ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜನಾಗ್ರಹ' ಸುಧಾರಣಾ ಸಮೀಕ್ಷೆ!

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜಾಗತಿಕ ನಕ್ಷೆಯಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ಬೆಂಗಳೂರು ಮಹಾನಗರ ಬೃಹತ್ ಆಗಿ ಬೆಳೆದಿದೆ. ದೇಶ, ವಿದೇಶಗಳ ಬಹುಮುಖಿ ಸಂಸ್ಕೃತಿಯನ್ನು ತನ್ನೊಳಗೆ ತಳುಕು ಹಾಕಿಕೊಂಡಿರುವ ಸಿಲಿಕಾನ್ ಸಿಟಿ ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆದಿದೆ. ದಿನೇ ದಿನೇ ವಿಸ್ತಾರಗೊಳ್ಳುತ್ತಿರುವ ನಗರದ ಆಡಳಿತ ನಿರ್ವಹಣೆಯ ಹೊಣೆ ಹೊತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೋ ಹತ್ತಾರು ಬಗೆಯ ಆಡಳಿತಾತ್ಮಕ ಸವಾಲುಗಳು.

ಹೀಗಿರುವಾಗ, ಈ ಮಹಾನಗರದ ಮೂಲಸೌಕರ್ಯ ಮತ್ತು ಸೇವೆಗಳ ಗುಣಮಟ್ಟವನ್ನು ಕಂಡುಕೊಳ್ಳುವ ಸಮೀಕ್ಷೆಯೊಂದನ್ನು `ಜನಾಗ್ರಹ' ನಾಗರಿಕ ಮತ್ತು ಪ್ರಜಾಪ್ರಭುತ್ವ ಕೇಂದ್ರ ಕೈಗೊಂಡಿದೆ. ಹೀಗೆ ಕಲೆಹಾಕಿದ ವಿವರಗಳನ್ನು ಜನರ ಮುಂದಿಡುವ ಮೂಲಕ ಪಾಲಿಕೆ ಮತ್ತು ಸಮಾಜದ ನಡುವೆ ಸಮನ್ವಯ ತಂದು ಸುಧಾರಣೆಗೆ ಚಾಲನೆ ಕೊಡುವುದು ಸಂಸ್ಥೆಯ ಉದ್ದೇಶ.

`ವಾರ್ಡ್ ಗುಣಮಟ್ಟ ಅಂಕ' (WQS- ward Quality Score) ಎಂಬ ಯೋಜನೆಯಡಿ ಹಮ್ಮಿಕೊಳ್ಳಲಾಗಿರುವ ಈ ಸಮೀಕ್ಷೆಯನ್ನು `ಜನಾಗ್ರಹ ಕೇಂದ್ರ' 2010ರಲ್ಲಿ ಪ್ರಥಮ ಬಾರಿಗೆ ನಡೆಸಿತ್ತು. ಅದರ ಮುಂದುವರೆದ ಭಾಗವಾಗಿ ಮಹಾನಗರದ ಮೂಲಭೂತ ಸೌಕರ್ಯಗಳು ಮತ್ತು ಸೇವೆಗಳ ಸಮೀಕ್ಷೆಗೆ ಈ ವರ್ಷದ ಏಪ್ರಿಲ್ ಆರಂಭದಿಂದ ಮತ್ತೆ ಚಾಲನೆ ಕೊಟ್ಟಿದೆ.

ಏನಿದು ಯೋಜನೆ?
ನಗರದ 198 ವಾರ್ಡ್‌ಗಳ ಜನರ ಜೀವನಮಟ್ಟವನ್ನು ವಸ್ತುನಿಷ್ಠವಾಗಿ ಸಮೀಕ್ಷೆ ನಡೆಸಿ ಅಳೆಯುವ ಪ್ರಕ್ರಿಯೆಯನ್ನು ಸರಳವಾಗಿ `ವಾರ್ಡ್ ಗುಣಮಟ್ಟ ಅಂಕ' ಎಂದು ಕರೆಯಲಾಗಿದೆ. ಸಮೀಕ್ಷೆ ನಡೆಸಲಾಗುವ ಪ್ರತಿ ವಾರ್ಡ್‌ನ ಮೂಲಭೂತ ಸೌಕರ್ಯ ಮತ್ತು ಸೇವೆಗಳ ಲಭ್ಯತೆಗೆ ಅನುಗುಣವಾಗಿ ಸೊನ್ನೆಯಿಂದ 10ರವರೆಗೂ ಅಂಕಗಳನ್ನು ಪ್ರತಿ ವಾರ್ಡ್‌ಗೂ ನೀಡುವ ಮೂಲಕ ಆಯಾ ವಾರ್ಡ್ ಗಳ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ. ನಿರ್ದಿಷ್ಟ ಮಾನದಂಡಗಳ ಮೂಲಕ `ಜನಾಗ್ರಹ ಕೇಂದ್ರ' ಕೈಗೊಂಡಿರುವ ಸಮೀಕ್ಷೆಯ ಪ್ರಮುಖ ಅಂಶಗಳು ಇಂತಿವೆ.
1. ಚಲನಶೀಲತೆ
2. ನೈರ್ಮಲ್ಯ
3. ನೀರು ಸರಬರಾಜು
4. ಸಾರ್ವಜನಿಕ ಸೌಲಭ್ಯಗಳು
5. ಪರಿಸರ
ಮೇಲ್ಕಂಡ ಅಂಶಗಳನ್ನು ಗುರಿಯಾಗಿಟ್ಟುಕೊಂಡು `ಜನಾಗ್ರಹ' ಕೇಂದ್ರದ ಸುಮಾರು 55 ಜನರನ್ನೊಳಗೊಂಡ ತಂಡ ಸಮೀಕ್ಷೆ ನಡೆಸಲಿದೆ.

ಹೀಗಿರುತ್ತದೆ ಸಮೀಕ್ಷೆ
ಸಮೀಕ್ಷಕಾರರು ಪ್ರತಿ ವಾರ್ಡ್‌ಗೆ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಿ ಮಾಹಿತಿಗಳನ್ನು ಕಲೆಹಾಕಲಿದ್ದಾರೆ. ಅಲ್ಲದೆ, ತಾವು ಭೇಟಿ ನೀಡುವ ವಾರ್ಡ್‌ನ ನೀರಿನ ಮಾದರಿ ಸಂಗ್ರಹಿಸಿ ಅದರಲ್ಲಿರುವ ರಾಸಾಯನಿಕ ಅಂಶಗಳನ್ನು ಪರೀಕ್ಷಿಸಲಿದ್ದಾರೆ. ಅದೇ ರೀತಿ ವಾರ್ಡ್‌ಗಳ ಪರಿಸರ, ಶೌಚಾಲಯ ವ್ಯವಸ್ಥೆ, ಸಾರ್ವಜನಿಕ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಿದ್ದಾರೆ. ವಸ್ತುನಿಷ್ಠ ಮಾಹಿತಿ ಸಂಗ್ರಹಕ್ಕಾಗಿ ಸಂಸ್ಥೆ `ಟ್ಯಾಬ್ಲೆಟ್'ಗಳನ್ನು ಬಳಸಲಿದೆ.

`ನಗರದ ಜೀವನ ನಿರ್ವಹಣೆಗೆ ಸಂಬಂಧಿಸಿದ ಈ ಸಮೀಕ್ಷೆ ಮೂಲಕ ಜನರ ದೈಹಿಕ, ಸಾಮಾಜಿಕ, ಮಾನಸಿಕ ಹಾಗೂ ವೈಯಕ್ತಿಕ ಅಭಿವೃದ್ಧಿಗೆ ಅನುಕೂಲವಾಗುವಂತಹ ವಾತಾವರಣವನ್ನು ನಿರ್ಮಾಣ ಮಾಡುವ ಆಶಯವನ್ನು `ಜನಾಗ್ರಹ' ಹೊಂದಿದೆ. ಜನರ ಭಾಗವಹಿಸುವಿಕೆ ಮತ್ತು ಸಬಲೀಕರಣ ಈ ಯೋಜನೆಯ ಪ್ರಮುಖ ಅಂಶಗಳಾಗಿವೆ' ಎಂದು ವಿವರಿಸುತ್ತಾರೆ `ಜನಾಗ್ರಹ ಕೇಂದ್ರ' ಮತ್ತೊಬ್ಬ ಸಹ ಸಂಸ್ಥಾಪಕಿ ಸ್ವಾತಿ ರಾಮನಾಥನ್.

ಉದ್ದೇಶಗಳು
ಮೂಲಭೂತ ಸೌಕರ್ಯ ಮತ್ತು ಸೇವೆಗಳ ಗುಣಮಟ್ಟ ಹಾಗೂ ಅವುಗಳ ಲಭ್ಯತೆ ಕುರಿತು ತುಲನಾತ್ಮಕವಾಗಿ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ನಡೆಸಲಾಗುವ ಈ ಸಮೀಕ್ಷೆಯು ಮುಖ್ಯವಾಗಿ ಮೂರು ಉದ್ದೇಶಗಳನ್ನು ಹೊಂದಿದೆ.

1. ಜನರ ಎದುರಿಸುತ್ತಿರುವ ಸಮಸ್ಯೆಯನ್ನು ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿಸುವುದು.
2. ವಾರ್ಡ್‌ಗಳ ನಡುವೆ ಹಂಚಿಕೆಯಾದ ಬಜೆಟ್ ಅನ್ನು ಪರಿಶೀಲಿಸುವ ಸಾಧನವಾಗಿ ರೂಪಿಸುವುದು.
2. ಮೂಲಭೂತ ಸೌಕರ್ಯಗಳ ತುಲನಾತ್ಮಕ ಪರಿಶೀಲನೆಗೆ ಅವಕಾಶ ನೀಡುವ ಮೂಲಕ ಸಾರ್ವಜನಿಕರನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಪ್ರಚೋದಕವಾಗಿ ಕಾರ್ಯನಿರ್ವಹಿಸುವುದು.

`ನಾಗರಿಕರ ದೃಷ್ಟಿಕೋನದಿಂದ `ಡಬ್ಲ್ಯೂ.ಕ್ಯೂ.ಎಸ್' ಯೋಜನೆಯನ್ನು ಕೈಗೊಳ್ಳಲಾಗಿದೆ. ಸಮೀಕ್ಷಕಾರರು ವಾರ್ಡ್‌ಗಳಲ್ಲಿ ಕ್ಷೇತ್ರಕಾರ್ಯ ಕೈಗೊಳ್ಳುವ ಮೂಲಕ ನಗರ, ಸ್ಥಳೀಯ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ತುಲನಾತ್ಮಕವಾಗಿ ಪರಿಶೀಲಿಸುತ್ತಾರೆ. ಉದ್ದೇಶಿತ ಸಮಸ್ಯೆಗಳ ಪರಿಹಾರ ಮತ್ತು ವಿವಿಧ ಕಾರ್ಯಗಳಿಗಾಗಿ ಮೀಸಲಾಗಿರುವ ನಿಧಿಯ ಸಮರ್ಪಕ ಬಳಕೆಗೆ ಈ ಸಮೀಕ್ಷೆ ಸಹಕಾರಿಯಾಗಲಿದೆ' ಎಂದು `ಜನಾಗ್ರಹ ನಾಗರಿಕ ಮತ್ತು ಪ್ರಜಾಪ್ರಭುತ್ವ ಕೇಂದ್ರ'ದ ಸಹ ಸಂಸ್ಥಾಪಕರಾದ ರಮೇಶ್ ರಾಮನಾಥನ್ ಹೇಳುತ್ತಾರೆ.

`ಸಮೀಕ್ಷೆಗೆ ಜನಪ್ರತಿನಿಧಿಗಳ ಬೆಂಬಲ ಇದ್ದು, ಸಮೀಕ್ಷೆಯ ವಿವರಗಳನ್ನು ನಮ್ಮಂದಿಗೆ ಹಂಚಿಕೊಂಡು ತಮ್ಮ ಕ್ಷೇತ್ರ ಮತ್ತು ವಾರ್ಡ್‌ಗಳ  ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಕರಿಸಿ ಎಂದು ನಗರದ ಕೆಲವು ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ನಮಗೆ ಮನವಿ ಮಾಡಿದ್ದಾರೆ' ಎನ್ನುತ್ತಾರೆ, `ಅಮೆರಿಕನ್ ಇಂಡಿಯಾ ಫೌಂಡೇಷನ್ (ಎಐಎಫ್) ಫೆಲೋ - ಜನಾಗ್ರಹ' ಆಗಿರುವ ಸ್ವಾತಿ ವೆಂಕಟೇಶ್. ಜನಜೀವನದಲ್ಲಿ ಸುಧಾರಣೆ ತರಲು ಮುಂದಾಗಿರುವ `ಜನಾಗ್ರಹ'ದ ಈ ನಡಿಗೆ ಏಪ್ರಿಲ್ ಅಂತ್ಯದ ವೇಳೆಗೆ  ಮುಗಿಯುವ ನಿರೀಕ್ಷೆಯಿದೆ.  ಸಮೀಕ್ಷೆಯ ವಿವರಗಳು www.ichangemycity.com ರಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT