ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಸಹಭಾಗಿತ್ವಕ್ಕಾಗಿ ಸಣ್ಣ ಪಂಚಾಯಿತಿಗಳು

Last Updated 7 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ   ಜನರ ಪಾಲ್ಗೊಳ್ಳುವಿಕೆ ಹೆಚ್ಚು ಪರಿಣಾ­ಮ­ಕಾರಿಯಾಗ ಬೇಕೆಂಬ ಉದ್ದೇಶದಿಂದ ೨೦೧೪ರ ಮಾರ್ಚ್‌ನಲ್ಲಿ ಕರ್ನಾಟಕ ಸರ್ಕಾರವು ನಂಜಯ್ಯನಮಠ ಅವರ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರ ಗ್ರಾಮ ಪಂಚಾ­ಯಿತಿ ಪುನರ್ ವಿಂಗಡಣಾ ಸಮಿತಿಯನ್ನು ನೇಮಿಸಿತು. ಈ ಸಮಿತಿಯು ೨೦೧೪ರ ಅಕ್ಟೋಬರ್ ೨೮ರಂದು  ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.

ಸುಮಾರು ೨೪ ವರ್ಷಗಳ ಹಿಂದೆ ೧೯೯೧ರ ಜನಗಣತಿಯನ್ನು ಆಧರಿಸಿ ಗ್ರಾಮ ಪಂಚಾಯಿತಿಗಳನ್ನು ರಚಿಸಲಾಗಿತ್ತು. ಅದರಲ್ಲಿ ಅನೇಕ ಪಂಚಾಯಿತಿಗಳ ಕೇಂದ್ರಸ್ಥಾನಗಳು ಜನರಿಗೆ ದೂರವಾಗಿಯೇ ಇದ್ದವು. ಇವುಗಳನ್ನು ಸರಿ­ಪಡಿಸುವ ಬೇಡಿಕೆ ಹಾಗೂ ಬೆಳೆದ ಜನಸಂಖ್ಯೆಗೆ ಅನು­­ಗುಣವಾಗಿ ಪಂಚಾಯಿತಿ ರಚನೆಯ ಅವಶ್ಯಕತೆಯನ್ನು ಜನರಿಂದ ಬಂದ ೪೭೫೦ಕ್ಕೂ ಹೆಚ್ಚು ಬೇಡಿಕೆಗಳೇ ಸಾಬೀತು ಪಡಿಸಿವೆ.

ಗ್ರಾಮೀಣ ಜನರಿಗೆ ಸಾಧ್ಯವಾದಷ್ಟು ಸನಿಹದಲ್ಲಿ ಗ್ರಾಮ ಪಂಚಾಯಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ನಂಜಯ್ಯನಮಠ ಸಮಿತಿ ಅಧ್ಯಯನ ಮಾಡಿ ಗ್ರಾಮ ಪಂಚಾಯಿತಿ ಪುನರ್‌ವಿಂಗಡನೆಗೆ ಶಿಫಾರಸು ಮಾಡಿದೆ. ಸಮಿತಿಗೆ ಮುಖ್ಯವಾಗಿ ನಾಲ್ಕು ಅಂಶಗಳ ಕುರಿತಂತೆ ವರದಿ ನೀಡಲು ಸರ್ಕಾರ ಆದೇಶಿಸಿತ್ತು. ಒಂದು, ಗ್ರಾಮ ಪಂಚಾಯಿತಿಗಳ ಪುನರ್ ರಚನೆ ಬಗ್ಗೆ ಸರ್ಕಾರದಲ್ಲಿ ಈಗಾಗಲೇ ಸ್ವೀಕೃತವಾಗಿರುವ ಮತ್ತು ಸ್ವೀಕೃತಗೊಳ್ಳ­ಲಿರುವ ಮನವಿಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು.

ಎರಡು, ಗ್ರಾಮ ಪಂಚಾಯಿತಿಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಗ್ರಾಮ ಪಂಚಾಯಿತಿ­ಗಳನ್ನು ರಚಿಸುವ ಅಥವಾ ಸಂಯೋಜಿಸುವ ಅಥವಾ ವಿಭಜಿಸುವ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು. ಮೂರು, ಗ್ರಾಮ ಪಂಚಾಯಿತಿಗಳ ಕೇಂದ್ರ ಸ್ಥಾನವನ್ನು ಬದಲಾಯಿಸುವ ಅಥವಾ ಸ್ಥಳಾಂತರಿಸುವ ಪ್ರಸ್ತಾವನೆಗಳ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಶಿಫಾರಸು ಮಾಡುವುದು.

ನಾಲ್ಕು, ಗ್ರಾಮ ಪಂಚಾಯಿತಿಗಳ ಸದಸ್ಯರ ಸ್ಥಾನಗಳ ಹೆಚ್ಚಳ ಕುರಿತಂತೆ ಸೂಕ್ತ ಶಿಫಾರಸು ಮಾಡುವುದು.
ಸಮಿತಿಯು ಜಿಲ್ಲೆಗಳಿಗೆ ಹೋಗಿ ಜನರ ಅಹವಾಲು­ಗಳನ್ನು ಸ್ವೀಕರಿಸಿ, ಪರಿಶೀಲಿಸಿ, ೨೦೧೧ರ ಜನಗಣತಿಯನ್ನು ಆಧರಿಸಿ ಹೊಸದಾಗಿ ೪೩೯ ಗ್ರಾಮ ಪಂಚಾಯಿತಿಗಳ ರಚನೆಗೆ ಮತ್ತು ದೊಡ್ಡ ಗ್ರಾಮಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಿದೆ. ೪೩೯ ಗ್ರಾಮ ಪಂಚಾಯಿತಿಗಳಲ್ಲಿ ಕೆಲವು ಪ್ರಕರಣಗಳನ್ನು ವಿಶೇಷ ಪ್ರಕರಣಗಳಡಿ ಪರಿಶೀಲಿಸಿ ಅಲ್ಲಿನ ಜನತೆಯ ಹಿತದೃಷ್ಟಿಯಿಂದ ಪಂಚಾಯಿತಿ ರಚನೆಗೆ ಶಿಫಾರಸು ಮಾಡಿದೆ.

ಉದಾಹರಣೆಗೆ ಚಾಮರಾಜ ನಗರ ಜಿಲ್ಲೆಯಲ್ಲಿ ಸೋಲಿಗರು ವಾಸಿಸುವ ಬಿಳಿಗಿರಿ ರಂಗನ ಬೆಟ್ಟ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಳವರು ವಾಸಿಸುವಂತಹ ಹರಳಘಟ್ಟದಂತಹ ಕಂದಾಯೇತರ ಗ್ರಾಮಗಳನ್ನು ಹೊಸ ಪಂಚಾಯಿತಿಗಾಗಿ ಶಿಫಾರಸು ಮಾಡ­ಲಾಗಿದೆ. ಗ್ರಾಮ ಪಂಚಾಯಿತಿಗಳ ಕೇಂದ್ರ ಸ್ಥಾನವನ್ನು ಬದಲಾಯಿಸುವ ಕುರಿತಂತೆ ಸಮಿತಿಗೆ ನೂರಕ್ಕೂ ಹೆಚ್ಚು ಅಹವಾಲುಗಳು ಬಂದವು. ಅವುಗಳ ಹಿಂದೆ ಎಷ್ಟೇ ರಾಜಕೀಯ ಒತ್ತಡವಿದ್ದರೂ ಸಮಿತಿಯು ಕೇಂದ್ರ ಸ್ಥಾನಗಳನ್ನು ಬದಲಾಯಿಸುವ ಒಂದೇ ಒಂದು ಪ್ರಕರಣವನ್ನೂ ಶಿಫಾರಸು ಮಾಡಿಲ್ಲ.

ಗ್ರಾಮ ಪಂಚಾಯಿತಿ ಪುನರ್ ವಿಂಗಡಣೆ ಎಂಬುದು ಜೇನುಗೂಡಿಗೆ ಕಲ್ಲೆಸೆದಂತೆ. ಇದನ್ನರಿತು ಸಮಿತಿ ಕಾರ್ಯ ನಿರ್ವಹಿಸಿದೆ. ಸಮಿತಿಯು ಗ್ರಾಮ ಪಂಚಾಯಿತಿಗಳ ಪುನರ್ ವಿಂಗಡಣೆಯ ಶಿಫಾರಸು ಜೊತೆಗೆ ಹೊಸ ಗ್ರಾಮ ಪಂಚಾಯಿತಿಗಳ ರಚನೆಯಾದ ನಂತರ ಉದ್ಭವಿಸ­ಬಹುದಾದ ಅಂಶಗಳನ್ನೂ ಸ್ಪಷ್ಟಪಡಿಸಿದೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷರ ನೇರ ಆಯ್ಕೆಗೆ ಶಿಫಾರಸು ಮಾಡಿದೆ. ಇದು ೩೦ ಜಿಲ್ಲೆಗಳಲ್ಲಿ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳಿಂದ ವ್ಯಕ್ತವಾದ ನಿಲುವು.

ಈ ನಿಲುವನ್ನು ಯಾರೊಬ್ಬರೂ ವಿರೋಧಿಸಿಲ್ಲ. ರೆಸಾರ್ಟ್ ರಾಜಕಾರಣವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಅನುಭವಿಸಿದವರು ನೀಡಿದ ಅಭಿಪ್ರಾಯ ಇದಾಗಿದೆ. ಗ್ರಾಮ ಪಂಚಾಯಿತಿ ಸದಸ್ಯನಾಗಿ ಚುನಾಯಿತನಾಗಲು ಕನಿಷ್ಠ ವಿದ್ಯಾರ್ಹತೆ ನಿಗದಿ­ಗೊಳಿಸಲು ಕೇಳಿದ್ದು ಇನ್ನೊಂದು ಪ್ರಮುಖ ಅಭಿಪ್ರಾಯ. ಇದನ್ನು ಸಮಿತಿ ಶಿಫಾರಸು ಮಾಡಲಿಲ್ಲ. ಶಾಸಕರಿಗೆ ಇಲ್ಲದ ವಿದ್ಯಾರ್ಹತೆ ಇವರಿಗೇಕೆ ಎನ್ನುವುದು ತೇಲುಮಾತಿನ ಉತ್ತರ. ನಮ್ಮ ಗ್ರಾಮಗಳಲ್ಲಿನ ೨೧ ವರ್ಷ ಮೇಲ್ಪಟ್ಟ ಯುವಕರು ಇನ್ನೂ ಅನಕ್ಷರರು.

ವಿದ್ಯಾರ್ಹತೆ ನಿಗದಿ ಮಾಡಿದರೆ ಯಾರೂ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವೇ ಇಲ್ಲದಂತಾಗುತ್ತದೆ. ಆದರೆ ಕನಿಷ್ಠ ವಿದ್ಯಾರ್ಹತೆ ಮಾಡುವುದು ಸೂಕ್ತವೆನಿಸುತ್ತದೆ. ಏಕೆಂದರೆ ಯಾವುದೇ ಜನಪ್ರತಿನಿಧಿಗಳಿಗೆ (ಶಾಸಕರು, ಸಂಸದರಿಗೂ) ಇಲ್ಲದ ಬ್ಯಾಂಕ್ ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗಿದೆ ಮತ್ತು ನರೇಗಾ ಯೋಜನೆ­ಗಳಲ್ಲಿ ಅವ್ಯವಹಾರ ನಡೆದಿರುವುದು ಅಧ್ಯಕ್ಷರಿಗಿರುವ ಅಕ್ಷರ ಜ್ಞಾನದ ಕೊರತೆಯಿಂದಾಗಿ. ಹೀಗಾಗಿ ವಿದ್ಯಾರ್ಹತೆ ಅಗತ್ಯವೆನಿಸುತ್ತದೆ. ಈ ವಿಷಯವನ್ನು ರಮೇಶ್ ಕುಮಾರ್ ಸಮಿತಿ ಪರಿಶೀಲಿಸಿ ಶಿಫಾರಸು ಮಾಡ­ಬಹು­ದೆಂದು ನಂಜಯ್ಯನಮಠ ಸಮಿತಿ ಪರಿಶೀಲನೆ ಮಾಡಲಿಲ್ಲ. 

ಗ್ರಾಮ ಪಂಚಾಯಿತಿಗಳು ಪಂಚಾಯತ್ ರಾಜ್ ವ್ಯವಸ್ಥೆಯ ಅತ್ಯಂತ ತಳಮಟ್ಟದ ಸಂಸ್ಥೆಗಳು. ಇವು ಜನರಿಗೆ ನೇರವಾಗಿ ಸೇವೆಗಳನ್ನು ನೀಡುವ ಸಂಸ್ಥೆಗಳು.  ಇಂಥ ಸಂಸ್ಥೆಗಳು  ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸ­ಬೇಕಾ­ದರೆ, ಅವುಗಳ ಮೇಲಿರುವ ಕೆಲವು ಒತ್ತಡಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಒಂದು ಆಡಳಿತ ಸಂಸ್ಥೆಯ ಗಾತ್ರ (ಭೌಗೋಳಿಕ ಮತ್ತು ಜನಸಂಖ್ಯೆ) ಅಧಿಕವಾದರೆ,  ಆ ಸಂಸ್ಥೆಯು ದಕ್ಷತೆಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗದೇ ಹೋಗಬಹುದು.

ಆಡಳಿತ ಮತ್ತು ಸೇವೆಗಳನ್ನು ನೀಡುವ ಸಂಸ್ಥೆಗಳು ಗಾತ್ರ ಮತ್ತು ಭೌಗೋಳಿಕ ವಿಸ್ತೀರ್ಣದ ದೃಷ್ಟಿಯಿಂದ ಚಿಕ್ಕವಾಗಿದ್ದರೆ, ಆಡಳಿತವನ್ನು ದಕ್ಷ ರೀತಿಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಆಡಳಿತದಲ್ಲಿ ದಕ್ಷತೆಯನ್ನು ತರುವ ಮೂಲಕ ಜನರ ಸಬಲೀಕರಣಕ್ಕೆ ಸಾಧ್ಯವಾಗುತ್ತದೆ. ಕರ್ನಾಟಕದಲ್ಲಿ  ಸಂವಿಧಾನದ ೭೩ನೇ ತಿದ್ದುಪಡಿಯ ನಂತರ ಪಂಚಾಯತ್ ರಾಜ್ ವ್ಯವಸ್ಥೆಯು ಹೆಚ್ಚು ಸಂವಿಧಾನಬದ್ಧವಾಗಿ ಅನುಷ್ಠಾನಗೊಂಡಿತು. 

೧೯೯೧ರ ಜನಸಂಖ್ಯೆಯ ಆಧಾರದ ಮೇಲೆ ಅಂದು ಗ್ರಾಮ ಪಂಚಾಯಿತಿಗಳು ಅಸ್ತಿತ್ವಕ್ಕೆ ಬಂದವು.  ೧೯೯೧ರಲ್ಲಿ ಕರ್ನಾಟಕದಲ್ಲಿ ಗ್ರಾಮೀಣ ಜನಸಂಖ್ಯೆಯ ಪ್ರಮಾಣ ೩,೧೦,೬೯,೪೧೩ ಆಗಿದ್ದು, ರಾಜ್ಯದ ಒಟ್ಟು ಜನಸಂಖ್ಯೆ­ಯಲ್ಲಿ ಶೇ ೬೯.೦೮ ರಷ್ಟು ಗ್ರಾಮೀಣ ಜನಸಂಖ್ಯೆ ಇತ್ತು. ೨೦೧೧ರ ಜನಗಣತಿ ಪ್ರಕಾರ ರಾಜ್ಯದ ಗ್ರಾಮೀಣ ಜನಸಂಖ್ಯೆಯ ಪ್ರಮಾಣ ೩,೭೪,೬೯,೩೩೫ ಆಗಿದೆ. ಅಂದರೆ ಎರಡು ದಶಕಗಳ ಅವಧಿಯಲ್ಲಿ ಕರ್ನಾಟಕದ ಗ್ರಾಮೀಣ ಭಾಗದ ಜನಸಂಖ್ಯೆಯಲ್ಲಿ ಶೇ ೧೭.೦೮ ರಷ್ಟು ಜನಸಂಖ್ಯೆ ಏರಿಕೆಯಾಗಿದೆ.

  ಅಲ್ಲದೆ ೨೦೧೧ ಜನಗಣತಿ ಪ್ರಕಾರ  ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ ೬೧.೩೨ ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ ಇರುವ ಗ್ರಾಮ ಪಂಚಾಯಿತಿಗಳು ಮತ್ತು ಪಂಚಾಯಿತಿಗಳ ಸದಸ್ಯರ ಸಂಖ್ಯೆಯನ್ನು ೧೯೯೧ರ ಜನಗಣತಿಯ ಆಧಾರದ ಮೇಲೆ ನಿರ್ಧರಿಸಲಾಗಿದೆ.  ಅಂದರೆ, ಈ ವ್ಯವಸ್ಥೆ ಬಂದು ಎರಡು ದಶಕಗಳು ಸಂದಿವೆ. ಅಲ್ಲದೆ ೨೦೦೧ ಮತ್ತು ೨೦೧೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಗ್ರಾಮೀಣ ಜನಸಂಖ್ಯೆಯಲ್ಲಿ ಶೇ ೬.೮೯ರಷ್ಟು ಏರಿಕೆಯಾಗಿದೆ. 

ಜನಸಂಖ್ಯೆಯ  ಹೆಚ್ಚಳದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ಸಂಖ್ಯೆಗಳನ್ನು ಹೆಚ್ಚಿಸುವ ಅಗತ್ಯವಿದೆ. ಇಂದಿಗೂ ಕರ್ನಾಟಕದಲ್ಲಿ ಶೇ ೬೧.೩೨ ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸವಾ­ಗಿ­ದ್ದಾರೆ.   ಗ್ರಾಮ ಆಡಳಿತ ಘಟಕಗಳಾದ ಗ್ರಾಮ ಪಂಚಾ­ಯಿ­ತಿ­ಗಳ ಗಾತ್ರ ಒಂದು ಮಾದರಿ ರೂಪದಲ್ಲಿದ್ದರೆ, ಜನರಿಗೆ ಸೂಕ್ತ ಸೇವೆಗಳನ್ನು ಒದಗಿಸಲು ಸಾಧ್ಯವಾ­ಗುತ್ತದೆ. ಜನರು ಸಹ ಆಡಳಿತ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನೆರವಾಗು­ತ್ತದೆ.  ಆಡಳಿತ ಘಟಕಗಳು ದೊಡ್ಡದಾದಂತೆ, ಆ ಸಂಸ್ಥೆಗಳು ಜನರಿಂದ ದೂರವಾಗುವ ಸಾಧ್ಯತೆ ಹೆಚ್ಚು.

ಪಂಚಾಯಿತಿಗಳ ಗಾತ್ರ ಅಧಿಕವಾದಂತೆ, ಸಾರ್ವಜನಿಕ ವಿತರಣಾ ವ್ಯವಸ್ಥೆಗಳು ಪರಿಣಾಮಕಾರಿ ಮತ್ತು ಹೆಚ್ಚು ಫಲಕಾರಿಯಾಗಲಾರವು ಎಂದು ಹೇಳಬಹುದು. ಇಂದು ಗ್ರಾಮ ಪಂಚಾಯಿತಿಗಳಿಗೆ ಹಲವಾರು ಕಾರ್ಯಗಳನ್ನು ನಿಯೋಜಿಸಲಾಗುತ್ತಿದೆ. ಮಾಹಿತಿ ಹಕ್ಕು, ಸಕಾಲ ಕಾಯ್ದೆಗಳು ಜಾರಿಯಾಗಿ ಪಂಚಾಯಿತಿಗಳ ಜವಾಬ್ದಾರಿ­ಹೆಚ್ಚಿಸಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಂಥ ಬೃಹತ್ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿಯನ್ನು ಪಂಚಾಯಿತಿಗಳಿಗೆ ವಹಿಸಲಾಗಿದೆ.

ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡದ ಪಂಚಾಯಿತಿಗಳು ಕರ್ನಾಟಕದಲ್ಲಿವೆ. ಈ ಪಂಚಾಯಿತಿಗಳಲ್ಲಿ ಬಡವರಿಲ್ಲವೋ? ಇದ್ದರೂ ಕಾರ್ಯಕ್ರಮದ ಅವಶ್ಯಕತೆ ಇಲ್ಲವೋ?  ಅವಶ್ಯಕತೆ ಇದ್ದರೂ ಪಂಚಾಯಿತಿಗಳು ಜಾರಿ ಮಾಡಿಲ್ಲವೋ? ಕೇರಳ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿದ್ದಂತೆ ಗ್ರಾಮ ಪಂಚಾಯಿತಿಗಳ ಗಾತ್ರ ದೊಡ್ಡದಾಗಿದ್ದರೆ, ಜನರ ಮತ್ತು ಗ್ರಾಮ ಪಂಚಾಯಿತಿಗಳ ನಡುವಿನ ಸಂಪರ್ಕದ ಅಂತರಗಳು  ದೂರವಾಗಿರುತ್ತವೆ. ಸಣ್ಣ ಸಣ್ಣ ಪ್ರದೇಶಗಳನ್ನು ಕಡೆಗಣಿಸುವ, ನಿರ್ಲಕ್ಷಿಸಿಸುವಂತಹ ಪರಿಸ್ಥಿತಿಗಳು ಸಹ ಉದ್ಭವಿಸಬಹುದು. 

ಕೇಂದ್ರ ಯೋಜನಾ ಇಲಾಖೆ ಮತ್ತು ಪಂಚಾಯತ್ ರಾಜ್ ಸಚಿವಾಲಯ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್

ವ್ಯವಸ್ಥೆ ಕುರಿತಾದ ವರದಿಯ ಮೇಲಿನ ಅಂಕಿ-ಅಂಶ ತಿಳಿಸುವಂತೆ, ದೇಶದ ೨೩ ರಾಜ್ಯಗಳ ಪೈಕಿ ೧೮ ರಾಜ್ಯಗಳಲ್ಲಿ ಪ್ರತಿ ಗ್ರಾಮ ಪಂಚಾ­ಯಿತಿಗೆ ಇರುವ ಗ್ರಾಮೀಣ ಜನಸಂಖ್ಯೆಯ ಪ್ರಮಾಣ ಕರ್ನಾಟಕದ ಪ್ರಮಾಣವಾದ ೬೧೭೩ಕ್ಕಿಂತಲೂ ಕಡಿಮೆ ಇದೆ.  ಕೇವಲ ಐದು ರಾಜ್ಯಗಳಲ್ಲಿ ಮಾತ್ರ  ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಇರುವ ಗ್ರಾಮೀಣ ಜನಸಂಖ್ಯೆಯ ಪ್ರಮಾಣ ಹೆಚ್ಚಿದೆ.

ಅಂದರೆ, ಕರ್ನಾಟಕದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಜನಸಂಖ್ಯಾ ಇದ್ದು, ಜನಸ್ನೇಹಿ ಪಂಚಾಯಿತಿ ವ್ಯವಸ್ಥೆಗೆ  ಗ್ರಾಮಪಂಚಾಯಿತಿಗಳ ಮೇಲಿನ ಜನಸಂಖ್ಯಾ ಒತ್ತಡ ಕಡಿಮೆ ಮಾಡಬೇಕೆಂಬುದನ್ನು ಮೇಲಿನ ಅಂಕಿ ಅಂಶಗಳು ಹೇಳುತ್ತವೆ. ೨೦೧೧ರ ಜನಗಣತಿ ಪ್ರಕಾರ ಕರ್ನಾಟಕದ ಗ್ರಾಮೀಣ ಜನಸಂಖ್ಯೆ ಪ್ರಮಾಣ ೩,೭೪,೬೯,೩೩೫ ಆಗಿದೆ. ಪ್ರಸ್ತುತ ರಾಜ್ಯದಲ್ಲಿ ೫೬೨೯  ಗ್ರಾಮ ಪಂಚಾಯಿತಿಗಳಿವೆ.

ಅಂದರೆ ಪ್ರತಿ ಗ್ರಾಮ ಪಂಚಾಯಿತಿಗೆ  ೬೬೫೬ ಸರಾಸರಿ ಜನಸಂಖ್ಯೆ ಎಂದಾಗುತ್ತದೆ. ರಾಜ್ಯದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಇರುವ ಗ್ರಾಮೀಣ ಜನಸಂಖ್ಯೆಯು ಈಗಿರುವ ೬೬೫೬ ರಿಂದ ೬೧೭೫ ಕಡಿಮೆಯಾಗುತ್ತದೆ.  ಸಮಿತಿಯು ಶಿಫಾರಸು ಮಾಡಿದ ೪೦ ನಗರ ಸ್ಥಳೀಯ ಸಂಸ್ಥೆಗಳು ರಚನೆಗೊಂಡರೆ ಪ್ರತಿ ಗ್ರಾಮ ಪಂಚಾಯಿತಿಗೆ ಇರುವ ಜನಸಂಖ್ಯೆಯ ಪ್ರಮಾಣ ಇನ್ನೂ ತಗ್ಗಲಿದೆ.
(ಲೇಖಕರಿಬ್ಬರೂ ಗ್ರಾ.ಪಂ. ಪುನರ್ವಿಂಗಡಣಾ ಸಮಿತಿಯಲ್ಲಿ ಸಕ್ರಿಯರಾಗಿದ್ದವರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT