ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರನ್ನು ವಂಚಿಸುತ್ತಿದ್ದ ಮೂವರ ಬಂಧನ

Last Updated 20 ಡಿಸೆಂಬರ್ 2012, 9:10 IST
ಅಕ್ಷರ ಗಾತ್ರ

ಯಾದಗಿರಿ: ಚಿನ್ನಾಭರಣ ತೊಳೆದು ಕೊಡುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ ತಂಡವನ್ನು ಬಂಧಿಸಿರುವ ಯಾದಗಿರಿ ಪೊಲೀಸರು, ಆರೋಪಿಗಳಿಂದ ಚಿನ್ನ ಹಾಗೂ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಹಾರ ಮೂಲಕ ಸಾಜನ್‌ಕುಮಾರ, ಅಭಿಷೇಕ ಹಾಗೂ ಪ್ರವೀಣಕುಮಾರ ಬಂಧಿತ ಆರೋಪಿಗಳು. ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮನೆ ಮನೆಗೆ ತಿರುಗಾಡಿ ಚಿನ್ನಾಭರಣ ತೊಳೆದು ಕೊಡುವ ಕೆಲಸ ಮಾಡುತ್ತಿದ್ದರು. ನಗರದಲ್ಲಿ ಮೊದಲು ಬೆಳ್ಳಿಯ ಆಭರಣಗಳನ್ನು ತೊಳೆದು ಜನರ ವಿಶ್ವಾಸ ಗಳಿಸಿದ್ದರು.

ನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಆರ್.ಎಂ. ಕೋನಿಮನಿ ಎಂಬುವವರ ಪತ್ನಿಯ ಮಾಂಗಲ್ಯ ಸರವನ್ನು ತೊಳೆದು ಕೊಡಲು ನೀಡಿದ್ದರು. ಅವರ ಎದುರಿನಲ್ಲಿಯೇ ಮಾಂಗಲ್ಯ ಸರವನ್ನು ರಾಸಾಯನಿಕದಲ್ಲಿ ಅದ್ದಿದ ಆರೋಪಿಯೊಬ್ಬ, ಹೊಳೆಯುವಂತೆ ಮಾಡಿದ. ಇದರಿಂದ ಆಶ್ಚರ್ಯಚಕಿತರಾದ ಮಹಿಳೆ, ಸರವನ್ನು ಕೈಯಲ್ಲಿ ಹಿಡಿದು ನೋಡಿದ್ದಾರೆ. ಆದರೆ ಅದರ ತೂಕ ಕಡಿಮೆ ಆದಂತೆ ಭಾಸವಾಗಿದೆ.

ಕೂಡಲೇ ಸಮೀಪದ ಚಿನ್ನಾಭರಣ ವ್ಯಾಪಾರಿಯಲ್ಲಿ ಅದರ ತೂಕ ಮಾಡಿಸಿದಾಗ ಬರೋಬ್ಬರಿ 2 ತೊಲಿ ಚಿನ್ನ ಮಾಯವಾಗಿತ್ತು. ಕೂಡಲೇ ಆತನನ್ನು ಹಿಡಿದು ಕೂಡ್ರಿಸಿದ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ, ಸಬ್‌ಇನ್ಸ್‌ಪೆಕ್ಟರ್ ಹರಿಬಾ ಜಮಾದಾರ, ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಈ ವೇಳೆ ತಂಡದಲ್ಲಿ ಇನ್ನೂ ಇಬ್ಬರು ಇರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ರೈಲು ನಿಲ್ದಾಣದಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಂತರ ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ರಾಸಾಯನಿಕದಲ್ಲಿ ಅದ್ದಿದಾಗಲೇ ಚಿನ್ನ ಕರಗಿ, ದ್ರಾವಣದಲ್ಲಿ ಉಳಿಯುವಂತೆ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಚಿನ್ನಾಭರಣ ತೊಳೆದ ದ್ರಾವಣವನ್ನು ಮುತುವರ್ಜಿಯಿಂದ ಸಂಗ್ರಹಿಸಿ ಇಡುತ್ತಿದ್ದ ಆರೋಪಿಗಳು, ರಾತ್ರಿ ಆ ದ್ರಾವಣವನ್ನು ಸಂಸ್ಕರಿಸಿ, ಅದರಲ್ಲಿ ಕರಗಿರುವ ಚಿನ್ನವನ್ನು ತೆಗೆದುಕೊಳ್ಳುತ್ತಿದ್ದರು ಎಂಬುದು ಪತ್ತೆಯಾಗಿದೆ.

ಆರೋಪಿಗಳಿಂದ ಎಂಟು ಗ್ರಾಂ ಚಿನ್ನ, ರೂ.1000 ನಗದು, ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಎಸ್ಪಿ ಎಸ್.ಬಿ. ಕಟ್ಟಿಮನಿ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ, ಸಬ್‌ಇನ್ಸ್‌ಪೆಕ್ಟರ್ ಹರಿಬಾ ಜಮಾದಾರ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT