ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ್ಮಾಷ್ಟಮಿಯೂ ‘ರೋಸ್’ ವೃತ್ತಾಂತವೂ...

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭಿಕ್ಷುಕರ ಪುನರ್ವಸತಿ ಪರಿಹಾರ ಕೇಂದ್ರದ ಒಂದು ಕಟ್ಟಡವನ್ನು ಸೆರೆಮನೆಯನ್ನಾಗಿ ಪರಿವರ್ತಿಸಿತ್ತು ‘ರೋಸ್‌’ ಚಿತ್ರತಂಡ. ಶ್ರೀಕೃಷ್ಣ ಜನ್ಮಾಷ್ಟಮಿಯ ಹಬ್ಬದ ಸಂಭ್ರಮವೂ ಅಲ್ಲಿತ್ತು. ಜೈಲಿನೊಳಗೆ ಅಕ್ರಮವಾಗಿ ಸರಬರಾಜಾಗುತ್ತಿದ್ದ ಆಯುಧ, ಮಾದಕ ವಸ್ತುಗಳನ್ನು ತಡೆಯುವ ಕಾರ್ಯದಲ್ಲಿ ಮುಳುಗಿದ್ದರು ಜೈಲರ್‌ ಪೋಷಾಕು ಧರಿಸಿದ್ದ ನಟ ಸಾಯಿಕುಮಾರ್‌. ಹತಾಶ ಪ್ರೇಮಿಯಂತೆ ಕೋಣೆಯೊಂದರಲ್ಲಿ ನಂ. 1071ನ ಕೈದಿಯಾಗಿ ಕುಳಿತಿದ್ದರು ನಾಯಕ ನಟ ಅಜಯ್‌ರಾವ್‌.

ಸುದ್ದಿಮಿತ್ರರೊಂದಿಗೆ ಮಾತಿಗೆ ಕುಳಿತಾಗ ಕೃಷ್ಣಜನ್ಮಾಷ್ಟಮಿ ದಿನದಂದು ಕೃಷ್ಣ ಹುಟ್ಟಿದ ಜಾಗದಲ್ಲಿ ಕೂರಿಸಿದ್ದಾರೆ ಎಂದು ನಕ್ಕರು ಅಜಯ್‌ರಾವ್‌. ನಾನು ನೆಪಮಾತ್ರದ ನಾಯಕ. ಚಿತ್ರದಲ್ಲಿ ನಿಜವಾದ ನಾಯಕ ಸಾಯಿಕುಮಾರ್‌ ಎನ್ನುವುದು ಅವರ ಅನಿಸಿಕೆ.
ನಿರ್ದೇಶಕ ಸಹನಾಮೂರ್ತಿ ಅವರ ಎರಡನೇ ಚಿತ್ರವಿದು.

‘ದೀನ’ ಚಿತ್ರದ ನಂತರ ‘ರೋಸ್‌’ ಕೈಗೆತ್ತಿಕೊಂಡಿರುವ ಅವರು, 37 ದಿನಗಳ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಮೂರು ಹಾಡುಗಳಿಗಾಗಿ ಅಮೆರಿಕಕ್ಕೆ ಹಾರುವ ಯೋಚನೆ ಅವರದು. ಮಧ್ಯಂತರದವರೆಗೂ ನಾಯಕ ನಾಯಕಿಗೆ ‘ರೋಸ್‌’ ಕೊಡುತ್ತಾನೆ. ಬಳಿಕ ನಾಯಕಿ ತನ್ನ ತಪ್ಪಿನ ಅರಿವಾಗಿ ಆಕೆಯೇ ರೋಸ್‌ ನೀಡುತ್ತಾಳೆ ಎಂದು ಗುಲಾಬಿ ದಳದ ಒಂದು ಪಕಳೆಯನ್ನು ಬಿಡಿಸಿದಂತೆ ಕಥೆಯ ಎಳೆ ಉದುರಿಸಿದರು ಮೂರ್ತಿ.

ನಟ ಸಾಯಿಕುಮಾರ್‌, ‘ಲಾಕಪ್‌ಡೆತ್‌’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ದಿನಗಳನ್ನು ನೆನೆಸಿಕೊಂಡರು. ಪೊಲೀಸ್‌ ಅಧಿಕಾರಿಯ ಪಾತ್ರಗಳ ಅನುಭವ ಹಿರಿದಾಗಿದ್ದರೂ ಈ ಚಿತ್ರ ವಿಭಿನ್ನವಾಗಿದೆ ಎಂದು ಅವರು ನಿರ್ದೇಶಕರ ಶ್ರಮವನ್ನು ಪ್ರಶಂಸಿಸಿದರು. ನಾಯಕಿ ಶ್ರಾವ್ಯ, ನಿರ್ಮಾಪಕ ತರುಣ್‌, ಛಾಯಾಗ್ರಾಹಕ ಗುರು ಮುಂತಾದವರು ‘ರೋಸ್‌’ ಸುತ್ತ ಮಾತಿನ ಲಹರಿ ಹರಿಸಿದರು. ಚಿತ್ರದಲ್ಲಿ ಐದು ಹಾಡುಗಳಿದ್ದು ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT