ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯ ಲೇಖಕನ ನಿರ್ಲಕ್ಷ್ಯ ಅಕ್ಷಮ್ಯ; ಕುಂ ವೀ

ನಾ.ಡಿಸೋಜ ಅವರಿಗೆ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನೆ
Last Updated 2 ಜನವರಿ 2014, 10:12 IST
ಅಕ್ಷರ ಗಾತ್ರ

ಶಿವಮೊಗ್ಗ: ಜನಪ್ರಿಯ ಲೇಖಕನ ಬಗ್ಗೆ ಗಂಭೀರ ಸಾಹಿತಿಯ ನಿರ್ಲಕ್ಷ್ಯ ಅಕ್ಷಮ್ಯವಾದದ್ದು ಎಂದು ಸಾಹಿತಿ ಕುಂ.ವೀರಭದ್ರಪ್ಪ ಟೀಕಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ನಾ.ಡಿಸೋಜ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮನ್ನು ತಾವೇ ಶ್ರೇಷ್ಠ ಎಂದುಕೊಂಡ ಕೆಲ ಲೇಖಕರು ಜನಪ್ರಿಯ ಪತ್ರಿಕೆಗಳಿಗೆ ಬರೆಯುವವರ ಬಗ್ಗೆ ಅಸಡ್ಡೆಯ ಭಾವನೆ ಬೆಳೆಸಿಕೊಂಡಿರುತ್ತಾರೆ. ಅವರು ಆಯೋಗ್ಯರು ಎಂಬ ಭಾವನೆ ಇದೆ. ಆದರೆ, ಸಾಹಿತ್ಯ ಹಾಗೂ ಕನ್ನಡ ಭಾಷೆ ಬದುಕಿರುವುದೇ ಇಂತಹ ಪುಷ್ಕಳವಾಗಿ ಬರೆಯುವ ಸಾಹಿತಿಗಳಿಂದ ಹೊರತು, ಟಾಡಾ (ಟಿ.ಎ, ಡಿ.ಎ.) ಸಾಹಿತಿಗಳಿಂದ ಅಲ್ಲ ಎಂದು ವ್ಯಂಗ್ಯವಾಡಿದರು.

ಜನ ಬದುಕಬೇಕು ಎಂದು ಯಾರು ಬರೆಯುತ್ತಾರೆ ಅವರು ಒಳ್ಳೆಯ ಸಾಹಿತಿ ಎಂದು ಅಭಿಪ್ರಾಯಪಟ್ಟ ಅವರು, ಡಿಸೋಜ ಅವರು ವಿಶ್ವವಿದ್ಯಾಲಯದ ನೆರವು, ವಿಮರ್ಶಕರು ಸಹಕಾರ ಇಲ್ಲದೆ ಕೇವಲ ವಾಚಕರ ನೆರವಿನಿಂದ ಸಹಜವಾಗಿ ಬೆಳೆದ ಲೇಖಕ ಎಂದರು.

ಕೇವಲ ಜ್ಞಾನಪೀಠ ಸಾಹಿತಿಗಳ ಫೋಟೋಗಳನ್ನು ಮಾತ್ರ ಶಾಲಾ–ಕಾಲೇಜುಗಳಲ್ಲಿ ಹಾಕಲಾಗುತ್ತದೆ. ಆದರೆ, ಜ್ಞಾನಪೀಠ ದೊಡ್ಡ ಲಾಬಿ ಇದ್ದರೆ ಮಾತ್ರ ಸಿಗುವ ಪ್ರಶಸ್ತಿ. ಅದಕ್ಕಿಂತ ಏಳು ಕೋಟಿ ಕನ್ನಡಿಗರು ಆಯ್ಕೆ ಮಾಡುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಪಟ್ಟ ದೊಡ್ಡದು. ಇಂತಹವರ ಫೋಟೋ ಹಾಕುವ ಕೆಲಸ ಆಗಬೇಕು ಎಂದು ಕುಂ.ವೀರಭದ್ರಪ್ಪ ಸಲಹೆ ಮಾಡಿದರು.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಸರ್ಕಾರ ಶಾಶ್ವತವಾದ ಗೌರವ ಕೊಡಬೇಕು ಎಂದು ಪ್ರತಿಪಾದಿಸಿದ ಅವರು, ಅಧ್ಯಕ್ಷರು ಕೇವಲ ಉತ್ಸವ ಮೂರ್ತಿಯಾಗಬಾರದು; ಅವರ ಮಾತುಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ನಾ.ಡಿಸೋಜ ಅವರ ಮರುಮುದ್ರಣಗೊಂಡ ‘ಕೊಳಗ’ ಕಾದಂಬರಿ ಬಿಡುಗಡೆ ಮಾಡಲಾಯಿತು. ಈ ಕೃತಿ ಕುರಿತು ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್‌ ಚಂದ್ರಗುತ್ತಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ವಿಧಾನ ಪರಿಷತ್ತು ಸದಸ್ಯ ಆರ್‌.ಕೆ.ಸಿದ್ದರಾಮಣ್ಣ, ಸಮಾಜವಾದಿ ಹೋರಾಟಗಾರ ಕೋಣಂದೂರು ಲಿಂಗಪ್ಪ, ಕವಯತ್ರಿ ಡಾ.ಸ.ಉಷಾ, ರಾಜಶೇಖರ ನೆಗೆವಾಡಿ, ಎನ್‌.ಕೆ.ಶಂಕರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕುಮಾರ ಬೆಕ್ಕೇರಿ, ವಿವಿಧ ತಾಲ್ಲೂಕು ಸಾಹಿತ್ಯ ಕನ್ನಡ ಪರಿಷತ್ತು ಘಟಕದ ಅಧ್ಯಕ್ಷರು ಹಾಗೂ ಹೋಬಳಿ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.
ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜ್ ಸ್ವಾಗತಿಸಿದರು. ಡಾ.ಎಚ್‌.ಟಿ.ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

‘ಡಿಸೆಂಬರ್‌ನಲ್ಲಿ ನರ್ಸಿಂಗ್‌ ಹೋಂ ಸೇರಿಕೊಳ್ಳಿ’
ಡಿಸೆಂಬರ್‌ ತಿಂಗಳು ಬಂದರೆ ಆತಂಕವಾಗುತ್ತದೆ. ಸಾಹಿತಿಗಳು,  ಕಲಾವಿದರು, ಸಂಘಟಕರು ಈ ತಿಂಗಳು ಹೆಚ್ಚು ಸಾವು ಕಾಣುತ್ತಾರೆ. ಈ ಹಿನ್ನೆಲೆಯಲ್ಲಿ 50 ದಾಟಿದ ಸಾಹಿತಿಗಳೆಲ್ಲ ಆರೋಗ್ಯದ ಕಾಳಜಿ ವಹಿಸಲು ಡಿಸೆಂಬರ್‌ನಲ್ಲಿ ನರ್ಸಿಂಗ್‌ ಹೋಂ ಸೇರಿಕೊಳ್ಳುವುದು ಒಳ್ಳೆಯದು ಎಂದು ಕುಂ.ವೀ. ತಮ್ಮದೇ ಶೈಲಿಯಲ್ಲಿ ಸ್ವಾರಸ್ಯಕರವಾಗಿ ಹೇಳಿದರು.

  ಚಳಿಗೆ ರಕ್ತಕಣಗಳು ಹೆಪ್ಪುಗಟ್ಟಿ ಸಾವು ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಸಾಹಿತಿಗಳು ಈ ತಿಂಗಳಿನಲ್ಲಿ ತಮ್ಮ ಆರೋಗ್ಯದ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT