ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯತೆಯ ಹಾದಿಯಲ್ಲಿ ಬಜೆಟ್?

Last Updated 22 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಇದು ಬಜೆಟ್ ವಾರ. ಎಲ್ಲರ ಬಾಯಲ್ಲೂ ಈಗ ಬಜೆಟ್ ಮಂತ್ರ. ಜನಸಾಮಾನ್ಯರಿಂದ ಹಿಡಿದು ನೌಕರ ವರ್ಗ, ಕಾರ್ಪೊರೇಟ್ ಕ್ಷೇತ್ರ ಹೀಗೆ ಎಲ್ಲರಿಗೂ ಕುತೂಹಲ. ಅವರ ಅಪೇಕ್ಷೆ, ನಿರೀಕ್ಷೆಗಳೆಲ್ಲ ಗರಿಗೆದರುವ ಸಮಯ. ಈ ಬಾರಿ ಕೇಂದ್ರ ಬಜೆಟ್ ಮತ್ತು ರೈಲ್ವೆ ಬಜೆಟ್‌ಗೂ ಮೊದಲೇ ರಾಜ್ಯದ ಬಜೆಟ್ ಮಂಡನೆ ಆಗುತ್ತಿರುವುದು ವಿಶೇಷ. ಜೊತೆಗೆ ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಲಿರುವುದು ಕುತೂಹಲ ಕೆರಳಿಸಿದೆ.

ಜನಪ್ರಿಯತೆಯ ಹಳಿಯಲ್ಲೇ ಬಜೆಟ್ ಮಂಡಿಸುವ ಕಸರತ್ತಿಗೆ ಯಡಿಯೂರಪ್ಪ ಅವರು ಪ್ರಾರಂಭದಿಂದಲೂ ಹೆಜ್ಜೆ ಹಾಕುತ್ತಲೇ ಬಂದಿದ್ದಾರೆ. ಈ ವರ್ಷವೂ ಅದನ್ನೇ ನಿರೀಕ್ಷಿಸಬಹುದು. ಪ್ರಸಕ್ತ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೂ ಇದು ಸ್ಪಷ್ಟವಾಗಿದೆ. ಆದರೂ ಇದಕ್ಕಾಗಿ ಮುಖ್ಯಮಂತ್ರಿ ಅಥವಾ ಅವರ ಅಧಿಕಾರಿಗಳು ಭಾರಿ ಬೆವರು ಸುರಿಸಲೇಬೇಕಾಗಿದೆ. ಈ ಪರೀಕ್ಷೆಯಲ್ಲಿ ಯಡಿಯೂರಪ್ಪ ಅವರು ಎಷ್ಟರ ಮಟ್ಟಿಗೆ ಗೆಲ್ಲುತ್ತಾರೆ ಎಂಬುದೇ ಕುತೂಹಲಕ್ಕೆ ಕಾರಣ.

ಈ ಸಲದ ಬಜೆಟ್‌ನಲ್ಲಿ ಯಡಿಯೂರಪ್ಪ ಅವರು ಉಲ್ಲೇಖಿಸಬಹುದಾದ ಮೂರು ಪ್ರಮುಖ ವಿಭಾಗಗಳಿಂದ ಮುಂಗಡ ಪತ್ರವನ್ನು ಗುರುತಿಸಬಹುದು. ಇಂದಿನ ರಾಜಕೀಯ ಸನ್ನಿವೇಶಗಳನ್ನು ಕಂಡುಕೊಂಡಿರುವ ಅವರು ಬಜೆಟ್‌ನಲ್ಲಿ ಜನಪರವಾದ ಹಾಗೂ ಮೂಲಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡದೇ ಇರಲು ಸಾಧ್ಯವೇ ಇಲ್ಲ. ಇದು ಈ ಮುಂಗಡ ಪತ್ರದ ಪ್ರಮುಖ ಅಂಶವಾಗಲಿದೆ.

ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಪ್ರತಿಕೂಲವಾಗಿ ಬಾಧಿಸುವ ಹಣದುಬ್ಬರದಿಂದಾಗಿ ಬಜೆಟ್ ಅನ್ನು ಆತಂಕದಿಂದ ನೋಡುವ ಉದ್ಯಮ ರಂಗಕ್ಕೆ ಹಾಗೂ ಬಂಡವಾಳ ಹೂಡಿಕೆದಾರಿಗೆ ಸಹಾಯಕ ಆಗಬಲ್ಲ ಏನೇನು ಕೊಡುಗೆಗಳನ್ನು ಕೊಡಬಲ್ಲರು ಎಂಬುದು ಕೂಡ ಅಷ್ಟೇ ಪ್ರಮುಖ ಅಂಶವಾಗಲಿದೆ. ತೆರಿಗೆ ಹೊರೆಗಳನ್ನು ಕನಿಷ್ಠಗೊಳಿಸಿ ನೌಕರ ವರ್ಗ ಮತ್ತು ಜನಸಾಮಾನ್ಯರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಏನೇನು ಕಸರತ್ತು ಮಾಡುವರು ಎಂಬುದು ಮೂರನೇ ಪ್ರಮುಖ ಅಂಶವಾಗಲಿದೆ.

ಮುಂಗಡ ಪತ್ರದ ಈ ಮೂರು ಮುಖಗಳಿಂದ ಅದನ್ನು ಅಳೆಯಬಹುದು. ಇದರ ಜೊತೆಗೆ ಏಳೆಂಟು ಪ್ರಮುಖ ಇಲಾಖೆಗಳ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಕೃಷಿ ವಲಯಕ್ಕೆ ಪ್ರತ್ಯೇಕವಾದ ಬಜೆಟ್ ಮಂಡಿಸಲಿರುವುದರಿಂದ ಈ ಆಯಾಮದಿಂದಲೂ ಈ ಬಾರಿಯ ಬಜೆಟನ್ನು ನೋಡಬಹುದು.

ಜನಪ್ರಿಯತೆಗೆ ಒತ್ತು ನೀಡುತ್ತಲೇ ಹೋಗಿ ಪ್ರತಿ ವರ್ಷವೂ ಸಾಲದ ಪ್ರಮಾಣ ಹೆಚ್ಚುತ್ತಲೇ ಇರುವುದು ಕೂಡ ಗಮನಿಸಬೇಕಾದ ಅಂಶ.    2002ರಲ್ಲಿ ರಾಜ್ಯ ಸರ್ಕಾರ ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಜಾರಿಗೆ ತಂದ ಬಳಿಕವೂ ಸಾಲದ ಪ್ರಮಾಣ ಹೆಚ್ಚುತ್ತಲೇ ಹೋಗಿದೆ. ಸಾಲದ ಪ್ರಮಾಣ ಹೆಚ್ಚಾದಾಗ ಸಾಲಕ್ಕೆ ನೀಡುವ ಬಡ್ಡಿಯೂ ಅಧಿಕಗೊಂಡು ಅಭಿವೃದ್ಧಿಗೆ ಲಭ್ಯ ಇರಬೇಕಾದ ಸಂಪನ್ಮೂಲಗಳು ಬಡ್ಡಿ ನೀಡಲು ಉಪಯೋಗ ಆಗುತ್ತವೆ. ಇದು ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಆಗ ತೆರಿಗೆ ದರಗಳೂ ಹೆಚ್ಚಾಗುತ್ತವೆ.

2010-11ನೇ ಸಾಲಿನ ಬಜೆಟ್‌ನಲ್ಲಿ ಮೌಲ್ಯವರ್ಧಿತ ತೆರಿಗೆ ದರಗಳನ್ನು ಸ್ವಲ್ಪ ಮಟ್ಟಿಗೆ ಏರಿಸಲಾಗಿತ್ತು. ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಲಾಗಿತ್ತು. ಕೇಂದ್ರವು ಪೆಟ್ರೋಲಿಯಂ ಮೇಲಿನ ನಿಯಂತ್ರಣವನ್ನು ಸಡಿಲಗೊಳಿಸುತ್ತ ಅಬಕಾರಿ ಸುಂಕ ಹೆಚ್ಚಿಸುತ್ತಲೇ ಬಂದಿದೆ. ರಾಜ್ಯದಲ್ಲೂ ಈ ಕರ ಇತರ ರಾಜ್ಯಗಳಿಗೆ ಹೋಲಿಸಿದರೆ ತುಸು ಹೆಚ್ಚೇ ಇದೆ. ಇನ್ನಷ್ಟು ಕರಭಾರ ಹಾಕುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇಲ್ಲ ಎನ್ನಬಹುದು.

ರಾಜ್ಯದ ಯೋಜನಾ ಗಾತ್ರ ಎಷ್ಟೆಂಬುದು ಕೂಡ ಗಮನಾರ್ಹ ವಿಚಾರ. ಯೋಜನಾ ಗಾತ್ರಕ್ಕೆ ಇನ್ನೂ ಕೇಂದ್ರದ ಅನುಮೋದನೆ ಪಡೆಯಬೇಕಷ್ಟೆ. ಕೇಂದ್ರದ ಬಜೆಟ್‌ಗೂ ಮುನ್ನವೇ ರಾಜ್ಯ ಸರ್ಕಾರ ಬಜೆಟ್ ಮಂಡಿಸಲು ಹೊರಟಿದೆ.
13ನೇ ಹಣಕಾಸು ಆಯೋಗದ ಒಪ್ಪಿಗೆಯ ನಿರೀಕ್ಷೆ ಮೇರೆಗೆ ಬಜೆಟ್ ಗಾತ್ರವು ನಿರ್ಧಾರ ಆಗಲಿದೆ. ಹೀಗಾಗಿ ಪೂರ್ಣ ಪ್ರಮಾಣದ ಬಜೆಟ್ ಬದಲು ಇದೇ 24ರಂದು ಮುಖ್ಯಮಂತ್ರಿ ಅವರು ವಿಧಾನಸಭೆಯಲ್ಲಿ ಲೇಖಾನುದಾನ ಮಂಡನೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಕೃಷಿಗೆ ಮೀಸಲಿಡುವ ಅನುದಾನವನ್ನು ಪ್ರತ್ಯೇಕವಾಗಿ ತೋರಿಸಬಹುದು. ಈಚಿನ ವರ್ಷಗಳಲ್ಲಿ ಬಜೆಟ್ ಮಂಡನೆ ಬಳಿಕವೂ ಎರಡು-ಮೂರು ಬಾರಿ ಪೂರಕ ಅಂದಾಜಿನ ಕಂತುಗಳು ಮಂಡನೆ ಆಗುತ್ತಿರುವುದನ್ನು ನೋಡಿದರೆ ಬಜೆಟ್ ಬಗ್ಗೆ ಅಂತಹ ವಿಶ್ವಾಸ ಅಥವಾ ಪಾವಿತ್ರ್ಯತೆ ಉಳಿದಿಲ್ಲ.

ಬಜೆಟ್‌ನಲ್ಲಿ ಘೋಷಿಸಲಾಗುವ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದ ಬಗ್ಗೆಯೂ ಖಾತರಿ ಇಲ್ಲದಾಗಿದೆ.ಅದಕ್ಕಾಗಿಯೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ. ಆದರೆ ಅನುಷ್ಠಾನದ ಬಗ್ಗೆ ಮಾತ್ರ ಸರಿಯಾದ ಮಾಹಿತಿ ಇಲ್ಲ.

ರಾಜ್ಯದ ಅಭಿವೃದ್ಧಿಗೆಂದು 2020 ವಿಷನ್ ಗ್ರೂಪ್ ರಚಿಸಲಾಗಿದೆ. ಅಭಿವೃದ್ಧಿಯಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಏಳನೇ ಸ್ಥಾನದಲ್ಲಿದೆ. ಆದರೆ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಭ್ರಷ್ಟಾಚಾರ, ಮೂಲಸೌಲಭ್ಯಗಳ ಕೊರತೆ, ಪ್ರಾದೇಶಿಕ ಅಸಮಾನತೆಗಳ ನಡುವೆಯೂ ರಾಜ್ಯವು ಈ ನಿಟ್ಟಿನಲ್ಲಿ ಮುನ್ನಡೆಯಲ್ಲಿದೆ ಎಂದು ಗಮನಿಸಬೇಕಾದ ಅಂಶ.

ದೀರ್ಘಾವಧಿಯ ಮತ್ತು ಜನೋಪಯೋಗಿ ಯೋಜನೆಗಳತ್ತ ಒತ್ತು ನೀಡಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೇ ಆದಲ್ಲಿ ಅಭಿವೃದ್ಧಿ ಪಥದಲ್ಲೂ ಮುಂಚೂಣಿಯತ್ತ ಸಾಗಬಹುದು. ವಿದ್ಯುತ್, ಕುಡಿಯುವ ನೀರು, ಮೂಲಸೌಲಭ್ಯಗಳಂತಹ ಅಗತ್ಯ ವೆಚ್ಚಗಳಿಗೆ ಮುಖ್ಯಮಂತ್ರಿಯವರು ಸಾಕಷ್ಟು ಹಣ ಮೀಸಲು ಇಡುತ್ತಾರೆಯೇ ಎಂಬುದೂ ಗಮನಾರ್ಹವಾಗಿದೆ.
ಕೃಷಿಯ ಜೊತೆಜೊತೆಗೇ ಗ್ರಾಮೀಣಾಭಿವೃದ್ಧಿಗೂ ಒತ್ತು ಕೊಡಬೇಕಿದೆ. ಪ್ರತ್ಯೇಕ ಕೃಷಿ ಬಜೆಟ್‌ನ ಚೊಚ್ಚಲ ಕೊಡುಗೆಯಾಗಿ ರೈತರಿಗೆ ಸಾಲ ಮನ್ನಾದಂತಹ ಕಾರ್ಯಕ್ರಮಗಳನ್ನು ನಿರೀಕ್ಷಿಸಬಹುದು.

ಆದರೆ ಇದು ಒಟ್ಟಾರೆ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ. ನೌಕರ ವರ್ಗವನ್ನು ಖುಷಿ ಪಡಿಸುವ ನಿಟ್ಟಿನಲ್ಲೂ ಕೆಲವೊಂದು ಘೋಷಣೆಗಳನ್ನು ಈ ಬಾರಿಯ ಮುಂಗಡಪತ್ರದಲ್ಲಿ ಎದಿರುನೋಡಬಹುದು ಎನ್ನಲಾಗಿದೆ. ಮಠ-ಮಂದಿರ, ಯಾತ್ರಾ ಕೇಂದ್ರ, ವಿವಿಧ ಸಮುದಾಯಗಳ ಸಂಘ-ಸಂಸ್ಥೆಗಳಿಗೆ ಹೆಚ್ಚಿನ ನೆರವು ಈ ಬಜೆಟ್‌ನಲ್ಲೂ ಹರಿದುಬರಲಿದೆಯೇ ಎಂಬುದೂ ಕುತೂಹಲದ ವಿಷಯವಾಗಿದೆ.

ಕನಿಷ್ಠ-ಗರಿಷ್ಠ: ಮುಂಬರುವ ಹಣಕಾಸು ವರ್ಷದ ಆದಾಯ ಮತ್ತು ವೆಚ್ಚದ ಅಂದಾಜು ಪಟ್ಟಿ ಹೇಗಿರಬೇಕು ಎಂಬ ಚಿಂತನೆ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಆದಾಯವು ವೆಚ್ಚಕ್ಕೆ ಸಮನಾಗಿರಬೇಕು. ಇದು ಕನಿಷ್ಠ ಮೊತ್ತದ ಬಜೆಟ್ ಪ್ರತಿಪಾದನೆ ಎನ್ನಬಹುದು.

ಆದರೆ ಯಡಿಯೂರಪ್ಪ ಅವರು ತಮ್ಮ ಪ್ರಸಕ್ತ ಅಧಿಕಾರ ಅವಧಿಯ ಕೊನೆಯ ಸಾಲಿನ ಬಜೆಟ್ ರೂ.1 ಲಕ್ಷ ಕೋಟಿ ಗಾತ್ರದ್ದಾಗಿರಬೇಕು ಎಂಬ ಹಂಬಲ ಹೊತ್ತಿದ್ದಾರೆ. ಅಂದರೆ ಗರಿಷ್ಠ ಮೊತ್ತದ ಬಜೆಟ್ ಪ್ರತಿಪಾದನೆ ಇದು. ಇದಕ್ಕೆ ಅಗತ್ಯವಾದ ಭೂಮಿಕೆಗಳನ್ನು ಅಥವಾ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಲು ಯಾವ ಬಗೆಯ ಮಾರ್ಗಗಳನ್ನು ಅನುಸರಿಸುತ್ತಾರೆ ಎಂಬುದು ಮುಖ್ಯ.

ಇನ್ನು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಮುಂಗಡ ಪತ್ರ ಮಂಡಿಸಲು ಯಡಿಯೂರಪ್ಪನವರು ತೀರ್ಮಾನಿಸಿರುವುದನ್ನು ರೈತ ಸಂಘ ಸೇರಿದಂತೆ ರೈತರ ವೇದಿಕೆಗಳು ಸ್ವಾಗತಿಸಿವೆ. ಇದು ಪ್ರಚಾರ ಮತ್ತು ನೆಪಕ್ಕಾಗಿ ಆಗದೇ ವಾಸ್ತವಿಕತೆಯಿಂದ ಕೂಡಿರಬೇಕು ಎಂದು ಆಗ್ರಹಿಸಿವೆ. ರೈತಾಪಿ ವರ್ಗದ ಬೇಡಿಕೆಗಳ ಪಟ್ಟಿ ಉದ್ದ ಇದೆ.ಇವುಗಳಿಗೆ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಎಂಬುದು ಈ ಬಾರಿಯ ಬಜೆಟ್‌ಗೆ ಸಿಗುವ ಪ್ರತಿಕ್ರಿಯೆಯೂ ಆಗಲಿದೆ ಎಂಬುದಂತೂ ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT