ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮೆಚ್ಚುಗೆಯ ತಂತ್ರ

Last Updated 25 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಮುಂದಿನ ವರ್ಷ ಪಶ್ಚಿಮಬಂಗಾಳದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟ. ಅದನ್ನು ಈ ಸಲದ ರೈಲ್ವೆ ಬಜೆಟ್‌ನಲ್ಲಿಯೂ  ತೋರಿಸಿಕೊಂಡಿದ್ದಾರೆ. 15 ಸಬರ್ಬನ್ ರೈಲುಗಳು, ಮೆಟ್ರೊ ಬೋಗಿಗಳ ಕಾರ್ಖಾನೆಯಂಥ ಪ್ರಮುಖ ಯೋಜನೆಗಳನ್ನು ಪಶ್ಚಿಮ ಬಂಗಾಳಕ್ಕೆ ಒಯ್ದಿದ್ದಾರೆ.

69 ಹೊಸ ರೈಲುಗಳ ಆರಂಭ, ಕಾವಲಿಲ್ಲದ ರೈಲ್ವೆ ಕ್ರಾಸಿಂಗ್‌ಗಳಿಗೆ ಕಾವಲು ವ್ಯವಸ್ಥೆ, ರೈಲ್ವೆ ದುರಂತಗಳನ್ನು ತಡೆಯಲು ಡಿಕ್ಕಿ ತಡೆ ಉಪಕರಣಗಳನ್ನು ಎಂಟು ವಲಯಗಳಲ್ಲಿ ಅಳವಡಿಸುವುದು ಸೇರಿದಂತೆ ಪ್ರಯಾಣ ಸುರಕ್ಷತೆಯ ಕ್ರಮಗಳನ್ನು ಪ್ರಕಟಿಸಿದ್ದಾರೆ. ಇವೆಲ್ಲ ಆಗಬೇಕಾದ ಕಾರ್ಯಗಳು. ರೈಲ್ವೆ ಸಿಬ್ಬಂದಿಗೆ ಹೆಚ್ಚಿದ ವೇತನ, ಪರಿಷ್ಕೃತ ಪಿಂಚಣಿ, ರೈಲ್ವೆ ಸೇವೆಯನ್ನು ಬಹುವ್ಯಾಪಕವಾಗಿ ವಿಸ್ತರಿಸುವ ಯೋಜನೆಗಳೂ ಪ್ರಸ್ತಾಪಗೊಂಡಿವೆ.

ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಶ್ರೀಸಾಮಾನ್ಯರಿಗೆ ಭರವಸೆಯ ಸಂಚಾರ ಸೌಕರ್ಯ ನೀಡುತ್ತಿರುವ ರೈಲ್ವೆ ಸೇವೆ ಎಷ್ಟು ಆಧುನಿಕವಾದರೂ ಅದರ ಪ್ರಯೋಜನ ಜನತೆಗೆ ಲಭಿಸುತ್ತದೆ. ವೆಚ್ಚ, ಸುರಕ್ಷತೆ ಮತ್ತು ಅನುಕೂಲದ ದೃಷ್ಟಿಯಿಂದ ರೈಲು ಸಂಚಾರ ದೇಶದಲ್ಲಿ ಅತ್ಯಂತ ಜನಪ್ರಿಯ. ಈ ದೃಷ್ಟಿಯಿಂದ ರೈಲ್ವೆ ಸಚಿವರು ಪ್ರಸ್ತಾಪಿಸಿರುವ ರೈಲ್ವೆ ಸೇವೆ ವಿಸ್ತರಣೆಯ ಯೋಜನೆಗಳು ಅನುಷ್ಠಾನಗೊಳ್ಳುವುದು ಅವಶ್ಯಕವಿದೆ. ಜನಪ್ರಿಯ ಬಜೆಟ್ ಮಂಡಿಸಬೇಕೆನ್ನುವ ಉತ್ಸಾಹದಲ್ಲಿ ಸಂಪನ್ಮೂಲ ಹೆಚ್ಚಿಸಿಕೊಳ್ಳುವ ಬಗ್ಗೆ ಸಚಿವರು ಚಿಂತಿಸಿಲ್ಲ. ಪ್ರಯಾಣ ದರವನ್ನು ಹೆಚ್ಚಿಸಿಲ್ಲ. ಸರಕು ಸಾಗಣೆ ದರವನ್ನೂ ಪರಿಷ್ಕರಿಸಿಲ್ಲ.

ಜೊತೆಗೆ ಪ್ರಯಾಣಿಕರಿಗೆ ಇನ್ನಷ್ಟು ರಿಯಾಯಿತಿಗಳು. ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವುದಕ್ಕೆ ವಿಧಿಸುತ್ತಿದ್ದ ಶುಲ್ಕದಲ್ಲೂ ಕಡಿತ. ಪ್ರಯಾಣಿಕರ ಅವಶ್ಯಕತೆಗಾಗಿ ಹೆಚ್ಚಿನ ಸೌಕರ್ಯ ಕಲ್ಪಿಸುವ ಯೋಜನೆಗಳು ಒಳಗೊಂಡ ಇದು ಜನರನ್ನು ಮೆಚ್ಚಿಸುವ ಮುಂಗಡಪತ್ರ. ಮಮತಾ ಬ್ಯಾನರ್ಜಿ ಪಶ್ಚಿಮಬಂಗಾಳದ ಚುನಾವಣೆಯ ಮೇಲೆ ಕಣ್ಣಿಟ್ಟ ತಂತ್ರ. ಪ್ರಯಾಣದರ ಮತ್ತು ಸರಕು ಸಾಗಣೆ ದರ ಈ ಎರಡು ಬಾಬುಗಳನ್ನು ಹೊರತುಪಡಿಸಿದರೆ ರೈಲ್ವೆಗೆ ಬೇರೆ ಆದಾಯ ಮೂಲಗಳಿಲ್ಲ.

ಸಂಪನ್ಮೂಲವಿಲ್ಲದಿದ್ದರೆ ರೈಲ್ವೆ ಸೌಲಭ್ಯವನ್ನು ವಿಸ್ತರಿಸುವುದು ಸಾಧ್ಯವಿಲ್ಲ. ತತ್ಕಾಲದ ರಾಜಕೀಯ ಲಾಭವನ್ನಷ್ಟೆ ಗುರಿಯಾಗಿಟ್ಟುಕೊಂಡ ಸಚಿವೆ ಈ ಕುರಿತು ದೂರದೃಷ್ಟಿಯನ್ನು ಪ್ರದರ್ಶಿಸಿಲ್ಲ. ಜನಪ್ರಿಯತೆಯ ತಂತ್ರಗಳಿಂದ ರೈಲ್ವೆಯಂಥ ವಿಸ್ತೃತ ಸಾರಿಗೆ ಸಂಪರ್ಕ ಸಂಸ್ಥೆ ಸದೃಢವಾಗದು. ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನ ಇಲ್ಲಿ ಕಾಣುತ್ತಿಲ್ಲ.ಈ ಸಲದ ರೈಲ್ವೆ ಬಜೆಟ್ ಕರ್ನಾಟಕವನ್ನು ಕಡೆಗಣಿಸಿಲ್ಲವಾದರೂ ಉತ್ತರ ಕರ್ನಾಟಕದ ಬೇಡಿಕೆಗಳಾದ  ಹರಿಹರ- ಕೊಟ್ಟೂರು ರೈಲು ಮಾರ್ಗದ ಪ್ರಸ್ತಾಪವಿಲ್ಲ. ಹುಬ್ಬಳ್ಳಿ- ಹೈದರಾಬಾದ್ ನಡುವಣ ನೇರ ರೈಲು ಸಂಪರ್ಕ ಆ ಭಾಗದ ಬಹುದಿನದ ಬೇಡಿಕೆ.

ಕೆಲವು ಹೊಸ ರೈಲುಗಳು ಮಂಜೂರಾಗಿವೆ. ಕೆಲವು ರೈಲುಗಳ ಮಾರ್ಗ ವಿಸ್ತರಣೆಯಿಂದ ರಾಜ್ಯದ ಜನತೆಗಿಂತ ಹೊರಗಿನಿಂದ ಬರುವವರಿಗೆ ಅನುಕೂಲವಾಗುತ್ತದೆ. ರೈಲ್ವೆ ಕೈಗಾರಿಕಾ ತರಬೇತಿ ಸಂಸ್ಥೆ ಧಾರವಾಡದಲ್ಲಿ ತಲೆ ಎತ್ತಲಿದೆ. ಕೆಲವು ರೈಲು ಮಾರ್ಗಗಳ ಸಮೀಕ್ಷೆಯ ಪ್ರಸ್ತಾಪವೂ ಆಗಿದೆ. ಕಳೆದ ಬಜೆಟ್‌ನಲ್ಲಿಯೂ ಇಂಥ ಸಮೀಕ್ಷೆಯ ಹಲವು ಪ್ರಸ್ತಾಪಗಳನ್ನು ಮಾಡಲಾಗಿತ್ತು.

ಸಮೀಕ್ಷೆಯನ್ನು ಪ್ರಸ್ತಾಪಿಸುವುದೆಂದರೆ ಆ ಪ್ರದೇಶದ ಜನರ ಬೇಡಿಕೆಯನ್ನು ಮುಂದಕ್ಕೆ ಹಾಕುವುದು ಎಂಬುದೇ ಈವರೆಗಿನ ಅನುಭವ. ಬೆಂಗಳೂರು ಮೈಸೂರು ನಡುವಣ ಜೋಡಿ ಮಾರ್ಗ ಆರಂಭವಾಗಿ ದಶಕಗಳು ಕಳೆದರೂ ಇನ್ನೂ ಮುಗಿಯುವ ಸೂಚನೆ ಕಾಣುತ್ತಿಲ್ಲ. ಮೈಸೂರು -ಶಿವಮೊಗ್ಗ ರೈಲನ್ನು ತಾಳಗುಪ್ಪಕ್ಕೆ ವಿಸ್ತರಿಸುವುದು ಹೊಸ ಸೌಲಭ್ಯವೇನಲ್ಲ. ಹಿಂದೆ ಇದ್ದ ಮಾರ್ಗದ ಸುಧಾರಣೆ, ಜಾರಿಯಲ್ಲಿರುವ ರೈಲ್ವೆ ಯೋಜನೆಗಳು ಬೇಗ ಮುಗಿದು ಜನರ ಬಳಕೆಗೆ ಸಿಗುವಂತೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT