ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗಿನ್ನೂ ಭರವಸೆ ಪೂರಾ ಹೋಗಿಲ್ಲ...

Last Updated 15 ಫೆಬ್ರುವರಿ 2016, 11:26 IST
ಅಕ್ಷರ ಗಾತ್ರ

ಸಾವಿರ ದಿನಗಳನ್ನು ತಮ್ಮವರೊಡನೆ ಹೋರಾಡುತ್ತಾ ಆಗಾಗ ವಿರೋಧಪಕ್ಷದವರಿಗೆ ಟಾಂಗ್ ಕೊಡುತ್ತಾ ಒಂದಿಷ್ಟು ಯಶಸ್ವಿ ಕೆಲಸಗಳನ್ನು ಮಾಡುತ್ತಾ ಬಿಬಿಎಂಪಿ, ಪರಿಷತ್ ಚುನಾವಣೆಗಳಲ್ಲಿ ಚಾಣಾಕ್ಷತನ, ರಾಜಿ ಸ್ವಭಾವದಿಂದಾಗಿ ಗೆದ್ದು ಬೀಗುತ್ತಾ ಮುಖ್ಯಮಂತ್ರಿ ಸ್ಥಾನವನ್ನು ಭದ್ರವಾಗಿರಿಸಿಕೊಂಡಿರುವ ಸಿದ್ದರಾಮಯ್ಯನವರನ್ನು ಖಂಡಿತ ಅಭಿನಂದಿಸಬೇಕು. ಮೊದಲಿನಿಂದಲೂ ಯಡವಟ್ಟುಗಳನ್ನು ಮಾಡಿಕೊಳ್ಳುತ್ತಾ ಬಂದಿರುವ ಸರ್ಕಾರ ಅನೇಕ ಸಲ ನಗೆಪಾಟಿಲಿಗೆ ಈಡಾದುದ್ದರಲ್ಲಿ ಮುಖ್ಯಮಂತ್ರಿಯವರ ಪಾಲು ಎಷ್ಟಿದೆಯೋ ಗೊತ್ತಿಲ್ಲ. ಆದರೆ ಅವರ ಸಚಿವರದ್ದು ದೊಡ್ಡಪಟ್ಟಿ ಮಾಡುವಷ್ಟಿದೆ!

ಗಣಿಗಾರಿಕೆ ವಿಷಯದಲ್ಲಿ ಬಳ್ಳಾರಿವರೆಗೂ ತೊಡೆತಟ್ಟುತ್ತಾ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ, ಅಕ್ರಮ ಗಣಿಗಾರಿಕೆಯಲ್ಲಿ ಆರೋಪಿತ ಸಂತೋಷ್‌ಲಾಡ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರು. ಬಿಜೆಪಿ ಹಾಗೂ ಎಸ್.ಆರ್. ಹಿರೇಮಠರ ಒತ್ತಾಯಕ್ಕೆ ಮಣಿದು ಸಂಪುಟದಿಂದ ಕೈಬಿಟ್ಟರು.  ಕಳಂಕಿತರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದು ಗುಟುರು ಹಾಕಿದವರು, ಹೈಕಮಾಂಡ್ ಒತ್ತಡವೋ, ಡಿ.ಕೆ. ಸುರೇಶರ ಗೆಲುವಿನ ಋಣಭಾರವೋ ಅಂತೂ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವಿರುವ ಡಿ.ಕೆ. ಶಿವಕುಮಾರ್ ಅವರನ್ನು ಕರೆದು ಇಂಧನ ಖಾತೆ ನೀಡಿದರು.  ಅಲ್ಪಸಂಖ್ಯಾತರು ಪ್ರೋತ್ಸಾಹಿಸದಿರಲು ಸಾಧ್ಯವೆ ಎಂದುಕೊಂಡು ಅಪಾದನೆಗಳಿದ್ದ ರೋಷನ್‌ಬೇಗ್‌ಗೂ ಮಣೆ ಹಾಕಲಾಯಿತು. 

ಆರೋಪಿಗಳು ಅಪರಾಧಿಗಳಲ್ಲವೆಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯವರನ್ನೇ ಸಿದ್ದರಾಮಯ್ಯ ಫಾಲೋ ಮಾಡಿದರು.  ಕೋಮುವಾದಿಗಳ ವಿರುದ್ಧ ಗೆದ್ದಾಗ ಸಿದ್ದರಾಮಯ್ಯನವರ ಬಗ್ಗೆ ಬಹಳ ನಿರೀಕ್ಷೆಗಳಿದ್ದವು ನಿಜ.  ಗೆದ್ದೊಡನೆ ಮಠಗಳನ್ನು ಸುತ್ತದೆ ಅವರು ಸಾಹಿತಿಗಳ ಮನೆಗಳಿಗೆ ಭೇಟಿ ನೀಡಿ ಚರ್ಚಿಸಿ ಘನತೆಯನ್ನು ಹೆಚ್ಚಿಸಿಕೊಂಡಿದ್ದಲ್ಲದೆ ಹೊಸ ನಿರೀಕ್ಷೆಗಳನ್ನೂ ಹುಟ್ಟುಹಾಕಿದರು.  ಈಗ ಅದೇ ಮುಳುವಾಯಿತೇನೋ ಅನಿಸುತ್ತದೆ! ಅರ್ಥ ಸಚಿವರಾಗಿ ಸಿಎಂ ಸಾಧಿಸಿದ್ದು ಕಡಿಮೆಯೆ.

ಭ್ರಷ್ಟರನ್ನು ಬಲಿ ಹಾಕುವ ಕಾರ್ಯದಲ್ಲಿ ಅಧಿಕಾರಿಗಳೂ ಸೋತರು ಅರ್ಥಾತ್ ಸರ್ಕಾರ ಸೋತಿತು. ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಯಾಗಿಯೇ ಬಿಡುತ್ತೇನೋ ಎಂದು ಖುಷಿಪಡುವಾಗ ಧರ್ಮಾಂಧರಿಂದ ಟೀಕೆಗಳು ತೂರಿಬರುತ್ತಲೇ ಪ್ಲೇಟ್ ಛೇಂಜ್ ಮಾಡಿದರು.  ಮಠಗಳ ನಿಯಂತ್ರಣಕ್ಕೆ ಕಾನೂನು ತರಬಹುದೆಂದು ಸುಪ್ರೀಂಕೋರ್ಟ್ ಹೇಳಿದಾಗ ಆ ಬಗ್ಗೆ ಚಿಂತನೆ ನಡೆಸಿದರೂ ಕಾವಿಗಳಿಗೆ ಅಂಜಿ ನಂತರ ಮೌನಕ್ಕೆ ಶರಣಾದರು.  ದುಬಾರಿ ಮದುವೆ ನಿಷೇಧವೆಂದದ್ದೂ ಠುಸ್ ಆಯಿತು. ಸಿ.ಎಂ. ಟೀಮ್ ಪೂರ್ವ ತಯಾರಿ ನಡೆಸದೆ ಕೈಗೊಳ್ಳಲು ಹೊರಟ ಇಂತಹ ಭಾಗ್ಯಗಳೆಲ್ಲವೂ ಸಫಲವಾಗದೆ ದೌರ್ಭಾಗ್ಯಗಳಾಗಲು ಆಸ್ಥಾನ ಪಂಡಿತರೇ ಕಾರಣವೋ ಸ್ವಯಂ ಸಿ.ಎಂ. ಅವರೇ ಕಾರಣವೋ ಎಂಬ ಗುಮಾನಿ ಜನರನ್ನೀಗ ಕಾಡುತ್ತಿದೆ.

ತಮಾಷೆಯಂದರೆ ಸಚಿವರು ವೃಥಾ ವಿಧಾನಸೌಧದ ಒಳಗೋಡೆಗಳನ್ನೆಲ್ಲಾ ನವೀಕರಿಸುವ ನೆಪದಲ್ಲಿ ಕೆಡವುತ್ತಾರೆ.  ಅದೇ ನಿವಾಸದಲ್ಲಿ ಮೊದಲಿಗೆ ಇದ್ದ ಸಿ.ಎಂ. ಅವರದ್ದು ದಿವ್ಯ ಮೌನ!  ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆವಾಗಲೇ ನಿದ್ರಾದೇವಿಗೆ ಶರಣಾಗುತ್ತಾರೆ.  ದಿಗ್ವಿಜಯಸಿಂಗ್ ಪಕ್ಕದಲ್ಲಿದ್ದರೂ ಕನ್ನಡಕ ಕಳಚಿ ಬೀಳುವಷ್ಟು ನಿದ್ರೆ!  ಟೀಕೆ ಮಾಡಿದರೆ ಕಾಯಿಲೆ ಅನ್ನುತ್ತಾರೆ.

ಯಾವುದೇ ಗಾಡ್‌ಫಾದರ್‌ಗಳಿಲ್ಲದೆ ಮೇಲೆ ಬಂದವರು, ಅಹಿಂದ ಪರ ಟೊಂಕಕಟ್ಟಿ ನಿಂತವರು, ರೈತರ ಪರ ಅನುಕಂಪ ಪ್ರೀತಿ ಉಳ್ಳವರೆಂಬ ಸಕಾರಾತ್ಮಕ ವರ್ಚಿಸ್ಸಿದ್ದ ಸಿ.ಎಂ. ಬೆಳಗಾವಿಯಲ್ಲಿ ವಿಠಲ ಅರಬಾವಿ ಎಂಬ ರೈತ ಸತ್ತಿದ್ದು ಕುಡಿದು ಹೆಚ್ಚಾಗಿ ಎಂದು ಲೇವಡಿಗಿಳಿಯುವುದು, ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಸಾವಿನ ಬಗ್ಗೆ ಸರಿಯಾದ ತನಿಖೆ ನಡೆಸದೆ ಮನಸ್ಸಿಗೆ ಬಂದಷ್ಟು ಪರಿಹಾರ ಘೋಷಿದ್ದು ಬಿಟ್ಟರೆ, ಐ.ಜಿ.ಪಿ. ವಾಜಿದ್ ಅಹ್ಮದ್ ಮೇಲೆ ಕನಿಷ್ಠ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುವುದು, ಎಟಿಎಂ ನಲ್ಲಿ ಉದ್ಯೋಗಿ ಮಹಿಳೆಯ ಮೇಲಾದ ಮಾರಣಾಂತಿಕ ಹಲ್ಲೆ ಸಿಸಿಟಿವಿ ಯಲ್ಲಿ ದಾಖಲೆಗೊಂಡರೂ ಆರೋಪಿ ಸೆರೆಯಾಗದಿರುವುದು. 

ಕೇರಳದ ವಿದ್ಯಾರ್ಥಿನಿ ಮೇಲೆ ಮಣಿಪಾಲದಲ್ಲಾದ ಗ್ಯಾಂಗ್ ರೇಪ್, ಈಗಲೂ ಹಿಂದೂವಾದಿಗಳು ವಿಭಿನ್ನಮತಗಳ ಯುವಕ ಯುವತಿಯರು ನಿರ್ಭಿಡೆಯಾಗಿ ಓಡಾಡದಂತೆ ಹಲ್ಲೆ ನಡೆಸುವುದೂ ನಡೆದೇ ಇದೆ. ಇಡೀ ಪೊಲೀಸ್ ಇಲಾಖೆಯಲ್ಲಿ ನಮ್ಮವರೇ ಇದ್ದಾರೆ ಎಂದು ದುಷ್ಕರ್ಮಿಗಳು ಮಾತನಾಡಿದರೂ ಹಿಂದೆ ಗೃಹ ಇಲಾಖೆಯಲ್ಲಿದ್ದ ಜಾರ್ಜ್‌ಗೆ ಮಾತೇ ಬರೋಲ್ಲ.  ಸಿ.ಎಂ.ಗೆ ಮಾತು ಬಂದರೂ ಆಡುವುದಿಲ್ಲ.   ಹಾಲು, ವಿದ್ಯುತ್, ತರಕಾರಿ, ಸಾರಿಗೆ ದರ ಏರುತ್ತಲೇ ಇದೆ.  ಗಾರ್ಡನ್‌ಸಿಟಿ ಗಾರ್ಬೇಜ್ ಸಿಟಿಯಾಗಿದೆ.

ಒಳ್ಳೆ ರಸ್ತೆ ಬೇಕೆಂದ ಆಟೋದವನಿಗೆ ಸಚಿವನೊಬ್ಬ ರಸ್ತೆಯಲ್ಲೇ ಬಾರಿಸುತ್ತಾನೆ.  ಮತ್ತೊಬ್ಬ ಸಚಿವ ಮೀಡಿಯಾದವರಿಗೆ ಪ್ರಾಣ ಬೆದರಿಕೆ ಹಾಕುತ್ತಾನೆ.  ಶಾಸಕನೊಬ್ಬ ಕಿಮ್ಸ್ ವೈದ್ಯಾಧಿಕಾರಿಯ ಮೇಲೆ ಹಲ್ಲೆಗಿಳಿಯುತ್ತಾನೆ.  ಇವರಿಗೆ ಒದ್ದು ಬುದ್ಧಿ ಹೇಳಬೇಕಾದ ಸಿ.ಎಂ. ಕಾಲುಜಾರಿ ಮೈಮೇಲೆ ಬಿದ್ದ ಅಧಿಕಾರಿಯ ಕಪಾಳಕ್ಕೆ ಭಾರಿಸುವ ಮೂಲಕ ಸ್ಲೀಪಿಂಗ್ ಸಿ.ಎಂ. ಈಗ ಸ್ಲ್ಯಾಪಿಂಗ್ ಸಿ.ಎಂ. ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ!

ಈ ನಡುವೆ ಸಿ.ಎಂ. ಅವರ ದುಬಾರಿ ವಾಚು, ಕನ್ನಡಕವೂ ರಾಜಕೀಯ ಟೀಕೆಗೆ ಒಳಗಾಗಿದ್ದೊಂದು ವಿಡಂಬನೆ!

ಆದರೂ ಜನರಿಗಿನ್ನೂ ಸರ್ಕಾರದ ಮೇಲಿನ ಭರವಸೆ ಪೂರಾ ಹೋಗಿಲ್ಲ. ಹಿಂದುಳಿದವರೊಬ್ಬರು ಮುಖ್ಯಮಂತ್ರಿಯಾದರಲ್ಲ ಎಂಬ ಸಂಕಟ ಪಕ್ಷದ ಒಳಗೂ ಹೊರಗೂ ಇದೆ.  ಮೇಲ್ವರ್ಗದವರ ಕೈಲಿರುವ ಮಾಧ್ಯಮಗಳಲ್ಲೂ ಇದೆ. ಹೀಗಾಗಿ ಮುಂದಿನ ನಡೆಯಲ್ಲಿ ಎಚ್ಚರಬೇಕು.  ಆ ನಡೆ ಜನಪರವಾಗಿರಬೇಕು.  ಇರಲಿ ಎಂದಾಶಿಸೋಣ.

-ಬಿ.ಎಲ್. ವೇಣು,
ಚಿತ್ರದುರ್ಗ

ಬದುಕು ಅಸಹನೀಯ.....!
ಮೈಸೂರು ನಗರದ ನಿವಾಸಿಯಾದ ನಾನು ಸಿದ್ದರಾಮಯ್ಯ ಅವರನ್ನು 3-4 ದಶಕಗಳಿಂದ ನೋಡುತ್ತಿದ್ದೇನೆ. ಆಭಿಮಾನವನ್ನು ಇರಿಸಿಕೊಂಡಿದ್ದೆ, ಇವರು ಆರೇಳು ಬಾರಿ ಮಂಡಿಸಿದ ಬಜೆೆಟ್, ಯಾವ ಆಕ್ಸ್ ಫರ್ಡ್‌ ಅರ್ಥ ಶಾಸ್ತ್ರಜ್ಞನಿಗೂ ಕಡಿಮೆ ಇಲ್ಲದ್ದು ಎಂದು ವಿಚಾರವಂತರು ಮಾತಾಡುವಾಗ ನಾನು ಮತ್ತೆಷ್ಟು ಹೆಮ್ಮೆ ಪಟ್ಟಿದ್ದೆ.

ಆದರೆ ಇವರು ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತು 3 ವರ್ಷಗಳು ಮುಗಿಯುತ್ತ ಬಂದರೂ ಜನ ನಿರೀಕ್ಷಿಸಿದ್ದ ಆಡಳಿತ ನೀಡಲು ಇವರಿಂದ ಸಾಧ್ಯವಾಗಲಿಲ್ಲ. ಈ ರಾಜ್ಯ ಗೂಂಡಾ ರಾಜ್ಯ, ಪೋಲಿಸ್ ರಾಜ್ಯ, ಭ್ರಷ್ಟರರಾಜ್ಯ ಎನಿಸಿ ಬದುಕು ಅಸಹನೀಯ ಎನಿಸಿದೆ.

ತಮ್ಮ ಮಗನನ್ನು, ತಮ್ಮ ಸಂಪುಟದ ಮಂತ್ರಿಗಳನ್ನು ಆರೋಪಗಳು ಅಲೆಅಲೆಯಾಗಿ ಅಪ್ಪಿಕೊಳ್ಳುತಿದ್ದರೂ ಸಂವೇದನೆಗಳಿಲ್ಲದ ಜಡತ್ವ ತೋರುತ್ತಿದ್ದಾರೆ. ಮೈಸೂರು ನಗರದಲ್ಲಿ ಏನೇನು ಅಲ್ಲದ, ಯಾವ ಅರ್ಹತೆಯೂ ಇಲ್ಲದ ತಮ್ಮ ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ಜನರ ಮುಂದೆ ಮೆರವಣಿಗೆ ಮಾಡುತ್ತಿದ್ದಾರೆ.

ಏನೇ ಆದರು ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿ ಪೂರ್ಣಗೋಸಲೇ ಬೇಕು ಎಂಬ ಹಟತೊಟ್ಟಂತಿದೆ.

-ಎಂ.ಪಿ.ವಾಸುದೇವರಾಜು,
ಮೈಸೂರು

ಅರ್ಥಪೂರ್ಣ ಆಡಳಿತ
ಅಹಿಂದ ನಾಯಕತ್ವಕ್ಕೆ ಹೆಸರಾದ ಸಿದ್ದರಾಮಯ್ಯ ಅವರ ಸರ್ಕಾರ ತುಂಬಾ ಅರ್ಥಪೂರ್ಣ ಆಡಳಿತ ನೀಡಿದೆ. ರೈತರಿಗೆ ನೀಡಿದ ಸಹಾಯಧನಗಳು, ಪರಿಶಿಷ್ಟರಿಗೆ ನೀಡಿದ ವಿಶೇಷ ಪ್ಯಾಕೇಜ್‌ಗಳು, ಅನ್ನಭಾಗ್ಯ, ಕ್ಷೀರಭಾಗ್ಯ ಉತ್ತಮವಾಗಿವೆ. ಬಂಡವಾಳ ಹೂಡಿಕೆದಾರರ ಸಮಾವೇಶ ರಾಜ್ಯದ ಆರ್ಥಿಕ ಸ್ಥಿತಿಯನ್ನು ಬದಲಾಯಿಸಲಿದೆ. ರೈತರ ಆತ್ಮಹತ್ಯೆ, ಅಧಿಕಾರಿಗಳ ವರ್ಗಾವಣೆ, ಸಚಿವರ ಅದಕ್ಷತನ ಸರ್ಕಾರದ ನಿರೀಕ್ಷೆಯನ್ನು ಹುಸಿಗೊಳಿಸಿದೆ.
-ರಘು ಬಿ.ಆರ್. ,
ತುಮಕೂರು   

ಕೆಲವರಿಗೆ ಅಸೂಯೆ
ಸಮಾಜವಾದಿ ಸಿದ್ಧಾಂತದ, ಶಿಸ್ತು ಬದ್ಧ ಜೀವನದ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಬದ್ಧತೆಯ ಮುಖ್ಯಮಂತ್ರಿ ಸಿದ್ದರಾಮಯ್ಯ. 

ಇವರ ಆಡಳಿತಾವಧಿಯಲ್ಲಿ ಅನೇಕ ಏಳು-ಬೀಳುಗಳನ್ನು ಕಂಡರೂ ಹಸಿವು ಮುಕ್ತ ಜೀವನಕ್ಕೆ ಅನ್ನಭಾಗ್ಯ, ಉತ್ತಮ-ಸದೃಢ ಆರೋಗ್ಯಕ್ಕೆ ಕ್ಷೀರಭಾಗ್ಯ, ಅಲ್ಪಸಂಖ್ಯಾತರ ಯುವತಿಯರಿಗೆ ಶಾದಿಭಾಗ್ಯ, ಮನಸ್ವಿನಿ, ಗ್ರಾಮೀಣ ಯುವತಿಯರು ಶಾಲೆ ಹಾಜರಿಗೆ ಪ್ರೋತ್ಸಾಹದಾಯಕವಾಗಿ ಪ್ರತಿದಿನ ₹ 2 ಜಮೆ ಮಾಡುವುದು, 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ, ಮತೀಯ ಅಲ್ಪಸಂಖ್ಯಾತರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ, ಹಿಂದುಳಿದವರಿಗೆ, ಬಾಲಕರ, ಬಾಲಕಿಯರ ಊಟ ವಸತಿ ಸೌಲಭ್ಯ, ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಈ ವರ್ಗದವರಿಗೆ ವಿದ್ಯಾಭ್ಯಾಸ ಪಡೆಯಲು ಶಿಷ್ಯ ವೇತನ, ಹೀಗೆ ಹತ್ತು ಹಲವು ಮೂಲಭೂತ ಭಾಗ್ಯಗಳನ್ನು ನೀಡಿದ್ದಾರೆ.

ದಲಿತರ, ನೊಂದು ಬೆಂದವರ, ಅಲ್ಪಸಂಖ್ಯಾತರ, ಹಿಂದುಳಿದವರ, ತುಳಿತಕ್ಕೊಳಗಾದವರ ಧ್ವನಿಯಾಗಿ ಭಾಗ್ಯದ ಬಾಗಿಲನ್ನೇ ತೆರೆದಿಟ್ಟಿರುವ ಸಿದ್ದರಾಮಯ್ಯ ಗಟ್ಟಿತನದ ನಾಯಕರಾಗಿ ರಾರಾಜಿಸುತ್ತಿರುವುದು, ಹಲವರ ಕಣ್ಣು ಕುಕ್ಕುತ್ತಿದೆ.  ಅಸೂಯೆ, ಅಸಹನೆಯ ಕೆಲ ವರ್ಗಗಳಿಗೆ ನುಂಗಲಾರದ ತುತ್ತಾದಂತಿದೆ.
-ಎಂ.ಕರಿಯಪ್ಪ,
ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT