ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ್ಮಾಷ್ಟಮಿ; ಗಮನ ಸೆಳೆದ ಮೊಸರುಕುಡಿಕೆ ಉತ್ಸವ

Last Updated 10 ಆಗಸ್ಟ್ 2012, 11:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ... ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ.... ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ... ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ..... ಹಾಡನ್ನು ಹಾಡುತ್ತಾ, ಮೊಸರು ತುಂಬಿದ ಗಡಿಗೆಗೆ ಹಾತೊರೆಯುತ್ತಾ ಪುಟ್ಟ ಮಕ್ಕಳು ಕೃಷ್ಣನ ಲೀಲೆಗಳನ್ನು ಅನುಕರಿಸಿ ಖುಷಿಪಟ್ಟರು.

ಎಲ್ಲರ ಬಾಯಲ್ಲೂ ಬಾಲ ಮುರಳಿ, ನಂದ ಗೋಪಾಲ, ಕೃಷ್ಣನ ಗುಣಗಾನವೇ. ಕೃಷ್ಣ ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ಗೋಕುಲಾಷ್ಟಮಿ ಯನ್ನು ಗುರುವಾರ ಆಚರಿಸಿದರು.

ರತ್ನಗಿರಿ ರಸ್ತೆಯಿಂದ ಬಸವನಹಳ್ಳಿ ರಸ್ತೆ ಮಾರ್ಗವಾಗಿ ಎಂ.ಜಿ.ರಸ್ತೆಯಲ್ಲಿ ಆಜಾದ್  ಪಾರ್ಕ್ ವೃತ್ತದವರೆಗೂ ಅಲ್ಲಲ್ಲಿ ಬರಿಗೈಗೆ ನಿಲುಕದೆತ್ತರಕ್ಕೆ ಕಟ್ಟಿದ್ದ ಮೊಸರು ಕುಡಿಕೆಗಳನ್ನು ಹಿಂದೂ ಸಂಘಟನೆಗಳ ಯುವಕರು ಒಡೆದು ಸಂಭ್ರಮಿಸಿದರು. ಇದಕ್ಕೂ ಮೊದಲು ಹೂವಿನಿಂದ ಅಲಂಕರಿಸಿದ್ದ ಕೃಷ್ಣನ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಹೊತ್ತು ಜಯಘೋಷ ಹಾಕುತ್ತಾ ಸಾಗಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳ ಯುವಕರು ಬಣ್ಣದ ಓಕಳಿ ತುಂಬಿದ್ದ ಮೊಸರು ಗಡಿಗೆಗಳನ್ನು ಒಡೆದು, ಗೋಕುಲಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಿದರು.

ರತ್ನಗಿರಿಯ ರಸ್ತೆಯಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಿಂದೂ ಸಂಘಟನೆಗಳು ಏರ್ಪಡಿಸಿದ್ದ ಮೊಸರು ಕುಡಿಕೆ ಉತ್ಸವವನ್ನು ಉದ್ಘಾಟಿಸಿದ ಕೋಟೆ ಕೃಷ್ಣ, ಜಗತ್ತಿನಾದ್ಯಂತ ಇರುವ ಹಿಂದೂ ಸಮಾಜವನ್ನು ಒಗ್ಗೂಡಿಸಲು ಮತ್ತು ಹಿಂದೂ ಧರ್ಮ ಸಂರಕ್ಷಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪಾತ್ರ ಅತ್ಯಂತ ಶ್ಲಾಘನೀಯ ಎಂದರು.

ಬಜರಂಗದಳ ತಾಲ್ಲೂಕು ಸಂಚಾಲಕ ಕೋಟೆ ರಾಜು ಮಾತನಾಡಿ, ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಎಚ್‌ಪಿ ಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ಮೊಸರು ಕುಡಿಕೆ ಉತ್ಸವ ನಡೆಸುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಕೃಷ್ಣ-ರಾಧೆ ವೇಷಭೂಷಣ ಸ್ಪರ್ಧೆಯಲ್ಲಿ ಶಾಲೆಯ ಪುಟಾಣಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಾಲ ಗೋಪಾಲನ ವೇಷದಲ್ಲಿ ಕಣ್ಮನ ಸೆಳೆದ ಪುಟಾಣಿ ಗೋಕುಲ್‌ಗೆ ಪ್ರಥಮ ಬಹುಮಾನ ಲಭಿಸಿತು.

ದತ್ತಾತ್ರಿ ವಿದ್ಯಾಲಯ, ಕನ್ಸೂಮರ್ ರೈಟ್ಸ್ ಎಜುಕೇಷನ್ ಅಂಡ್ ಅವೇರ್‌ನೆಸ್ ವಾಲಂಟರಿ ಆರ್ಗನೈಜೆಷನ್ ಹಾಗೂ ಮೂಕಾಂಬಿಕ ಮಹಿಳಾ ಮಂಡಳಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದವು. ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ಬಾಲ ಕೃಷ್ಣ ವೇಷ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಭಾರತಿ ಬಹುಮಾನ ವಿತರಿಸಿದರು. ದತ್ತಾತ್ರಿ ವಿದ್ಯಾಲಯದ ಆಡಳಿತಾ ಧಿಕಾರಿ ಲಲಿತಾ, ನ್ಸೂಮರ್ ರೈಟ್ಸ್ ಎಜು ಕೇಷನ್ ಅಂಡ್ ಅವೇರ್‌ನೆಸ್ ವಾಲಂಟರಿ ಆರ್ಗ ನೈಜೆ ಷನ್ ಕಾರ್ಯದರ್ಶಿ ವಸಂತಮಾಲಾ, ಮೂಕಾಂಬಿಕಾ ಮಹಿಳಾ ಮಂಡಳಿ ಅಧ್ಯಕ್ಷೆ ಯಶಸ್ವಿನಿ ಇದ್ದರು.

ವಿಶ್ವಭಾರತಿ ಶಾಲೆ ಕೃಷ್ಣವೇಷ ಸ್ಪರ್ಧೆ
ಕಡೂರು: ವಿಶ್ವಭಾರತಿ ಶಾಲೆಯಲ್ಲಿ ಕೃಷ್ಣಜನ್ಮಾ ಷ್ಟಮಿ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳ ಮಕ್ಕಳಿಗೆ  ಕೃಷ್ಣ-  ರಾಧೆ ವೇಷ ಸ್ಪರ್ಧೆ ಏರ್ಪಡಿ ಸಲಾಗಿತ್ತು.  ಶಾಲೆ ಕಾರ್ಯದರ್ಶಿ ಎಚ್.ಎನ್.ಶಿವಶಂಕರ್ ಮಾರ್ಗದರ್ಶನದಲ್ಲಿ  ಮುದ್ದು ಕೃಷ್ಣ ವಿಭಾಗ, ತುಂಟಕೃಷ್ಣ, ಬಾಲಕೃಷ್ಣ, ರಾಧೆ, ಮುಸ್ಲಿಂ ಮಕ್ಕಳ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಟ್ಟಿದ್ದು, ಸುಮಾರು 20 ಶಾಲೆಗಳಿಂದ 175 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

ಬಹುಮಾನ ವಿತರಣಾ ಕಾರ್ಯಕ್ರಮ ಪಾಂಡುರಂಗವಿಠ್ಠಲರುಕ್ಮಾಯಿ ದೇವಾಲಯದಲ್ಲಿ ಸಂಜೆ ನಡೆಯಿತು. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ನಾಗರಾಜರಾವ್ ಬಹುಮಾನ ವಿತರಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾ ಹಿಸಿದರು. ಶಿಕ್ಷಕರಾದ ಗೌರಿ ಡಿ.ನಾಯ್ಕ, ರಾಘವೇಂದ್ರ ಕುಲಾಲ್, ನರೇಂದ್ರಗುರೂಜಿ, ರಾಮಕೃಷ್ಣ ಗುರೂಜಿ, ಶೈಲಾಜಾಶಿವಶಂಕರ್, ನಾಮ್‌ದೇವ್ ಮತ್ತು ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT