ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಅಧ್ಯಯನಕ್ಕೆ ನಾಂದಿ ಹಾಡಿದ ಕು.ಶಿ.

Last Updated 5 ಫೆಬ್ರುವರಿ 2011, 6:35 IST
ಅಕ್ಷರ ಗಾತ್ರ

ಉಡುಪಿ: ಕಳೆದ 20-25 ವರ್ಷಗಳ ಹಿಂದೆಯೇ ನಮ್ಮ ರಾಜ್ಯದಲ್ಲಿ ವೈಜ್ಞಾನಿಕ ವಿಧಾನದಲ್ಲಿ ಜಾನಪದದ ಅಧ್ಯಯನ ಪರಂಪರೆಗೆ ನಾಂದಿ ಹಾಡಿದವರು ವಿದ್ವಾಂಸ ಕು.ಶಿ.ಹರಿದಾಸ ಭಟ್ಟರು ಎಂದು ಜಾನಪದ ವಿದ್ವಾಂಸ ಹಾಗೂ ಕು.ಶಿ. ಪ್ರಶಸ್ತಿ ಪುರಸ್ಕೃತ ಡಾ.ಬಸವರಾಜ ಮಲಶೆಟ್ಟಿ ಇಲ್ಲಿ ಹೇಳಿದರು.

ಉಡುಪಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು, ಚೆನ್ನೈನ ನ್ಯಾಷನಲ್ ಪೋಕ್ಲೋರ್ ಸಪೋರ್ಟ್ ಸೆಂಟರ್ ಹಾಗೂ ಯಕ್ಷಗಾನ ಕೆಂದ್ರ ಸಹಯೋಗದಲ್ಲಿ ಶುಕ್ರವಾರ ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಆಯೋಜಿಸಿದ್ದ ಕು.ಶಿ.ಸಂಸ್ಮರಣೆಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಹಿಂದೆಲ್ಲ ಜಾನಪದ ಅಧ್ಯಯನವೆಂದರೆ ಒಂದಿಷ್ಟು ತ್ರಿಪದಿಗಳು, ಅವುಗಳ ರಸಾಸ್ವಾದನೆ, ಸಾಹಿತ್ಯ ಇವಿಷ್ಟೇ ಆಗಿದ್ದವು. ಆದರೆ ಹರಿದಾಸ ಭಟ್ಟರು ಈ ಪರಂಪರೆಯನ್ನು ಬದಲಾಯಿಸಿ ಜಾನಪದವನ್ನು ಹೇಗೆ ಆಧುನಿಕ ವಿಧಾನದಲ್ಲಿ, ವಿದೇಶಿ ಮಾದರಿ  ಯಲ್ಲಿ ದಾಖಲೀಕರಣ ಮಾಡಬಹುದು ಎನ್ನುವುದನ್ನು  ತೋರಿಸಿಕೊಟ್ಟರು. ಅವರಿಂದಾಗಿ ಸುಮಾರು 30-40 ಜಾನಪದ ವಿದ್ವಾಂಸರು ಕೂಡ ಈ ಕೆಲಸದಲ್ಲಿ ಮುಂದುವರಿಯುವಂತಾಯಿತು ಎಂದರು.

ಜಾನಪದ ಕ್ಷೇತ್ರದಲ್ಲಿ ತಾವೇನಾದರೂ ಸಾಧನೆ ಮಾಡಿದ್ದಿದ್ದರೆ ಅದು ಕು.ಶಿ.ಯವರಿಂದ. ಯಕ್ಷಗಾನ ಕೆಂದ್ರದ ಮೂಲಕ ಕರ್ನಾಟಕ ಜಾನಪದ ಬೆಳವಣಿಗೆಗೆ ಅಪಾರ ಕೊಡುಗೆಗಳನ್ನು ನೀಡಿದರು. ಆ ಮೂಲಕ ‘ಹರಿದಾಸ ಭಟ್ಟರ’ ಯುಗ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದರು ಎಂದರು.

ಕು.ಶಿ.ಸಂಸ್ಮರಣಾ ಭಾಷಣ ಮಾಡಿದ ಡಾ.ಮಹಾಬಲೇಶ್ವರ ರಾವ್, ಉಡುಪಿಯನ್ನು ಸಾಂಸ್ಕೃತಿಕ ಕೇಂದ್ರವಾಗಿ ಮಾಡುವ ಮೂಲಕ ಇಲ್ಲಿನ ಜನರಿಗೆ ಕಲೆ, ಸಾಹಿತ್ಯ, ಸಂಗೀತ, ಜಾನಪದವನ್ನು ತೆರೆದಿಡುವ ಮಹೋನ್ನತ ಕೆಲಸ ಮಾಡಿದ್ದರು ಎಂದರು.

ಅವರು ಎಂ.ಜಿ.ಎಂ.ಕಾಲೇಜನ್ನು ಬೆಳೆಸಿದ ರೀತಿ, ಸಾಹಿತಿಯಾಗಿ, ಸಾಹಿತ್ಯ ಪರಿಚಾರಿಕೆಯಾಗಿ ಬೆಳೆದ ರೀತಿ ಹಾಗೂ ಶೈಕ್ಷಣಿಕ ಕೇಂದ್ರ ಜ್ಞಾನಾಧಾರಿತ ಕೇಂದ್ರವಾಗಿ ರೂಪುಗೊಳ್ಳಬೇಕು ಎನ್ನುವ ಆಸೆಯಿಂದ ಕೆಲಸ ಮಾಡಿದ ರೀತಿ ಅನನ್ಯ. ನಿಜಕ್ಕೂ ಅವರು ಪರಂಪರೆಯ ದೃಷ್ಟಿ ಹಾಗೂ ಆಧುನಿಕತೆಯ ಸಂಗಮವಾಗಿದ್ದರು. ಪ್ರಸ್ತುತ ಸನ್ನಿವೇಶದಲ್ಲಿ ನಾವು ಸಾಂಸ್ಕೃತಿಕ ಪುಢಾರಿಗಳನ್ನು ನೋಡಬಹುದು, ಆದರೆ ಕು.ಶಿ.ಯವರಂತಹ ಸಂಸ್ಕೃತಿ ನೇತಾರರನ್ನು ನೋಡಲು ಸಾಧ್ಯವಿಲ್ಲ ಎಂದು ಸ್ಮರಿಸಿಕೊಂಡರು.

ಪ್ರೊ. ಎಚ್. ಕೃಷ್ಣಭಟ್ಟರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಚ್. ಶಾಂತಾರಾಂ ಅಧ್ಯಕ್ಷತೆ ವಹಿಸಿದ್ದರು.  ಚೆನ್ನೈನ ನ್ಯಾಷನಲ್ ಪೋಕ್ಲೋರ್ ಸಪೋರ್ಟ್ ಸೆಂಟರ್ ಸದಸ್ಯ ಪ್ರೊ.ಕೆ.ರಾಮದಾಸ್ ಉಪಸ್ಥಿತರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT