ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿ ಅನರ್ಹತೆ: ಅರ್ಜಿ ವಜಾ

Last Updated 4 ಸೆಪ್ಟೆಂಬರ್ 2013, 20:29 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಅಪರಾಧ ಕೃತ್ಯಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ, ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಜೈಲು ಶಿಕ್ಷೆಗೆ ಒಳಪಡುವ ಸಂಸದರು ಅಥವಾ ಶಾಸಕರನ್ನು ಕೂಡಲೇ ಅನರ್ಹಗೊಳಿಸಬೇಕೆನ್ನುವ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಕೇಂದ್ರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾ ಮಾಡಿದೆ.

`ಸುಪ್ರೀಂಕೋರ್ಟ್ ಈ ಕಾಯ್ದೆಯನ್ನು ವ್ಯಾಖ್ಯಾನಿಸಿರುವುದಕ್ಕೆ ಅತೃಪ್ತಿ ಇದ್ದಲ್ಲಿ ಕಾನೂನಿಗೆ ತಿದ್ದುಪಡಿ ತರಲು ಸಂಸತ್ ಮುಕ್ತವಾಗಿದೆ' ಎಂದು ನ್ಯಾಯಮೂರ್ತಿಗಳಾದ ಎ.ಕೆ.ಪಟ್ನಾಯಕ್ ಮತ್ತು ಎಸ್.ಜೆ.ಮುಖ್ಯೋಪಾಧ್ಯಾಯ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ವಾದ ಮಾಡಲು ಇಷ್ಟಪಡದ ಕೇಂದ್ರದ ನಿಲುವನ್ನು ಕೂಡ ಪೀಠವು ಪ್ರಶ್ನಿಸಿತು.

`ಜನಪ್ರತಿನಿಧಿ ಕಾಯ್ದೆ ಸಂಕೀರ್ಣವಾಗಿದ್ದು, ಗೊಂದಲಕ್ಕೆ ಕಾರಣವಾಗಿದೆ. ಆದರೆ, ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಚುನಾವಣೆಯಿಂದ ದೂರು ಇಡುವುದು ಇದರ ಉದ್ದೇಶ' ಎಂದು ಕೋರ್ಟ್ ಹೇಳಿತು.

`ಯಾವುದೇ ಅಪರಾಧ ಕೃತ್ಯದಲ್ಲಿ ತಪ್ಪಿತಸ್ಥರೆಂದು ರುಜುವಾತಾದ, ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಒಳಪಡಬಹುದಾದ ಜನಪ್ರತಿನಿಧಿಗಳನ್ನು ತಕ್ಷಣವೇ ಅನರ್ಹಗೊಳಿಸಬೇಕು ಹಾಗೂ ಜೈಲಿನಲ್ಲಿರುವ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಬೇಕು' ಎಂದು ಜುಲೈ 10ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ಈ ತೀರ್ಪನ್ನು ಉಲ್ಲೇಖಿಸಿದ ಪೀಠ, `ಹೊರ ನೋಟಕ್ಕೆ ಈ ಕಾಯ್ದೆಯಲ್ಲಿ  ದೋಷ ಕಂಡುಬರುವುದಿಲ್ಲ. ಆದರೆ ಇದರ ವ್ಯಾಖ್ಯೆಯಲ್ಲಿ ಲೋಪ ಇರಬಹುದು. ತೀರ್ಪಿನಲ್ಲಿ ದೋಷ ಇಲ್ಲದ ಕಾರಣ ಸಂಸತ್ ಇದನ್ನು ಒಪ್ಪಿಕೊಂಡಿತ್ತು. ನಂತರದಲ್ಲಿ ಪ್ರಜಾಪ್ರತಿನಿಧಿ ತಿದ್ದುಪಡಿ ಕಾಯ್ದೆಯನ್ನು ರಾಜ್ಯಸಭೆ ಅಂಗೀಕರಿಸಿತ್ತು' ಎಂದು ಹೇಳಿತು. `ನಾವು ಪ್ರಭಾವಕ್ಕೆ ಒಳಗಾಗಿಲ್ಲ. ಇದನ್ನು ಉತ್ತಮ ತೀರ್ಪು ಎಂದೇ ಪರಿಗಣಿಸಲಾಗಿದೆ. ಎಲ್ಲರೂ ಇದನ್ನು ಒಪ್ಪಿಕೊಳ್ಳಬೇಕು. ಈ ತೀರ್ಪನ್ನು ಸಂಸತ್ ಒಪ್ಪಿಕೊಂಡಿದ್ದಕ್ಕೆ ನಮಗೆ ಖುಷಿಯಾಗಿದೆ' ಎಂದು ಪೀಠ ತಿಳಿಸಿತು.

ಮತ್ತೊಂದು ಅರ್ಜಿ ಮಾನ್ಯ: ಜೈಲಿನಲ್ಲಿರುವ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ವಿಚಾರಣೆಗೊಳಪಡಿಸಲು ಪೀಠ ಒಪ್ಪಿಕೊಂಡಿತು. ಮುಂದಿನ ವಿಚಾರಣೆಯನ್ನು ಅ. 23ಕ್ಕೆ ನಿಗದಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT