ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತೆಗೆ ದ್ರೋಹ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಕಳೆದ ಒಂದು ವರ್ಷದಿಂದ ಬಲಿಷ್ಠ ಲೋಕಪಾಲ ಕಾನೂನು ರೂಪಿಸುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ತೋರಿಸುತ್ತಿದ್ದ ಪ್ರತಿಕ್ರಿಯೆಯನ್ನು ಗಮನಿಸುತ್ತಿದ್ದವರಿಗೆ ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆಗೆ ಆದ ಅತಂತ್ರ ಸ್ಥಿತಿ ಅನಿರೀಕ್ಷಿತವಲ್ಲ.

ಲೋಕಪಾಲಕ್ಕೆ ಸಾಂವಿಧಾನಿಕ ಸ್ಥಾನವನ್ನು ನೀಡದಿರುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಲೋಕಸಭೆಯಲ್ಲಿ ಕ್ಷುಲ್ಲಕ ನೆಪಗಳನ್ನು ಮುಂದೆ ಮಾಡಿ ಸಂಚು ನಡೆಸಿದ್ದಾಗಲೇ ವಿಧೇಯಕದ ಹಣೆ ಬರಹ ನಿರ್ಧಾರವಾಗಿ ಹೋಗಿತ್ತು.
 
ವಿಧೇಯಕವನ್ನು ಮಂಡಿಸುವ ಮೊದಲು ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಡುವಂತೆ ಮಾಡಿದ ಯುಪಿಎ, ಎಲ್ಲ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ನಡೆಸಲಿಲ್ಲ.

ಲೋಕಪಾಲಕ್ಕೆ ಸಾಂವಿಧಾನಿಕ ಸ್ಥಾನ ನೀಡಬೇಕು ಎಂಬುದು ಕಾಂಗ್ರೆಸ್‌ನ ಭವಿಷ್ಯದ ಪ್ರಧಾನಿ ಹುದ್ದೆಯ ಅಭ್ಯರ್ಥಿ ರಾಹುಲ್ ಗಾಂಧಿಯ ಕನಸು ಎಂಬ ವಾದವನ್ನೇ ನೆಪ ಮಾಡಿಕೊಂಡು ಪ್ರಮುಖ ವಿರೋಧ ಪಕ್ಷ ಬಿಜೆಪಿ ವಿಧೇಯಕವನ್ನು ವಿರೋಧಿಸಿ ಮೊದಲೇ ದುರ್ಬಲವಾಗಿದ್ದ ಮಸೂದೆ ಮತ್ತಷ್ಟು ಸೊರಗಲು ಕಾರಣವಾಯಿತು.
 
ಸಾಂವಿಧಾನಿಕ ಸ್ಥಾನವಿಲ್ಲದ ಲೋಕಾಯುಕ್ತ ಭ್ರಷ್ಟಾಚಾರದ ವಿರುದ್ಧ ಪ್ರಬಲ ವೇದಿಕೆ ಆಗಲಾರದು ಎಂಬ ಸಂಗತಿ ಬಿಜೆಪಿಗೆ ಗೊತ್ತಿರದ ಸಂಗತಿಯಲ್ಲ. ಸಾರ್ವಜನಿಕವಾಗಿ ಪ್ರಬಲ ಲೋಕಪಾಲಕ್ಕೆ ಒತ್ತಾಯಿಸುತ್ತ, ಸಂಸತ್ತಿನಲ್ಲಿ ಅದಕ್ಕೆ ವಿರುದ್ಧವಾಗಿ ವರ್ತಿಸಿದ ಬಿಜೆಪಿಯ ಇಂಥ ಇಬ್ಬಂದಿ ನಡವಳಿಕೆ ಖಂಡನಾರ್ಹ.

ಪ್ರಬಲ ಲೋಕಪಾಲ ಕಾಯ್ದೆಗೆ ಒತ್ತಾಯಿಸುವ ಹೋರಾಟವನ್ನು ಜನರ ಬಳಿ ಕೊಂಡೊಯ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಾಜದ ತಂಡವನ್ನು ಹೆಜ್ಜೆಹೆಜ್ಜೆಗೆ ಅಪಮಾನಿಸುತ್ತ ಹೋರಾಟದ ಕಿಚ್ಚು ತಣ್ಣಗಾಗುವುದಕ್ಕೆ ಶ್ರಮಿಸಿದ ಕಾಂಗ್ರೆಸ್, ತನ್ನ ಮಿತ್ರಪಕ್ಷಗಳ, ವಿಶೇಷವಾಗಿ ತೃಣಮೂಲ ಕಾಂಗ್ರೆಸ್ ಬೆಂಬಲವನ್ನು ಅಬಾಧಿತವಾಗಿ ಉಳಿಸಿಕೊಳ್ಳಲು ಕಿಂಚಿತ್ತೂ ಪ್ರಯತ್ನಿಸಲಿಲ್ಲ.

ಕಾನೂನು ರೂಪಿಸುವ ಸಂಸತ್ತಿನ ಪರಮಾಧಿಕಾರವನ್ನು ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಾಜವಾಗಲೀ, ಈ ಹೋರಾಟದಲ್ಲಿ ದೇಶದಾದ್ಯಂತ ಬೀದಿಗಿಳಿದು ಭಾಗವಹಿಸಿದ ಜನತೆಯಾಗಲೀ ಯಾವ ಹಂತದಲ್ಲಿಯೂ ಪ್ರಶ್ನಿಸಿರಲಿಲ್ಲ.

ಆದರೂ ಯುಪಿಎ ಸರ್ಕಾರದ ನೇತೃತ್ವ ವಹಿಸಿದ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿ ಲೋಕಪಾಲ ವಿಧೇಯಕ ಸಂಸತ್ತಿನಲ್ಲಿ ಕಾನೂನು ಆಗಬೇಕೆಂದು ಪ್ರಾಮಾಣಿಕವಾಗಿ ಶ್ರಮಿಸಲಿಲ್ಲ. ತಮ್ಮದೇ ಕಾರ್ಯಸೂಚಿ ಇಟ್ಟುಕೊಂಡಿರುವ ಇತರ ಪ್ರಾದೇಶಿಕ ಪಕ್ಷಗಳಿಗೆ ಲೋಕಪಾಲವಾಗಲೀ, ಲೋಕಾಯುಕ್ತವಾಗಲೀ ಆದ್ಯತೆಯ ವಿಷಯಗಳೇ ಅಲ್ಲ.

ಸದ್ಯದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಮತ್ತಿತರ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ, ಲೋಕಪಾಲ ವಿಧೇಯಕವನ್ನು ಅಂಗೀಕರಿಸದಿರುವುದಕ್ಕೆ ಪರಸ್ಪರರನ್ನು ಹೊಣೆಯಾಗಿಸುವ ರಾಜಕೀಯ ದುರುದ್ದೇಶವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಹೊಂದಿರುವುದು ಈ ಬೆಳವಣಿಗೆಯಲ್ಲಿ ಸ್ಪಷ್ಟವಾಗಿದೆ.

ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಈಗಿನ ವಿಧೇಯಕ ರಾಜ್ಯಸಭೆಯಲ್ಲಿ ಚರ್ಚೆಯಾಗಿ ಮತದಾನದ ಹಂತದಲ್ಲಿ ನಿಂತಿದೆ. ಹೀಗೆ ಸ್ಥಗಿತಗೊಳ್ಳಲು ಕಾಂಗ್ರೆಸ್ ಪಕ್ಷದ ದುಷ್ಟ ಹುನ್ನಾರವೇ ಕಾರಣ.

ಕಾಯ್ದೆ ರೂಪಿಸುವುದಕ್ಕೆ ಜನ ನೀಡಿದ ಪರಮಾಧಿಕಾರವನ್ನು ಕುಂಟು ನೆಪಗಳನ್ನು ಮುಂದೆ ಮಾಡಿ ಹೀಗೆ ಬಳಸಿಕೊಳ್ಳದಿರುವುದು, ಜನಪ್ರತಿನಿಧಿಗಳು ದೇಶದ ಜನತೆಗೆ ಬಗೆದ ದ್ರೋಹ. ಒಂದು ರೀತಿಯಲ್ಲಿ ಸಂಸತ್ತು ತನ್ನ ಕರ್ತವ್ಯದಲ್ಲಿಯೇ ವಿಫಲವಾಗಿದೆ. ಈ ವಿಶ್ವಾಸದ್ರೋಹವನ್ನು ದೇಶದ ಜನತೆ ಗಂಭೀರವಾಗಿಯೇ ಪರಿಗಣಿಸಬೇಕಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT