ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸುರಕ್ಷತೆಗೆ ರೈಲ್ವೆ ನಿರಾಸಕ್ತಿ

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಪಘಾತಗಳನ್ನು ತಡೆಯುವ ವಿಷಯದಲ್ಲಿ ರೈಲ್ವೆ ಇಲಾಖೆ ಮತ್ತೆ ಮತ್ತೆ ವಿಫಲವಾಗುತ್ತಿದೆ. ಪ್ರತಿಯೊಂದು ಅಪಘಾತ ಸಂಭವಿಸಿದಾಗಲೂ ರೈಲ್ವೆ ಸಚಿವರೂ ಸೇರಿದಂತೆ ಉನ್ನತ ಅಧಿಕಾರಿಗಳು ದುರ್ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಅವರ ಕಾಳಜಿ ಹುಸಿ ಎಂಬುದು ಪ್ರತಿಸಲವೂ ಸಾಬೀತಾಗುತ್ತಿದೆ.

ಅಪಘಾತಕ್ಕೆ ಏನೋ ಒಂದು ಕಾರಣ ಹೇಳಿ, ಸತ್ತವರ ಕುಟುಂಬಗಳಿಗೆ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡುವುದಷ್ಟೇ ತನ್ನ ಜವಾಬ್ದಾರಿ ಎಂಬಂತೆ ರೈಲ್ವೆ ಇಲಾಖೆ ವರ್ತಿಸುತ್ತಿದೆ.
 
ಅಪಘಾತಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ರೈಲ್ವೆ ಸಚಿವರು ಮತ್ತು ಹಿರಿಯ ಅಧಿಕಾರಿಗಳು ನೀಡುವ ಭರವಸೆಗಳು ಸಾರ್ವಜನಿಕರ ಕಣ್ಣೊರೆಸುವ ತಂತ್ರಗಳಷ್ಟೇ ಎಂಬುದು ದೇಶದ ಉದ್ದಗಲದಲ್ಲಿ ಜನರ ಅನುಭವಕ್ಕೆ ಬಂದಿದೆ. ಒಟ್ಟಾರೆ ರೈಲ್ವೆ ಇಲಾಖೆ ತನ್ನ ಹೊಣೆ ನಿರ್ವಹಿಸುವ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಬೆಳವಣಿಗೆ ಖಂಡನೀಯ.
 
ಮಂಗಳವಾರ ರಾತ್ರಿ ತಮಿಳುನಾಡಿನ ಅರಕೋಣಂ ಜಂಕ್ಷನ್‌ನಲ್ಲಿ ಸಿಗ್ನಲ್‌ಗಾಗಿ ಕಾದು ನಿಂತಿದ್ದ ಪ್ರಯಾಣಿಕರ ರೈಲಿಗೆ ಹಿಂದಿನಿಂದ ಬಂದ ಇನ್ನೊಂದು ರೈಲು ಡಿಕ್ಕಿ ಹೊಡೆದು ಹಲವಾರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಇನ್ನೂ ಹಲವರಿಗೆ ಗಾಯಗಳಾಗಿವೆ.

ಹಸಿರು ನಿಶಾನೆಗಾಗಿ ಕಾಯುತ್ತಿದ್ದ ರೈಲಿಗೆ ಹಿಂದಿನಿಂದ ಬಂದ ಇನ್ನೊಂದು ರೈಲಿನಿಂದಾಗಿ ಈ ದುರಂತ ನಡೆದಿದೆ. ಈ ಘಟನೆಗೆ ಸಿಗ್ನಲ್ ಇದ್ದರೂ ಅದಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಮೊದಲ ವರದಿಗಳು ತಿಳಿಸಿವೆ. ಒಬ್ಬಿಬ್ಬರ ಹೊಣೆಗೇಡಿತನಕ್ಕೆ ಅಮಾಯಕರು ಜೀವತೆತ್ತಿದ್ದಾರೆ. ಇಲಾಖೆಗೂ ನಷ್ಟವಾಗಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡು ಸಾವಿರಾರು ಜನರಿಗೆ ತೊಂದರೆಯಾಗಿದೆ.

ಸುಗಮ ರೈಲು ಸಂಚಾರ ವ್ಯವಸ್ಥೆಗೆ ಅಗತ್ಯವಾದ ಆಧುನಿಕ ತಂತ್ರಜ್ಞಾನ ಈಗ ಲಭ್ಯವಿದೆ. ರೈಲ್ವೆ ಇಲಾಖೆಗೆ ಹಣದ ಕೊರತೆ ಇಲ್ಲ. ಭಾರತದ ರೈಲ್ವೆ ವ್ಯವಸ್ಥೆಯನ್ನು ವಿಶ್ವದರ್ಜೆಗೆ ಏರಿಸುವ ಕುರಿತಂತೆ ರೈಲ್ವೆ ಸಚಿವರು ಭರವಸೆ ನೀಡುತ್ತಲೇ ಇದ್ದಾರೆ.

ಸಿಗ್ನಲ್‌ಗಳ ಆಧುನೀಕರಣ, ಎಂಜಿನ್, ಬೋಗಿ ಮತ್ತು ಹಳಿಗಳಲ್ಲಿ ಕಂಡು ಬರುವ ನ್ಯೂನತೆಗಳನ್ನು ಅಲ್ಟ್ರಾ ಡಿಜಿಟಲ್ ವ್ಯವಸ್ಥೆ ಅಳವಡಿಸಿ ಸರಿಪಡಿಸಲು ಈಗ ಸಾಧ್ಯವಿದೆ. ಆದರೆ ಈ ತಂತ್ರಜ್ಞಾನ ಬಳಸಿಕೊಳ್ಳುವ ವಿಷಯದಲ್ಲಿ ಇಚ್ಛಾಶಕ್ತಿಯ ಕೊರತೆ ಇರುವಂತೆ ತೋರುತ್ತದೆ.

ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ಸಂಸದೀಯ ಸಮಿತಿ ಅಪಘಾತಗಳ ವರದಿಯನ್ನು ವಿಶ್ಲೇಷಣೆ ಮಾಡಿದ್ದು, ಬಹುತೇಕ ಅಪಘಾತಗಳಿಗೆ ಮಾನವ ವೈಫಲ್ಯವೇ ಕಾರಣ ಎಂದಿದೆ. ಇಷ್ಟಾದರೂ ರೈಲ್ವೆ ಇಲಾಖೆ ತನ್ನ ಲೋಪಗಳನ್ನು ಸರಿಪಡಿಸಿಕೊಳ್ಳುವ ವಿಷಯದಲ್ಲಿ ಕನಿಷ್ಠ ಆಸಕ್ತಿಯನ್ನೂ ತೋರುತ್ತಿಲ್ಲ.

ಇದು ಜನರ ಸುರಕ್ಷಿತ ಪ್ರಯಾಣದ ಬಗ್ಗೆ ಸರ್ಕಾರದ ನಿಷ್ಕಾಳಜಿಯ ಸಂಕೇತ. ಇನ್ನಾದರೂ ರೈಲ್ವೆ ಸಚಿವರು ಮತ್ತು ಉನ್ನತ ಅಧಿಕಾರಿಗಳು ಸಬೂಬು ಹೇಳುವುದನ್ನು ಬಿಡಬೇಕು. ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಇಲ್ಲವೇ ತಮ್ಮ ಹುದ್ದೆಯನ್ನು ಬಿಡಬೇಕು. ಅಮಾಯಕ ಪ್ರಯಾಣಿಕರ ಜೀವದ ಜತೆ ಚೆಲ್ಲಾಟ ಆಡುವುದು ನಿಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT