ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್: 2ನೇ ರಿಯಾಕ್ಟರ್ ಸ್ಫೋಟ

Last Updated 14 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಟೋಕಿಯೊ (ಪಿಟಿಐ): ಭೂಕಂಪ, ಸುನಾಮಿ, ಜ್ವಾಲಾಮುಖಿಗಳ ಅಬ್ಬರದ ನಂತರ ಈಗ ಅಣು ವಿಕಿರಣ ಸೋರಿಕೆಯ ಗಂಭೀರ ಅಪಾಯದಿಂದ ತತ್ತರಿಸಿರುವ ಜಪಾನ್‌ನ ಅಣು ಸ್ಥಾವರ ಘಟಕದಲ್ಲಿ (ರಿಯಾಕ್ಟರ್) ಸೋಮವಾರ ಭೂಕಂಪ ಬಳಿಕ ಮತ್ತೊಂದು ಸ್ಫೋಟ ಸಂಭವಿಸಿದ್ದು ಆತಂಕಕ್ಕೆ ಕಾರಣವಾಗಿದೆ. ಭೂಕಂಪ ಸಂಭವಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಇಲ್ಲಿಂದ 240 ಕಿ.ಮೀ. ಉತ್ತರಕ್ಕಿರುವ ಫುಕುಶಿಮಾ ಘಟಕದ ಮೂರನೇ ಅಣು ಸ್ಥಾವರದಲ್ಲಿ ಜಲಜನಕ ಅನಿಲ ಸ್ಫೋಟ ಸಂಭವಿಸಿದೆ. ಭೂಕಂಪದ ತೀವ್ರತೆ 6.2 ಪ್ರಮಾಣದಲ್ಲಿತ್ತು ಎಂದು ತಿಳಿದು ಬಂದಿದೆ.

ಈ ಅವಘಡದಲ್ಲಿ ಘಟಕದ ಉದ್ಯೋಗಿಗಳು ಮತ್ತು ಭದ್ರತಾ ಸಿಬ್ಬಂದಿ ಸೇರಿ ಒಟ್ಟು 11 ಜನರು ಗಾಯಗೊಂಡಿದ್ದು ಏಳು ಮಂದಿ ಕಣ್ಮರೆಯಾಗಿದ್ದಾರೆ. ಶನಿವಾರ ಇದೇ ಅಣು ಸ್ಥಾವರ ಘಟಕದಲ್ಲಿ ಸಂಭವಿಸಿದ ಮೊದಲ ಸ್ಫೋಟದ ವೇಳೆ ಸೋರಿಕೆಯಾದ ವಿಕಿರಣ ಸೇವನೆಯಿಂದ 22 ಮಂದಿ ಅಸ್ವಸ್ಥರಾಗಿದ್ದರು.

ಇಂದು ನಡೆದ ಸ್ಫೋಟ ಕೂಡ ಶನಿವಾರದ ಸ್ಫೋಟವನ್ನೇ ಹೋಲುತ್ತಿದ್ದು 40 ಕಿ.ಮೀ. ದೂರಕ್ಕೆ ಸ್ಫೋಟದ ಸದ್ದು ಕೇಳಿ ಬಂತು. ಘಟಕದ ಸುತ್ತ ಬೆಂಕಿ ಕಾಣಿಸಿಕೊಂಡಿದ್ದು ದಟ್ಟವಾದ ಹೊಗೆ ಆವರಿಸಿದೆ. ಸುತ್ತಲಿನ ಸುಮಾರು 1.80 ಲಕ್ಷಕ್ಕೂ ಹೆಚ್ಚು ಜನರನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಇದಕ್ಕೆ ಮುಂಚೆ ಸುಮಾರು ಮೂರೂವರೆ ಲಕ್ಷ ಜನರನ್ನು ಇಲ್ಲಿಂದ ತೆರವುಗೊಳಿಸಲಾಗಿತ್ತು.

ಈ ಮೊದಲು ಸ್ಥಾವರದ 10 ಕಿ.ಮೀ ವ್ಯಾಪ್ತಿಯೊಳಗಿನ ನಾಗರಿಕರನ್ನು ಮಾತ್ರ ಸ್ಥಳಾಂತರಿಸಲಾಗಿತ್ತು. ಆದರೆ ಇದೀಗ  20 ಕಿ.ಮೀ ವ್ಯಾಪ್ತಿಯೊಳಗಿನ ಜನರನ್ನೂ ತೆರವುಗೊಳಿಸಲಾಗುತ್ತಿದೆ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಮಾಹಿತಿ ನೀಡಿದೆ. ಶುಕ್ರವಾರ ಸಂಭವಿಸಿದ ಭೂಕಂಪದ ನಂತರ ವಿಕಿರಣ ಹೊರ ಸೂಸುತ್ತಿರುವ ಒನಾಗವಾ ಅಣು ಸ್ಥಾವರ ಘಟಕದ ಸುತ್ತ ಜಪಾನ್‌ನ ಅಣು ಶಕ್ತಿ ಸಂಸ್ಥೆ ‘ತುರ್ತು ಪರಿಸ್ಥಿತಿ’ ಘೋಷಿಸಿದೆ.

ಪರಿಹಾರ ಕಾರ್ಯಾಚರಣೆ: ಜಪಾನ್ ಸರ್ಕಾರ ಮತ್ತು ಸ್ಥಳೀಯ ಆಡಳಿತ ಯಂತ್ರ ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದು ಸೋಮವಾರ ಮಿಯಾಗಿ ಸಮುದ್ರದ ದಡದಲ್ಲಿ ಎರಡು ಸಾವಿರ ಶವಗಳು ದೊರೆತಿವೆ. ಒಟ್ಟಾರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ಪೊಲೀಸ್ ಏಜೆನ್ಸಿ ಸ್ಪಷ್ಟಪಡಿಸಿದೆ.50ಕ್ಕೂ ಹೆಚ್ಚು ಮಿತ್ರ ರಾಷ್ಟ್ರಗಳು ಸಂಕಷ್ಟದಲ್ಲಿರುವ ಜಪಾನ್ ನೆರವಿಗೆ ಧಾವಿಸಿದ್ದು ಮಾನವೀಯತೆ ಮೆರೆದಿವೆ. ಚೀನಾದಿಂದ 15 ಜನ ಶೋಧನಾ ಪಡೆ ಆಗಮಿಸಿದ್ದು ಪರಿಹಾರ ಕಾರ್ಯದಲ್ಲಿ ನೆರವಾಗುತ್ತಿದೆ.  

ಅಪಾಯವಿಲ್ಲ: ಸ್ಪಷ್ಟನೆ
ಜಲಜನಕ (ಹೈಡ್ರೋಜನ್) ಅನಿಲ ಸ್ಫೋಟದಿಂದ ಮುಖ್ಯ ಕಟ್ಟಡ ಮತ್ತು ಹೊರಗೋಡೆಗಳು ಧ್ವಂಸಗೊಂಡಿದ್ದರೂ ಸ್ಥಾವರದ ಲೋಹದಿಂದ ಸುತ್ತುವರಿದಿರುವ ಸಂಗ್ರಹಗಾರ ಹೆಚ್ಚು ಹಾನಿಗೆ ಒಳಗಾಗಿಲ್ಲ. ಅದು ಉತ್ತಮ ಸ್ಥಿತಿಯಲ್ಲಿದ್ದು ವಿಕಿರಣ ಸೋರಿಕೆಯ ಆತಂಕ ಇಲ್ಲ ಎಂದು ಮುಖ್ಯ ಸಂಪುಟ ಕಾರ್ಯದರ್ಶಿ ಯುಕಿಯೊ ಎಡನೊ ಹೇಳಿದ್ದಾರೆ. 

ಸ್ಫೋಟದ ತೀವ್ರತೆ ಕಡಿಮೆ ಇರುವ ಕಾರಣ ಆತಂಕ ಪಡುವ ಅಗತ್ಯವಿಲ್ಲ ಎಂದು ಜನರಿಗೆ ಸರ್ಕಾರ ಅಭಯ ನೀಡಿದೆ.ಪಕ್ಕದಲ್ಲಿಯೇ ಇದ್ದ ನಾಲ್ಕನೆಯ ಅಣು ಸ್ಥಾವರ ಸುರಕ್ಷಿತವಾಗಿದೆ. ಒಂದು ವೇಳೆ ಈ ಸ್ಥಾವರಕ್ಕೆ ಧಕ್ಕೆಯಾಗಿದ್ದರೆ ಭಾರಿ ಪ್ರಮಾಣದ ವಿಕಿರಣ ಸೋರಿಕೆಯ ಸಾಧ್ಯತೆ ಇತ್ತು ಎಂದು ಸ್ಥಾವರದ ಉಸ್ತುವಾರಿ ನಿರ್ವಹಿಸುತ್ತಿರುವ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪೆನಿ ಕೂಡ ದೃಢಪಡಿಸಿರುವುದಾಗಿ ಎಡನೊ ಹೇಳಿದ್ದಾರೆ.

ಹೆಚ್ಚಿರುವ ಸ್ಥಾವರದ ತಾಪಮಾನ ತಗ್ಗಿಸಲು ಸಮುದ್ರದ ನೀರನ್ನು ನಿರಂತರವಾಗಿ ಒಂದು ಮತ್ತು ಮೂರನೇ ಸ್ಥಾವರದೊಳಗೆ ಸುರಿಯಲಾಗುತ್ತಿದೆ. ಅದರೊಳಗಿನ ಆಂತರಿಕ ತಾಪಮಾನ, ಒತ್ತಡ ಕಡಿಮೆ ಮಾಡಿ ವಾತಾವರಣ ತಂಪಾಗಿಸಲು ಯತ್ನಿಸಲಾಗುತ್ತಿದೆ.

ಸ್ಥಾವರದ ಒಳಗಿನ ವಾತಾವರಣ ಸ್ಥಿರವಾಗಿದ್ದು ಬಲವಾದ ಗಾಳಿ ಬೀಸದ ಕಾರಣ ವಿಕಿರಣ ವ್ಯಾಪಿಸದೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಪಾನ್‌ನ ಪರಮಾಣು ಮತ್ತು ಕೈಗಾರಿಕಾ ಸುರಕ್ಷಿತಾ ಸಂಸ್ಥೆ ತಿಳಿಸಿದೆ.ಘಟಕದ ಆವರಣದಲ್ಲಿ ವಿಕಿರಣ ಸೋರಿಕೆ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿದ್ದು ಗಂಟೆಗೆ 500 ಮೈಕ್ರೋ ಸೀವರ್ಟ್‌ಗೆ ಏರಿದೆ. ಈವರೆಗೆ ಸ್ಥಾವರದ ಸುತ್ತ ಗರಿಷ್ಠ 1,557.5 ಮೈಕ್ರೋ ಸೀವರ್ಟ್‌ ಪ್ರಮಾಣದ ವಿಕಿರಣ ಸೋರಿಕೆಯಾಗಿದೆ.

ಸುನಾಮಿಯ ನಂತರ ಈ ಫುಕುಶಿಮಾ ಘಟಕವನ್ನು ಮುಚ್ಚಲಾಗಿದೆ. ಈ ಮಧ್ಯೆ ತೊಹೊಕು ಎಲೆಕ್ಟ್ರಿಕ್ ಪವರ್ ಕಂಪೆನಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಾಖೋತ್ಪನ್ನ ಘಟಕದಲ್ಲಿದ್ದ ಎಣ್ಣೆ ಸಂಗ್ರಹಾಗಾರವೊಂದು ಸ್ಫೋಟಗೊಂಡಿದೆ. ತಕ್ಷಣದ ಹಾನಿಯ ಪ್ರಮಾಣ ತಿಳಿದುಬಂದಿಲ್ಲ. ಫುಕುಶಿಮಾ ಅಣು ಸ್ಥಾವರ ಮೊದಲ ಘಟಕ 1971ರಲ್ಲಿ ಮತ್ತು ನಾಲ್ಕನೇ ಸ್ಥಾವರ 1985ರಲ್ಲಿ ಕಾರ್ಯಾರಂಭ ಮಾಡಿತ್ತು.

ಮತ್ತೆ ಸುನಾಮಿ ಭೀತಿ ಇಲ್ಲ
ಜಪಾನ್ ಸಮುದ್ರ ದಡದಲ್ಲಿ ಭಾರಿ ಗಾತ್ರದ ಅಲೆಗಳು ಕಂಡುಬಂತಾದರೂ ಸುನಾಮಿಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಕರಾವಳಿ ರಕ್ಷಣಾ ಪಡೆಗಳ ಹೆಲಿಕಾಪ್ಟರ್‌ಗಳು ಸಮುದ್ರ ದಡದಲ್ಲಿ ಮೂರು ಮೀಟರ್‌ಗೂ ಎತ್ತರದ ಅಲೆಗಳನ್ನು ಪತ್ತೆ ಹಚ್ಚಿದ ನಂತರ ಸುನಾಮಿಯ ಆತಂಕ ಎದುರಾಗಿತ್ತು. ಆದರೆ, ಹವಾಮಾನ ಇಲಾಖೆ ಸುನಾಮಿ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಭಾರಿ ಭೂಕಂಪದ ಲಕ್ಷಣ ಗೋಚರಿಸದ ಕಾರಣ ಮತ್ತೆ ಸುನಾಮಿ ಸಂಭವಿಸುವ ಯಾವುದೇ ಕುರುಹು ಕಂಡುಬಂದಿಲ್ಲ ಎಂದು ಹೇಳಿದೆ.

ಲಘು ಭೂಕಂಪ
ಜಪಾನ್ ಈಶಾನ್ಯ ಸಮುದ್ರ ತೀರದ ಕೆಲವು ಪಟ್ಟಣಗಳಲ್ಲಿ ಸೋಮವಾರ ಬೆಳಿಗ್ಗೆ ಲಘು ಭೂಕಂಪವಾಗಿದೆ. ಕಂಪನಗಳಿಗೆ ಬಹುಮಹಡಿ ಕಟ್ಟಡಗಳು ಅದಿರಿದ್ದು ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT