ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಲ್ಲಿ ಭಯ ಹುಟ್ಟಿಸಿದ್ದ ಮೊಸಳೆ ಜೀವಂತ ಸೆರೆ

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ ಜಿ.):  ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದ ಮೊಸಳೆ ಮರಿಯನ್ನು ಕಾರಟಗಿ ಸಮೀಪ ಬೆಟ್ಟದ ಮೇಲಿನ ದೇವಿಕ್ಯಾಂಪಿನ ಗ್ರಾಮಸ್ಥರು ಜೀವಂತ ಸೆರೆ ಹಿಡಿದಿದ್ದಾರೆ.

ಬಳಿಕ ಅದನ್ನು ಹೆಡೆಮುರಿ ಕಟ್ಟಿ ಕಾರಟಗಿ ಪೊಲೀಸ್ ಠಾಣೆ, ನಂತರ ಗಂಗಾವತಿಯ ನಗರಠಾಣೆಗೆ ಂದು ದೂರು ದಾಖಲಿಸಲು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು. ಆದರೆ ಮಕರ ಮಾತ್ರ ತನ್ನದೇನೂ ತಪ್ಪಿಲ್ಲ ಎಂಬಂತೆ ಅತ್ತಿಂದಿತ್ತ ಕಣ್ಣು ಮಿಟುಕಿಸುತ್ತಿತ್ತು.

 ವಿವರ: ದೇವಿ ಕ್ಯಾಂಪ್ ಕಾಲುವೆ ಪಕ್ಕದ ಕೆರೆಯಲ್ಲಿ ಹತ್ತಾರು ದಿನಗಳಿಂದ ಮೊಸಳೆಯೊಂದು ವಾಸವಾಗಿದ್ದನ್ನು ದನ ಕಾಯುವ ಯುವಕರು ಪತ್ತೆ ಹಚ್ಚಿದ್ದರು. ಅದು ಆಗಾಗ ದರ್ಶನ ನೀಡಿ ಮಾಯವಾಗುತ್ತಿತ್ತು. ನೀರು ಕುಡಿಯಲು ಕೆರೆಗೆ ಇಳಿಯುವ ಸಣ್ಣ ಕುರಿ, ಮೇಕೆಗಳ ಮೇಲೆ ದಾಳಿ ಮಾಡುತ್ತಿದ್ದ ಮೊಸಳೆ ಸ್ಥಳೀಯರಲ್ಲಿ ಜೀವ ಭಯ ಹುಟ್ಟುಹಾಕಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕೋಳಿ, ನಾಯಿ ಕಣ್ಮರೆ: ಗ್ರಾಮದಲ್ಲಿ ಆಗಾಗ ನಾಯಿ ಮರಿ ಹಾಗೂ ಕೋಳಿ ಮರಿಗಳು ನಾಪತ್ತೆ ಆಗುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಕೋಳಿ ಮರಿಯನ್ನು ನಾಯಿ ಹಿಡಿದಿರಬಹುದು ಎಂದು ಸುಮ್ಮನಾಗುತ್ತಿದ್ದ ಗ್ರಾಮಸ್ಥರಿಗೆ ನಾಯಿಗಳು ಆಗಾಗ ಕಾಣೆಯಾಗುತ್ತಿರುವುದು  ಅನುಮಾನ ಉಂಟುಮಾಡಿತು. ಕೆಲವರು ಕೆರೆಗೆ ಹೋಗಿ ನೋಡಿದಾಗ ಕೋಳಿ ಮರಿಗಳ ಪುಚ್ಚ ಮತ್ತು ನಾಯಿ ಮರಿಗಳ ಎಲುಬು ಕಂಡುಬಂತು. ಮುಂದೊಂದು ದಿನ ಮೊಸಳೆ ಗ್ರಾಮದೊಳಗೆ ಕಾಲಿಟ್ಟರೆ ಸಿಕ್ಕಿದ್ದು ತಿಂದು ಹಾಕುತ್ತದೆ ಎಂಬ ಭೀತಿ ಗ್ರಾಮಸ್ಥರಲ್ಲಿ ಆವರಿಸಿತು.

ಮಕರ ಸೆರೆ: ಗ್ರಾಮದ ಸಾಹಸಿ ಯುವಕ ಶರಣಪ್ಪ ಶುಕ್ರವಾರ ಮಧ್ಯಾಹ್ನ ಕೆರೆ ಮೇಲಿದ್ದ ದೊಡ್ಡ ರಂಧ್ರವೊಂದರಲ್ಲಿ ಅಡಗಿ ಕುಳಿತಿದ್ದ ಮೊಸಳೆಯನ್ನು ಪತ್ತೆ ಹಚ್ಚಿದರು. ರಂಧ್ರದ ಸುತ್ತಲೂ ಸ್ವಲ್ಪ ತೆಗ್ಗು ತೆಗೆದು ಕಾದು ಕುಳಿತಿದ್ದಾಗ ಮೊಸಳೆ ನಿಧಾನವಾಗಿ ಹೊರಬರಲು ಯತ್ನಿಸಿತು. ಆಗ ಶರಣಪ್ಪ ಮೊಸಳೆಯ ಬಾಯಿ ಹಿಡಿದು ಕಟ್ಟಿ ಹಾಕಿದರು. ಬಳಿಕ ದ್ವಿಚಕ್ರ ವಾಹನದಲ್ಲಿ ಕಾರಟಗಿ, ಅಲ್ಲಿಂದ ಗಂಗಾವತಿ ಠಾಣೆಗೆ ತರಲಾಯಿತು.

ಗಂಗಾವತಿ ನಗರ ಠಾಣೆಯ ಆವರಣದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಂಧಿಯಾಗಿದ್ದ ಸುಮಾರು ಏಳು ತಿಂಗಳ ಪ್ರಾಯದ 35 ಕೆ.ಜಿ. ಭಾರದ ಮೊಸಳೆಯನ್ನು ಅರಣ್ಯ ಸಿಬ್ಬಂದಿಯ ಮಧ್ಯಪ್ರವೇಶಿಸಿ ಬಳಿಕ ತುಂಗಭದ್ರಾ ನದಿಯಲ್ಲಿ ಬಿಟ್ಟರು.  ಮೊಸಳೆಯು ಬದುಕಿದೆಯಾ ಬಡಜೀವವೇ ಎಂಬಂತೆ ನದಿಯಲ್ಲಿ ಈಜಿ ಕಣ್ಮರೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT