ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿಧಿಗಳಂತೆ ವರ್ತಿಸದಿರಿ

Last Updated 30 ನವೆಂಬರ್ 2011, 9:45 IST
ಅಕ್ಷರ ಗಾತ್ರ

ಉಡುಪಿ: `ಉಡುಪಿ ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳ ಕೆಲಸ ಮಾಡುತ್ತಿದ್ದಾರೆ, ಸದಸ್ಯರು ಅಧಿಕಾರಿಗಳು ಮಾಡಬೇಕಾದ ಕೆಲಸ ಮಾಡುತ್ತಿದ್ದಾರೆ~ ಎಂದು ಶಾಸಕ ರಘುಪತಿ ಭಟ್ ಇಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕೆಲ ಸದಸ್ಯರು ಮಣಿಪಾಲದ ಹುಡ್ಕೋ ಕಾಲನಿ ಹಾಗೂ ಲಕ್ಷ್ಮೀಂದ್ರ ನಗರದಲ್ಲಿ ಅನಧಿಕೃತವಾಗಿ ಕೆಲ ಕಟ್ಟಡಗಳನ್ನು ಕಟ್ಟಲಾಗುತ್ತಿದೆ ಹಾಗೂ ಬಹಳಷ್ಟು ಕಡೆ ಸೆಟ್‌ಬ್ಯಾಕ್ ಬಿಡದೇ ಸಮಸ್ಯೆ ಆಗಿದೆ ಎಂದು ಆಕ್ಷೇಪಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಉತ್ತರ ನೀಡಲು ಯತ್ನಿಸಿದಾಗ ಮಧ್ಯೆ ಪ್ರವೇಶಿಸಿದ ಶಾಸಕರು, `ನಗರಸಭೆ ಅಧಿಕಾರಿಗಳು ಇವನ್ನೆಲ್ಲ ನೋಡುವುದಿಲ್ಲವೇ? ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟುಾಗಲೇ ಅಧಿಕಾರಿಗಳು ಅವನ್ನೆಲ್ಲ ಪರಿಶೀಲಿಸಿ ಸೆಟ್‌ಬ್ಯಾಕ್ ಬಿಡದೇ ಕಟ್ಟಿದ್ದರೆ ಒಡೆದು ಹಾಕಬೇಕು. ಜೆಸಿಬಿ ತೆಗೆದುಕೊಂಡು ಹೋಗಿ ನಾಲ್ಕು ಅಕ್ರಮ ಕಟ್ಟಡ ಒಡೆದು ಹಾಕಿ, ಆಗ ಅಂಥವರಿಗೆಲ್ಲ ಬುದ್ಧಿ ಬರುತ್ತದೆ.  ನೀವು ಜನಪ್ರತಿನಿಧಿಗಳಂತೆ ಮೆದುವಾಗಿ ವರ್ತಿಸಿದರೆ ಅಕ್ರಮವಾಗಿ ಕಟ್ಟುವವರು ಇನ್ನೂ ಮುಂದುವರಿಸುತ್ತಾರೆ. ನೀವು ಕಾನೂನು ಬದ್ಧವಾಗಿ ಕೆಲಸ ಮಾಡಿ~ ಎಂದು ಸೂಚಿಸಿದರು.

`ಉಡುಪಿಯಲ್ಲಿಯಂತೂ ಮಾಹಿತಿ ಹಕ್ಕು ಹಾಗೂ ಲೋಕಾಯುಕ್ತದ ಹಾವಳಿಯಿಂದಾಗಿ ಅಧಿಕಾರಿಗಳು ಕಿಂಚಿತ್ತೂ ತಮ್ಮ  ವ್ಯಾಪ್ತಿಬಿಟ್ಟು ಹೋಗುವಂತಿಲ್ಲ, ನೀವು ಕೆಲಸ ಮಾಡುವುದೇ ಕಷ್ಟವಾಗಿದೆ ನಿಜ, ಹೀಗಾಗಿ ನೀವು ಕಾನೂನು ಬದ್ಧವಾಗಿ ಕೆಲಸ ಮಾಡಿ, ಜನಪ್ರತಿಧಿಗಳಿಗೆ ಜನರ ಕಷ್ಟ, ತೊಂದರೆಗಳಿಗೆ ಸ್ಪಂದಿಸುವ ಅಗತ್ಯವಿರುತ್ತದೆ. ಅಧಿಕಾರಗಳು ಕಾನೂನು ಕಟ್ಟಳೆ ವ್ಯಾಪ್ತಿ ಮೀರಿ ಕೆಲಸ ಮಾಡುವುದು ಬೇಡ~ ಎಂದರು.

ನಿವೇಶನಕ್ಕಾಗಿ 1000 ಅರ್ಜಿ ಬಾಕಿ; ಸರ್ಕಾರಿ ಜಾಗವಿಲ್ಲ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಕೋರಿ ಅಲ್ಲಿಸಿದ ಅರ್ಜಿಗಳಲ್ಲಿ ಇನ್ನೂ 1000 ಅರ್ಜಿಗಳು ಬಾಕಿ ಇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕ ರಘುಪತಿ ಭಟ್, ಈ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವಿಲ್ಲ, ಖಾಸಗಿ ಜಾಗವನ್ನು ಖರೀದಿಸಿ ಪಡೆಯಬಹುದು, ಆದರೆ ಅದು ಬಲು ದುಬಾರಿ. ಈ ಹಿನ್ನೆಲೆಯಲ್ಲಿ ಮಣಿಪಾಲ, ಬೀಡಿನಗುಡ್ಡೆ ಹಾಗೂ ಕೊಡಂಕೂರಿನಲ್ಲಿ ಬಹುಮಹಡಿ ವಸತಿ ಸಮುಚ್ಚಯವನ್ನು ನಿರ್ಮಾಣ ಮಾಡಲು ಕೂಡ ಉದ್ದೇಶಿಸಲಾಗಿದೆ. ಆದರೆ ಆ ಬಗ್ಗೆ ಇನ್ನೂ ಯೋಜನೆ ಚರ್ಚೆಯ ಹಂತದಲ್ಲಿದೆ ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ಗೂಡಂಗಡಿ: ನಗರಸಭೆ ವ್ಯಾಪ್ತಿಯಲ್ಲಿ ಗೂಡಂಗಡಿಗಳಿಗೆ ಎಲ್ಲಿಯೂ ಅವಕಾಶವಿಲ್ಲ, ಸಾರ್ವಜನಿಕರಿಗೆ ತೊಂದರೆ ಆಗುವಂತೆ ಗೂಡಂಗಡಿ ಮಾಡಿಕೊಳ್ಳುವುದನ್ನು ನಗರಸಭೆ ವ್ಯಾಪ್ತಿಯಲ್ಲಿ ಸಹಿಸುವುದಿಲ್ಲ. ಅಲ್ಲದೇ ನಗರಸಭೆ ಬೈಲಾದಲ್ಲಿ ಗೂಡಂಗಡಿಗೆ ಅವಕಾಶವಿಲ್ಲ, ಇಲ್ಲಿ ಯಾವುದೇ ಪಕ್ಷ, ಜಾತಿ, ಬಡವ-ಶ್ರೀಮಂತ ಎನ್ನುವುದನ್ನು ನಾವು ಪರಿಗಣಿಸುವುದಿಲ್ಲ ಎಂದು ಸದಸ್ಯರ ಪ್ರಶ್ನೆಯೊಂದಕ್ಕೆ ಅಧ್ಯಕ್ಷ ಕಿರಣ್ ಕುಮಾರ್ ಉತ್ತರಿಸಿದರು.

ಪರ್ಯಾಯಕ್ಕೆ ಮುಖ್ಯಮಂತ್ರಿಗಳಿಂದ ರೂ.1 ಕೋಟಿ ಅನುದಾನ: ಕಿನ್ನಿಮೂಲ್ಕಿ-ಬಲೈ ಪಾದೆ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಅಲ್ಲಿ ಸೇತುವೆಯೊಂದನ್ನು ಕೂಡಲೇ ಸಿದ್ಧಪಡಿಸಿಕೊಡುವಂತೆ ಸದಸ್ಯ ಡಾ.ಎಂ.ಆರ್.ಪೈ ಆಗ್ರಹಿಸಿದರು.
 
ಅಲ್ಲದೇ ಜನವರಿಯಲ್ಲಿ ಪರ್ಯಾಯ ಬರುತ್ತಿದ್ದು ಅಷ್ಟರೊಳಗೆ ಸುಂದರ ಉಡುಪಿಯಾಗುವಂತೆ ಮಾಡಬೇಕಾಗಿದೆ. ಆದರೆ ಇನ್ನೂ ಹಲವೆಡೆ ರಸ್ತೆ ದುರಸ್ತಿಯಾಗಬೇಕಿದೆ ಎಂದರು.

ಅದಕ್ಕೆ ಉತ್ತರಿಸಿದ ಶಾಸಕ ರಘುಪತಿ ಭಟ್ ಪರ್ಯಾಯದೊಳಗೆ ನಗರದ ಹಲವು ರಸ್ತೆಗಳನ್ನು ಸುಧಾರಿಸಲಾಗುವುದು. ಮುಖ್ಯಮಂತ್ರಿ ರೂ.1ಕೋಟಿ ಅನುದಾನ ಬಿಡುಗಡೆ ಮಾಡಲಿದ್ದಾರೆ. ರಸ್ತೆ ಅಭಿವೃದ್ಧಿಗಾಗಿ 15 ದಿನಗಳ ಶಾರ್ಟ್‌ಟೆಂಡರ್ ಕರೆಯಲಾಗಿದೆ.

ಈ ಬಾರಿ ಲೋಕೋಪಯೋಗಿ ಇಲಾಖೆಯಿಂದ ರೂ.19.85 ಕೋಟಿ ಅನುದಾನ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ದೊರಕಿದೆ. ಹೀಗಾಗಿ ಬಹಳಷ್ಟು  ಕಾಮಗಾರಿಗಳನ್ನು ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಪೌರಾಯುಕ್ತ ಗೋಕುಲದಾಸ್ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT