ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಪರದಾಟ, ಸಿಬ್ಬಂದಿ ಪೇಚಾಟ

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಕೋ ಎನ್ನುತ್ತಿದ್ದ ನಿಲ್ದಾಣಗಳು, ಪ್ರಯಾಣಿಕರ ಪರದಾಟ, ಸಿಬ್ಬಂದಿಯ ಪೇಚಾಟ, ಬಾಗಿಲು ಮುಚ್ಚಿದ ಅಂಗಡಿ ಮುಂಗಟ್ಟುಗಳು, ನಡೆದೇ ಸಾಗಿದ ಜನರು... ರಾಜ್ಯ ಬಂದ್ ಹಿನ್ನೆಲೆಯಲ್ಲಿ ಶನಿವಾರ ನಗರದ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ಸೆಟಲೈಟ್ ಬಸ್ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯಗಳಿವು. ಬಂದ ಬಗ್ಗೆ ಸೂಕ್ತ ಮಾಹಿತಿ ದೊರೆಯದೆ ನಗರಕ್ಕೆ ಆಗಮಿಸಿದ ಮಕ್ಕಳು ಮಹಿಳೆಯರು ವೃದ್ಧರು ತೊಂದರೆ ಅನುಭವಿಸಿದರು.

ಹಿರೇಕೆರೂರು, ಶಿವಮೊಗ್ಗ, ಮಂಗಳೂರು. ಚಿಕ್ಕಮಗಳೂರು, ಚಿಂತಾಮಣಿ ಸೇರಿದಂತೆ ವಿವಿಧ ಡಿಪೊಗಳಿಗೆ ಸೇರಿದ ಬಸ್‌ಗಳಿಗೆ ರಾಜ್ಯದ ವಿವಿಧೆಡೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ನಗರದಿಂದ ಹೊರಡುವ ಬಸ್‌ಗಳನ್ನು ಸಂಜೆ 6ರವರೆಗೆ ತಡೆಹಿಡಿಯಲು ಕೆಎಸ್‌ಆರ್‌ಟಿಸಿ ನಿರ್ಧರಿಸಿತು. 200 ವೋಲ್ವೊ ಬಸ್‌ಗಳು ಸೇರಿದಂತೆ  ಸುಮಾರು 5000 ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದವು.

ಸೇಲಂ, ಕೃಷ್ಣಗಿರಿ ಕೇರಳದ ವಿವಿಧ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ತಿರುಪತಿ, ಮಾಲೂರು, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಬೈಯ್ಯಪ್ಪನಹಳ್ಳಿ  ನಿಲ್ದಾಣ, ಚೆನ್ನೈ, ಧರ್ಮಪುರಿ ಮುಂತಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಶಾಂತಿನಗರ ಸೆಟಲೈಟ್ ಬಸ್ ನಿಲ್ದಾಣದಲ್ಲಿ ವಾಹನ ಹಾಗೂ ಜನರ ಓಡಾಟ ವಿರಳವಾಗಿತ್ತು.

ಅಲ್ಲದೇ ಹೈದರಾಬಾದ್, ಮುಂಬೈ, ಪುಣೆ, ತಿರುವನಂತಪುರ, ಪಣಜಿ ಇತ್ಯಾದಿ ಕಡೆಗೆ ತೆರಳುವ ಹೊರರಾಜ್ಯದ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಬಂದ್ ಬಗ್ಗೆ ಸೂಕ್ತ ಮಾಹಿತಿ ಹೊಂದಿರದ ಹೊರರಾಜ್ಯದ ಪ್ರಯಾಣಿಕರು ಹಾಗೂ ವಿದೇಶಿ ಪ್ರವಾಸಿಗರು ತೀವ್ರ ತೊಂದರೆ ಅನುಭವಿಸಿದರು. ವಿಚಾರಣಾ ಕೇಂದ್ರದಲ್ಲಿ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

ಕೂರಲು ಸ್ಥಳವಿಲ್ಲ: ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಎಂಟಿಸಿ ಬಸ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಬೇರೆ ಊರುಗಳು ಹಾಗೂ ನೆರೆಯ ರಾಜ್ಯಗಳಿಂದ ನಗರಕ್ಕೆ ಬಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಅಲ್ಲದೇ ಬೆಂಗಳೂರು ನಗರ ವಾಸಿಗಳಿಗೂ ಇದರ ಬಿಸಿ ತಟ್ಟಿತು. ಅಹಿತಕರ ಘಟನೆಗಳು ನಡೆಯುವ ಭೀತಿಯಿಂದ ಹಳೆಯ ಬಸ್‌ಗಳನ್ನು ಮಾತ್ರ ರಸ್ತೆಗಿಳಿಸಿದ್ದ ಬಿಎಂಟಿಸಿ ಬೆಳಿಗ್ಗೆ 10ರಿಂದ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿತು. ಬಿಎಂಟಿಸಿಯ ಸುಮಾರು 5000ಕ್ಕೂ ಹೆಚ್ಚು ಬಸ್‌ಗಳು ರಸ್ತೆಗಿಳಿಯಲಿಲ್ಲ.

ಇತ್ತ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜನ ಸಂಚಾರದ ಮೇಲೆ ಕೂಡ ನಿರ್ಬಂಧ ಹೇರಲಾಗಿತ್ತು. ಕೆಲವು ಸಿಬ್ಬಂದಿ ಲಾಠಿ ಹಿಡಿದು ನಿಲ್ದಾಣ ಪ್ರವೇಶಿಸದಂತೆ ಪ್ರಯಾಣಿಕರಿಗೆ ಎಚ್ಚರಿಸುತ್ತಿದ್ದರು. ದೂರದಿಂದ ಬಂದಿದ್ದ ಬಸ್ ಪ್ರಯಾಣಿಕರು ಕೂರಲು ಸ್ಥಳವಿಲ್ಲದೇ ಪರದಾಡಿದರು. ಸಾರ್ವಜನಿಕ ಸ್ಥಳದಲ್ಲಿ ಕೂಡ ಕೂರಲು ಅವಕಾಶವಿಲ್ಲದ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸಿದರು.

‘ರಿಸ್ಕ್ ಟ್ರಾನ್ಸ್‌ಪೋರ್ಟ್’: ನಗರ ರೈಲು ನಿಲ್ದಾಣ, ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಪ್ರೀಪೇಯ್ಡೆ ಆಟೊ ಸೇವೆ ಮತ್ತು ಟ್ಯಾಕ್ಸಿ ಲಭ್ಯವಿತ್ತು. ಆದರೆ ಇತರೆ ಸ್ಥಳಗಳಲ್ಲಿ ಈ ಸೌಲಭ್ಯವಿಲ್ಲದ ಕಾರಣ ಜನ ಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಯಿತು. ಆಟೊ ಚಾಲಕರು ಸಾರ್ವಜನಿಕರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಟೊ ಚಾಲಕರು ‘ಬಂದ್ ಮುಂತಾದ ತುರ್ತುಸಂದರ್ಭಗಳಲ್ಲಿ ’ರಿಸ್ಕ್ ಟ್ರಾನ್ಸಪೋರ್ಟ್’ ಇರುತ್ತದೆ. ವಾಹನ ಹಾಗೂ ಚಾಲಕರಿಗೆ ಆಗಬಹುದಾದ ಹಾನಿಯನ್ನೂ ಲೆಕ್ಕಿಸದೇ ಪ್ರಯಾಣ ಕೈಗೊಳ್ಳಬೇಕಾಗುತ್ತದೆ.
 
ಹೀಗಾಗಿ ಸಾಮಾನ್ಯ ದಿನಗಳಿಗಿಂತ ಹೆಚ್ಚು ಹಣ ತೆರಲೇ ಬೇಕಾಗುತ್ತದೆ’ ಎಂದರು. ಆಸ್ಪತ್ರೆ, ಕಚೇರಿಗಳಿಗೆ ಹೊರಟಿದ್ದ ಸಾರ್ವಜನಿಕರು ಬೇರೆ ಮಾರ್ಗವಿಲ್ಲದೆ ಹೆಚ್ಚಿನ ಹಣ ಕೊಟ್ಟು ಆಟೊ, ಟ್ಯಾಕ್ಸಿಗಳಲ್ಲೇ ಪ್ರಯಾಣಿಸುವಂತಾಯಿತು. ಕೇವಲ 10 ಕಿ.ಮೀ ದೂರದ ಪ್ರಯಾಣಕ್ಕೆ ಮುನ್ನೂರರಿಂದ 600 ರೂವರೆಗೆ ವಸೂಲಿ ಮಾಡಲಾಗುತ್ತಿತ್ತು.

ನಡೆದೇ ಸಾಗಿದ ಜನ:  ಸಾರ್ವಜನಿಕ ಸಾರಿಗೆಯೂ ಲಭ್ಯವಾಗದೇ ದುಬಾರಿ ಹಣವನ್ನು ತೆರಲಾರದೇ ಅನೇಕ ಮಂದಿ ನಗರದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲು ಕಾಲ್ನಡಿಗೆಯನ್ನೇ ಆಶ್ರಯಿಸಿದರು. ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂ, ಎಂ.ಜಿ.ರಸ್ತೆ, ವಿಧಾನಸೌಧ, ಟೌನ್‌ಹಾಲ್, ಶ್ರೀರಾಂಪುರ, ಕೆ.ಆರ್.ಮಾರುಕಟ್ಟೆ ಕಡೆಗೆ ಅನೇಕ ಮಂದಿ ನಡೆದೇ ಸಾಗಿದರು. ಸಂಜೆಯ ವೇಳೆಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಚಾರ ಆರಂಭಿಸಿದವು. ಕೆಎಸ್‌ಆರ್‌ಟಿಸಿಯ ಸುಮಾರು 1300 ಬಸ್‌ಗಳು ರಾಜ್ಯದ ವಿವಿಧೆಡೆಗೆ ಪ್ರಯಾಣ ಬೆಳೆಸಿದವು. ಸಂಜೆ ಆರು ಗಂಟೆ ನಂತರ ಬಿಎಂಟಿಸಿ ಸಂಚಾರ ಆರಂಭಿಸಿದಾಗ ಹಲವು ಬಸ್‌ಗಳಲ್ಲಿ ನೂಕುನುಗ್ಗಲು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT