ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ದೀಪಾವಳಿ, ದನಗಳಿಗೆ ದೀವಣಿಗೆ

Last Updated 30 ಅಕ್ಟೋಬರ್ 2011, 10:50 IST
ಅಕ್ಷರ ಗಾತ್ರ

ಶಿರಾ: `ಜನ ಪಟಾಕಿ ಹೊಡೆದು ದೀಪಾವಳಿ ಆಚರಿಸಿದರೆ ಶಿರಾ ತಾಲ್ಲೂಕಿನ ಹಳ್ಳಿಗಳಲ್ಲಿ ದನಗಳಿಗೆ ದೀವಣಿಗೆ ಆಚರಿಸುತ್ತಾರೆ. ಹೀಗಾಗಿ ತಾಲ್ಲೂಕಿನ ಹಳ್ಳಿಗಳಲ್ಲಿ ದೀವಣಿಗೆ ಹಬ್ಬಗಳ ಸಾಲುಗಳೇ ಶುರುವಾಗಿವೆ. ಎಲ್ಲ ಹಳ್ಳಿಗಳಲ್ಲೂ ಒಂದೇ ದಿನ ದೀವಣಿಗೆ ಆಚರಿಸದೆ ಆಯಾ ಹಳ್ಳಿಯ ಹಿರಿಯರ ತೀರ್ಮಾನದಂತೆ ಒಂದೊಂದು ದಿನ ಹಬ್ಬ ಆಚರಿಸುತ್ತಿದ್ದಾರೆ.

ಹಬ್ಬಕ್ಕೆ 3  ದಿನ ಮುಂಚೆ ಗೊಲ್ಲ ಸಂಪ್ರದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಅಡವಿ ಯಲ್ಲಿ ಬೆಳೆದ ತಂಗಟೆ ಹೂಗಳನ್ನು ಕಿತ್ತು ತಂದು ಗ್ರಾಮದ ಪ್ರತಿ ಮನೆಗಳ ಮುಂದೆ ಚೆಲ್ಲುತ್ತಾ...  ಆರೇ ಅಲ್ಲಾರೆ ಗೋಡೆ ಬಿದ್ದರೆ ಜಲ್ಲಾರೆ...

ಎಂಬ ಅರ್ಥ ರಹಿತ ಆದರೆ ಪ್ರಾಸಬದ್ದ ಹಾಡು ಹಾಡುತ್ತಾ ಹೋಗುತ್ತಾರೆ. ಹೀಗೆ ತಂಗಟೆ ಹೂ ಚೆಲ್ಲಿದ 3 ದಿನಕ್ಕೆ ದೀವಣಿಗೆ ಹಬ್ಬ ಆಚರಿಸುವುದು ರೂಢಿ. ದೀವಣಿಗೆ ಹಬ್ಬದ ವಿಶೇಷವೆಂದರೆ ದನಗಳಿಗೆ ಅಲಂಕಾರ ಮಾಡಿ, ಮೆರವಣಿಗೆ ನಡೆಸಿ ಊರ ಹೊರಗಿನ ದೇವಸ್ಥಾನದ ಮುಂದೆ ಕಿಚ್ಚು ಹಾಯಿಸುವುದು.

ಬೆಳಿಗ್ಗೆ ದನಗಳ ಮೈ ತೊಳೆದು ಮಧ್ಯಾಹ್ನದವರೆಗೂ ಚೆನ್ನಾಗಿ ಮೇಯಿಸಿ ಸಂಜೆ ಹೊತ್ತಿಗೆ ದನಗಳನ್ನು ಚೆಂಡು ಹೂ, ಬಲೂನ್, ಹಾರ, ಟೇಪು ಹಾಗೂ ದನಗಳಿಗಾಗಿಯೇ ವಿಶೇಷವಾಗಿ ಹೊಲಿಸಿ ಸಿದ್ದಪಡಿಸಿದ ಬಟ್ಟೆಯ ಜೂಲಿನಿಂದ ಅಲಂಕರಿಸುತ್ತಾರೆ. ಹೀಗೆ ಅಲಂಕರಿಸಿದ ದನಗಳ ರಾಸನ್ನು ಪ್ರತಿಯೊಬ್ಬರು ತಮ್ಮ ಮನೆಯಿಂದ ಮೆರವಣಿಗೆ ಮೂಲಕ ಗ್ರಾಮದ ಒಂದೆಡೆ ಕರೆತಂದು ಪಟಾಕಿ ಹೊಡೆಯುತ್ತಾರೆ.

ಈ ಪಟಾಕಿ ಸದ್ದಿಗೆ ದನಗಳು ಬೆದರುವುದು, ಹೂಂಕರಿಸುವುದು ಸಾಮಾನ್ಯ. ಆಗ ಜನಗಳ ಕೇಕೆ, ಉದ್ಘಾರ ಮುಗಿಲು ಮುಟ್ಟುತ್ತದೆ. ಕೆಲವರು ತಮ್ಮ ದನ ಅದರಲ್ಲಿಯೂ ಹೋರಿಗಳಿದ್ದರೆ ಅವು ಹೆಚ್ಚು ಹೂಂಕರಿಸಿ ಹುಡ್ರಿಕೆ ಹೊಡೆಯಲೆಂದೇ ಗೊಟ್ಟದಲ್ಲಿ ಮದ್ಯ ಕುಡಿಸುವವರು ಇದ್ದಾರೆ !

ನಂತರ ಊರಿನ ದನಗಳೆಲ್ಲವನ್ನು ಸಾಮೂಹಿಕವಾಗಿ ಮೆರವಣಿಗೆ ಮೂಲಕ ಊರ ಹೊರಗಿನ ಕಾಟಂಲಿಂಗ ದೇವಸ್ಥಾನದ ಬಳಿಗೆ ಕರೆತರುತ್ತಾರೆ. ಅಲ್ಲಿ ಮೊದಲೇ ಮುಳ್ಳು, ತರಗೆಲೆ, ಸೌದೆಗಳಿಗಳಿಂದ ಪೇರಿಸಿದ್ದ ಬೃಹತ್ ಗುಡ್ಡೆಗೆ ಬೆಂಕಿ ಹಚ್ಚಿ ಕಿಚ್ಚು ಹಾಯಿಸುವ ಮೂಲಕ ದೀವಣಿಗೆ ವಿದಾಯ ಹೇಳುತ್ತಾರೆ.

ಆದರೆ ಈಚೆಗೆ ಹಳ್ಳಿಗಳಲ್ಲಿ ದನಗಳೇ ಕಡಿಮೆಯಾಗಿವೆ. ಕೃಷಿ ಯಾಂತ್ರಿಕರಣಗೊಂಡ ಪರಿಣಾಮ ಟ್ರ್ಯಾಕ್ಟರ್, ಟಿಲ್ಲರ್‌ಗಳದೇ ಕಾರುಬಾರು. ಹೀಗಾಗಿ ದನಗಳು ಕಾಣೆಯಾಗುತ್ತಿರುವುದರ ಜೊತೆಗೆ ದನಗಳಿಗೆ ವಿಶೇಷವಾಗಿ ಆಚರಿಸುತ್ತಿದ್ದ ದೀವಣಿಗೆ ಹಬ್ಬ ಕೂಡ ವರ್ಷದಿಂದ ವರ್ಷಕ್ಕೆ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ.

ಅದರಲ್ಲಿಯೂ ಈ ವರ್ಷ ಆವರಿಸಿದ ಬರದಿಂದ ಮೇವು ಇಲ್ಲದೆ ಹಳ್ಳಿಗಳಲ್ಲಿರುವ ಕೆಲ ದನಗಳು ಸೊರಗಿವೆ. ಹೀಗಾಗಿ ದೀವಣಿಗೆ ಹಬ್ಬದ ಮೇಲೆ ಬರದ ಕರಿ ನೆರಳು ಕೂಡ ಬಿದ್ದಿದೆ.
ಪಿ.ಮಂಜುನಾಥ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT