ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತೆ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲ

Last Updated 7 ಆಗಸ್ಟ್ 2012, 8:05 IST
ಅಕ್ಷರ ಗಾತ್ರ

ಲಿಂಗಸುಗೂರ(ಮುದಗಲ್ಲ): ಜನಾದೇಶ ಧಿಕ್ಕರಿಸಿ ವಾಮ ಮಾರ್ಗಗಳ ಮೂಲಕ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಸರ್ಕಾರ ರೈತರು, ಹಿಂದುಳಿದ, ದಲಿತ ಹಾಗೂ ಸಾಮಾನ್ಯ ಜನತೆ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ.

ಅಂತರಿಕ ಕಚ್ಚಾಟದಿಂದ ರಾಜ್ಯದಲ್ಲಿನ ಬರ ನಿರ್ವಹಣೆ ಮಾಡದೆ ಜನತೆ ಗುಳೆ ಹೋಗುತ್ತಿರುವ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕಳವಳ ವ್ಯಕ್ತಪಡಿಸಿದರು.ಭಾನುವಾರ ಮುದಗಲ್ಲ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ಕೋಟ್ಯಂತರ ಹಣ ಬಿಡುಗಡೆ ಮಾಡಿದೆ.

ನೀಡಿರುವ ಅನುದಾನ ಬಳಕೆ ಮಾಡಲು ಸಾಧ್ಯವಾಗದೆ ಹತಾಶವಾಗಿದೆ. ಕಳೆದ ಮೂರ‌್ನಾಲ್ಕು ವರ್ಷಗಳಿಂದ ಸಂಕಷ್ಟದಲ್ಲಿರುವ ರೈತರಿಗೆ ನಿಗದಿತ ಸಾಲ ಮನ್ನಾ ಮಾಡುವ ಮೂಲಕ ಮೊಸಳೆ ಕಣ್ಣೀರು ಒರೆಸುತ್ತಿದೆ. ವಾಸ್ತವವಾಗಿ ನಿಜವಾದ ರೈತರಿಗೆ ಈ ಯೋಜನೆಯಿಂದ ಲಾಭವಾಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಕೇವಲ ಸಹಕಾರಿ ಬ್ಯಾಂಕ್‌ಗಳಲ್ಲಿನ ನಿಗದಿತ ಅವಧಿ ಸಾಲ ಮನ್ನಾ ಮಾಡಿದರೆ ಸಾಲದು. 5ಎಕರೆ ಜಮೀನು ಹೊಂದಿರುವ ರೈತರ ಎಲ್ಲಾ ಬ್ಯಾಂಕ್‌ಗಳಲ್ಲಿನ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕು. ಕಳೆದ ವರ್ಷದ ಮತ್ತು ಪ್ರಸಕ್ತ ವರ್ಷದ ಬೆಳೆ ನಷ್ಟ ಪರಿಹಾರ ತುಂಬಿಕೊಡಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಮೀನಾ ಮೇಷ ಮಾಡುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಅಂದಾಜು 31ಲಕ್ಷ ಪಡಿತರ ಕಾರ್ಡ್, ವೃದ್ಧಾಪ್ಯವೇತನ, ಅಂಗವಿಕಲ, ಅಂಧತ್ವ, ಸಂಧ್ಯಾಸುರಕ್ಷಾ ಅರ್ಹ ಫಲಾನುಭವಿಗಳ ಅಂದಾಜು 9.50ಲಕ್ಷ ಮಾಶಾಸನ ಆದೇಶ ವಾಪಸ್ಸು ಪಡೆದುಕೊಂಡಿರುವುದು ನೋಡಿದರೆ ಜನಸಾಮಾನ್ಯರ ಬಗ್ಗೆ ಬಿಜೆಪಿ ಸರ್ಕಾರ ತಳೆದಿರುವ ಕಾಳಜಿ ಎಷ್ಟು ಎಂಬುದು ಸಾಬೀತಾಗುತ್ತದೆ. ಕಡುಬಡವರಿಗೆ ಮುಳುವಾದ, ರಾಜ್ಯದ ಹಿತ ಕಾಪಾಡದ ಬಿಜೆಪಿ ಸರ್ಕಾರಕ್ಕೆ ಜನತೆಯೆ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ನಾಯಕರ ನಿರಂತರ ಒತ್ತಡ, ಸೋನಿಯಾಗಾಂಧಿ ಮತ್ತು ರಾಹುಲಗಾಂಧಿ ಅವರ ಇಚ್ಛಾಶಕ್ತಿಯಿಂದ ಹೈದರಬಾದ ಕರ್ನಾಟಕ ಪ್ರದೇಶದ ಬಹುದಿನಗಳ ಬೇಡಿಕೆಯಾಗಿದ್ದ ಸಂವಿಧಾನದ ಕಲಂ 371ರ ತಿದ್ದುಪಡಿ ವಿಧೆಯಕ ಸಂಸತ್ತಿನಲ್ಲಿ ಮಂಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿರುವುದನ್ನು ರಾಜ್ಯ ಕಾಂಗ್ರೆಸ್ ಮುಕ್ತವಾಗಿ ಸ್ವಾಗತಿಸುತ್ತದೆ. ಹೈಕ ಪ್ರದೇಶಕ್ಕೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಮಹತ್ವ ನೀಡಿರುವುದನ್ನು ಶ್ಲಾಘಿ ಸಿ ಅಭಿನಂದಿಸಿದರು.

ಮಾಜಿ ಸಂಸದ ಎ. ವೆಂಕಟೇಶ ನಾಯಕ, ಶಾಸಕರಾದ ಹಂಪಯ್ಯ ನಾಯಕ, ರಾಜಾ ರಾಯಪ್ಪ ನಾಯಕ, ಕೆಪಿಸಿಸಿ ಸದಸ್ಯ ಶರಣಗೌಡ ಬಯ್ಯಾಪೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ. ವಸಂತಕುಮಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶರಣಪ್ಪ ಮೇಟಿ, ಮುನ್ವರ್‌ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT