ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಲೋಕಪಾಲ: ಭರಪೂರ ಬೆಂಬಲ- ಅಣ್ಣಾಗೆ ಆನೆಬಲ

Last Updated 19 ಆಗಸ್ಟ್ 2011, 8:55 IST
ಅಕ್ಷರ ಗಾತ್ರ

ಹಾಸನ: ಅಣ್ಣಾ ಬೆಂಬಲದಲ್ಲಿ ಗುರುವಾರ ಹಾಸನದಲ್ಲಿ ಅದೆಷ್ಟು ಸಂಘಟನೆಗಳು ಬೀದಿಗಿಳಿದವು, ಎಷ್ಟು ಬಾರಿ ರಸ್ತೆ ತಡೆ ನಡೆಯಿತು, ಎಷ್ಟು ಮೆರವಣಿಗೆಗಳು ನಡೆದವು ಯಾವುದಕ್ಕೂ ಲೆಕ್ಕ ಇಟ್ಟವರಿಲ್ಲ. ಬೆಳಿಗ್ಗೆ 10.30ರಿಂದಲೇ ಒಂದರಮೇಲೊಂದರಂತೆ ಸಾಲು ಸಾಲು ಮೆರವಣಿಗೆಗಳು ನಡೆದವು.

ವೈದ್ಯರು, ಕಾಲೇಜು ವಿದ್ಯಾರ್ಥಿಗಳು, ದಾದಿಯರು, ಸಮಾಜ ಸೇವಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವರ್ತಕರು, ಶಾಲೆಗಳು ಪುಟಾಣಿ ಮಕ್ಕಳು ಎಲ್ಲರೂ ಅಣ್ಣಾ ಪರ ಘೋಷಣೆಗಳನ್ನು ಕೂಗಿ ಮೆರವಣಿಗೆ ನಡೆಸಿದರು. ಎಲ್ಲ ರಸ್ತೆಗಳೂ ಹೇಮಾವತಿ ಪ್ರತಿಮೆ ಹಾಗೂ ಜಿಲ್ಲಾಧಿಕಾರಿ ಕಚೇರಿಗಳತ್ತ ಮುಖಮಾಡಿದ್ದವು.

ಭ್ರಷ್ಟಾಚಾರ ವಿರೋಧಿ ಆಂದೋಲನದವರು ಕರೆ ನೀಡಿದ್ದ ಅರ್ಧ ದಿನದ ಬಂದ್‌ಗೆ ಹಾಸನದಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒತ್ತಾಯದ ಬಂದ್ ಇಲ್ಲವಾಗಿದ್ದರಿಂದ ಅಲ್ಲಲ್ಲಿ ಕೆಲವು ಅಂಗಡಿಗಳು ತೆರೆದಿದ್ದವು. ಆದರೆ ಹಳೆಯ ಬಸ್ ನಿಲ್ದಾಣದ ಮುಂಭಾಗ, ಬಿ.ಎಂ. ರಸ್ತೆ, ಮಾರ್ಕೆಟ್ ಪ್ರದೇಶಗಳಲ್ಲಿ ಶೇ 90ಕ್ಕೂ ಹೆಚ್ಚು ಅಂಗಡಿಗಳು ಮುಚ್ಚಿದ್ದವು.

ಮುಂಜಾನೆಯಿಂದ ಮಧ್ಯಾಹ್ನದವರೆಗೆ ಎಲ್ಲ ದಿಕ್ಕುಗಳಿಂದಲೂ ಬರುತ್ತಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸುವಷ್ಟರಲ್ಲಿ ಪೊಲೀಸರು ಹೈರಾಣಾಗಿದ್ದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ವಿದ್ಯಾರ್ಥಿಗಳು ಬಂದರು ಎನ್ನುವಷ್ಟರಲ್ಲಿ ಇನ್ಯಾರೋ ಬಂದು ಎನ್.ಆರ್  ವೃತ್ತದಲ್ಲಿ ರಸ್ತೆ ತಡೆ ಆರಂಭಿಸಿರುತ್ತಿದ್ದರು.

ಅವರನ್ನು ನಿಭಾಯಿಸುವಷ್ಟರಲ್ಲಿ ಹೇಮಾವತಿ ಪ್ರತಿಮೆ ಮುಂದೆ ರಸ್ತೆ ತಡೆ, ಅತ್ತ ಆಟೋಚಾಲಕರು ಆಟೋ ರ‌್ಯಾಲಿ, ಜೆಡಿಎಸ್ ಯುವ ಘಟಕದವರು ಬೈಕ್ ರ‌್ಯಾಲಿ, ಎಬಿವಿಪಿ ವಿದ್ಯಾರ್ಥಿಗಳಿಂದ ಮೆರವಣಿಗೆ, ಚಿನ್ನ ಬೆಳ್ಳಿ ವ್ಯಾಪಾರಿಗಳ ಪ್ರತಿಭಟನೆ, ರಸ್ತೆ ತಡೆ, ಅನುದಾನಿತ ಶಾಲಾ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಸಹಿತ ಬಂದು ಪ್ರತಿಭಟನೆ, ಕರ್ನಾಟಕ ರಕ್ಷಣಾ ವೇದಿಕೆ, ಜೈ ಕರ್ನಾಟಕ ಸಂಘಟನೆ, ಡಿವೈಎಫ್‌ಐ, ವರ್ತಕರ ಸಂಘ, ತೆರಿಗೆ ಸಲಹೆಗಾರರ ಸಂಘ... ಒಂದೆರಡಲ್ಲ ಎಲ್ಲ ವರ್ಗದ ಜನರೂ ಎದೆ ಮೇಲೆ ಅಣ್ಣಾ ಹಜಾರೆ ಚಿತ್ರಗಳನ್ನು ಅಂಟಿಸಿಕೊಂಡು, ಕೈಯಲ್ಲಿ ಗಾಂಧಿ, ಅಣ್ಣಾ ಚಿತ್ರ, ಭ್ರಷ್ಟಾಚಾರ ವಿರೋಧಿ ಘೋಷಣಾ ಫಲಕಗಳನ್ನು ಹಿಡಿದು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಯೂರೋ ಕಿಡ್ಸ್ ಸಂಸ್ಥೆಯ ಪುಟಾಣಿಗಳೂ  `ದೇಶವನ್ನು ಉಳಿಸಿ~ ಎಂಬ ಘೋಷಣೆಗಳನ್ನು ಕೂಗುತ್ತ ಶಿಕ್ಷಕರ ಜತೆಗೂಡಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 10.30ರ ಸುಮಾರಿಗೆ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ದುಡಿಯುವ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ದಾದಿಯರು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಮೆರವಣಿಗೆ ನಡೆಸಿದರು. ಬಳಿಕ ಎನ್.ಆರ್. ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿದರು.

ಡಾ. ಗುರುರಾಜ ಹೆಬ್ಬಾರ್, ಡಾ.ಭಾರತಿ ರಾಜಶೇಖರ್, ಡಾ.ಅಬ್ದುಲ್ ಬಷೀರ್, ಹಾನಬಾಳು ಮಹೇಶ್, ಡಾ. ದಿನೇಶ್ ಮುಂತಾದವರು ನೇತೃತ್ವ ವಹಿಸಿದ್ದರು. ಇವರ ಜತೆಗೆ ರೋಟರಿ ಕ್ವಾಂಟಾ, ರೋಟರಿ ಮಿಡ್‌ಟೌನ್ ಮುಂತಾದ ವಿವಿಧ ಸಂಸ್ಥೆಯವರೂ ಅಣ್ಣಾ ಪರ ಘೋಷಣೆಗಳನ್ನು ಕೂಗುತ್ತ ರಸ್ತೆಗಿಳಿಸಿದ್ದರು.

ಅನುದಾನಿತ ಶಾಲಾ ಆಡಳಿತ ಮಂಡಳಿಯವರು ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದರು. ಆಡಳಿತ ಮಂಡಳಿಯ ಸಿ.ಎ. ಕೃಷ್ಣಸ್ವಾಮಿ, ಬಿ.ಕೆ. ಮಂಜುನಾಥ್, ಅನಿಲ್ ಕುಮಾರ್  ಮತ್ತಿತರರು ಇದ್ದರು.

ಭ್ರಷ್ಟಾಚಾರ ವಿರೋಧಿ ಆಂದೋಲನದವರು ಹೇಮಾವತಿ ಪ್ರತಿಮೆಯ ಬಳಿ ಆರಂಭಿಸಿರುವ ಸತ್ಯಾಗ್ರಹ ಗುರುವಾರವೂ ಮುಂದುವರಿದಿದೆ. ಮಧ್ಯಾಹ್ನ ಒಂದು ಗಂಟೆಗೆ ಬಂದ್  ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಇದೇ ಜಾಗದಲ್ಲಿ ಸಾರ್ವಜನಿಕ ಅಭೆ ಆಯೋಜಿಸಲಾಯಿತು. ರಾತ್ರಿ ನಡೆಸಿದ ಪಂಜಿನ ಮೆರವಣಿಗೆಯಲ್ಲೂ ನೂರಾರು ಮಂದಿ ಪಾಲ್ಗೊಂಡರು.

ಸಕಲೇಶಪುರ ವರದಿ: ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಗುರುವಾರ ಪಟ್ಟಣದಲ್ಲಿ ಬಜರಂಗದಳ, ವಿಎಚ್‌ಪಿ ಹಾಗೂ ವರ್ತಕರು ಮೂರು ಗಂಟೆ ಕಾಲ ಅಂಗಡಿ ಗಳನ್ನು ಮುಚ್ಚಿ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 6ರಿಂದ 11ಗಂಟೆವರೆಗೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಹಳೆ ಬಸ್ಸು ನಿಲ್ದಾಣ ಮುಂಭಾಗ 10 ನಿಮಿಷಗಳ ಕಾಲ ಬೆಂಗಳೂರು-ಮಂಗಳೂರು  ರಾಷ್ಟ್ರೀಯ ಹೆದ್ದಾರಿ ತಡೆದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. 

ಸಂಘ ಪರಿವಾರದ ಮುಖಂಡ ಸಂತೋಷ್ ಮಾತನಾಡಿದರು. ಪ್ರಶಾಂತ್ ನಾಯ್ಡು, ಸ್ನೇಹ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಸಚಿನ್, ಬಜರಂಗದಳದ ತಾಲ್ಲೂಕು ಸಂಚಾಲಕ ವಿಜಯ್‌ಕುಮಾರ್, ಧರ್ಮೇಶ್, ಕುಶಾಲನಗರ ರಮೇಶ್, ಆಟೋ ರವಿ, ದುಶ್ಯಂತ್, ದೀಪಕ್, ರಘು, ಸುಧೀರ್, ಪ್ರದೀಪ್ ಸ್ನೇಹ ಯೂತ್ ಮೂವ್‌ಮೆಂಟ್‌ನ ಮಧು, ಉಮೇಶ್, ಶ್ರೀಕಾಂತ್ ಹಾಗೂ ವರ್ತಕರ ಸಂಘದ ಹರೀಶ್, ಪ್ರಶಾಂತ್, ಬಾಬುಜೀ ಮುಂತಾದವರು ಭಾಗವಹಿಸಿದ್ದರು.  

ಹೊಳೆನರಸೀಪುರ: ಅರ್ಧದಿನ ಬಂದ್ ಇಂದು
ಹೊಳೆನರಸೀಪುರ ವರದಿ:
ಅಣ್ಣಾ ನಿರಶನ ಬೆಂಬಲಿಸಿ ಹೊಳೆನರಸೀಪುರದ ವಿವಿಧ ಸಂಘಟನೆಗಳು ಶುಕ್ರವಾರ ಹೊಳೆನರಸೀಪುರ ಬಂದ್‌ಗೆ ಕರೆ ಕೊಟ್ಟಿವೆ.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಪಟ್ಟಣದ ಎಲ್ಲ ಅಂಗಡಿ, ಹೋಟೆಲ್, ಶಾಲಾ ಕಾಲೇಜು ಕಚೇರಿಗಳನ್ನು ಮುಚ್ಚಿ ಎಲ್ಲರೂ ಆಂದೋಲನಕ್ಕೆ ಬೆಂಬಲ ನೀಡಬೇಕೆಂದು ಪಟ್ಟಣದ ವರ್ತಕರ ಸಂಘ, ಜನಸ್ಪಂದನ ವೇದಿಕೆ, ವಕೀಲರ ಸಂಘ, ಬಟ್ಟೆ ಅಂಗಡಿ ಮಾಲೀಕರ ಸಂಘ,ಕರವೇ, ಪತಂಜಲಿ ಯೋಗ ಕೂಟ, ಕನ್ನಡ ಸಾಹಿತ್ಯ ಪರಿಷತ್, ಮಾದಿಗ ದಂಡೋರ ಸಮಿತಿ, ದಲಿತ ಸಂಘರ್ಷ ಸಮಿತಿ, ಪಟ್ಟಣದ ಎಲ್ಲಾ ಆಟೋ ಮತ್ತು ಚಾಲಕರ ಸಂಘ, ಕಾರು ಚಾಲಕರು ಮತ್ತು ಮಾಲೀಕರ ಸಂಘ, ರೋಟರಿ ಸಂಸ್ಥೆ, ವಿತರಕರ ಸಂಘ, ಫೊಟೊ ಸ್ಟುಡಿಯೋ ಮಾಲೀಕರ ಮತ್ತು ಛಾಯಾಗ್ರಾಹಕರ ಸಂಘ, ಆರ‌್ಯವೈಶ್ಯ ಮಂಡಳಿ, ವಾಸವಿ ಯುವಜನ ಸಂಘ, ಔಷಧಿ ವ್ಯಾಪಾರಿಗಳ ಸಂಘ, ಕೋಟೆ ಮಡಿವಾಳರ ಸಂಘ, ಕುರುಹಿನ ಶೆಟ್ಟಿ ಯುವಕ ಸಂಘ, ಬ್ರಾಹ್ಮಣರ ಸಂಘ ಗಳು ಬಂದ್‌ಗೆ ಕರೆ ಕೊಟ್ಟಿವೆ. ಬಂದ್ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಚನ್ನಾಂಬಿಕ ವೃತ್ತದಿಂದ ಹೊರಟು ಎಲ್ಲಾ ಶಾಲಾಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು ಹಾಗೂ ನಾಗರೀಕರು ಪೇಟೆ ಮುಖ್ಯ ಮತ್ತು ಕೋಟೆ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ನೀಡುವರು ಎಂದು ಸಂಘಟಕರು ತಿಳಿಸಿದ್ದಾರೆ.

ಹಳೇಬೀಡು ವರದಿ: ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಮತ್ತು ಅಣ್ಣಾ ಬಂಧನ ಖಂಡಿಸಿ ಪಟ್ಟಣದಲ್ಲಿ ಗುರುವಾರ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸಿದರು.

 ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಅಣ್ಣಾ ಭ್ರಷ್ಟಚಾರಕ್ಕೆ ಕಡಿವಾಣ  ಹಾಕಲು, ಜನತೆ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಭ್ರಷ್ಟಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡು ವುದಾಗಿ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಚ್.ಎಲ್.ಮೋಹನ್ ಹೇಳಿದರು.

ಗ್ರಾ.ಪಂ. ಅಧ್ಯಕ್ಷ ಲಿಂಗಪ್ಪ, ತಾಲ್ಲೂಕು ದರಕಾಸ್ತು ಸಮಿತಿ ಸದಸ್ಯ ಸಿ.ಟಿ.ಮೋಹನ್, ಮಾತನಾಡಿದರು.
ನಾಡಕಚೇರಿಗೆ ಅಗಮಿಸಿದ್ದ ಬೇಲೂರು ತಹಶೀಲ್ದಾರ್ ಚಿದಾನಂದ, ಉಪ ತಹಶೀಲ್ದಾರ್ ಪ್ರಕಾಶ್ ಕುಮಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಸಿಪಿಐ ಬಿ.ಕೆ.ಮಂಜಯ್ಯ ಇದ್ದರು.

ಗ್ರಾಪಂ ಸದಸ್ಯ ಬಸ್ತಿಹಳ್ಳಿ ಚಂದ್ರೇಗೌಡ, ಡಿಎಸ್‌ಎಸ್ ಮುಖಂಡ ಲಿಂಗರಾಜು, ವಾಣಿಜ್ಯೊಧ್ಯಮಿ ಎಚ್.ಎಂ.ಸುರೇಶ್, ಮುಖಂಡ ಪ್ರಸನ್ನ ಇತರರು ಪ್ರತಿಭಟನೆಯಲ್ಲಿದ್ದರು.

ಬಾಣಾವರ ವರದಿ: ಅಣ್ಣಾ ಹಜಾರೆ ಆಂದೋಲನ ಬೆಂಬಲಿಸಿ ಪಟ್ಟಣದ  ಶಾಲೆ-ಕಾಲೇಜು ವಿದ್ಯಾರ್ಥಿಗಳು ಗುರುವಾರ ರಸ್ತೆ ತಡೆ ನಡೆಸಿದರು.

  ಎಬಿವಿಪಿ ಮತ್ತು  ಎಲ್.ಎಂ.ಪರಮೇಶ್ವರಪ್ಪ ನೇತೃತ್ವದಲ್ಲಿ ಬೆಳಿಗ್ಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿದ್ಯಾರ್ಥಿಗಳು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ (206) ಕನಕ ವೃತ್ತದ ಬಳಿ ಕೆಲಕಾಲ ರಸ್ತೆ ತಡೆ ನಡೆಸಿದರು. ಕೇಂದ್ರ ಸರ್ಕಾರ ಪ್ರಬಲ ಜನಲೋಕಪಾಲ ಮಸೂದೆ ಜಾರಿಗೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

   ಕಿರಣ್, ಪಾಂಡು, ವಿರೂಪಾಕ್ಷಪ್ಪ, ಪವನ್, ಲಿಖಿತ್, ಲೋಹಿತ್, ಸಚಿನ್ ಇತರರು ಪ್ರತಿಭಟನೆಯಲ್ಲಿದ್ದರು.
ಅರೇಹಳ್ಳಿ(ಬೇಲೂರು) ವರದಿ:  ಅಣ್ಣಾ ಹಜಾರೆ ಬಂಧನ ಖಂಡಿಸಿ ಗುರುವಾರ ಕರೆ ನೀಡಿದ್ದ ಅರೇಹಳ್ಳಿ ಬಂದ್ ಯಶಸ್ವಿಯಾಯಿತು.

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ಪಟ್ಟಣದ ಎಲ್ಲ ಅಂಗಡಿ,  ಹೋಟೆಲ್, ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಸಂಪೂರ್ಣ ಬಂದ್ ಮಾಡಲ್ಪಟ್ಟಿದ್ದವು. ಶಾಲಾ ಕಾಲೇಜು ವಿದ್ಯಾರ್ಥಿಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಕಾಲೇಜು ಬಹಿಷ್ಕರಿಸಿದ್ದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಪ್ರಬಲ ಜನಲೋಕಪಾಲ; ಮಸೂದೆಗೆ ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಮಿತ್ ಕುಮಾರ ಶೆಟ್ಟಿ  ಮಾತನಾಡಿ,ಅಣ್ಣಾ ಅವರನ್ನು ಬಂಧಿಸಿ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಮಾಡಿದೆ. ಕೇಂದ್ರ ಸರ್ಕಾರ ನಿರಶನ ನಡೆಸಲು ಷರತ್ತು ವಿಧಿಸಿ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.ಡಾ.ನಾರಾಯಣಸ್ವಾಮಿ, ಕೆ.ಎಂ.ರಾಜೇಗೌಡ, ವಿಘ್ನೇಶ್ ಪ್ರತಿಭಟನೆಯಲ್ಲಿದ್ದರು.

ಅರಸೀಕೆರೆ ವರದಿ: ಪ್ರಬಲ ಜನಲೋಕಪಾಲ ಮಸೂದೆಗೆ ಆಗ್ರಹಿಸಿ ಹೋರಾಟ ಆರಂಭಿಸಿರುವ ಅಣ್ಣಾ ಹಜಾರೆ ಸತ್ಯಾಗ್ರಹ ಬೆಂಬಲಿಸಿ ತಾಲ್ಲೂಕಿನ ದೊಡ್ಡಮೇಟಿಕುರ್ಕೆ ಗ್ರಾಮಸ್ಥರು, ವಿದ್ಯಾರ್ಥಿಗಳು ಅರಸೀಕೆರೆ-ಹುಳಿಯಾರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು ಗುರುವಾರ ತರಗತಿ ಬಹಿಷ್ಕರಿಸಿ ಅರಸೀಕೆರೆ-ಹುಳಿಯಾರು ರಸ್ತೆ ಮೂಲಕ ಸಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶಶಿವಾಳ ರಸ್ತೆಯಲ್ಲಿ ಸಮಾಪನಗೊಂಡರು.

ಗ್ರಾಮದ ನಂಜುಂಡಶೆಟ್ಟಿ,ಸುರೇಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಶಶಿಧರ್,ಜಯದೇವ್, ಲೋಕೇಶ್, ಹೊಳಲ್ಕೆರೆ ಸತೀಶ್ ಇತರರು ಅರಸೀಕೆರೆ-ಹುಳಿಯಾರು ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು.
ನಂಜುಂಡಶೆಟ್ಟಿ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅಣ್ಣಾ ಅವರನ್ನುಬೆಂಬಲಿಸುವುದು ಎಲ್ಲರ ಕರ್ತವ್ಯ ಎಂದರು. 

ಸೊಪ್ಪನಹಳ್ಳಿ ಕೊಟ್ಟೂರಪ್ಪ,ಎಸ್.ಎಸ್.ಬಸವರಾಜು,ಡಿ.ಎಂಕುರ್ಕೆ ರೇವಣ್ಣ, ಜನ್ನಾವರದ ಜಗಣ್ಣ,ದಿಬ್ಬೂರು ಕುಮಾರ್ ಇತರರು ಇದ್ದರು.

ಅರಸೀಕೆರೆ: ಪಟ್ಟಣದ ಹಾಸನ ರಸ್ತೆಯ ಡಾ.ಅಂಬೇಡ್ಕರ್ ವೃತ್ತದಲ್ಲಿ ಕರವೇ ಕಾರ್ಯಕರ್ತರು ಅಣ್ಣಾ ಹೋರಾಟ ಮಾನವ ಸರಪಳಿ ನಿರ್ಮಿಸಿ ಅಣ್ಣಾ ಅವರ ಸತ್ಯಾಗ್ರಹಕ್ಕೆ ಗುರುವಾರ ಬೆಂಬಲ ಸೂಚಿಸಿದರು.

ಪಟ್ಟಣದ ಬಿ.ಎಚ್.ರಸ್ತೆಯಲ್ಲಿ  ತಾಲ್ಲೂಕು ಕರವೇ ಅಧ್ಯಕ್ಷ ಹೇಮಂತ್‌ಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಹಾಸನ ರಸ್ತೆಯ ಡಾ. ಅಂಬೇಡ್ಕರ್ ವೃತ್ತದಲ್ಲಿ ಸಮಾಪನಗೊಂಡು ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು.  

ಹೇಮಂತ್‌ಕುಮಾರ್ ಮಾತನಾಡಿ ಕೇಂದ್ರ ಸರ್ಕಾರ ಪ್ರಬಲ ಜನಲೋಕಪಾಲ ಮಸೂದೆ ಜಾರಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ರೈತ ಸಂಘದ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್, ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು, ಕರವೇ ನಗರ ಅಧ್ಯಕ್ಷ ಕಿರಣ್‌ಗೌಡ, ಪುಟ್ಟರಾಜು, ರೋಶನ್, ಗಂಗಾಧರ್, ರವಿ ಇತರರು ಇದ್ದರು.

ಅರಕಲಗೂಡು ವರದಿ: ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಆರಂಭಿಸಿರು ಹೋರಾಟವನ್ನು ಬೆಂಬಲಿಸಿ ಪಟ್ಟಣದಲ್ಲಿ ಗುರುವಾರ ವಿವಿಧ ಸಂಘಟನೆ ಸದಸ್ಯರು ಅಂಚೆ ಪತ್ರ ಚಳುವಳಿ ನಡೆಸಿದರು.

ಅ.ನ.ಕೃ. ವೃತ್ತದಲ್ಲಿ ಸೇರ್ಪಡೆಗೊಂಡ ಸಂಘಟನೆಗಳ ಕಾರ್ಯಕರ್ತರು ಪ್ರಬಲ ಲೋಕಪಾಲ ಕಾಯ್ದೆ ರಚಿಸುವಂತೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿಗೆ ಸೂಚಿಸಿ ರಾಷ್ಟ್ರಪತಿಗೆ ಬರೆಯಲಾದ 2 ಸಾವಿರ ಪತ್ರಗಳನ್ನು ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಪತ್ರಗಳನ್ನು ಅಂಚೆ ಡಬ್ಬಿಗೆ ಹಾಕಿದರು.

ಪಪಂ ಸದಸ್ಯ ಎನ್. ರವಿಕುಮಾರ್, ಕಸಾಪ ಮುಖಂಡರಾದ ರಮೇಶ್‌ವಾಟಾಳ್, ಶಶಿಕುಮಾರ್, ವಿವಿಧ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT