ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

Last Updated 29 ಫೆಬ್ರುವರಿ 2012, 6:15 IST
ಅಕ್ಷರ ಗಾತ್ರ

ಸಿಂದಗಿ: ಜನವಿರೋಧಿ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದವು.

ಸ್ಥಳೀಯ ಡಾ. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಬಸ್ ನಿಲ್ದಾಣ ರಸ್ತೆ ಮಾರ್ಗವಾಗಿ ಟಿಪ್ಪು ಸುಲ್ತಾನ ವೃತ್ತ ತಲುಪಿ ಅಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು.

ನಂತರ ಹಳೇ ಎಸ್.ಬಿ.ಐ ರಸ್ತೆಯಿಂದ ವಿವೇಕಾನಂದ ವೃತ್ತದ ಮೂಲಕ ಬಸವೇಶ್ವರ ವೃತ್ತ ತಲುಪಿ ಅಲ್ಲಿಯೂ ಕೆಲ ಕಾಲ ರಸ್ತೆ ತಡೆ ನಡೆಸಿತು. ಮೆರವಣಿಗೆ ಅಲ್ಲಿಂದ ನೇರವಾಗಿ ಮಿನಿ ವಿಧಾನಸೌಧಕ್ಕೆ ಸಾಗಿ ಬಂದಿತು.

ರಾಜ್ಯ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ತಾಲ್ಲೂಕು ಸಮಿತಿ, ಬಿಸಿಯೂಟ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿ, ಬಿ.ಎಸ್.ಎನ್.ಎಲ್ ಎಂಪ್ಲಾಯಿಜ್ ಯುನಿಯನ್ ಇವುಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಜಿಲ್ಲಾ ಸಂಚಾಲಕ ಅಣ್ಣಾರಾಯ ಈಳಗೇರ, ಗ್ರಾ.ಪಂ. ನೌಕರರ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಂ.ಬಿ.ಕೊರಬು, ಅಂಗನವಾಡಿ ನೌಕರರ ಸಂಘ ತಾಲ್ಲೂಕು ಅಧ್ಯಕ್ಷೆ ಸರಸ್ವತಿ ಮಠ ಮಾತನಾಡಿ, ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಲು ಯಾವುದೇ ಸಕರಾತ್ಮಕ ಕಾಳಜಿ ವಹಿಸುತ್ತಿಲ್ಲ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತಷ್ಟು ತೀವ್ರಗೊಳ್ಳುವಂತೆ ಪೆಟ್ರೋಲಿಯಂ ಉತ್ಪನ್‌ಗಳ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ದೂರಿದರು. ಮನವಿ ಪತ್ರವನ್ನು ತಹಶೀಲ್ದಾರ ಡಾ. ಶಂಕ್ರಣ್ಣ ವಣಕಿಹಾಳ ಅವರಿಗೆ ಸಲ್ಲಿಸಲಾಯಿತು.

ಪ್ರತಿಭಟನಾ ಮೆರವಣಿಗೆ ನೇತೃತ್ವವನ್ನು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ತಾಲ್ಲೂಕು ಸಮಿತಿ ಅಧ್ಯಕ್ಷ ಎಸ್.ಎಸ್.ಮಠ, ಕಾರ್ಯದರ್ಶಿ ಎಸ್.ಜಿ. ಅಲ್ಲಾಪೂರ, ಜಿಲ್ಲಾ ಕಾರ್ಯದರ್ಶಿ ಎಸ್.ಜಿ. ಬೋರಗಿ, ಡಿ.ಎಂ. ಬಸಪಟ್ಟಣ, ಎಂ.ಎಸ್. ಬಾಲಿ, ಎಸ್.ಎಚ್. ಹಾಳಕೇರ, ಎಸ್.ಎಸ್. ಬನ್ನೆಟ್ಟಿ, ಎಂ.ಎ. ನಧಾಪ, ಅಂಗನವಾಡಿ ನೌಕರರ ಸಂಘದ ಎಸ್.ಎಂ. ಪಾಟೀಲ ಚಿಕ್ಕರೂಗಿ, ಬಿ.ಐ. ಬಾಳಿ ಚಾಂದಕವಠೆ, ಎಲ್.ಎಂ. ಕುಂಬಾರ ಆಲಮೇಲ, ಬಿ.ಎಂ. ಅಣಬಿ ಕನ್ನೊಳ್ಳಿ, ಎಸ್.ಎಂ. ಪತ್ತಾರ, ಅಯ್ಯಮ್ಮ ಸಿಂದಗಿ, ಶಕುಂತಲಾ ದರ್ಶನಕರ ಆಲಮೇಲ, ಬಿ.ಎಸ್.ಎನ್.ಎಲ್ ಎಂಪ್ಲಾಯಿಜ್ ಯುನಿಯನ್ ಪದಾಧಿಕಾರಿಗಳಾದ ಎಚ್.ಬಿ. ಹಾದಿಮನಿ, ಎಂ.ಟಿ. ರಾಠೋಡ, ಕಾಶೀನಾಥ, ಲಿಂಗಯ್ಯ, ಎಚ್.ಎಲ್.ನಧಾಪ, ಆರ್.ಎಸ್.ಹಂಡರಗಲ್ ವಹಿಸಿಕೊಂಡಿದ್ದರು.

ಕನಿಷ್ಠ ಕೂಲಿಗೆ ಆಗ್ರಹ

ಇಂಡಿ: ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ಹಲವು ಇಲಾಖೆಗಳ ನೌಕರರು ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಬಟನೆ ನಡೆಸಿದರು.

ಬಿಸಿಯೂಟ ನೌಕರರಿಗೆ ಕನಿಷ್ಠ ಪಕ್ಷ ರೂ. 10 ಸಾವಿರ ಕೂಲಿ ನೀಡಬೇಕು, ಬಿಸಿಯೂಟ ಟೆಂಡರ್‌ನೀಡಬಾರದು, ಕಾರ್ಮಿಕ ಇಲಾಖೆಯ ಆದೇಶದಂತೆ ಕನಿಷ್ಠ ಕೂಲಿಯನ್ನು ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ನೌಕರರಿಗೆ ತಕ್ಷಣದಿಂದ ಜಾರಿ ಮಾಡಬೇಕು, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಪಂಚಾಯಿತಿ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ ಇಂಡಿ ಸೇರಿದಂತೆ ತಾಲ್ಲೂಕಿನ ಇನ್ನಿತರ ನೌಕರರ ಸಂಘಗಳು ಜೊತೆಗೂಡಿ ಮಂಗಳವಾರ ಇಂಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ರ‌್ಯಾಲಿ ನಡೆಸಿದರು. ನಂತರ ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಟಿಪ್ಪು ಸುಲ್ತಾನ ವೃತ್ತ, ಬಸವೇಶ್ವರ ಸರ್ಕಲ್, ಡಾ, ಬಿ.ಆರ್.ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತದ ಮೂಲಕ ಕಚೇರಿ ರಸ್ತೆಯಲ್ಲಿ ಹಾಯ್ದು ತಹಶೀಲ್ದಾರ ಕಚೇರಿ ತಲುಪಿತು.

ಅಲ್ಲಿ ಕೆಲ ಕಾಲ ನೌಕರರ ಪರಿಸ್ಥಿತಿಯ ಬಗ್ಗೆ, ಬೆಲೆ ಏರಿಕೆಯನ್ನು ಉದ್ದೇಶಿಸಿ ಜೆಡಿಎಸ್ ಮುಖಂಡ ಗಣಪತಿ ಬಾಣಿಕೋಲ ಮತ್ತ ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಕಾರ್ಮಿಕರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿವೆ ಎಂದು ಆರೋಪಿಸಿದ ಅವರು ಬೆಲೆ ಏರಿಕೆಯನ್ನು ಈ ಕೂಡಲೇ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಕಾಳಮ್ಮ ಬಡಿಗೇರ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಭಾರತಿ ವಾಲಿ, ನಿರ್ಮಲಾ ಇಂಡಿ, ಗೀತಾ ಹಾಗೂ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಬಿ.ಎಲ್.ಬಂಡಪಟ್ಟಿ ಮುಂತಾದವರು ಮಾತನಾಡಿ ಸರ್ಕಾರದ ನೀತಿಯನ್ನು ಖಂಡಿಸಿದರು. ಬೃಹತ್ ರ‌್ಯಾಲಿಯ ನೇತೃತ್ವವನ್ನು ಎಸ್‌ಎಫ್‌ಐ ಮುಖಂಡ ಶಿವಾನಂದ ಅಂಗಡಿ, ಬಿ.ಡಿ. ಪಾಟೀಲ, ಜೆಟ್ಟೆಪ್ಪ ಹಲಸಮಗಿ, ಸಿದ್ದು ಡಂಗಾ, ಮಲ್ಲಯ್ಯಾ ಮಠಪತಿ, ಮಲ್ಲು ವಾಲೀಕಾರ, ಗ್ರಾಮ ಪಂಚಾಯತಿ ನೌಕರರ ಸಂಘದ ಹಜರತ್, ಉಮರಾಣಿ, ಬಿ.ಎಂ.ಸೋನಗಿ, ಎಸ್.ಪಿ. ಕೆರೂರ, ಶ್ರೀಶೈಲ ನಾಯಕ, ಬಿ.ಪಿ. ಅವರಾದಿ, ಡಿ.ಬಿ. ಗುಗ್ಗರಿ, ಬಿ.ಡಿ. ಮೆಂಡೇಗಾರ, ಕೆ.ಟಿ. ವಾಘಮೋರೆ, ಎಲ್.ಬಿ. ನದಾಫ, ಜಿ.ಕೆ. ದೇಸಾಯಿ, ಎಸ್.ಪಿ. ವಾಲೀಕಾರ, ಶೋಭಾ ಹೊಸಮನಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ನೂರಾರು ಜನ ಕಾರ್ಯಕರ್ತರು ನೇತೃತ್ವ ವಹಿಸಿದ್ದರು.

ತಹಶೀಲ್ದಾರರಿಗೆ ಮನವಿ

ಮುದ್ದೇಬಿಹಾಳ: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳದ ಆದೇಶದಂತೆ ಪಟ್ಟಣದಲ್ಲಿ ಮಂಗಳವಾರ ತಾಲ್ಲೂಕಾ ಘಟಕದ ಆಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ರ‌್ಯಾಲಿ ನಡೆಸಿ ತಹಶೀಲ್ದಾರರಿಗೆ ಹಾಗೂ ತಾಲ್ಲೂಕು ಸಿ.ಡಿ.ಪಿ.ಓ ಅವರಿಗೆ ಮನವಿ ಸಲ್ಲಿಸಲಾಯಿತು.

ಸಮಗ್ರ ಬಾಲ ವಿಕಾಸ ಯೋಜನೆಯನ್ನು ತಳಮಟ್ಟದಲ್ಲಿ ಫಲಾನುಭವಿಗಳಿಗೆ ಸಮರ್ಪಕವಾಗಿ ಮುಟ್ಟಿಸುವ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಜ್ವಲಂತ ಸಮಸ್ಯೆಗಳ ಈಡೇರಿಕೆಗೆ ಹಲವು ಸಲ ಮನವಿ ಸಲ್ಲಿಸಿದರೂ ಅವುಗಳ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ.

ಇಲಾಖೆಯ ಮಾಜಿ ಸಚಿವ ಸಿ.ಸಿ.ಪಾಟೀಲರ ಅಧ್ಯಕ್ಷತೆಯಲ್ಲಿ  ಬೇಡಿಕೆಗಳ ತೀರ್ಮಾನವನ್ನು ತಾಲ್ಲೂಕಾ ಯೋಜನಾ ಮಟ್ಟದಲ್ಲಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.  ಅಂಗನವಾಡಿ ಕಾರ್ಯಕರ್ತೆಯರ ನೇಮಕ ಹಾಗೂ ವರ್ಗಾವಣೆ ಇನ್ನಿತರ ವಿಷಯಗಳಲ್ಲಿ ಹಣ ಪಡೆದಿರುವ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.

ಮಹಾಮಂಡಳದ ಅಧ್ಯಕ್ಷೆ ನೀಲಮ್ಮ ಬೋರಾವತ, ಕಾರ್ಯದರ್ಶಿ ಶೋಭಾ ಘಾಟಗೆ, ಶೋಭಾ ಕಾಖಂಡಕಿ, ಕಲಾವತಿ ಪಾದಗಟ್ಟಿ, ಗುರುಬಾಯಿ ಲಮಾಣಿ, ಫತುಮಾ ಕಡಕೋಳ, ಗುರುಬಾಯಿ ಮಲಗೌಡರ, ಅಯ್ಯಮ್ಮ ವಣಕಿಹಾಳ, ಈರಮ್ಮ ವಂದಾಲ, ಮಹಾದೇವಿ ಜಕ್ಕೇರಾಳ ಮೊದಲಾದವರು ರ‌್ಯಾಲಿಯಲ್ಲಿ ಭಾಗವಹಿಸಿದ್ದರು.
 
ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

ಬಸವನಬಾಗೇವಾಡಿ:
ಕೇಂದ್ರ ಸರಕಾರದ ಆರ್ಥಿಕ ನೀತಿ ಹಾಗೂ ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಮಷ್ಕರಕ್ಕೆ ಇಲ್ಲಿಯ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ ಸಂಯೋಜಿತ ತಾಲ್ಲೂಕು ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದವರು ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಬಿ.ಎಸ್.ಬಡಿಗೇರ, ರಾಮನಗೌಡ ನರಸಲಗಿ, ವಿ.ಆರ್.ಅಮೀನಗಡ, ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಪುಂಡಲಿಕಪ್ಪ ಹಂದಿಗನೂರ, ಎಸ್.ವೈ.ಕುಂಬಾರ, ಸಂಗಪ್ಪ ಸೀತಿಮನಿ, ಎಸ್.ಜಿ.ಲಮಾಣಿ, ಚನ್ನಮಲ್ಲ ಗುಡ್ಡದ, ರಮೇಶ ಕಾಳೆ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT