ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಬಳಿಗೆ ಕಾಂಗ್ರೆಸ್ ನಡಿಗೆ

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಾಯಕರು ಮತ್ತು ಕಾರ್ಯಕರ್ತರ ನಡುವೆ `ಭಾವನಾತ್ಮಕ ಸಂಬಂಧ~ ಬೆಸೆಯಲು ಮತ್ತು ಪಕ್ಷದ ಸಂಘಟನೆಗೆ ಆದ್ಯತೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ಉದ್ದೇಶದಿಂದ `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಎಂಬ ಘೋಷವಾಕ್ಯದಡಿ ಇದೇ 15ರಿಂದ ರಾಜ್ಯದ ಎಲ್ಲ ಬೂತ್‌ಗಳಲ್ಲಿ ಸಭೆ ನಡೆಸಲಿದೆ.

ಗುರುವಾರ ಇಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು, `ಇದೇ 15 ರಿಂದ ರಾಜ್ಯದ 44,666 ಬೂತ್‌ಗಳಲ್ಲಿ ಪಕ್ಷದ ಸಭೆ ನಡೆಯಲಿದೆ, ಪಕ್ಷದ ಯೋಜನೆಗಳು, ಧ್ಯೇಯೋದ್ದೇಶಗಳ ಕುರಿತು ಕಾರ್ಯಕರ್ತರಿಗೆ ತಿಳಿವಳಿಕೆ ನೀಡುವ ಈ ಸಭೆಯ ಮೂಲಕ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ನಡುವೆ ಉತ್ತಮ ಸಂಬಂಧ ಬೆಸೆಯುವ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗುವುದು~ ಎಂದು ತಿಳಿಸಿದರು.

ರಾಜ್ಯದ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳೂ ಇನ್ನೊಂದು ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಅಲ್ಲಿನ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯ ಪೂರ್ಣಗೊಳಿಸಲು 60 ದಿನಗಳ ಗಡುವು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರೂ ಸಾಮಾನ್ಯ ಕಾರ್ಯಕರ್ತರಂತೆಯೇ ಭಾಗವಹಿಸಬೇಕು, ಕಾರ್ಯಕರ್ತರ ಪ್ರತಿಕ್ರಿಯೆ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.

`ವೈಫಲ್ಯ ತಿಳಿಸುವೆವು~: ರಾಜ್ಯ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಮತ್ತು ಕೇಂದ್ರ ಸರ್ಕಾರ ನೀಡಿದ ಅನುದಾನ ಹೇಗೆ ಖರ್ಚಾಗಿದೆ ಎಂಬ ಬಗ್ಗೆ ಕರಪತ್ರದ ಮೂಲಕ ಕಾಂಗ್ರೆಸ್ ರಾಜ್ಯದ ಜನತೆಗೆ ಮಾಹಿತಿ ನೀಡಲಿದೆ ಎಂದು ತಿಳಿಸಿದರು.

`ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು ನಿರ್ಮಿಸುವ ಕುರಿತು ಕಾಂಗ್ರೆಸ್ ನಾಯಕರು ಪ್ರಮಾಣ ವಚನ ಸ್ವೀಕರಿಸುವ ಪದ್ಧತಿ ಇನ್ನು ಜಾರಿಗೆ ಬರಲಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಕೆಲಸವನ್ನೂ ಇಂದಿನಿಂದಲೇ ಆರಂಭಿಸುತ್ತೇವೆ, ಇಲ್ಲಿ ಯುವಕರಿಗೆ ಸೂಕ್ತ ಪ್ರಾಧಾನ್ಯ ನೀಡುತ್ತೇವೆ~ ಎಂದು ವಿವರಿಸಿದರು.

ಜೆ-ನರ್ಮ್ ಸೇರಿದಂತೆ ಕೇಂದ್ರ ಸರ್ಕಾರದ ಅನುದಾನದ ಅಡಿ ಜಾರಿಯಾದ ಯೋಜನೆಗಳಲ್ಲಿ ಕೇಂದ್ರದ ಪ್ರತಿನಿಧಿಗಳ ಭಾವಚಿತ್ರವನ್ನು ರಾಜ್ಯ ಸರ್ಕಾರ ಹಾಕುತ್ತಿಲ್ಲ ಎಂದು ಆರೋಪಿಸಿದ ಅವರು, `108 ಆಂಬುಲೆನ್ಸ್ ಸೇವೆ ಸೇರಿದಂತೆ ಕೇಂದ್ರದ ಅನುದಾನದಡಿ ಜಾರಿಯಾದ ಎಲ್ಲ ಯೋಜನೆಗಳಲ್ಲಿ ಕೇಂದ್ರದ ಪ್ರತಿನಿಧಿಯೊಬ್ಬರ ಭಾವಚಿತ್ರವನ್ನು ಹಾಕದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಆ ಕೆಲಸ ಮಾಡಲಿದ್ದಾರೆ~ ಎಂದು ಎಚ್ಚರಿಕೆ ನೀಡಿದರು.

`ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ~

ಬೆಂಗಳೂರು: ವಿಧಾನ ಮಂಡಲದ ಅಧಿವೇಶನದಲ್ಲಿ ಭಾಗವಹಿಸುವ ಕುರಿತು ಶುಕ್ರವಾರ ಬೆಳಿಗ್ಗೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

`ಅಧಿವೇಶನದಲ್ಲಿ ಭಾಗವಹಿಸುವ ಕುರಿತು ಅಂತಿಮ ಕ್ಷಣದಲ್ಲಿ ನಿರ್ಣಯ ತೆಗೆದುಕೊಳ್ಳುವುದು ಪಕ್ಷದ ರಾಜಕೀಯ ತಂತ್ರ. ಆದರೆ, ನಿಲುವಳಿ ಸೂಚನೆಗೆ ಅವಕಾಶ ನೀಡಿದರೆ ಅಧಿವೇಶನದಲ್ಲಿ ಭಾಗವಹಿಸುತ್ತೇವೆ~ ಎಂದು ಉತ್ತರಿಸಿದರು. `ಸದನದಲ್ಲಿ ಬುಧವಾರ ವಿಶ್ವಾಸಮತ ಯಾಚಿಸಿ ಎಂದು ನಾವಂತೂ ಮುಖ್ಯಮಂತ್ರಿಗಳನ್ನು ಕೇಳಿರಲಿಲ್ಲ. ರಾಜ್ಯಪಾಲರೂ ಸೂಚಿಸಿರಲಿಲ್ಲ. ವಿಶ್ವಾಸಮತ ಕೋರುವುದಕ್ಕೂ ಮುನ್ನ ನಮ್ಮ ಜೊತೆ ಮುಖ್ಯಮಂತ್ರಿಗಳು ಚರ್ಚಿಸಬಹುದಿತ್ತು~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT