ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಾಗರದ ನಡುವೆ ತೇರುಮಲ್ಲೇಶ್ವರ ರಥ

Last Updated 19 ಫೆಬ್ರುವರಿ 2011, 6:25 IST
ಅಕ್ಷರ ಗಾತ್ರ

ಹಿರಿಯೂರು: cc.ಬೀರೇನಹಳ್ಳಿ ಗ್ರಾಮದ ಮಜರೆ ಕರಿಯಣ್ಣನಹಟ್ಟಿಯಿಂದ ಆಗಮಿಸಿದ್ದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ, ದೇವಸ್ಥಾನದ ಮುಂಭಾಗದಿಂದ ಆರಂಭವಾದ ಬ್ರಹ್ಮರಥೋತ್ಸವ ಸಿದ್ಧನಾಯಕ ವೃತ್ತದಲ್ಲಿ ಮುಕ್ತಾಯವಾಯಿತು. ಬ್ರಹ್ಮ ರಥೋತ್ಸವದ ನಂತರ ಚಂದ್ರಮೌಳೇಶ್ವರ ಮತ್ತು ಉಮಾ ಮಹೇಶ್ವರ ದೇವರ ರಥ ಎಳೆಯಲಾಯಿತು. ಸಿದ್ಧನಾಯಕ ವೃತ್ತದಲ್ಲಿ ಸಾವಿರಾರು ಸುಮಂಗಲಿಯರು ರಥಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು.

ಪ್ರತಿ ವರ್ಷ ತಾಲ್ಲೂಕಿನ ಚಿಕ್ಕಸಿದ್ದವ್ವನಹಳ್ಳಿಯ ಭಕ್ತರು ರಥಕ್ಕೆ ಬೃಹತ್ ಹೂವಿನ ಹಾರ ತಯಾರಿಸಿ ಹಾಕುವುದು ವಾಡಿಕೆ. ಈ ಬಾರಿ ಇಡೀ ವರ್ಷ ಹೂವಿಗೆ ಉತ್ತಮ ಧಾರಣೆ ಇದ್ದ ಕಾರಣ, ಸಂತಸಗೊಂಡಿದ್ದ ಗ್ರಾಮಸ್ಥರು, ಸುಮಾರು ಒಂದು ಕ್ವಿಂಟಲ್‌ಗೂ ಹೆಚ್ಚಿನ ತೂಕದ ಸೇವಂತಿಗೆ ಹೂವಿನ ಹಾರವನ್ನು ತಯಾರಿಸಿ ತಂದಿದ್ದರು. ರಥಕ್ಕೆ ಗುಲಾಬಿ, ಸುಗಂಧರಾಜ, ತುಳಸಿ, ಚೆಂಡು ಹೂ ಮೊದಲಾದ ಹಾರಗಳನ್ನು ಸ್ಪರ್ಧೆಗಿಳಿದವರಂತೆ ಭಕ್ತರು ಹಾಕಿದ್ದ ಕಾರಣ ಇಡೀ ರಥ ಬಣ್ಣ ಬಣ್ಣದ ಹೂವುಗಳಿಂದ ಕಂಗೊಳಿಸುತ್ತಿತ್ತು.

ಶಿವ ಧನುಸ್ಸಿನ ಗಂಗಾ ಸ್ನಾನ:
ತೇರುಮಲ್ಲೇಶ್ವರ ದೇವಸ್ಥಾನದಲ್ಲಿ ಇರುವ ಭಾರೀ ತೂಕದ 20 ಅಡಿ ಉದ್ದದ ಶಿವ ಧನುಸ್ಸನ್ನು ರಥೋತ್ಸವಕ್ಕಿಂತ ಮುಂಚೆ ವೇದಾವತಿ ನದಿಗೆ ಒಯ್ದು ಸ್ನಾನ ಮಾಡಿಸಿ ತರಲಾಯಿತು. ಸ್ನಾನದ ನಂತರ ಹಿಂದಿರುಗುವಾಗ ಧನುಸ್ಸು ಹಗುರವಾಗಿದ್ದರೆ ಒಳ್ಳೆಯ ಮಳೆ-ಬೆಳೆ, ಸಂತಾನ ಭಾಗ್ಯ ಇಲ್ಲದವರು ಧನುಸ್ಸಿಗೆ ಹೆಗಲು ಕೊಟ್ಟರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ.

ದೇವಸ್ಥಾನ ನಿರ್ಮಾಣಕ್ಕೆ ಕಾರಣಳಾದ ಹೇಮರೆಡ್ಡಿ ಮಲ್ಲಮ್ಮ ಶಿವ ಧನುಸ್ಸನ್ನು ಊರುಗೋಲಾಗಿ ಬಳಸುತ್ತಿದ್ದಳೆಂಬ ಪ್ರತೀತಿ ಇದ್ದು, ಇದು ಪ್ರತಿ ವರ್ಷ ಒಂದು ರಾಗಿ ಕಾಳಿನಷ್ಟು ಬೆಳೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ.ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಹಾಗೂ ಜಾತ್ರಾ ಸಮಿತಿಯ ಪ್ರಮುಖರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಆರಂಭ ತಡ: ತೇರಿನ ರಥದ ಗಾಲಿಗಳಿಗೆ ಸನ್ನೆ ನಿರ್ವಹಣೆ ಮಾಡುತ್ತಿದ್ದವರಲ್ಲಿನ ಹೊಂದಾಣಿಕೆಯ ಕೊರತೆಯಿಂದ ಶುಕ್ರವಾರ ದಕ್ಷಿಣಕಾಶಿ ಎಂದು ಖ್ಯಾತಿ ಪಡೆದಿರುವ ನಗರದ ತೇರುಮಲ್ಲೇಶ್ವರಸ್ವಾಮಿ ರಥೋತ್ಸವ ಸುಮಾರು ಎರಡೂವರೆ ಗಂಟೆಗೂ ಹೆಚ್ಚು ತಡವಾಗಿ ಜರುಗಿತು. ಶುಕ್ರವಾರ ಮಧ್ಯಾಹ್ನ 12.30 ರವರೆಗೆ ರಾಹುಕಾಲ ಇದ್ದ ಕಾರಣ, 1.30 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರ ಘೋಷಣೆಯ ನಡುವೆ ಸುಮಾರು ಹತ್ತು ಅಡಿ ಸಾಗಿದ್ದ ರಥ, ಸನ್ನೆ ನಿರ್ವಹಿಸುತ್ತಿದ್ದವರ ಅಚಾತುರ್ಯ ದಿಂದ ಎಡಭಾಗದ ಚಕ್ರ ಓರೆಯಾದ ಕಾರಣ ಸ್ಥಗಿತಗೊಂಡಿತು.

ಎಷ್ಟೇ ಪ್ರಯತ್ನ ಮಾಡಿದರೂ ಚಕ್ರವನ್ನು ಸರಿಪಡಿಸಲು ಆಗದಿದ್ದಾಗ, ಕ್ರೇನ್ ಮೂಲಕ ರಥವನ್ನು ಹಿಂದಕ್ಕೆ ಎಳೆದು, ಸರಿದಾರಿಗೆ ತರಲಾಯಿತು. ಆದರೆ, ರಥ ಮುಂದೆ ಸಾಗಿತು ಎನ್ನುವಾಗಲೇ ಮತ್ತೆ ಹಿಂದೆ ನಿಂತಿದ್ದ ಜಾಗದಲ್ಲಿ ಬಲ ಭಾಗದ ಚಕ್ರ ಓರೆಯಾಗಿ, ರಥ ಚಲಿಸದಂತಾಗಿ ನೆರೆದಿದ್ದ ಸಹಸ್ರಾರು ಭಕ್ತರು ಕಂಗಾಲಾಗುವಂತೆ ಮಾಡಿತು. ಪುನಃ ಕ್ರೇನ್ ಸಹಾಯದಿಂದ ಸರಿಪಡಿಸಲಾಯಿತು.

ಬೀರೇನಹಳ್ಳಿ ಗ್ರಾಮದ ಮಜರೆ ಕರಿಯಣ್ಣನಹಟ್ಟಿಯಿಂದ ಆಗಮಿಸಿದ್ದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ, ದೇವಸ್ಥಾನದ ಮುಂಭಾಗದಿಂದ ಆರಂಭವಾದ ಬ್ರಹ್ಮ ರಥೋತ್ಸವ 4.30 ಗಂಟೆ ವೇಳೆಗೆ ಸಿದ್ಧನಾಯಕ ವೃತ್ತದಲ್ಲಿ ಮುಕ್ತಾಯವಾಯಿತು. ಈ ಬಾರಿ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ನಿರೀಕ್ಷಿತ ಪ್ರೋತ್ಸಾಹ ಸಿಗಲಿಲ್ಲ. ಸಾಕಷ್ಟು ಪ್ರಚಾರ ಮಾಡಿದ್ದರೂ ಕೇವಲ ಮೂರು ಜೋಡಿ ಮಾತ್ರ ಪಾಲ್ಗೊಂಡಿದ್ದರು.

ಪಿಕ್‌ಪಾಕೆಟ್: ಜನಜಂಗುಳಿ ಇದೆ ಎಂದರೆ ಪಿಕ್‌ಪಾಕೆಟ್ ಮಾಡುವವರಿಗೆ ಹಬ್ಬ. ರಥೋತ್ಸವಕ್ಕೆ ಚಿತ್ರದುರ್ಗದಿಂದ ಬಂದಿದ್ದ ವ್ಯಕ್ತಿಯೊಬ್ಬರ ಜೇಬು ಕತ್ತರಿಸಿದ ಕಳ್ಳರು  1,800 ಅಪಹರಿಸಿದ್ದಾರೆ. ಮತ್ತೊಬ್ಬರ ಜೇಬು ಕತ್ತರಿಸಿರುವ ಕಳ್ಳರಿಗೆ ಏನೂ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT