ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಿಂದ ದೇಶದಾದ್ಯಂತ ಆರಂಭ:ಗ್ರಾಮೀಣ ಅರ್ಥ ವ್ಯವಸ್ಥೆಯ ಸಮೀಕ್ಷೆ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ಸುಧಾರಣೆ ಕ್ರಮಗಳ ಜಾರಿ  ನೆಪದಲ್ಲಿ ಶ್ರೀಮಂತ ವರ್ಗದವರನ್ನು ಓಲೈಸಿದ ಕೇಂದ್ರ ಸರ್ಕಾರ ಈಗ ಗ್ರಾಮೀಣ ಭಾಗದ ರೈತಾಪಿ ವರ್ಗದತ್ತ ಮುಖ ಮಾಡಿದೆ.ಇದಕ್ಕಾಗಿ ಗ್ರಾಮಾಂತರ ಪ್ರದೇಶದ ರೈತ ಕುಟುಂಬಗಳ ಆದಾಯ, ಸಾಲದ ಹೊರೆ ಇವೇ ಮೊದಲಾದ ವಿಚಾರಗಳ ಬಗ್ಗೆ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

 ಕೇಂದ್ರದ ಅಂಕಿಸಂಖ್ಯೆ ಮತ್ತು ಕಾರ್ಯಕ್ರಮ ಜಾರಿ ಇಲಾಖೆಯ ವ್ಯಾಪ್ತಿಯಲ್ಲಿರುವ ನ್ಯಾಷನಲ್ ಮಾದರಿ ಸಮೀಕ್ಷಾ ಸಂಘಟನೆ (ಎನ್‌ಎಸ್‌ಎಸ್‌ಒ) 2013ರ ಜನವರಿಯಿಂದ ಒಂದು ವರ್ಷ ಕಾಲ ದೇಶದಾದ್ಯಂತ ಕೃಷಿ ಭೂಮಿ, ಕೃಷಿ ಚಟುವಟಿಕೆ, ಜಾನುವಾರುಗಳ ಪಾಲನೆ, ಕೃಷಿಕರ ಆದಾಯ ಮತ್ತು ಸಾಲ ಇವೇ ಮೊದಲಾದ ಅಂಶಗಳ ಬಗ್ಗೆ ಸಮೀಕ್ಷೆ ನಡೆಸಲಿದೆ. ಭವಿಷ್ಯದ ಕೃಷಿ ಮತ್ತು ಭೂ ನೀತಿಯನ್ನು ಸಿದ್ಧಪಡಿಸಲು ಅಗತ್ಯವಾದ ಮಾಹಿತಿ  ಕಲೆ ಹಾಕುವುದು ಇದರ ಮುಖ್ಯ ಉದ್ದೇಶ.

ಭೂ ಹಿಡುವಳಿ, ಜಾನುವಾರುಗಳ ಸಂಖ್ಯೆ, ನೀರಾವರಿ ವ್ಯವಸ್ಥೆ, ಕುಟುಂಬವಾರು ರೈತರ ಆದಾಯ, ಹೊಂದಿರುವ ಆಸ್ತಿ, ಕೃಷಿ ಪದ್ಧತಿ, ಕೃಷಿಯಲ್ಲಿ ಹೂಡಿಕೆ ಮತ್ತು ಸಾಲದ ಹೊರೆ ಇವೇ ಮೊದಲಾದ ವಿಷಯಗಳ ಬಗ್ಗೆ ಸಮಗ್ರ ವಿವರ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಆಸಕ್ತಿ ತೋರಿಸಿದೆ.

ಈ ಸಮೀಕ್ಷೆಯ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಜಾರಿಗೆ ತಂದಿರುವ ಕಾರ್ಯಕ್ರಮಗಳ ಸಫಲತೆ, ತಂತ್ರಜ್ಞಾನ ಅಳವಡಿಕೆಯಿಂದ ಆದ ಪ್ರಯೋಜನಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತದೆ.

ದೇಶದಲ್ಲಿ ಪ್ರಥಮ ಬಾರಿಗೆ ಇಂತಹ ಸಮೀಕ್ಷೆಯನ್ನು 1950ರಲ್ಲಿ ನಡೆಸಲಾಗಿತ್ತು. 2003ರಲ್ಲಿ ನಡೆಸಿದ ಸಮೀಕ್ಷೆಯ ನಂತರ ಮತ್ತೆ ಈಗ ಸಮೀಕ್ಷೆ ನಡೆಸಲಾಗುತ್ತಿದೆ.ಸಮೀಕ್ಷೆಯ ಎರಡನೇ ಭಾಗದಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಆರ್ಥಿಕ ಸ್ಥಿತಿಗತಿ, ಸಾಲದ ಅಗತ್ಯ, ಹಣಕಾಸು ನೆರವು ನೀಡುವ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.

ದೇಶದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡ ಎಂಟು ಸಾವಿರ ಬ್ಲಾಕ್‌ಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಪ್ರತಿ ಬ್ಲಾಕ್‌ನಲ್ಲಿ 300 ಕುಟುಂಬಗಳಿರುತ್ತವೆ. ಸಮೀಕ್ಷೆಗೆ ಅಗತ್ಯವಾದ ಪ್ರಶ್ನೆ ಮಾಲಿಕೆಯನ್ನು ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರ ಸಹಕಾರ ಪಡೆಯಲು ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು ನೀಡಲಾಗುತ್ತದೆ.

ಕೇಂದ್ರ ಸರ್ಕಾರ ಸಮೀಕ್ಷೆ ನಡೆಸುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರಗಳು ಸಹ ಹಳ್ಳಿಗಳಲ್ಲಿ ಸಮಾನಾಂತರವಾದ ಸಮೀಕ್ಷೆಯನ್ನು ನಡೆಸುವಂತೆ ಸೂಚಿಸಲಾಗಿದೆ.ಆರ್ಥಿಕ ಉದಾರೀಕರಣದ ನಂತರ ಶ್ರೀಮಂತರು ಮತ್ತು ಬಡವರ ಮಧ್ಯೆಯ ಅಂತರ ಹೆಚ್ಚಿದೆ ಎಂಬ ಟೀಕೆಯ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರವು ನೈಜ ಸ್ಥಿತಿಯನ್ನು ಅರಿಯಲು ಸಮೀಕ್ಷೆ ನಡೆಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT