ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಾಮಾನ್ಯರಿಗೆ ಹ್ಯಾಕಿಂಗ್ ಗೈಡ್

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಿಮ್ಮ ಕಚೇರಿಯಲ್ಲಿ ಜಿ-ಮೇಲ್ ಬಳಕೆ ನಿಷೇಧಿಸಲಾಗಿದೆಯೇ ಹಾಗಿದ್ದರೆ ಇಲ್ಲಿದೆ ಸುಲಭ ಪರಿಹಾರ. ಇಂಟರ್ನೆಟ್ ಗುಂಡಿ ಅದುಮಿದೊಡನೆ ಮೊದಲು ಮೂಡುವ ಹೋಮ್‌ಪೇಜ್‌ನಲ್ಲಿ ಅನಾನಿಮೈಜರ್ (anonymizer.com) ಗೆ ಲಾಗ್‌ಆನ್ ಆಗಿ.
 
ಅಲ್ಲಿ ನೀವು ಭೇಟಿ ನೀಡಬಯಸುವ ಗೂಗಲ್.ಕಾಮ್ ಅನ್ನು ಟೈಪ್ ಮಾಡಿದಾಗ ರಷ್ಯಾ ಭಾಷೆಯ ಗೂಗಲ್ ಹೋಮ್ ಪೇಜ್ ತೆರೆದುಕೊಳ್ಳುತ್ತದೆ. ಆಗ ರಷ್ಯಾದ ಬಳಕೆದಾರನೊಬ್ಬ ಗೂಗಲ್/ಜಿ-ಮೇಲ್‌ಗೆ ಭೇಟಿ ನೀಡಿದಂತಾಗುತ್ತದೆಯೇ ಹೊರತು ಭಾರತೀಯ ಬಳಕೆದಾರನ ಮಾಹಿತಿ ಲಭಿಸುವುದಿಲ್ಲ.

ಟೋರ್ (ದಿ ಆನಿಯನ್ ರೂಟರ್) ಇಂತಹುದೇ ಇನ್ನೊಂದು ವೆಬ್‌ಸೈಟ್. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾವಿರಕ್ಕೂ ಅಧಿಕ ವೆಬ್‌ಸೈಟ್‌ಗಳನ್ನು ಚಂದಾದಾರರಾಗಿ ಹೊಂದಿರುವ ಇದು ತನ್ನ ಎಲ್ಲಾ ಬಳಕೆದಾರರಿಗೆ ಇಷ್ಟವಾದ ತಾಣಗಳನ್ನು ಬಳಸಲು ಅವಕಾಶ ಕೊಡುತ್ತದೆ.

ಒಮ್ಮೆ ಗೂಗಲಿಸಿದರೆ ಇಂಥ ಅನೇಕ ವಿಷಯಗಳು ಅಂತರ್ಜಾಲದಲ್ಲಿಯೇ ಸಿಗುತ್ತವೆ. ಆದರೆ ಇವುಗಳನ್ನು ಹುಡುಕಿ, ಸರಿಯಾಗಿ ಕೆಲಸ ಮಾಡುತ್ತದೆಯೇ ಎಂಬುದನ್ನು ಖಚಿತ ಪಡಿಸಿಕೊಂಡು ಬಳಸುವುದಕ್ಕೆ ನೀಮಗೆ `ಗೀಕಿ~ ಮನಸ್ಥಿತಿ ಇರಬೇಕಾಗುತ್ತದೆ.

ಜನಸಾಮಾನ್ಯರಿಗೆ ಇಂಥ ಕಷ್ಟಗಳು ಬೇಡ ಎಂದು ನಿರ್ಧರಿಸಿರುವ ಅಂಕಿತ್ ಫಾದಿಯಾ ತಮ್ಮ ಇಂಥ ಜ್ಞಾನವನ್ನು `ಹೌ ಟು ಅನ್‌ಬ್ಲಾಕ್ ಎವರಿತಿಂಗ್ ಆನ್ ದಿ ಇಂಟರ್ನೆಟ್~ ಪುಸ್ತಕದಲ್ಲಿ ಸಂಗ್ರಹಿಸಿದ್ದಾರೆ. ಇರಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ನಿಷೇಧಗಳನ್ನು ಮುರಿಯವುದು ಸಾಧ್ಯ.

ಅಂಕಿತ್ ಫಾದಿಯಾ ತಂತ್ರಜ್ಞಾನ ಜಗತ್ತಿನೊಂದಿಗೆ ಸಂಪರ್ಕ ಇರುವವರಿಗೆಲ್ಲಾ ಪರಿಚಿತರು. `ಎಥಿಕಲ್ ಹ್ಯಾಕರ್~ ಪುಸ್ತಕ ಬರೆದ ಬಳಿಕ ಅದೇ ಹೆಸರಿನಿಂದ ಕರೆಯಿಸಿಕೊಳ್ಳುವ ಅಂಕಿತ್ ಮೂಲತಃ ಕೊಯಮುತ್ತೂರಿನವರು. 26ನೇ ವಯಸ್ಸಿಗೇ ಡಿಜಿಟಲ್ ಲೋಕದ ಆಳಅಗಲವನ್ನರಿತು 14ಕ್ಕೂ ಅಧಿಕ ಪುಸ್ತಕಗಳನ್ನು ರಚಿಸಿದವರು.
 
10ಮಿಲಿಯನ್ ಪುಸ್ತಕಗಳ ಮಾರಾಟವಾದ ಹೆಗ್ಗಳಿಕೆ ಇವರ ಕೃತಿಗಳು ಜಪಾನೀಸ್, ಕೊರಿಯನ್, ಪೋರ್ಚುಗೀಸ್, ಪೋಲಿಶ್ ಭಾಷೆಗಳಿಗೂ ತರ್ಜುಮೆಗೊಂಡಿದೆ. ಇವರು ಆರಂಭಿಸಿದ (ಎಎಫ್‌ಸಿಇಎಚ್-ಅಂಕಿತ್ ಫಾದಿಯಾ ಸರ್ಟಿಫೈಡ್ ಎಥಿಕಲ್ ಹ್ಯಾಕರ್) ಕೋರ್ಸ್ ಭಾರತದ ಅತಿದೊಡ್ಡ ಹ್ಯಾಕಿಂಗ್ ತರಬೇತಿ ಕೇಂದ್ರ ಎನಿಸಿಕೊಂಡಿದೆ.
 
ಫ್ಲೈಯಿಂಗ್ ಮೆಶಿನ್ ಸ್ಟೋರ್‌ನ ಬಟ್ಟೆಗಳೆಂದರೆ ಅಂಕಿತ್‌ಗೆ ಬಹಳ ಇಷ್ಟವಂತೆ. ಅದೇ ಕಾರಣಕ್ಕೆ ಅವರು ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಮಳಿಗೆಯಲ್ಲೇ ತಮ್ಮ ಪುಸ್ತಕವನ್ನು ಬಿಡುಗಡೆ ಮಾಡಿಕೊಂಡು ಸಂತೋಷಿಸಿದರು.

ಪುಸ್ತಕದ ಬಿಡುಗಡೆಯ ಸಂದರ್ಭದಲ್ಲೂ ಹೀಗೆ ಎಲ್ಲಾ ಎಲ್ಲೆಗಳನ್ನು ಮೀರುವ ತಂತ್ರಗಳನ್ನು ಬಹಿರಂಗ ಪಡಿಸುವುದು ಸರಿಯೇ ಎಂಬ ಚರ್ಚೆ ನಡೆಯಿತು. ಈ ಕೃತಿ ಹ್ಯಾಕಿಂಗ್ ಮಾಡುವ ಕಳ್ಳರ ಕೈಗೆ ಸಿಕ್ಕರೆ ದುರ್ಬಳಕೆ ಆಗುವ ಸಾಧ್ಯತೆ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅಂಕಿತ್, ಎಲ್ಲಾ ಪುಸ್ತಕದ ಹಿಂದೆಯೂ ಎರಡು ಸಾಧ್ಯತೆಗಳಿವೆ, ಒಳಿತನ್ನು ಬಯಸುವುದಷ್ಟೇ ನಮ್ಮ ಉದ್ದೇಶ. ನಾಲ್ಕು ಜನ ಹ್ಯಾಕರ್ಸ್‌ಗೆ ಸಿಗುವ ಬದಲು ನೂರಾರು ಮುಗ್ದರಿಗೆ ನೆರವಾಗುತ್ತದೆ ಎಂಬ ಭರವಸೆ ನಮ್ಮದು ಎನ್ನುತ್ತಾ ಮುಗುಳು ನಗೆ ಚೆಲ್ಲಿದರು.

`ನಮ್ಮ ದೇಶವೂ ಚೈನಾ ಮಾದರಿಯಲ್ಲಿ ಮುಂದಡಿಯಿಡುವುದು ಬೇಡ ಎಂಬ ಕಾರಣಕ್ಕೆ ಈ ಪುಸ್ತಕ ಬರೆದೆ. ಅಲ್ಲಿ ಅಂತರ್ಜಾಲದ ಅಶ್ಲೀಲ ಮಾಹಿತಿಗಳನ್ನು ಕಿತ್ತು ಹಾಕಲೆಂದು 40,000 ಮಂದಿಯನ್ನು ನೇಮಿಸಲಾಗಿದೆ.
 
ಅವರು ಪ್ರತಿನಿತ್ಯ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗುವ ಆಕ್ಷೇಪಾರ್ಹ ಬರಹಗಳ ಮೇಲೆ ಕಣ್ಣಾಡಿಸುತ್ತಾ ಅವುಗಳನ್ನು ಬ್ಲಾಕ್ ಮಾಡುವ ಕೆಲಸ ಮಾಡುತ್ತಾರೆ. ಭಾರತಕ್ಕೂ ಈ ದುರ್ಗತಿ ಬರದಿರಲಿ ಎಂಬುದಷ್ಟೇ ನನ್ನ ಆಶಯ~

`ಮುಖ್ಯವಾಗಿ ಭಾರತ ಪ್ರಜಾಪ್ರಭುತ್ವ ದೇಶ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಅನೈತಿಕ ಬರಹ ಇಲ್ಲವೇ ಚಿತ್ರಗಳನ್ನು ಪ್ರಕಟಿಸದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ಬದಲಾಗಿ ವೆಬ್‌ಸೈಟ್‌ಗಳನ್ನೇ ನಿಷೇಧಿಸಲು ಮೊದಲಾಗಿರುವುದು ಮೂರ್ಖತನದ ಪರಮಾವಧಿ.~ವೃತ್ತಿಪರ ಹಾಗೂ ಜನಸಾಮಾನ್ಯರಿಬ್ಬರಿಗೂ ಅರ್ಥವಾಗಬೇಕೆಂಬ ಉದ್ದೇಶದಿಂದ ಸುಲಭ ಭಾಷೆಯಲ್ಲಿ ಈ ಕೃತಿ ರಚಿಸಲಾಗಿದೆ.

ನಿಷೇಧಗೊಂಡಿರುವ ವೆಬ್‌ಸೈಟ್‌ಗಳನ್ನು ಬಳಸುವ ಅತಿ ಸುಲಭದ ವಿಧಾನಗಳನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಇದರಲ್ಲಿ ನಿರ್ಬಂದಗೊಂಡಿರುವ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ 50 ವಿಧಾನಗಳನ್ನು ಇದರಲ್ಲಿವೆ. ಮುಂದಿನ ಕೆಲವು ತಿಂಗಳಲ್ಲಿ ಈ ಪುಸ್ತಕದ ಎರಡನೇ ಆವೃತ್ತಿ ತರುವ ಭರವಸೆ ಲೇಖಕರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT