ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಾಮಾನ್ಯರಿಗೂ ಯುದ್ಧ ವಿಹಾರ ಯೋಗ

Last Updated 12 ಫೆಬ್ರುವರಿ 2011, 6:25 IST
ಅಕ್ಷರ ಗಾತ್ರ

ಯಲಹಂಕ ವಾಯುನೆಲೆ: ಪೈಲಟ್ ಜೊತೆ ಯುದ್ಧ ವಿಮಾನವೊಂದರಲ್ಲಿ ಕುಳಿತು ಒಂದಷ್ಟು ಹೊತ್ತು ಬಾನಿನಲ್ಲಿ ವಿಹರಿಸಿದರೆ ಹೇಗಿರುತ್ತದೆ? ಯುದ್ಧದ ಸಂದರ್ಭದಲ್ಲಿ ಪೈಲಟ್‌ಗಳು ಶತ್ರುವಿನ ಮೇಲೆ ಪ್ರಯೋಗ ಮಾಡುವ ಕ್ಷಿಪಣಿಗಳು, ಬಾಂಬ್‌ಗಳು ಮತ್ತಿತರ ಶಸ್ತ್ರಾಸ್ತ್ರಗಳು ಯಾವ ಪರಿಣಾಮ ಬೀರುತ್ತವೆ ಎಂಬುದನ್ನೂ ಪೈಲಟ್ ಜೊತೆಯೇ ನೋಡುವ ಯೋಗ ಒದಗಿದರೆ ಹೇಗೆ?

ಹೇಗಿರುತ್ತದೆ ಎಂಬ ಯೋಚನೆ ಏಕೆ? ಅದು ನಿಜಕ್ಕೂ ರೋಮಾಂಚಕಾರಿ ಅನುಭವ. ಯುದ್ಧದಿಂದ ಗಾವುದ ದೂರ ಇರುವ ಜನಸಾಮಾನ್ಯರ ಜೀವನದಲ್ಲಂತೂ ಇಂಥ ಅವಕಾಶಗಳು ದೊರೆಯುವುದು ಅಪರೂಪದಲ್ಲಿ ಅಪರೂಪ. ಆದರೆ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೊ ಇಂಡಿಯಾ-2011 ವೈಮಾನಿಕ ಪ್ರದರ್ಶನದಲ್ಲಿ ಇಂಥದ್ದೊಂದು ಅಪೂರ್ವ ಅನುಭವ ಪಡೆಯುವ ಅವಕಾಶ ಜನಸಾಮಾನ್ಯರಿಗೂ ಲಭ್ಯ.

ಎಚ್‌ಎಎಲ್ ಮಳಿಗೆಯಲ್ಲಿ...: ಭಾರತದ ಪ್ರಮುಖ ವಿಮಾನ ತಯಾರಿಕಾ ಸಂಸ್ಥೆ ಎಚ್‌ಎಎಲ್ ತನ್ನ ಪ್ರದರ್ಶನ ಮಳಿಗೆಯಲ್ಲಿ ಮಾಧ್ಯಮಿಕ ಜೆಟ್ ತರಬೇತಿ ಮಾದರಿ (ಇಂಟರ್ಮೀಡಿಯೆಟ್ ಜೆಟ್ ಟ್ರೈನಿಂಗ್ ಸಿಮ್ಯುಲೇಟರ್) ಕೇಂದ್ರವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆದಿದೆ.

ಆಧುನಿಕ ವಿಡಿಯೊ ಗೇಮ್ ಕೇಂದ್ರಗಳಲ್ಲಿ ಇರುವಂತೆಯೇ ಇಲ್ಲಿ ಕೂಡ ದೊಡ್ಡ 3-ಡಿ ಪರದೆಯ ಮೇಲೆ ಯುದ್ಧ ವಿಮಾನವೊಂದರ ಚಿತ್ರ ಇರುತ್ತದೆ. ಆ ಪರದೆಯ ಎದುರು ಪೈಲಟ್ ಕುಳಿತುಕೊಳ್ಳುವ ಸೀಟ್, ವಿಮಾನ ಚಲಾಯಿಸಲು ಅಗತ್ಯವಿರುವ ಸಲಕರಣೆಗಳೂ ಇರುತ್ತವೆ. ವಿಡಿಯೊ ಗೇಮ್ ಕೇಂದ್ರಗಳಲ್ಲಿ 3-ಡಿ ಪರದೆಯ ಮುಂದೆ ಕಾರಿನ ಸ್ಟಿಯರಿಂಗ್ ಇರುವ ಮಾದರಿಯಲ್ಲೇ ಇಲ್ಲಿ ಪೈಲಟ್ ಸೀಟ್ ಇರುತ್ತದೆ.

ಪೈಲಟ್‌ನ ಅಕ್ಕಪಕ್ಕ ನಿಗದಿತ ಸಂಖ್ಯೆಯಲ್ಲಿ ಸಾರ್ವಜನಿಕರು ನಿಂತುಕೊಳ್ಳಲು ಸ್ಥಳ. ಸಾರ್ವಜನಿಕರು ಈ ಸಿಮ್ಯುಲೇಟರ್ ವಿಮಾನವನ್ನು ನೋಡಲು ಆಗಮಿಸುತ್ತಿದ್ದಂತೆಯೇ 3-ಡಿ ಪರದೆಯ ಮೇಲಿನ ವಿಮಾನ ಚಲಾಯಿಸಲು ಆರಂಭಿಸುವ ಪೈಲಟ್ ನೀಲಾಕಾಶದಲ್ಲಿ (3-ಡಿ ಪರದೆಯ ಮೇಲಿನ ನೀಲಾಕಾಶ!) ವಿಮಾನ ಚಲಾಯಿಸಲು ಆರಂಭಿಸುತ್ತಾನೆ. ಆಮೇಲೆ... ಆಮೇಲೇನು?

ಮತ್ತೆ ಅಲ್ಲಿ ಕಾಣಿಸುವುದೆಲ್ಲ ಸಾಕ್ಷಾತ್ ವಿಮಾನವೊಂದರಲ್ಲಿ ಪ್ರಯಾಣಿಸಿದಾಗ ಏನೆಲ್ಲ ಕಾಣಿಸುತ್ತದಯೋ ಅದೇ! ಎದುರಿನ ಪರದೆಯ ಮೇಲೆ ಕಾಣುವ ವಿಶಾಲ ಭೂಪ್ರದೇಶ. ಪರದೆಯ ಮೇಲೆ ಅಲ್ಲಲ್ಲಿ ಸಣ್ಣದಾಗಿ ಕಾಣಿಸುವ ಶತ್ರು ವಿಮಾನಗಳು, ಶತ್ರುಗಳಿಗೆ ಗುರಿಯಿಟ್ಟು ಕ್ಷಿಪಣಿ ಪ್ರಯೋಗಿಸುವ ಪೈಲಟ್. ಇವೆಲ್ಲವೂ ಎದುರಿನ 3-ಡಿ ಪರದೆಯ ಮೇಲೆ ಗೋಚರಿಸುತ್ತವೆ.

ಏನಿದರ ಉಪಯೋಗ?: ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಹೊರತಾಗಿ ಈ ಸಾಧನ ವಾಯುಪಡೆಯಲ್ಲಿ ಅತ್ಯುಪಯುಕ್ತ.ಪೈಲಟ್ ಆಗಿ ಕರ್ತವ್ಯ ನಿರ್ವಹಿಸುವ ಇಚ್ಛೆಯಿಂದ ವಾಯುಪಡೆಗೆ ಸೇರುವ ಅಭ್ಯರ್ಥಿಗಳನ್ನು ಮೊದಲು ಇಂಥ ಸಿಮ್ಯುಲೇಟರ್ ಯುದ್ಧ ವಿಮಾನಗಳಲ್ಲಿ ಪಳಗಿಸಿ, ನಂತರವಷ್ಟೇ ನೈಜ ಯುದ್ಧ ವಿಮಾನ ಹಾರಿಸಲು ಅನುವು ಮಾಡಲಾಗುತ್ತದೆ.

ಈ ಸಿಮ್ಯುಲೇಟರ್ ಯುದ್ಧ ವಿಮಾನವನ್ನು ಹಾರಿಸುವಾಗ (ಅರ್ಥಾತ್ 3-ಡಿ ಪರದೆಯ ಮೇಲೆ ಹಾರಿಸುವಾಗ) ಪೈಲಟ್ ಏನಾದರೂ ಪ್ರಮಾದ ಎಸಗಿದಲ್ಲಿ ಇದೂ ಅಪಘಾತಕ್ಕೆ ಈಡಾಗುತ್ತದೆ. ಆಗ ಈ ಹೊಸ ಉತ್ಸಾಹಿ ಪೈಲಟ್‌ಗೆ ತಾನು ತಪ್ಪೆಸಗಿದ್ದೆಲ್ಲಿ, ಅದನ್ನು ಹೇಗೆ ತಡೆಯಬಹುದಿತ್ತು ಎಂಬ ಅರಿವು ಮೂಡುತ್ತದೆ.ಹಾಗೆಯೇ ಶತ್ರುವಿನ ಮೇಲೆ ಇಟ್ಟ ಗುರಿ ತಪ್ಪಿದಾಗ, ‘ಯು ಮಿಸ್ಡ್ ದಿ ಟಾರ್ಗೆಟ್’ ಅಂತ ಇದೇ ಸಿಮ್ಯುಲೇಟರ್ ವಿಮಾನ ಹೇಳುತ್ತದೆ. ಗುರಿ ತಪ್ಪಿದ ಕ್ಷಿಪಣಿ ಭೂಮಿಯ ಮೇಲೆ ಎಲ್ಲಿ ಬಿತ್ತು ಎಂಬುದೂ ಪರದೆಯ ಮೇಲೆ ಕಾಣುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT