ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಾಮಾನ್ಯರ ಭಾಷೆ ಆಡಳಿತ ಭಾಷೆಯಾಗಲಿ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚನ್ನಪಟ್ಟಣ: ಜನಸಾಮಾನ್ಯರ ಭಾಷೆ ಆಡಳಿತ ಭಾಷೆಯಾದಾಗ ಮಾತ್ರ ಕನ್ನಡಿಗರ ಆಶಯ ಈಡೇರುತ್ತದೆ ಎಂದು ಹರಿಹರ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರೊ.ಎ.ಬಿ. ರಾಮಚಂದ್ರು ತಿಳಿಸಿದರು.

ಅವರು ಪಟ್ಟಣದ ವಿದ್ಯಾನಿಕೇತನ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕನ್ನಡ ಭಾಷಾ ಕಮ್ಮಟದಲ್ಲಿ ಭಾಷಾ ಕನ್ನಡ ಮತ್ತು ಆಡಳಿತ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿ ಮಾತನಾಡಿದರು.

1980ರ ದಶಕದವರೆಗೂ ಕನ್ನಡ ಭಾಷೆ ಆಡಳಿತಾತ್ಮಕವಾಗಿ ಪ್ರಾಶಸತ್ಯ ನೀಡಿರಲಿಲ್ಲ. ರಾಮಕೃಷ್ಣ ಹೆಗ್ಗಡೆಯವರ ಕಾಲದಲ್ಲಿ ಅಧಿಕೃತವಾಗಿ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಘೋಷಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟರೆಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟಿಸಿದ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ, ಸಂಸ್ಥೆಯ ಕಾರ್ಯದರ್ಶಿ ಎಸ್. ಲಿಂಗೇಶ್‌ಕುಮಾರ್ ಮಾತನಾಡುತ್ತಾ, ಹಲವಾರು ಭಾಷೆಗಳನ್ನು ವ್ಯವಹಾರಿಕವಾಗಿ ಕಲಿಯಬೇಕಾದರೂ ಕನ್ನಡ ಭಾಷೆ, ತಾಯಿ ಭಾಷೆ ಆತ್ಮಾಭಿಮಾನವನ್ನು ಮೂಡಿಸುತ್ತದೆಂದು ತಿಳಿಸಿದರು.

ಕಾರ್ಯಕ್ರಮದ 2ನೇ ವಿಚಾರ ಗೋಷ್ಠಿಯಲ್ಲಿ ಕನಕಪುರ ರೂರಲ್ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ಎಚ್.ಎಸ್. ಭುವನೇಶ್ವರ್ ಕನ್ನಡ ಮತ್ತು ಶಾಸ್ತ್ರೀಯ ಸ್ಥಾನಮಾನ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಮೂರನೇ ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಸರ್ಕಾರಿ ಬಾಲಕರ ಕಾಲೇಜಿನ ನಂ.ಶಿವಲಿಂಗಯ್ಯನವರು ನಾಟಕಕಾರರಲ್ಲಿ ಕಂಬಾರರು ಎಂಬ ವಿಷಯದ ಬಗ್ಗೆ ಪ್ರಸ್ತಾಪಿಸಿ ಅಪ್ಪಟ ದೇಶೀ ಸಂಸ್ಕೃತಿಯಲ್ಲೇ ಕಥೆ, ಕಾವ್ಯ ನಾಟಕಗಳನ್ನು ರಚಿಸಿ, ನಾಡು-ನುಡಿಗೆ ಸೇವೆ ಸಲ್ಲಿಸಿದ ಅಪ್ಪಟ ದೇಶಿ ಪ್ರತಿಭೆ ಎಂದರು.

ಕಾರ್ಯದಲ್ಲಿ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ಸಿದ್ದರಾಮೇಶ್ವರ ಪ.ಪೂ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಿ.ವಿ. ಜಯರಾಮೇಗೌಡ, ಉಪನ್ಯಾಸಕರಾದ ಎಂ.ಕೆ. ಶಿವಮ್ಮ, ಸುರೇಶ್, ವೆಂಕಟೇಶ್ ಭೂಹಳ್ಳಿ, ಚೇತನ್‌ಕುಮಾರ್ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಟಿ.ಎಂ. ರಾಜು ವಹಿಸಿದ್ದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದೇವರಾಜು ಸ್ವಾಗತ ಕೋರಿದರು. ಉಪನ್ಯಾಸಕ ಬಿ.ಪಿ. ಸುರೇಶ್ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಗಾಯಕ ಸಿ.ಎ. ಶಾಂತಕುಮಾರ್, ಗಾಯಕಿ ಶಾರದಾ ನಾಗೇಶ್, ಕಲಾವಿದರಾದ ವಸಂತ್‌ಕುಮಾರ್,  ಬ್ಯಾಡರಹಳ್ಳಿ ಶಿವಕುಮಾರ್ ಶ್ರೀನಿವಾಸ್‌ಮೂರ್ತಿ ಮುಂತಾದವರು ಗೀತಗಾಯನ ನಡೆಸಿಕೊಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT