ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಕಾಳಜಿಯ ನಾಯಕ ನಿಜಲಿಂಗಪ್ಪ

ಶಿವಮೂರ್ತಿ ಮುರುಘಾ ಶರಣರ ಅಭಿಮತ
Last Updated 11 ಡಿಸೆಂಬರ್ 2013, 9:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಾನವ ಪರ ಕಾಳಜಿ ಇಟ್ಟುಕೊಂಡು ಕೊನೆಯವರೆಗೂ ಜೀವನ ನಡೆಸುವ ವ್ಯಕ್ತಿ ಕೊನೆಯಲ್ಲಿ ಆದರ್ಶ ವಾಗಿರುತ್ತಾರೆ. ಈ ಸಾಲಿನಲ್ಲಿ ನಿಜಲಿಂಗಪ್ಪ ಅವರ ತತ್ವ, ಸಿದ್ಧಾಂತಗಳು ಆದರ್ಶವಾಗಿ ಸೃಷ್ಟಿ ಇರುವವರೆಗೂ ಉಳಿಯುತ್ತವೆ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸೀಬಾರದ ನಿಜಲಿಂಗಪ್ಪರ ಸ್ಮಾರಕದ ಬಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್‌ನ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಅವರ 111ನೇ ಜಯಂತಿ ಅಂಗವಾಗಿ ನಿಜಲಿಂಗಪ್ಪರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ದೇಶದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ವಿವಿಧ ಮಹಾಪುರುಷರ ಆದರ್ಶವಾದಗಳಿವೆ. ಈ ಎಲ್ಲ ವಾದಗಳ ನಡುವೆ ಸಾತ್ಮಿಕ, ತಾತ್ವಿಕ ಹಾಗೂ ಸೈದ್ಧಾಂತಿಕ ವಾದವಾಗಿ ಗಟ್ಟಿತನದಿಂದ ನೆಲೆಯೂರಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಆಸ್ತಿ ಮಾಡುವುದೇ ದೊಡ್ಡಸ್ಥಿಕೆಯಾಗಿದೆ. ಆದರೆ, ನಿಜಲಿಂಗಪ್ಪ ಅವರ ವಿಚಾರದಲ್ಲಿ ಆದರ್ಶವೇ ಆಸ್ತಿ. ತಮ್ಮ ಮಕ್ಕಳು, ಪ್ರತಿಷ್ಠೆ ಹಾಗೂ ಸ್ವಾರ್ಥ ದೂರವಿಟ್ಟು ಆಡಳಿತ ನಡೆಸಿದವರು. ನಿಜಲಿಂಗಪ್ಪ ಹಾಗೂ ನೆಲ್ಸನ್ ಮಂಡೇಲಾ ಇಬ್ಬರು ತಮ್ಮ ಸ್ವಾರ್ಥಕ್ಕಾಗಿ ಏನನ್ನೂ ಬಳಸಿಕೊಳ್ಳದೇ ತಮ್ಮ ಜೀವನ ಪೂರ್ತಿ ಜನಸಾಮಾನ್ಯರ ಉದ್ಧಾರಕ್ಕಾಗಿ ಸ್ವಂದಿಸಿದ್ದಾರೆ.

ರಾಜಕಾರಣದಲ್ಲಿ ಅಧಿಕಾರದ ಮೂಲಕ ಜನರು ಹಾಗೂ ಜಗತ್ತನ್ನು ತಲುಪುವ ನಿಟ್ಟಿನಲ್ಲಿ ಕೆಲವೇ ಕೆಲವರು ಮಾತ್ರ ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಡೇಲಾ ವರ್ಣಭೇದ ನೀತಿ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದರು. ಅಧಿಕಾರಕ್ಕೆ ಬಂದು ಸ್ವಾತಂತ್ರ್ಯ ತಂದು ಕೊಡುವ ಮೂಲಕ ಎಲ್ಲರಿಗೂ ಬದುಕನ್ನು ಕಟ್ಟಿಕೊಟ್ಟವರು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ತಮ್ಮ ರಾಜಕೀಯ ಜೀವನದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಬಂದಂತಹ ನಿಜಲಿಂಗಪ್ಪ ಅವರು ಬಯಸಿದ್ದರೆ ದೇಶದ ರಾಷ್ಟ್ರಪತಿಯಾಗಿ ಮೆರೆಯಬಹುದಿತ್ತು. ಆದರೆ, ಅಧಿಕಾರ ಬಯಸದೇ, ಸಮಾಜವಾದಿ, ಜಾತ್ಯತೀತ ತತ್ವದಡಿ ಎಲ್ಲ ಸಮುದಾಯಗಳನ್ನು ಒಟ್ಟಾಗಿ ಕರೆದೊಯ್ಯಲು ಶ್ರಮಿಸಿದರು. ಅವರ ಆದರ್ಶ ಇಂದಿನ ಯುವಪೀಳಿಗೆಗೆ ಮಾರ್ಗದರ್ಶನ ಆಗಬೇಕು ಎಂದರು.

ಹಿಂದೆ ವಿಧಾನಸಭೆಯಲ್ಲಿ ರಾಜ್ಯದ ಜನರಿಗೆ ಅನುಕೂಲವಾಗುವ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಇಂದು ಕೇವಲ ಗುಡಿ, ಗೋಪುರ, ಭವನ ಕಟ್ಟುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಅಂದಿನ ಹಾಗೂ ಇಂದಿನ ರಾಜಕಾರಣಿಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ ಎಂದು ತಿಳಿಸಿದರು. ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ, ವಾಣಿಜ್ಯೋದ್ಯಮಿ ಜೈನುಲ್ಲಾಬ್ದಿನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT