ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸಮಸ್ಯೆಗೆ ಸ್ಪಂದಿಸಿ, ಇಲ್ಲವೇ ಮನೆಯಲ್ಲಿರಿ

Last Updated 28 ಜನವರಿ 2012, 6:00 IST
ಅಕ್ಷರ ಗಾತ್ರ

ಹಿರಿಯೂರು: ಹಳ್ಳಿಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಿದ್ದರೆ ಕರ್ತವ್ಯದಲ್ಲಿ ಇರಿ, ಇಲ್ಲವಾದರೆ ರಜೆ ಪಡೆದು ಮನೆಯಲ್ಲಿರಿ. ಹದ್ದು ಮೀರಿ ವರ್ತಿಸಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಡಿ. ಸುಧಾಕರ್ ಅವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಅಕ್ರಮ ಮರಳು ಕಡಿವಾಣಕ್ಕೆ ತಾಕೀತು: ತಾಲ್ಲೂಕಿನ ತೊರೆಓಬೇನಹಳ್ಳಿ, ಬುರುಡುಕುಂಟೆ, ಮ್ಯಾದನಹೊಳೆ, ಸಮುದ್ರದಹಳ್ಳಿ, ಹೂವಿನಹೊಳೆ ಮೊದಲಾದ ಕಡೆ ಜೆಸಿಬಿ ಯಂತ್ರ ಬಳಸಿ ವೇದಾವತಿ ಮತ್ತು ಸುವರ್ಣಮುಖಿ ನದಿಯಲ್ಲಿನ ಮರಳನ್ನು 35- 40 ಅಡಿವರೆಗೂ ತುಂಬುತ್ತಿರುವ ಕಾರಣ ನದಿಪಾತ್ರದ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡತೊಡಗಿದೆ ಎಂದು ಪಿಡಿಒಗಳು ಶಾಸಕರಿಗೆ ತಿಳಿಸಿದಾಗ, ಸಭೆಯಲ್ಲಿದ್ದ ತಹಶೀಲ್ದಾರರಿಗೆ ಮತ್ತೊಮ್ಮೆ ಅಕ್ರಮ ಮರಳು ದಂಧೆಯ ಬಗ್ಗೆ ದೂರು ಬರದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಸಮಾಲೋಚಿಸಿ ಎಂದು ಸುಧಾಕರ್ ತಿಳಿಸಿದರು.

ಸಮುದ್ರದಹಳ್ಳಿಯ ಹತ್ತಿರ ಮರಳು ತುಂಬುವುದಕ್ಕೆ ಕಡಿವಾಣ ಹಾಕಲಾಗಿದೆ ಎಂದು ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ತಿಳಿಸಿದಾಗ, ಹೂವಿನಹೊಳೆ ಗ್ರಾಮದ ಕಡೆಯಿಂದ ಬಂದು ಮರಳು ತುಂಬಲಾಗುತ್ತಿದೆ. ನದಿಯಲ್ಲಿನ ಮರಳು ಪೂರ್ಣ ಖಾಲಿಯಾಗಿದೆ. ಈ ಕಾರಣದಿಂದ ಕುಡಿವ ನೀರಿಗೆ ತೀವ್ರ ತೊಂದರೆಯಾಗಿದೆ ಎಂದು ಅಲ್ಲಿನ ಪಿಡಿಒ ಸ್ಪಷ್ಟಪಡಿಸಿದರು.

ರಂಗನಾಥಪುರದಲ್ಲಿ ನೀರಿದ್ದರೂ ಕೊಳವೆಗಳು ಕಟ್ಟಿಕೊಂಡಿರುವ ಕಾರಣ ನೀರು ಪೂರೈಕೆ  ಮಾಡಲಾಗುತ್ತಿಲ್ಲ. ಸಮುದ್ರದಹಳ್ಳಿಯಲ್ಲಿ ಮರಳು ತುಂಬುತ್ತಿರುವ ಕಾರಣಕ್ಕೆ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಅಂತರ್ಜಲ ಕನಿಷ್ಠ 50-60 ಅಡಿ ಕುಸಿದಿದೆ ಎಂದು ಅಲ್ಲಿನ ಪಿಡಿಒ ಸಭೆಯ ಗಮನಕ್ಕೆ ತಂದಾಗ, ತಕ್ಷಣ ಕೊಳವೆ ಮಾರ್ಗಗಳನ್ನು ಬದಲಾಯಿಸಿ ನೀರು ಪೂರೈಕೆ ಮಾಡಿ ಎಂದು ಶಾಸಕರು ಸೂಚಿಸಿದರು.

ದಿಂಡಾವರ, ಮುಸ್ಲಿಂಕಾಲೊನಿ, ಮಾದೇನಹಳ್ಳಿ, ಕರಿಯಾಲ, ಆನೆಸಿದ್ರಿ, ಆನೆಸಿದ್ರಿ ಗೊಲ್ಲರಹಟ್ಟಿ, ಎಕೆ ಕಾಲೋನಿ, ಯಲ್ಲದಕೆರೆ, ವಾಣಿವಿಲಾಸಪುರ, ಭರಂಪುರ, ತಳವಾರಹಟ್ಟಿ, ಕುರುಬರಹಳ್ಳಿ, ಉಡುವಳ್ಳಿ, ಹಿಂಡಸಕಟ್ಟೆ, ಇದ್ದಲನಾಗೇನಹಳ್ಳಿ, ಕಾತ್ರಿಕೇನಹಳ್ಳಿ, ಈಶ್ವರಗೆರೆ, ಹುಲಿತೊಟ್ಲು, ಕೋಡಿಹಳ್ಳಿಗಳಲ್ಲೂ ನೀರಿನ ಸಮಸ್ಯೆ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಬಂದಿವೆ. ಕುಡಿಯುವ ನೀರಿನ ಸಮಸ್ಯೆಗೆ ಈಗಲೇ ಪರಿಹಾರ ಕಂಡುಕೊಳ್ಳದಿದ್ದರೆ, ಶಿವರಾತ್ರಿ ನಂತರ ಬಿಸಿಲು ಹೆಚ್ಚಾಗುವ ಕಾರಣ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಮುಂದಿನ 15 ದಿನಗಳಲ್ಲಿ ತಾಲ್ಲೂಕಿನ ಯಾವುದೇ ಹಳ್ಳಿಯಲ್ಲಿಯೂ ನೀರಿನ ಬಗ್ಗೆ ದೂರು ಬರಬಾರದು, ಆ ರೀತಿ ನೋಡಿಕೊಳ್ಳಬೇಕು ಎಂದು ಸುಧಾಕರ್ ಎಚ್ಚರಿಸಿದರು.

ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಮಾಡುವುದು ನಮ್ಮ ಮೊದಲ ಆದ್ಯತೆ. ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ತಾಲ್ಲೂಕಿಗೆ ಬೇಕಿರುವ ಅನುದಾನವನ್ನು ಕೊಡಿಸುತ್ತೇನೆ. ಹಣದ ಕೊರತೆಯ ನೆಪ ಹೇಳಿ ತುರ್ತು ಕೆಲಸಗಳನ್ನು ನಿಲ್ಲಿಸಬಾರದು ಎಂದು ಅವರು ತಿಳಿಸಿದರು.
ತಾ.ಪಂ. ಅಧ್ಯಕ್ಷೆ ಗಿರಿಜಮ್ಮ ತಿಪ್ಪೀರಯ್ಯ, ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ್, ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT