ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾರ್ದನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ.ವಿ. ಶ್ರೀನಿವಾಸ್ ರೆಡ್ಡಿ ಅವರಿಗೆ ಜಾಮೀನು ನೀಡುವ ಬಗ್ಗೆ ಪರ ಮತ್ತು ವಿರೋಧದ ವಾದಗಳನ್ನು  ಹಾಗೂ ಆರೋಪಿಗಳನ್ನು ತನ್ನ ವಶಕ್ಕೆ ನೀಡಬೇಕೆಂದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿ ಬಗ್ಗೆ ವಾದವನ್ನು ಸುಮಾರು ಆರು ತಾಸಿನವರೆಗೆ ಆಲಿಸಿದ ನಂತರ ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಎರಡೂ ಅರ್ಜಿಗಳ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಿದರು.

ಇದಕ್ಕೂ ಮೊದಲು ಗಾಲಿ ಜನಾರ್ದನ ರೆಡ್ಡಿ ಪರ ವಾದಿಸಿದ ಕಿರಿಯ ವಕೀಲರು ತಮ್ಮ ಹಿರಿಯ ವಕೀಲ ಉದಯ್ ಲಲಿತ್ ಜೋಧ್‌ಪುರಕ್ಕೆ ತೆರಳಿರುವುದರಿಂದ ತಮ್ಮ ವಾದವನ್ನು ನಂತರದಲ್ಲಿ ಮಂಡಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಆಗ ನ್ಯಾಯಾಧೀಶರು ಸಿಬಿಐ ವಕೀಲ ರವೀಂದ್ರನಾಥ್ ಅವರಿಗೆ ವಾದ ಮಂಡಿಸಲು ಅವಕಾಶ ನೀಡಿದರು. ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಇಬ್ಬರೂ ಪ್ರಭಾವಶಾಲಿಗಳಾಗಿರುವುದರಿಂದ  ಅವರಿಬ್ಬರನ್ನೂ ತನ್ನ ವಶಕ್ಕೆ ನೀಡಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸಿಬಿಐನ ಕಾನೂನು ಉಪ ಸಲಹೆಗಾರರು ಹೇಳಿದರು.

ಗಣಿಗಾರಿಕೆ ಚಟುವಟಿಕೆಯ ನಿಖರ ಸ್ಥಳವನ್ನು ತಿಳಿಯುವ ಸಲುವಾಗಿ ಆರೋಪಿಗಳನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸಿಬಿಐ ಪರ ವಕೀಲ ಕೋರಿದರು.

ಓಬಳಾಪುರಂ ಗಣಿಗಾರಿಕೆ ಕಂಪೆನಿಯು ವಾಸ್ತವವಾಗಿ ಇತರ ರಾಷ್ಟ್ರಗಳಿಗೆ 29 ಲಕ್ಷ ಟನ್ ಕಬ್ಬಿಣ ಅದಿರನ್ನು ರಫ್ತು ಮಾಡುತ್ತಿದೆ. ಆದರೆ ಕಂಪೆನಿಯು ಕೇವಲ 4 ಲಕ್ಷ ಟನ್ ಕಬ್ಬಿಣ ಅದಿರನ್ನು ಮಾತ್ರ ಓಬಳಾಪುರಂ ಗಣಿಗಾರಿಕೆ ಪ್ರದೇಶದಿಂದ ಉತ್ಪಾದಿಸುತ್ತಿದೆ ಎಂದೂ ಅವರು ಹೇಳಿದರು.

ಕಂಪೆನಿಯು 2007 ಮತ್ತು 2009ರಲ್ಲಿ ಆಂಧ್ರದ ಕಡೆಗೆ ಒಂದು ಕಲ್ಲನ್ನೂ ಅಲುಗಿಸಿಲ್ಲ ಎಂಬುದು ಸಿಬಿಐ ಉಪಗ್ರಹ ನೆರವಿನಿಂದ ಪಡೆದ ಛಾಯಾಚಿತ್ರದಿಂದ ಪತ್ತೆಯಾಗಿದೆ. ಆದರೆ 2009ರ ಡಿಸೆಂಬರ್ ನಂತರ ಗಣಿಗಾರಿಕೆ ಆರಂಭವಾದ ಬಳಿಕ ಪ್ರಕರಣ ದಾಖಲಾಗಿದೆ ಎಂದು  ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಕಂಪೆನಿಯಲ್ಲಿ 2009ರ ನಂತರ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಸೃಷ್ಟಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರಿಗೆ ವಾರ್ಷಿಕ 2.40 ಕೋಟಿ ವೇತನ ನೀಡಲಾಗುತ್ತಿತ್ತು. ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿಗೆ ವಾರ್ಷಿಕ ತಲಾ ರೂ 18 ಕೋಟಿ ನೀಡಲಾಗುತ್ತಿತ್ತು. ಇದರಿಂದಾಗಿಯೇ ಅವರು ಗಣಿಗಾರಿಕೆ ಕಂಪೆನಿಯ ನಿತ್ಯದ ವಹಿವಾಟಿನಲ್ಲಿ ತಾವು ಹೇಳುವುದೇನೂ ಇಲ್ಲ ಎನ್ನಲು ಅವರಿಗೆ ಸಾಧ್ಯವಿಲ್ಲ ಎಂದ ಅವರು ಆರೋಪಿಗಳನ್ನು ವಿಚಾರಣೆಗಾಗಿ 15 ದಿನಗಳವರೆಗೆ ಸಿಬಿಐಗೆ ಒಪ್ಪಿಸಬೇಕು ಎಂದು ಕೋರಿದರು
.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT