ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾರೋಗ್ಯ ಕಾಪಾಡಿ: ಡಾ.ಕೊಟೂರ್

Last Updated 7 ಅಕ್ಟೋಬರ್ 2012, 7:35 IST
ಅಕ್ಷರ ಗಾತ್ರ

ಕೋಲಾರ: ಯಾವುದೇ ದೇಶದ ಆರೋಗ್ಯವು ಅಲ್ಲಿನ ಜನರ ಆರೋಗ್ಯವನ್ನು ಆಧರಿಸಿರುತ್ತದೆ. ಹೀಗಾಗಿ ಹೊಸ ವೈದ್ಯರು ಜನರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ದೇವರಾಜ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆಯ  ಕುಲಪತಿ ಡಾ.ಪಿ.ಎಫ್.ಕೊಟೂರ್ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಟಮಕದಲ್ಲಿರುವ ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ನಡೆದ 2ನೇ ಘಟಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ವೈದ್ಯಕೀಯ ಜ್ಞಾನ ಎಂಬುದು ಪ್ರಯಾಣವೇ ಹೊರತು ಅದೇ ಗುರಿಯಲ್ಲ. ಈ ಪ್ರಯಾಣದಲ್ಲಿ ವಿಮರ್ಶಾತ್ಮಕ ಚಿಂತನೆ ಅತ್ಯಗತ್ಯ. ರೋಗಿ, ಔಷಧ ಮತ್ತು ಆರೋಗ್ಯಕ್ಕೆ ಸಂಬಂಧಿಸಿ ಯಾವುದನ್ನು ನಂಬಬೇಕು ಮತ್ತು ಏನನ್ನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ತಿಳಿವು ವೈದ್ಯರಿಗಿರಬೇಕು ಎಂದರು.

ಶಿಶು ಮತ್ತು ತಾಯಿ ಮರಣ ಪ್ರಮಾಣ ದೇಶದಲ್ಲಿ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. ಈ ಸಂಗತಿಯನ್ನು ವೈದ್ಯರು ಗಂಭೀರವಾಗಿ ಪರಿಗಣಿಸಿ ಅದನ್ನು ನಿಯಂತ್ರಿಸುವಲ್ಲಿ ತಮ್ಮ ಪಾತ್ರ-ಜವಾಬ್ದಾರಿಗಳ ಬಗ್ಗೆ ಚಿಂತಿಸಬೇಕು. ಆರೋಗ್ಯ ಸೇವೆಯ ಅಸಮಾನ ಹಂಚಿಕೆ ದೇಶದ ಪ್ರಮುಖ ಆತಂಕಕಾರಿ ಬೆಳವಣಿಗೆ. ಗ್ರಾಮೀಣ ಪ್ರದೇಶದ ಬಹಳ ಮಂದಿಗೆ ವೈದ್ಯಕೀಯ ಸೇವೆಯೇ ದೊರಕದಿರುವುದು ಇನ್ನೊಂದು ಗಂಭೀರ ಬೆಳವಣಿಗೆ ಎಂದರು.

ವೈದ್ಯರು ತಂತ್ರಜ್ಞಾನದ ದೃಷ್ಟಿಯಿಂದ ಸ್ಪರ್ಧಾತ್ಮಕವಾಗಿರಬೇಕು. ಸಾಮಾಜಿಕವಾಗಿ ಸೂಕ್ಷ್ಮತೆಯುಳ್ಳವರಾಗಬೇಕು. ನೈತಿಕವಾಗಿ ಸರಿ ಇರಬೇಕು ಮತ್ತು ಯಾವುದೇ ಕ್ಷಣದಲ್ಲಿ ಅಗತ್ಯ ಇರುವವರಿಗೆ ಆರೋಗ್ಯ ಸೇವೆಯನ್ನು ತ್ವರಿತವಾಗಿ ನೀಡಲು ಸಿದ್ಧರಿರಬೇಕು ಎಂದರು.

ವೈದ್ಯರು ಸದಾ ಕಾಲ ಸಂಶೋಧನೆ ಮಾಡಬೇಕು. ಇಲ್ಲವಾದರೆ ಆರೋಗ್ಯ ಕ್ಷೇತ್ರದ ಹೊಸ ಬೆಳವಣಿಗೆಗಳ ಅರಿವು ಇಲ್ಲದೆ ಸೇವೆ ನೀಡಬೇಕಾಗುತ್ತದೆ. ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ.  2010ರಲ್ಲಿ ದೇಶವು ಜಾಗತಿಕ ಸಂಶೋಧನಾ ಕ್ಷೇತ್ರದಲ್ಲಿ ಕೇವಲ ಶೇ.3.5ರಷ್ಟು ಸಂಶೋಧನೆ ಮಾಡಿದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಅಧ್ಯಕ್ಷ ಆರ್.ಎಲ್.ಜಾಲಪ್ಪ ಚಿನ್ನದ ಪದಕ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು.  ಘಟಿಕೋತ್ಸವ ಭಾಷಣ ಮಾಡಬೇಕಿದ್ದ ಪದ್ಮವಿಭೂಷಣ ಪ್ರೊ.ಸಿಎನ್‌ಆರ್ ರಾವ್ ಅನಿವಾರ್ಯ ಕಾರಣಗಳಿಂದ ಹಾಜರಿರಲಿಲ್ಲ.

2009-10ನೇ ಸಾಲಿನ 31 ಮಂದಿಗೆ, 2008-09ನೇ ಸಾಲಿನ ಒಬ್ಬರಿಗೆ ಸ್ನಾತಕೋತ್ತರ ಪದವಿ ಮತ್ತು 2010-11ನೇ ಸಾಲಿನ 12 ಮಂದಿಗೆ ಮತ್ತು 2008-09ನೇ ಸಾಲಿನ ಒಬ್ಬರಿಗೆ ಡಿಪ್ಲಮೋ ಪದವಿ ಪ್ರದಾನ ಮಾಡಲಾಯಿತು. ಸಂಸ್ಥೆಯ ವತಿಯಿಂದ ಅಧ್ಯಕ್ಷರ ಚಿನ್ನದ ಪದಕಗಳನ್ನು ಸ್ನಾತಕೋತ್ತರ ಪದವೀಧರರಾದ ಡಾ.ಪದ್ಮಿನಿ ತಲನ್ವೇರಿ, ಡಾ.ಎಂ.ಜೆ.ತೇಜ್, ಡಾ.ಎನ್.ಯಲ್ಲಪ್ಪಗೌಡ, ಡಾ.ಎಸ್.ಜೆ.ತೇಜಲ್ ಮತ್ತು ಡಿಪ್ಲಮೋ ವಿದ್ಯಾರ್ಥಿಗಳಾದ ಡಾ.ಶಶಿಕುಮಾರ್ ಪ್ರಧಾನ್ ಮತ್ತು ಡಾ.ಎಸ್.ನಂದೀಶ್ ಅವರಿಗೆ ಪ್ರದಾನ ಮಾಡಲಾಯಿತು.

ಕುಲಸಚಿವ ಡಾ.ಎವಿಎಂ ಕುಟ್ಟಿ, ಪರೀಕ್ಷಾಂಗ ನಿಯಂತ್ರಣಾಧಿಕಾರಿ ಡಾ.ಪ್ರಕಾಶ್, ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿ.ಲಕ್ಷ್ಮಯ್ಯ, ಆಡಳಿತಾಧಿಕಾರಿ ಡಾ.ಚಂದ್ರಪ್ಪ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT