ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಕೈಯ್ಯ್ಲ್ಲಲೇ ನಿಮಗೆ ಒದೆಸಬೇಕಾಗುತ್ತದೆ...

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಾಮನಗರ: ನಾಲ್ಕು ವರ್ಷಗಳಿಂದ ಇಲ್ಲಿನ ಅಧಿಕಾರಿಗಳು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಿಲ್ಲ. ನೀವುಗಳು ಇದೇ ಪರಿಸ್ಥಿತಿಯಲ್ಲಿ ಮುಂದುವರೆದರೆ ಜನರ ಕೈಯಲ್ಲೇ ನಿಮಗೆ ಒದೆಸಬೇಕಾಗುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಸಿದರು.

ನಗರದ ಜ್ಲ್ಲಿಲಾಧಿಕಾರಿಗಳ ಕಚೇರಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ನೀರು ಸರಬರಾಜು ಮಂಡಳಿಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ತಮ್ಮ ಕೆಲಸ ನಿರ್ವಹಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ಗೌರವ ಕೊಡಬೇಕು ಎಂಬ ಭಾವನೆಯಿಂದ ಸುಮ್ಮನಿದ್ದೆ. ಆದರೆ ಇನ್ನು ಸುಮ್ಮನಿರಲು ಆಗುವುದಿಲ್ಲ. ನೀವೆಲ್ಲಾ ಸಂಬಳ ತೆಗೆದುಕೊಳ್ಳುತ್ತೀರಿ. ಬೇಜಾವಬ್ದರಿತನದಿಂದ ವರ್ತಿಸದೇ ಪ್ರಾಮಾಣಿಕವಾಗಿ ಕೆಲಸ ಮಾಡಿ. ಇನ್ನು ನಾಲ್ಕೈದು ತಿಂಗಳಲ್ಲಿ ಹೊಸ ಸರ್ಕಾರ ರಚನೆಯಾದಾಗ ನಿಮ್ಮೆಲ್ಲರ ತಲೆದಂಡವಾಗುತ್ತದೆ ಎಂದು ಅವರು ಗುಡುಗಿದರು.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಗರದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡುವ ದೃಷ್ಟಿಯಿಂದ 26 ಕೋಟಿ ರೂ.ಗಳ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಯಾವುದೇ ತೊಂದರೆ ಇಲ್ಲದಿದ್ದರೂ ಸಕಾಲದಲ್ಲಿ ಯೋಜನೆ ಪೂರ್ಣವಾಗಿಲ್ಲ. ಇದು ಅಧಿಕಾರಿಗಳ ಬೇಜಾವಾಬ್ದಾರಿತನ ತೋರಿಸುತ್ತದೆ ಎಂದು ಸಿಡಿಮಿಡಿಗೊಂಡರು.

2006-2007ರಲ್ಲಿ ನಗರದಲ್ಲಿ 1800 ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡುವ ಯೋಜನೆಯನ್ನು ಜಾರಿಗೆ ತರಲಾಯಿತು. ಇದಕ್ಕಾಗಿ 26 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಯಿತು. ಆದರೆ ಯೋಜನೆ ಪ್ರಾರಂಭಗೊಂಡು 5 ವರ್ಷಗಳು ಕಳೆದರೂ, ಫಲಾನುಭವಿಗಳಿಗೆ ಮನೆಯನ್ನು ನೀಡಲು ಸಾಧ್ಯವಾಗಿಲ್ಲ.

ಮನೆಗಳನ್ನು ನಿರ್ಮಾಣ ಮಾಡಿ ವಸತಿ ರಹಿತರಿಗೆ ನೀಡಬೇಕು ಎನ್ನುವ ಉದ್ದೇಶದಿಂದ ಕೊಳಚೆ ನಿರ್ಮೂಲನಾ ಮಂಡಳಿ, ರಾಜೀವ್‌ಗಾಂಧಿ ವಸತಿ ನಿಗಮ ಮತ್ತು ನಿರ್ಮಿತಿ ಕೇಂದ್ರಗಳಿಗೆ ಮನೆಗಳನ್ನು ನಿರ್ಮಾಣ ಮಾಡುವ ಕೆಲಸ ವಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.


ಅಧಿಕಾರಿಗಳ ಬೇಜವಾಬ್ದಾರಿತನವನ್ನು ಕಳೆದ ನಾಲ್ಕು ವರ್ಷಗಳಿಂದ ಸಹಿಸಿಕೊಂಡು ಬಂದಿದ್ದೇನೆ. ಮನೆ ನಿರ್ಮಿಸಿ ಬಡವರಿಗೆ ನೀಡುವ ವಿಚಾರದಲ್ಲಿ ಅಧಿಕಾರಿಗಳಲ್ಲಿ ಸಮನ್ವಯತೆಯ ಕೊರತೆ ಇದೆ. ಡಿಸೆಂಬರ್ ಅಂತ್ಯಕ್ಕೆ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಡವರು ಸಾಲಮಾಡಿ ಹಣ ಕಟ್ಟಿದ್ದಾರೆ. ಇವರಿಗೆ ತೊಂದರೆಯಾಗಲು ಬಿಡುವುದಿಲ್ಲ. ಅಧಿಕಾರಿಗಳೇ ಹೇಳಿರುವಂತೆ ಡಿಸೆಂಬರ್ ಅಂತ್ಯಕ್ಕೆ ಮನೆಗಳನ್ನು ನೀಡದಿದ್ದರೆ ಅಧಿಕಾರಿಗಳಿಗೆ ಜನಸಾಮಾನ್ಯರಿಂದಲೇ ತಕ್ಕಶಾಸ್ತಿ ಕಾದಿದೆ ಎಂದು ಎಚ್ಚರಿಸಿದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ನಡೆದಿರುವ ಲೋಪಗಳನ್ನು ಸರಿಪಡಿಸಿಕೊಂಡು ಸಮರ್ಪಕ ನೀರು ಸರಬರಾಜಿಗೆ ಮುಂದಾಗದಿದ್ದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ನೀರು ಪೂರೈಕೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ತೊರೆಕಾಡನ ಹಳ್ಳಿಯಿಂದ ಬರುವ ನೀರು ಚನ್ನಪಟ್ಟಣದಲ್ಲಿ ಸಮರ್ಪಕವಾಗಿ ಪೂರೈಕೆಯಾಗುತ್ತಿದ್ದರೂ ರಾಮನಗರಕ್ಕೆ ಬರುವ ವೇಳೆಗೆ ಹಲವಾರು ಕಡೆ ಸೋರಿಕೆಯಾಗಿ ನಗರದ ಜನತೆ ನೀರಿಲ್ಲದೆ ಪರಿತಪಿಸುವಂತಾಗಿದೆ. ಸರ್ಕಾರದ ಸಂಬಳ ಪಡೆದು ಕೆಲಸ ಮಾಡುವ ಅಧಿಕಾರಿಗಳು ಮೊದಲು ಜನರ ತೊಂದರೆಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಅವರು ಕಿಡಿ ಕಾರಿದರು.

ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಜಲಮಂಡಳಿ ಎಂಜಿನಿಯರ್ ಜಯರಾಂ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಿದ್ದೀರಿ. ಪುನಃ ಅವರನ್ನು ಮೊದಲಿನ ಸ್ಥಾನಕ್ಕೆ ನಿಯೋಜಿಸಿರಿ. ಎಲ್ಲವನ್ನೂ ಸರಿದೂಗಿಸಿಕೊಂಡು ನಗರದ ಜತೆಗೆ ತೊಂದರೆಯಾಗದಂತೆ ನೀರು ಪೂರೈಕೆ ಮಾಡುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಶಾಸಕ ಕೆ.ರಾಜು, ವಿಧಾನ ಪರಿಷತ್ ಸದಸ್ಯ ಅಫ್ಸರ್ ಆಗಾ, ಜಿಲ್ಲಾಧಿಕಾರಿ ವಿ.ಶ್ರಿರಾಮರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ಉಪ ವಿಭಾಗಾಧಿಕಾರಿ ಡಾ.ಸಿ.ವಿ. ಸ್ನೇಹಾ, ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಸಿದ್ದರಾಮಯ್ಯ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT