ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಭಿಪ್ರಾಯ ಗ್ರಹಿಸಿ ಕ್ರಮಕ್ಕೆ ಸಲಹೆ

Last Updated 3 ಜುಲೈ 2013, 4:57 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಮಿತಿಗಳನ್ನು ರಚಿಸುವ ಬದಲಿಗೆ, ಸಾರ್ವಜನಿಕರ ಅಭಿಪ್ರಾಯ ಗ್ರಹಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಪೂರ್ವ ವಲಯ ಐಜಿಪಿ ಸಂಜಯ್ ಸಹಾಯ್ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಶಾಂತಿ, ಸಾಮರಸ್ಯ, ಭಾವೈಕ್ಯತೆ ಬೆಳೆಯಬೇಕಾದರೆ ಉತ್ತಮ ಅನುಭವಗಳು ಸಮಾಜಕ್ಕೆ ಹಂಚಿಕೆಯಾಗಬೇಕು. ವ್ಯಕ್ತಿತ್ವ ವಿಕಸನ, ಅನುಭವ ಕಲಿಕಾ ಉಪನ್ಯಾಸಗಳಂತಹ (ಎಕ್ಸ್‌ಪೀರಿಯನ್ಸ್ ಲರ್ನಿಂಗ್ ಲೆಕ್ಚರ್-ಇಎಲ್‌ಎಲ್) ಶಿಬಿರಗಳು ಹೆಚ್ಚಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಘಟಿಕೋತ್ಸವದಲ್ಲಿ ವೈದ್ಯಕೀಯ `ಕ್ಷೇತ್ರದಲ್ಲಿ ನೈತಿಕತೆ' ಕುರಿತು ಉಪನ್ಯಾಸ ನೀಡಿದ್ದೇನೆ. ಅಂದು ಹಂಚಿಕೊಂಡ ಅನುಭವಗಳಿಂದ ಉತ್ತೇಜಿತಗೊಂಡ ಕಾಲೇಜಿನವರು, `ವ್ಯಕ್ತಿತ್ವ ವಿಕಸನ' ಕುರಿತ ಉಪನ್ಯಾಸಕ್ಕಾಗಿ ನನ್ನನ್ನು ಆಹ್ವಾನಿಸಿದ್ದರು. ಇದು ಅನುಭವ ಹಂಚಿಕೆಯ ಪರಿಣಾಮಕ್ಕೆ ಒಂದು ಉದಾಹರಣೆ ಎಂದು ಹೇಳಿದರು.

`2000ನೇ ಇಸವಿಯಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿದೆ. 2010ರಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದೆ. ವ್ಯಕ್ತಿಯೊಬ್ಬ ಅನುಭವಿಯಾಗಲು ಹತ್ತು ವರ್ಷ ಬೇಕಾಯ್ತು' ಎಂದು ತನ್ನ ಬದುಕನ್ನೇ ಉದಾಹರಿಸಿದರು.

`ನಾವು ಜ್ಞಾನ ಆಧಾರಿತ ಯುಗದಲ್ಲಿದ್ದೇವೆ. ಪ್ರತಿಯೊಂದು ಕ್ಷೇತ್ರದಲ್ಲೂ ಬುದ್ಧಿ ಜೀವಿಗಳಿದ್ದಾರೆ. ಬುದ್ಧಿ ಜೀವಿಗಳ ಜ್ಞಾನ ಸಮಾಜದೊಂದಿಗೆ ಮಿಳಿತಿಗೊಳ್ಳಬೇಕು. ಇಂಥ ಸಮಾರಂಭಗಳು ಅನುಭವ ಹಂಚಿಕೆಯ ವೇದಿಕೆಯಾಗಬೇಕು' ಎಂದು ಅಭಿಪ್ರಾಯಪಟ್ಟರು.

ಪೊಲೀಸರು ಸಾರ್ವಜನಿಕರ ಜತೆ ಬೆರೆತಾಗ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತದೆ. ಪೊಲೀಸ್ ಇಲಾಖೆ ಒಂದು ಸಾಮಾಜಿಕ ಸೇವಾ ಸಂಸ್ಥೆ. ಸಾರ್ವಜನಿಕರು ಪೊಲೀಸರ ಗ್ರಾಹಕರಿದ್ದಂತೆ. ಇಲ್ಲಿ ಗ್ರಾಹಕರೇ ಪ್ರಭುಗಳು. ಅವರನ್ನು ಗೌರವಿಸುವುದೇ ಇಲಾಖೆಯ ಕರ್ತವ್ಯ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕ ಮಾತನಾಡಿದ  ಎಸ್‌ಪಿ ಎನ್.ಎಂ.ನಾಗರಾಜ್, ತನ್ನ ಹಾಗೂ ಸಂಜಯ್ ಸಹಾಯ್ ಅವರ ನಡುವಿನ ಎರಡು ದಶಕಗಳ ಒಡನಾಟವನ್ನು ನೆನಪಿಸಿಕೊಂಡರು.

ಸಹಾಯ್ ಅವರು ಪೊಲೀಸ್ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿದ ರೀತಿ, ಆ ತಂತ್ರಜ್ಞಾನವನ್ನು ಬಳಸಲು ಅಧಿಕಾರಿಗಳಿಗೆ ನೀಡಿದ ತರಬೇತಿಯನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ಅನುಭವ ಕಲಿಕಾ ಉಪನ್ಯಾಸವನ್ನು ಏರ್ಪಡಿಸಲು ಮನವಿ ಮಾಡಿದರು.

ಚಿತ್ರದುರ್ಗದ ಕೈಗಾರಿಕೋದ್ಯಮಿಗಳ ಪರವಾಗಿ ಮಾತನಾಡಿದ ತಾಜಪೀರ್, `ಇದು ಪೊಲೀಸ್ ಇಲಾಖೆಯ ಸಮಾರಂಭವಲ್ಲ. ಶಿಷ್ಯರು ಗುರುವಿಗೆ ನೀಡುತ್ತಿರುವ ಬೀಳ್ಕೊಡುಗೆ ಕಾರ್ಯಕ್ರಮ' ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಐಜಿಪಿ ಸಹಾಯ್ ಅವರನ್ನು ಸನ್ಮಾನಿಸಲಾಯಿತು.
ನಗರಸಭೆಯ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ, ಚಳ್ಳಕೆರೆ ಡಿವೈಎಸ್‌ಪಿ ಶೇಖರ್ ಹಾಗೂ ತಾಜ್‌ಪೀರ್ ಅವರು ಐಜಿಪಿ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡರು. ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಶಾಂತರಾಜ್ ಹಾಜರಿದ್ದರು. ಡಿವೈಎಸ್‌ಪಿ(ಅಪರಾಧ) ಇಸಾಕ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT