ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ದೂರುಗಳಿಗೆ ವಾರದಲ್ಲಿ ಪರಿಹಾರ

Last Updated 20 ಜನವರಿ 2012, 8:45 IST
ಅಕ್ಷರ ಗಾತ್ರ

ಮೈಸೂರು: ಸಾರ್ವಜನಿಕರು ನೀಡಿರುವ ದೂರು ಗಳಲ್ಲಿ ಬಾಕಿಯಿರುವುದನ್ನು ಒಂದು ವಾರದಲ್ಲಿ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುರುವಾರ ತಮ್ಮ ಕಚೇರಿಯಲ್ಲಿ ನಡೆಸಿದ ಫೋನ್-ಇನ್ ನೇರ ಕಾರ್ಯಕ್ರಮದಲ್ಲಿ ಸಾರ್ವ ಜನಿಕರ ದೂರು ಆಲಿಸಿದ ಅವರು, ಬಾಕಿಯಿರುವ ಹಳೆಯ ದೂರುಗಳ ಪರಿಶೀಲನೆಯನ್ನೂ ನಡೆಸಿದರು.

`ಜಿಲ್ಲಾ ಪಂಚಾಯ್ತಿಯಲ್ಲಿ ಬಾಕಿ ದೂರುಗಳ ಸಂಖ್ಯೆಯು ಎರಡಂಕಿಯಿಂದ ಒಂದಂಕಿಗೆ ಇಳಿದಿರು ವುದು ಉತ್ತಮ ಬೆಳವಣಿಗೆ. ಇದು ನಿರಂತರವಾಗಿ ನಡೆದು ಎಲ್ಲ ಸಮಸ್ಯೆಗಳಿಗೂ ಸ್ಪಂದಿಸಬೇಕು~ ಎಂದು ಹೇಳಿದರು.

ಬೆರಳೆಣಿಕೆಯಷ್ಟು ಕರೆಗಳು: ಕೆಲವು ಇಲಾಖೆಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ಗೈರು ಹಾಜರಿ ಯಲ್ಲಿಯೇ ನಡೆದ ಕಾರ್ಯಕ್ರಮದಲ್ಲಿ ಬಂದ ಕೆಲವೇ ಕರೆಗಳಿಗೆ ಜಿಲ್ಲಾಧಿಕಾರಿಗಳು ಉತ್ತರಿಸಿದರು.

ಕೆ.ಆರ್. ನಗರದಿಂದ ಕರೆ ಮಾಡಿದ್ದ ವ್ಯಕ್ತಿ ಯೊಬ್ಬರು, `ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪುರಸಭೆಯ ಆಸ್ತಿಯನ್ನು ಒತ್ತುವರಿ ಮಾಡಲಾಗಿದೆ. ಒಂದು ತಿಂಗಳ ಹಿಂದೆ ಪುರಸಭೆಗೆ ದೂರು ನೀಡಲಾಗಿತ್ತು. ಆ ತಿಂಗಳ ಫೋನ್ ಇನ್ ಕಾರ್ಯಕ್ರಮದಲ್ಲಿ ನಿಮ್ಮ ಗಮನಕ್ಕೂ ತರಲಾಗಿತ್ತು. ಆದರೆ ಇಲ್ಲಿಯ ಕಾರ್ಯನಿರ್ವಹ ಣಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಈಗ ಪುರಸಭೆ ಜಾಗದಲ್ಲಿಯೇ ಮನೆಯನ್ನು ಕಟ್ಟಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ~ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಸ್ತ್ರದ್, `ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ವರಿಗೆ ಸೂಚಿಸಲಾಗುವುದು~ ಎಂದು ಭರವಸೆ ನೀಡಿದರು.

ಹುಣಸೂರಿನಿಂದ ಕರೆ ಮಾಡಿದ ಸಂಜಯ್ ಎಂಬುವವರು. `ಲಕ್ಷ್ಮಣತೀರ್ಥ ನದಿಗೆ ಕೊಳಚೆ ನೀರು ಬಿಡಲಾಗುತ್ತಿದ್ದು ಈ ಬಗ್ಗೆ ಹಲವು ಬಾರಿ ದೂರು ನೀಡಲಾಗಿದೆ~ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, `ನದಿಗೆ ಕೊಳಚೆ ನೀರು ಬರದಂತೆ ತಡೆಯುವ ಕಾಮಗಾರಿ ಆರಂಭವಾಗಿದೆ. ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ನದಿ ಸಮೀಪದ ಸರ್ಕಾರಿ ಜಾಗ ನೀಡಲಾಗುತ್ತಿದೆ. ಕೆಲವೇ ಸಮಯದಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ~ ಎಂದು ಭರವಸೆ ನೀಡಿದರು.

ಹುಣಸೂರಿನಿಂದ ಫೋನಾಯಿಸಿದ ಸುಧಾ ಎಂಬುವವರು,  `ನಮ್ಮ ಮನೆಯಲ್ಲಿ ಜನವರಿ 9ರಂದು ಕಳ್ಳತನವಾಗಿದೆ. ದೂರು ನೀಡಿದ್ದೇವೆ. ದಯವಿಟ್ಟು ಹುಡುಕಿಕೊಡಿ~ ಎಂದು ಅಳುತ್ತಲೇ ಮನವಿ ಮಾಡಿದರು.
`ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗುವುದು~ ಎಂದು ಜಿಲ್ಲಾಧಿಕಾರಿಗಳು ಉತ್ತರಿಸಿದಾಗ, ಪೊಲೀಸ್ ಇಲಾಖೆಯ ಅಧಿಕಾರಿ ಗಳು ಯಾರೂ ಸಭೆಯಲ್ಲಿ ಇರಲಿಲ್ಲ. ಆದರೆ ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಿದ ಹೆಚ್ಚುವರಿ ಎಸ್ಪಿ ವೆಂಕಟಸ್ವಾಮಿ ಅವರಿಗೆ ಈ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸುವಂತೆ ತಿಳಿಸಿದರು.

ಚಾಮುಂಡಿ ವಿಹಾರ ಬಡಾವಣೆಯ ಕುರಿತ ಲಿಖಿತ ದೂರಿನ ಪರಿಶೀಲನೆ ಸಂದರ್ಭದಲ್ಲಿಯೂ ಆ ಇಲಾಖೆಯ ಅಧಿಕಾರಿಗಳು ಹಾಜರಿರಲಿಲ್ಲ. ಅರಣ್ಯ ಇಲಾಖೆಗೆ ಸಂಬಂಧಪಟ್ಟ ದೂರಿಗೂ ಯಾರೂ ಇರಲಿಲ್ಲ. ಇದರಿಂದ ಬೇಸರಗೊಂಡ ಜಿಲ್ಲಾಧಿಕಾರಿಗಳು, `ಅರಣ್ಯ ಇಲಾಖೆಗೆ ಈ ಬಗ್ಗೆ ನೋಟಿಸ್ ನೀಡಲಾಗಿದ್ದರೂ ಪ್ರತಿಕ್ರಿಯೆ ಸಿಕ್ಕಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಹಲವಾರು ದೂರುದಾರರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT