗಾಳಿ ಮತ್ತು ಮಳೆ ಮನೆಯ ಅರ್ಧಭಾಗವನ್ನು ಕಿತ್ತುಕೊಂಡು ಹೋಯಿತು.

ಮಳೆ ಗಾಳಿಗೆ ಸಿಲುಕಿ ಹಾನಿಗೀಡಾದ ತನ್ನ ಮನೆಗೆ ಪರಿಹಾರ ನೀಡಬೇಕು. ಆಶ್ರಯ ಯೋಜನೆಯಲ್ಲಿ ಮನೆಯೊಂದನ್ನು ಒದಗಿಸಬೇಕು ಹಾಗೂ ಮನೆಯ ದುರಸ್ತಿ ಮಾಡಿಸಿಕೊಡಬೇಕು ಎಂದು ಸಣ್ಣಜವರೇಗೌಡ ಮತ್ತು ಆತನ ಮಗ ಇಬ್ಬರೂ ಕಳೆದ ಒಂದು ವರ್ಷದಿಂದಲೂ ಗ್ರಾಮ ಪಂಚಾಯ್ತಿಯಿಂದ ತಹಶೀಲ್ದಾರ್‌ವರೆಗೆ ಅರ್ಜಿ ಸಲ್ಲಿಸುತ್ತಲೇ ಇದ್ದರು.

ಅಲ್ಲದೆ, ಗ್ರಾಮ ಪಂಚಾಯ್ತಿ ಸದಸ್ಯರು, ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ ಗೋಗರೆಯುತ್ತಲೂ ಇದ್ದರು. ಆದರೆ ಯಾವ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇವರ ಮನವಿಗೆ ಸ್ಪಂದಿಸಲಿಲ್ಲ. ಕಚೇರಿಗಳಿಗೆ ನಡೆದು ನಡೆದೂ ಇವರ ಚಪ್ಪಲಿ ಸವೆಯಿತೇ ವಿನಾ ಮನೆ ದುರಸ್ತಿಯಾಗಲಿಲ್ಲ. ಈ ಸುತ್ತಾಟದಲ್ಲಿಯೇ ಹತಾಶನಾದ ಮಗ ಇನ್ನಷ್ಟು ಮಾನಸಿಕ ರೋಗಿಯಾದ.

ಮನೆಯ ಒಳಗೆ ಮಲಗಿದ್ದರೂ ಆಕಾಶವೇ ಹೊದಿಕೆಯಾಗಿತ್ತು. ಮಳೆ ನೀರೆಲ್ಲಾ ಒಳಕ್ಕೇ ಬರುತ್ತಿತ್ತು. ಬಿಸಿಲಿಗೂ ಕೂಡ ಬೇಸರ ಇರಲಿಲ್ಲ. ಒಳಗಿದ್ದವರನ್ನು ಕಾಯಿಸುತ್ತಿತ್ತು. ವಿಧ್ವಂಸಗೊಂಡ ಮನೆಯಲ್ಲಿಯೇ ಪಾರ್ಶ್ವವಾಯು ಪೀಡಿತ  ಪತ್ನಿ ಹಾಗೂ ಮಾನಸಿಕ ಅಸ್ವಸ್ಥನಾಗಿದ್ದ ಮಗನೂ ಮಲಗುತ್ತಿದ್ದರು. ಸಣ್ಣಜವರೇಗೌಡರು ಅಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದರೆ ಸೊಸೆ ಭಾಗ್ಯ ಕೂಲಿಗೆ ಹೋಗುತ್ತಿದ್ದಳು. ಮನೆಯಲ್ಲಿದ್ದ ವೃದ್ಧ ಮಾವ, ಮಾನಸಿಕ ಅಸ್ವಸ್ಥ ಗಂಡ, ಪಾರ್ಶ್ವವಾಯು ಪೀಡಿತ ಅತ್ತೆಯನ್ನು ನೋಡಿಕೊಂಡು ಕೂಲಿಯನ್ನೂ ಮಾಡಿ ಜೀವನ ನಡೆಸುವುದು ಸೊಸೆಗೆ ಕಷ್ಟವಾಗಿತ್ತು.

ಸಣ್ಣಜವರೇಗೌಡರ ಮನೆಯ ಸಮಸ್ಯೆಯನ್ನು ಆಲಿಸಲು ಯಾರೂ ಬರಲಿಲ್ಲ. ವೃದ್ಧಾಪ್ಯದಿಂದ ಬಳಲಿದ್ದ ಅವರು  ಫೆ.7ರಂದು ತಮ್ಮ ಅರ್ಧ ಕುಸಿದ ಮನೆಯಲ್ಲಿ ಚಳಿಯಿಂದ ನಡುಗುತ್ತಲೇ ಪ್ರಾಣಬಿಟ್ಟರು. ಚಳಿಯಿಂದ ವ್ಯಕ್ತಿಯೊಬ್ಬ ಸತ್ತಿರುವ ಸುದ್ದಿ ತಾಲ್ಲೂಕಿನಾದ್ಯಂತ ಹಬ್ಬಿದ ಕೂಡಲೇ ಆಡಳಿತ ಯಂತ್ರ ಚುರುಕಾಯಿತು.

ಜನಪ್ರತಿನಿಧಿಗಳೂ, ಅಧಿಕಾರಿಗಳೂ ಮನೆಗೆ ಬಂದು ಸಾಂತ್ವನ ಹೇಳಿದರು. ಮನೆ ದುರಸ್ತಿ ಮಾಡಿಸಿಕೊಡುವ, ಆಶ್ರಯ ಮನೆಯನ್ನು ನೀಡುವ ಭರವಸೆಯನ್ನೂ ನೀಡಿ ಹೋದರು.

ತಹಶೀಲ್ದಾರರು ಕೂಡ ಮನೆಗೆ ಬಂದು ಸ್ಥಳೀಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ತಕ್ಷಣವೇ ಮನೆ ದುರಸ್ತಿಗೆ ಹಣ ಬಿಡುಗಡೆ ಮಾಡುವುದಾಗಿ ಹೇಳಿದರು. ಅಲ್ಲದೆ, ಆಶ್ರಯ ಮನೆ ಒದಗಿಸುವ ಬಗ್ಗೆ ಕೂಡ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಣ್ಣಜವರೇಗೌಡರ ಶವ ಸಂಸ್ಕಾರಕ್ಕೆ ಹಣ ನೀಡಿದರು. ಸಣ್ಣಜವರೇಗೌಡರ ಪತ್ನಿ ತಂಗ್ಯಮ್ಮ ಹಾಗೂ ಮಾನಸಿಕ ಅಸ್ವಸ್ಥ ಮಗನಿಗೆ ಅಂಗವಿಕಲ ವೇತನ ನೀಡುವುದಕ್ಕೂ ಶಿಫಾರಸು ಮಾಡಿದರು. ಮನೆ ಕುಸಿತದ ಪರಿಹಾರವನ್ನೂ ವಿತರಿಸಿದರು.

ಜೊತೆಗೆ ಸಣ್ಣಜವರೇಗೌಡನ ಇತರ ಮಕ್ಕಳನ್ನೂ ಕರೆಸಿ ಪಂಚಾಯ್ತಿ ಮಾಡಿ ಮಾನಸಿಕ ಅಸ್ವಸ್ಥನಾಗಿರುವ ವ್ಯಕ್ತಿಗೆ ಒಂದಿಷ್ಟು ಅನುಕೂಲವನ್ನು ಮಾಡಿಕೊಡುವುದಾಗಿಯೂ ಹೇಳಿದರು. ಅಂತಹ ಯತ್ನಕ್ಕೆ ಚಾಲನೆಯನ್ನೂ ನೀಡಿದರು. ಈ ಯತ್ನ ಮೊದಲೇ ಆಗಿದ್ದರೆ ಸಣ್ಣ ಜವರೇಗೌಡರು ಚಳಿಯಿಂದ ಸಾಯುವ ಸ್ಥಿತಿ ಬರುತ್ತಿರಲಿಲ್ಲವೇನೋ.

ರಾಜ್ಯದಲ್ಲಿ ಯಾವಾಗಲೂ ಯಾರಾದರೂ ಸತ್ತ ಮೇಲೆಯೇ ಆಡಳಿತ ಯಂತ್ರ ಚುರುಕಾಗುತ್ತದೆ ಯಾಕೆ?  ದುರಂತಗಳು ಸಂಭವಿಸುವ ಮೊದಲೇ ನಮ್ಮನ್ನು ಆಳುವ ಮಂದಿಯ ಕಿವಿ ಯಾಕೆ ಕೇಳಿಸುವುದಿಲ್ಲ? ಕಣ್ಣು ಯಾಕೆ ಕಾಣುವುದಿಲ್ಲ? ಹೃದಯ ಯಾಕೆ ಕರಗುವುದಿಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT